ಗಾಂಧೀಜಿ ಹೆಸರಿನ ‘ಮನರೇಗಾ’ ಯೋಜನೆ ಕೈಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ‘ಜಿ ರಾಮ್‌ ಜಿ’ ಕಾಯ್ದೆ ವಿರುದ್ಧ ಬೃಹತ್‌ ಪ್ರತಿಭಟನೆ, ಲೋಕಭವನ ಚಲೋ ಮೂಲಕ ಕಾಂಗ್ರೆಸ್‌ ರಣಕಹಳೆ ಮೊಳಗಿಸಿದೆ.

ಬೆಂಗಳೂರು : ಗಾಂಧೀಜಿ ಹೆಸರಿನ ‘ಮನರೇಗಾ’ ಯೋಜನೆ ಕೈಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ‘ಜಿ ರಾಮ್‌ ಜಿ’ ಕಾಯ್ದೆ ವಿರುದ್ಧ ಬೃಹತ್‌ ಪ್ರತಿಭಟನೆ, ಲೋಕಭವನ ಚಲೋ ಮೂಲಕ ಕಾಂಗ್ರೆಸ್‌ ರಣಕಹಳೆ ಮೊಳಗಿಸಿದೆ. ‘ಮನರೇಗಾ’ ಮರು ಜಾರಿಯಾಗುವವರೆಗೆ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು. ಕರಾಳ ಕೃಷಿ ಕಾಯ್ದೆ ವಿರುದ್ಧ ನಡೆದ ರೈತ ಚಳವಳಿ ಮಾದರಿಗೆ ಈ ಹೋರಾಟ ಕೊಂಡೊಯ್ಯುವುದಾಗಿ ಕಾಂಗ್ರೆಸ್‌ ನಾಯಕರು ಘೋಷಿಸಿದ್ದಾರೆ.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಕೆಪಿಸಿಸಿಯಿಂದ ‘ಮನರೇಗಾ ಬಚಾವೋ ಆಂದೋಲನ’ದ ಅಂಗವಾಗಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಹಾಗೂ ‘ರಾಜ್ ಭವನ ಚಲೋ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ವಿವಿಧ ಸಚಿವರು, ಶಾಸಕರು, ಪಕ್ಷದ ಮುಖಂಡರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು, ಸದಸ್ಯರು ಸೇರಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹರಿಹಾಯ್ದರು. ಜಿ ರಾಜ್‌ ಜಿ ಕಾಯ್ದೆ ಹಿಂಪಡೆದು ಮನರೇಗಾ ಮರು ಜಾರಿಗೆ ಭಿತ್ತಿಪತ್ರ ಹಿಡಿದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಮನರೇಗಾ ಕೈಬಿಟ್ಟು ಹೊಸ ಕಾಯ್ದೆ ತರುವ ಮೂಲಕ ದುಡಿಯುವ ಕೈಗಳ ಕೆಲಸ, ಅನ್ನ ಕಸಿಯಲಿದೆ. ಗ್ರಾಪಂಗಳ ಅಧಿಕಾರ ಮೊಟಕುಗೊಳಿಸಲಿದೆ. ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ. ಹಾಗಾಗಿ ಇದನ್ನು ಹಿಂಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಮುಂದೆ ಪ್ರತಿ ತಾಲೂಕು ಮಟ್ಟದಲ್ಲೂ 5 ಕಿ.ಮೀ. ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲಾಗುವುದು. ಗ್ರಾಪಂ ಹಂತದವರೆಗೆ ಹೋರಾಟ ಕೊಂಡೊಯ್ದು ಜನಪರ ‘ಮನರೇಗಾ’ ರದ್ದಿನ ದುಷ್ಪರಿಣಾಮಗಳ ಬಗ್ಗೆ ಜನ ಜಾಗೃತಿ ಮೂಡಿಸುತ್ತೇವೆ. ಅಗತ್ಯ ಬಿದ್ದರೆ ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆದ ರೈತ ಚಳವಳಿ ಮಟ್ಟಕ್ಕೆ ಈ ಹೋರಾಟ ಕೊಂಡೊಯ್ಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತಿತರ ನಾಯಕರು ಘರ್ಜಿಸಿದರು.

ಬಂಧಿಸಿದರೂ ಹೆದರಲ್ಲ:

ಅಷ್ಟೇ ಅಲ್ಲದೆ, ಮನರೇಗಾ ಯೋಜನೆಗಾಗಿ ಜೈಲಿಗೆ ಹೋಗಲೂ ಸಿದ್ಧ. ಕೇಂದ್ರ ಸರ್ಕಾರ ನಮ್ಮ ಮಂತ್ರಿಗಳನ್ನೂ ಸೇರಿಸಿ ಪಕ್ಷದ ಎಲ್ಲ ನಾಯಕರನ್ನೂ ಬಂಧಿಸಲಿ. ನಾವು ಹೆದರುವುದಿಲ್ಲ. ಕೇಂದ್ರ ಸರ್ಕಾರ ಕೂಡಲೇ ಜಿ ರಾಮ್‌ ಜಿ ವಾಪಸ್‌ ಪಡೆದು ಮನರೇಗಾ ಮರು ಜಾರಿಗೊಳಿಸಬೇಕು. ಅಲ್ಲಿಯವರೆಗೂ ಹೋರಾಟದಿಂದ ವಿಮುಖರಾಗುವುದಿಲ್ಲ ಎಂದರು.

