ಜಿ ರಾಮ್‌ ಜಿ ಕಾಯ್ದೆ ಜಾರಿ ಮಾಡಿರುವ ಕೇಂದ್ರ ವಿರುದ್ಧ ವಿಪಕ್ಷಗಳ ವಾಗ್ದಾಳಿ ಮುಂದುವರೆದಿದ್ದು, ಬಜೆಟ್‌ ಅಧಿವೇಶನದಲ್ಲಿ ಇದರ ಧ್ವನಿ ಎತ್ತುವುದಾಗಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕೇಂದ್ರ ಕಾರ್ಮಿಕರಿಗೆ ಮಾಡುವುದಕ್ಕೆ ಮೋಸ ಮಾಡಲು ಹೊರಟಿದೆ’ ಎಂದು ರಾಹುಲ್‌ ಕಿಡಿ ಕಾರಿದ್ದಾರೆ.

ನವದೆಹಲಿ : ನರೇಗಾ ಕಾಯ್ದೆ ರದ್ದು ಮಾಡಿ ಜಿ ರಾಮ್‌ ಜಿ ಕಾಯ್ದೆ ಜಾರಿ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ ಮುಂದುವರೆದಿದ್ದು, ಬಜೆಟ್‌ ಅಧಿವೇಶನದಲ್ಲಿ ಇದರ ಧ್ವನಿ ಎತ್ತುವುದಾಗಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮತ್ತೊಂದೆಡೆ ‘ಕೃಷಿ ಕಾಯ್ದೆ ವಿಚಾರದಲ್ಲಿ ರೈತರಿಗೆ ಮಾಡಿದಂತೆ ಈಗ ಕಾರ್ಮಿಕರಿಗೆ ಮಾಡುವುದಕ್ಕೆ ಹೊರಟಿದೆ’ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕಿಡಿ ಕಾರಿದ್ದಾರೆ. ಕಾಂಗ್ರೆಸ್‌ ಆಯೋಜಿಸಿದ್ದ ರಾಷ್ಟ್ರೀಯ ಮನರೇಗಾ ಕಾರ್ಮಿಕರ ಸಮಾವೇಶ ಉದ್ದೇಶಿಸಿ ಮಾತನಾಡಿದ ಖರ್ಗೆ, ‘ನರೇಗಾ ಹೆಸರನ್ನು ಸಾರ್ವಜನಿಕರಿಂದ ತೆಗೆದುಹಾಕಿ, ಗ್ರಾಮ ಸ್ವರಾಜ್ಯ ದುರ್ಬಲಗೊಳಿಸಿವುದು ಕೇಂದ್ರದ ಗುರಿ, ಇದರ ವಿರುದ್ಧ ಬಜೆಟ್‌ ಅಧಿವೇಶನದಲ್ಲಿ ನಾವು ಹೋರಾಡುತ್ತೇವೆ’ ಎಂದು ಹೇಳಿದರು.

ರಾಗಾ ಕಿಡಿ:

ಇನ್ನು ಇದೇ ವಿಚಾರದ ಬಗ್ಗೆ ರಾಹುಲ್‌ ಗಾಂಧಿ ಮಾತನಾಡಿ, ‘ಈ ಹಿಂದೆ ಮೋದಿ ಜಾರಿ ಮಾಡಿದ್ದ 3 ಕರಾಳ ಕೃಷಿ ಕಾನೂನು ಮತ್ತು ಮನರೇಗಾ ರದ್ದತಿ ಹಿಂದಿನ ಉದ್ದೇಶ ಒಂದೇ ಆಗಿವೆ. ಅನ್ನದಾತರ ವಿಚಾರದಲ್ಲಿ ಮಾಡಿದಂತೆ ಈಗ ಕಾರ್ಮಿಕರಿಗೂ ಮಾಡುತ್ತಿದ್ದಾರೆ. ಅವರು (ಬಿಜೆಪಿ) ಆಸ್ತಿಗಳು ಕೆಲವೇ ಜನರ ಕೈಯಲ್ಲಿರಬೇಕೆಂದು ಬಯಸುತ್ತಾರೆ. ಇದರಿಂದ ಬಡವರು ಅದಾನಿ- ಅಂಬಾನಿ ಮೇಲೆ ಅವಲಂಬಿತರಾಗುತ್ತಾರೆ, ಅದು ಅವರ ಭಾರತದ ಮಾದರಿ’ ಎಂದು ಕಿಡಿಕಾರಿದರು.

