ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಫ್ರಾಂಚೈಸಿಯು ಈ ಬಾರಿ ಐಪಿಎಲ್‌ನಲ್ಲಿ ತನ್ನ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು : ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಫ್ರಾಂಚೈಸಿಯು ಈ ಬಾರಿ ಐಪಿಎಲ್‌ನಲ್ಲಿ ತನ್ನ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಫ್ರಾಂಚೈಸಿಯು ಸರ್ಕಾರದ ಜೊತೆ ನಿರಂತರ ಮಾತುಕತೆಯಲ್ಲಿದ್ದು, ಒಂದೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

ಕಳೆದ ವರ್ಷ ಜೂನ್‌ನಲ್ಲಿ ನಡೆದ ಭೀಕರ ಕಾಲ್ತುಳಿತ

ಕಳೆದ ವರ್ಷ ಜೂನ್‌ನಲ್ಲಿ ನಡೆದ ಭೀಕರ ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಮುಖ ಪಂದ್ಯ, ಟೂರ್ನಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರವು ಚಿನ್ನಸ್ವಾಮಿಯಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಗೆ ಷರತ್ತುಬದ್ಧ ಅನುಮತಿ ನೀಡಿತ್ತು. ಆದರೆ ಆರ್‌ಸಿಬಿಯು ಕೆಲ ಕಾರಣಗಳಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸುತ್ತಿತ್ತು. ಕೆಎಸ್‌ಸಿಎ ಪದಾಧಿಕಾರಿಗಳು ಕೂಡಾ ಚಿನ್ನಸ್ವಾಮಿಯಲ್ಲಿ ಆಡುವಂತೆ ಆರ್‌ಸಿಬಿಗೆ ಮನವಿ ಮಾಡಿದ್ದರೂ ಅದಕ್ಕೆ ಫ್ರಾಂಚೈಸಿಯು ಒಪ್ಪಿರಲಿಲ್ಲ.

ಫ್ರಾಂಚೈಸಿಗಳಿಗೆ ಬಿಸಿಸಿಐ ಜ.27ರ ಗಡುವು

ಈ ನಡುವೆ ತವರು ಕ್ರೀಡಾಂಗಣ ಆಯ್ಕೆ ಮಾಡಿಕೊಳ್ಳಲು ಫ್ರಾಂಚೈಸಿಗಳಿಗೆ ಬಿಸಿಸಿಐ ಜ.27ರ ಗಡುವು ನೀಡಿತ್ತು. ಮಂಗಳವಾರ ಈ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿರುವ ಆರ್‌ಸಿಬಿ ವ್ಯವಸ್ಥಾಪಕ ಮಂಡಳಿ, ತನ್ನ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡುವುದಾಗಿ ಹೇಳಿದೆ ಎಂದು ವರದಿಯಾಗುತ್ತಿದೆ. ಬುಧವಾರ ಅಥವಾ ಗುರುವಾರ ಸರ್ಕಾರದ ಜೊತೆಗೆ ಆರ್‌ಸಿಬಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದು, ನ್ಯಾ.ಕುನ್ಹಾ ವರದಿಯ ಬಗ್ಗೆ ಚರ್ಚೆ ನಡೆಸಲಿದೆ ಎಂದು ತಿಳಿದುಬಂದಿದೆ. ಚರ್ಚೆಯ ಬಳಿಕ ಆರ್​​ಸಿಬಿಯಿಂದ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.

ನ್ಯಾ.ಕುನ್ಹಾ ವರದಿಗೆಆರ್‌ಸಿಬಿ ಅಸಮ್ಮತಿ?

ಚಿನ್ನಸ್ವಾಮಿ ಪಂದ್ಯಗಳನ್ನು ನಡೆಸುವ ವಿಚಾರದಲ್ಲಿ ಸರ್ಕಾರ ನ್ಯಾ.ಮೈಕಲ್‌ ಕುನ್ಹಾ ಸಮಿತಿಯನ್ನು ರಚಿಸಿ ವರದಿ ಕೇಳಿತ್ತು. ಇತ್ತೀಚೆಗೆ ಸಮಿತಿಯು ವರದಿಯನ್ನೂ ಸಲ್ಲಿಸಿತ್ತು. ಆದರೆ ವರದಿಯಲ್ಲಿರುವ ಕೆಲ ಅಂಶಗಳನ್ನು ಫ್ರಾಂಚೈಸಿ ಒಪ್ಪಿಲ್ಲ ಎನ್ನಲಾಗುತ್ತಿದೆ. ಇದೇ ವಿಚಾರದಲ್ಲಿ ಹಲವು ಸುತ್ತಿನ ಸಭೆ ಕೂಡಾ ನಡೆದಿದೆ. ಆದರೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಬುಧವಾರ ಅಥವಾ ಗುರುವಾರ ಈ ಬಗ್ಗೆ ಆರ್‌ಸಿಬಿ ಹಾಗೂ ಸರ್ಕಾರ ಒಮ್ಮತದ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.