ಮನರೇಗಾ ಮರುಜಾರಿಗೆ ಕೇಂದ್ರವನ್ನು ಒತ್ತಾಯಿಸಲು ಜ.27 ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದು, ಬಳಿಕ ‘ಮನರೇಗಾ ಬಚಾವ್ ಸಂಗ್ರಾಮ’ ಹೆಸರಿನಲ್ಲಿ ರಾಜಭವನ ಚಲೋ ಹಮ್ಮಿಕೊಂಡಿದೆ.
ಬೆಂಗಳೂರು : ಮನರೇಗಾ ಮರುಜಾರಿಗೆ ಕೇಂದ್ರವನ್ನು ಒತ್ತಾಯಿಸಲು ಜ.27 ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದು, ಬಳಿಕ ‘ಮನರೇಗಾ ಬಚಾವ್ ಸಂಗ್ರಾಮ’ ಹೆಸರಿನಲ್ಲಿ ರಾಜಭವನ ಚಲೋ ಹಮ್ಮಿಕೊಂಡಿದೆ.
ವಿಬಿ ಜಿ ರಾಮ್ ಜಿ ಕಾಯ್ದೆ ಮೂಲಕ ಗ್ರಾಮಗಳ ಜನರ ಉದ್ಯೋಗ ಹಕ್ಕು ಕಸಿಯಲಾಗಿದೆ. ಇದನ್ನು ರದ್ದುಪಡಿಸಿ ಮನರೇಗಾ ಮತ್ತೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಹೋರಾಟದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಕೂಡ ಭಾಗವಹಿಸಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಸಭೆ ನಡೆಯಲಿದ್ದು, ಬಳಿಕ ರಾಜಭವನಕ್ಕೆ (ಲೋಕಭವನ) ಪ್ರತಿಭಟನಾ ಮೆರವಣಿಗೆ ತೆರಳಲಿದೆ. ಈ ವೇಳೆ ಸಚಿವರು, ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗವಹಿಸುವ ಸಾಧ್ಯತೆಯಿದೆ.
ಇದೇ ವೇಳೆ ವಿಧಾನಮಂಡಲ ಜಂಟಿ ಅಧಿವೇಶನದ ಭಾಷಣ ಓದದ ರಾಜ್ಯಪಾಲರ ನಡೆ ವಿರುದ್ಧವೂ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಲಿದೆ ಎಂದು ತಿಳಿದುಬಂದಿದೆ.
ಮನರೇಗಾ ಯೋಜನೆ ಗ್ರಾಮೀಣ ಕಾರ್ಮಿಕರ ಜೀವನಾಡಿಯಾಗಿದ್ದು, ಇದನ್ನು ರದ್ದುಪಡಿಸಿ ಗ್ರಾಮೀಣ ಬದುಕು ದುಸ್ತರಗೊಳಿಸಲಾಗಿದೆ. ರಾಜ್ಯವೊಂದರಲ್ಲೇ ಮನರೇಗಾದಿಂದ ಕಳೆದ 20 ವರ್ಷಗಳಲ್ಲಿ 61.03 ಸಾವಿರ ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗಳು ನಡೆದಿದ್ದು, 182.5 ಕೋಟಿ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗಿತ್ತು. ಇಂತಹ ಯೋಜನೆಯನ್ನು ರದ್ದುಪಡಿಸಿ ಬಡವರನ್ನು ಅತಂತ್ರಗೊಳಿಸಿರುವುದಾಗಿ ರಾಜ್ಯ ಕಾಂಗ್ರೆಸ್ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದೆ.
ಕರ್ನಾಟಕಕ್ಕೆ ಕೇಂದ್ರ ಸರ್ಕಾರ 16,000 ಕೋಟಿ ರು. ಅನುದಾನ ಬಾಕಿ
ಜತೆಗೆ ಯೋಜನೆಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 16,000 ಕೋಟಿ ರು. ಅನುದಾನ ಬಾಕಿ ಉಳಿಸಿಕೊಂಡಿದೆ. 2,400 ಗ್ರಾಮ ಕಾಯಕ ಮಿತ್ರರಿಗೆ ಗೌರವಧನ ಬಾಕಿ, ನಾಲ್ಕು ತಿಂಗಳಿಂದ ವೇತನ ಬಾಕಿ, 1 ವರ್ಷದಿಂದ ಪ್ರವಾಸ ಭತ್ಯೆ ಬಾಕಿ ಉಳಿಸಿಕೊಂಡಿದೆ. ಇದರ ನಡುವೆಯೇ ಮನರೇಗಾ ರದ್ದುಪಡಿಸಿ ಲಕ್ಷಾಂತರ ಕಾರ್ಮಿಕರ ಕುಟುಂಬಗಳನ್ನು ಕಷ್ಟಕ್ಕೆ ನೂಕಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಕೇಂದ್ರದ ವಿರುದ್ಧ ದೂರು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಲ್ಕು ತಿಂಗಳ ಬಳಿಕ ರಾಜ್ಯಕ್ಕೆ ಸುರ್ಜೇವಾಲ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರು ನಾಲ್ಕು ತಿಂಗಳ ಬಳಿಕ ಮಂಗಳವಾರ ಪ್ರತಿಭಟನೆಯಲ್ಲಿ ಭಾಗವಹಿಸಲು ಸೋಮವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಸಚಿವ ಕೆ.ಎನ್.ರಾಜಣ್ಣ ಅವರು ವಜಾಗೊಂಡ ಬಳಿಕ ಒಂದು ಬಾರಿ ಮಾತ್ರ ರಾಜ್ಯಕ್ಕೆ ಆಗಮಿಸಿದ್ದ ಸುರ್ಜೇವಾಲ ಬಳಿಕ ಆಗಮಿಸಲಿಲ್ಲ. ಸೆಪ್ಟೆಂಬರ್ ಕೊನೆಯ ವಾರ ಆಗಮಿಸಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಇದೀಗ ಮನರೇಗಾ ಪರ ಹೋರಾಟಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