ಮತಕ್ಕಾಗಿ ‘ಚಹಾ ವ್ಯಾಪಾರಿ’ ಎಂದು ಮೋದಿ ನಾಟಕ: ಖರ್ಗೆ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ವೋಟಿಗಾಗಿ ತಾನು ಚಹಾ ವ್ಯಾಪಾರಿ ಎಂದು ಹೇಳಿಕೊಳ್ಳುತ್ತಾರೆ. ಅವರು ಯಾವತ್ತಾದರೂ ಚಹಾ ಮಾಡಿದ್ದಾರೆಯೇ? ಇದೆಲ್ಲ ನಾಟಕ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದ್ದಾರೆ. ಇದಕ್ಕೆ ಬಿಜೆಪಿ ಕಿಡಿಕಾರಿದೆ.

ಗುರುವಾರ ದೆಹಲಿಯಲ್ಲಿ ಜಿ ರಾಮ್‌ ಜಿ ವಿರೋಧಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ‘ಮತಗಳನ್ನು ಪಡೆಯಲು ಮೋದಿಯವರು ತಾನು ಚಹಾ ಮಾರುವವನು ಎಂದು ಹೇಳುತ್ತಲೇ ಇರುತ್ತಾರೆ. ಅವರು ಎಂದಾದರೂ ಚಹಾ ಮಾಡಿದ್ದಾರೆಯೇ? ಜನರಿಗೆ ಚಹಾ ನೀಡಲು ಎಂದಾದರೂ ಕೆಟಲ್ ಹಿಡಿದು ತಿರುಗಾಡಿದ್ದಾರೆಯೇ? ಇದೆಲ್ಲವೂ ಕೇವಲ ನಾಟಕ. ಬಡವರನ್ನು ದಮನಿಸುವುದು ಮೋದಿಯವರ ಅಭ್ಯಾಸ’ ಎಂದಿದ್ದಾರೆ.

ಬಿಜೆಪಿ ಕಿಡಿ :‘ಪ್ರಧಾನಿಯವರು ವಿನಮ್ರ ಹಿನ್ನೆಲೆಯಿಂದ ಬಂದವರು ಎಂಬುದು ಸತ್ಯ, ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ ಬೆಳ್ಳಿ ಚಮಚದೊಂದಿಗೆ ಹುಟ್ಟಿದವರಿದ್ದಾರೆ. ಅದನ್ನು ನಿರಾಕರಿಸಬಹುದೇ? ಕಾಂಗ್ರೆಸ್ ಸತ್ಯದ ಮೇಲೆ ನಿಲ್ಲುವುದಿಲ್ಲ’ ಎಂದು ಬಿಜೆಪಿ ನಾಯಕ ಟಾಮ್ ವಡಕ್ಕನ್ ಕಿಡಿ ಕಾರಿದ್ದಾರೆ.

ಜಿ ರಾಮ್‌ ಜಿ ಏನೆಂದೇ ನನಗೆ ಗೊತ್ತಿಲ್ಲ: ರಾಹುಲ್‌ ವಿವಾದ

ನವದೆಹಲಿ: ಮನರೇಗಾ ಯೋಜನೆಯ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಜಿ ರಾಮ್‌ ಜಿ’ ಏನೆಂದೇ ತನಗೆ ಗೊತ್ತಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಗುರುವಾರ ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಇಂಥ ಹೇಳಿಕೆ ಕಾಂಗ್ರೆಸ್‌ನ ಹಿಂದೂವಿರೋಧಿ ಮನಃಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಬಿಜೆಪಿ ಕಿಡಿ ಕಾರಿದೆ.ದೆಹಲಿಯ ಜವಾಹರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ‘ನನಗೆ ಜಿ ರಾಮ್‌ ಜಿ ಎಂದರೆ ಏನೆಂದು ಗೊತ್ತಿಲ್ಲ’ ಎಂದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಯೋಜನೆ ವಿರುದ್ಧ ಹರಿಹಾಯ್ದರು.

ರಾಹುಲ್‌ ಹಿಂದೂ ವಿರೋಧಿ ಮನಃಸ್ಥಿತಿ-ಬಿಜೆಪಿ:

ರಾಹುಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್, ‘ರಾಹುಲ್ ಗಾಂಧಿ ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠಾಪನೆ ಬಹಿಷ್ಕರಿಸಿದ್ದರು. ಸಂಸತ್ತು ಈ ಐತಿಹಾಸಿಕ ಶಾಸನವನ್ನು ಚರ್ಚಿಸುತ್ತಿದ್ದಾಗ ವಿದೇಶ ಪ್ರವಾಸದಲ್ಲಿದ್ದರು. ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ರಾಮನ ಉಲ್ಲೇಖವೇ ಅಲರ್ಜಿ. ಇದು ಅವರ ಹಿಂದೂವಿರೋಧಿ ಮನಃಸ್ಥಿತಿಯನ್ನು ತಿಳಿಸುತ್ತದೆ’ ಎಂದಿದ್ದಾರೆ.