ಕೇಂದ್ರದ ಬಿಜೆಪಿ ಸರ್ಕಾರ ಧ್ವೇಷ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಜಾರಿಗೆ ತಂದ ಜನರ ಯೋಜನೆಗಳನ್ನು ಒಂದೊಂದಾಗಿ ರದ್ದುಪಡಿಸಿಕೊಂಡು ಬರುತ್ತಿರುವುದು ಖಂಡನೀಯ. ತಮ್ಮ ಅಧಿಕಾರಾವಧಿಯಲ್ಲಿ ಬಂಡವಾಳಶಾಹಿಗಳ 23 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡುವ ಬಿಜೆಪಿಯವರಿಗೆ ಬಡವರ ಯೋಜನೆಗಳಿಗೆ ಹಣ ಒದಗಿಸುತ್ತಿಲ್ಲವೇಕೆ? ದೇಶವನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿದೆ? ಇದರ ವಿರುದ್ಧ ಜನಾಂದೋಲನ ರೂಪುಗೊಳ್ಳಬೇಕು. ರೈತರು, ಕಾರ್ಮಿಕರು, ಯುವಕರು, ಮಹಿಳೆಯರು ಸೇರಿ ದೇಶದ ಪ್ರತಿಯೊಬ್ಬ ನಾಗರಿಕನೂ ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಸಿಡಿದೇಳಬೇಕು ಎಂದು ಕರೆ ನೀಡಿದರು.

ಡಿಕೆಶಿಗೆ ಪೇಟ ಸುತ್ತಿದ ಸಿಎಂ

ಪ್ರತಿಭಟನೆ ವೇಳೆ ವೇದಿಕೆಯಲ್ಲಿದ್ದ ಎಲ್ಲ ನಾಯಕರೂ ಕೈಗೆ ಕಪ್ಪುಪಟ್ಟಿ ಧರಿಸಿ ತಲೆಗೆ ಟವಲ್‌ನಿಂದ ಪೇಟ ಸುತ್ತಿಕೊಂಡಿದ್ದರು. ಈ ವೇಳೆ ವೇದಿಕೆಯಲ್ಲಿ ಕೂತಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ಪೇಟ ಸುತ್ತಿದರು. ಆದರೆ, ಅದೇಕೋ ಸರಿಹೋಗುತ್ತಿರಲಿಲ್ಲ, ಕಳಚಿಕೊಳ್ಳುತ್ತಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿ ಅವರು ತಾವೇ ಡಿ.ಕೆ.ಶಿವಕುಮಾರ್‌ ಅವರಿಗೆ ಭದ್ರವಾಗಿ ಪೇಟ ಸುತ್ತಿದ್ದು ಗಮನ ಸೆಳೆಯಿತು. ಪೇಟ ಪ್ರತಿಭಟನೆ ಮುಗಿಯುವವರೆಗೂ ಕಳಚಿಬೀಳಲೇ ಇಲ್ಲ!

ಡಿಕೆ ಘೋಷಣೆಗೆ ಸಿಎಂ-ಡಿಸಿಎಂ ಗರಂ

ಪ್ರತಿಭಟನೆ ವೇಳೆ ಭಾಷಣ ಆರಂಭಿಸಲೂ ಬಿಡದೆ ಕಾಂಗ್ರೆಸ್‌ ಕಾರ್ಯಕರ್ತರ ಗುಂಪೊಂದು ಡಿಕೆ, ಡಿಕೆ ಎಂಬ ಘೋಷಣೆ ಕೂಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಇಬ್ಬರಿಗೂ ಕೋಪ ಬರುವಂತೆ ಮಾಡಿತು. ಮೊದಲು ಮಾತನಾಡಿದ ಡಿ.ಕೆ.ಶಿವಕುಮಾರ್‌, ಭಾಷಣ ಆಲಿಸದೆ ತಮ್ಮ ಪರ ಘೋಷಣೆ ಕೂಗುತ್ತಿದ್ದವರ ವಿರುದ್ಧ ಗರಂ ಆಗಿ, ಏಯ್‌ ಸುಮ್ಮನಿರ್ರೋ... ಡಿಕೆ, ಡಿಕೆ ಅಂತೆ.... ಸುಮ್ಮನಾಗದವರನ್ನು ಎಳೆದು ಹೊರಗೆ ಕಳುಹಿಸಿ ಎಂದರು. ನಂತರ ಮುಖ್ಯಮಂತ್ರಿ ಅವರು ಮಾತನಾಡಲು ಬಂದಾಗಲೂ ಘೋಷಣೆ ಆರಂಭವಾಯಿತು. ಸಿಟ್ಟಾದ ಸಿಎಂ ಯಾರೋ ಅದು ಡಿಕೆ ಅಂತ ಕೂಗುತ್ತಿರುವವರು ಎಂದು ಪ್ರಶ್ನಿಸಿದರು. ನಂತರ ಸಾಕು ಸುಮ್ಮನಿರ್ರೋ... ಎಂದರು.