ಇಂದಿನಿಂದ ಮೈಸೂರು ಯುವ ದಸರಾ ಆರಂಭ; ಪಿವಿ ಸಿಂಧು ಉದ್ಘಾಟನೆ!
ಇಂದಿನಿಂದ ಮೈಸೂರು ಯುವ ದಸರಾ ಆರಂಭವಾಗಲಿದೆ. ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಉದ್ಘಾಟನೆ ಮಾಡಲಿದ್ದಾರೆ. ಗಾಯಕಿ ರಾನು ಮೊಂಡಾಲ್ ಸೇರಿದಂತೆ ಹಲವು ನಟ ನಟಿಯರು ಕಾರ್ಯಕ್ರಮ ನೀಡಲಿದ್ದಾರೆ. ಯುವ ದಸಾರ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ.
ಮೈಸೂರು(ಸೆ.01): ದಸರಾ ಮಹೋತ್ಸವ ಪ್ರಯುಕ್ತ ಮಹಾರಾಜ ಕಾಲೇಜು ಮೈದಾನದಲ್ಲಿ ಅ.1 ರಿಂದ 6 ರವರೆಗೆ ಯುವ ದಸರಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅ.1ರ ಸಂಜೆ 6.45ಕ್ಕೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಕಾರ್ಯಕ್ರಮ ಉದ್ಘಾಟಿಸುವರು ಎಂದು ದಸರಾ ಉಪ ವಿಶೇಷಾಧಿಕಾರಿಯಾದ ಎಸ್ಪಿ ರಿಷ್ಯಂತ್ ತಿಳಿಸಿದರು.
ಇದನ್ನೂ ಓದಿ: ಸದಾ ಸ್ಮರಣೀಯ ದಸರಾ ಸಿರಿ ಪರಂಪರೆಯನ್ನು ನೆನೆದ ಸಿಎಂ ಯಡಿಯೂರಪ್ಪ
ಯುವ ದಸರಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪ್ರತಿನಿತ್ಯ ಕಾರ್ಯಕ್ರಮವು ನಿಗದಿತ ಸಮಯಕ್ಕೆ ಅಂದರೆ ಸಂಜೆ 5.30ಕ್ಕೆ ಆರಂಭವಾಗಲಿದೆ ಹಾಗೂ ರಾತ್ರಿ 10.30ಕ್ಕೆ ಮುಗಿಯಲಿವೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರತಿನಿತ್ಯ ಹಲವಾರು ಕಾರ್ಯಕ್ರಮಗಳು ಇದ್ದು, ಮೊದಲನೇ ದಿನ ಕಲ್ಕತ್ತಾದ ಖ್ಯಾತ ಗಾಯಕಿ ರಾನು ಮಂಡಲ್ ಅವರು ಆಗಮಿಸಲಿದ್ದು, ಅವರಿಗೆ ಗೌರವ ಸಮರ್ಪಣೆ ಕೂಡ ನಡೆಯಲಿದೆ. ಬಾಲಿವುಡ್ ಗಾಯಕ ಗುರು ರಾಂಧವ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದರು.
ಇದನ್ನೂ ಓದಿ: ನನ್ನ ಬಯೋಪಿಕ್ ಮಾಡಲು ದೀಪಿಕಾ ಬೆಸ್ಟ್: ಸಿಂಧು
ಈ ಬಾರಿ ಹಲವಾರು ಗಾಯಕರನ್ನು ಆಹ್ವಾನಿಸಿದ್ದು, ಬಾಲಿವುಡ್ ಗಾಯಕರಾದ ಮೋಹಿತ್ ಚೌಹಾಣ್, ಮನಾಲಿ ಠಾಕೂರ್, ಪ್ರೀತಮ್ ಚರ್ಕವರ್ತಿ ಹಾಗೂ ಮೈಸೂರು ಗಾಯಕಿ ಸಂಗೀತ ರವೀಂದ್ರನಾಥ್ ತಮ್ಮ ಗಾಯನದಿಂದ ಪ್ರೇಕ್ಷಕರ ಮನಗೆಲ್ಲಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹಲವಾರು ತಾರೆಯರು ಭಾಗಿಯಾಗುವರು. ನಟರಾದ ದರ್ಶನ್, ರಕ್ಷಿತ್ ಶೆಟ್ಟಿ, ಸಾಧುಕೋಕಿಲ, ಶರಣ್, ಸೃಜನ್, ಡಾಲಿ ಧನಂಜಯ್, ವಶಿಷ್ಟ, ದಿಗಂತ್, ನಟಿಯರಾದ ಐಂದಿತಾ ರೈ, ಹರ್ಷಿಕಾ ಪೂಣಚ್ಚ, ಮಾನ್ವಿತಾ ಹರೀಶ್, ಚಂದನ್ ಶೆಟ್ಟಿಹಾಗೂ ಗಾಯಕ ಸಂಚಿತ್ ಹೆಗಡೆ ಕೂಡ ಯುವ ದಸರಾ ಕಾರ್ಯಕ್ರಮದಲ್ಲಿ ಯುವ ಮನಸ್ಸುಗಳನ್ನು ಸಂತಸಗೊಳಿಸಲು ಬರಲಿದ್ದಾರೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಯುವ ದಸರಾ’ ಉದ್ಘಾಟಿಸಲು PV ಸಿಂಧುವನ್ನು ಆಹ್ವಾನಿಸಿದ ಸಂಸದ ಪ್ರತಾಪ್ ಸಿಂಹ
ಪ್ರತಿನಿತ್ಯ ಕಾರ್ಯಕ್ರಮಗಳಿಗೆ ಆಗಮಿಸುವ ವೀಕ್ಷಕರಿಗೆ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ವೇದಿಕೆಯ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವೀಕ್ಷಕರಿಗೆ ಅನುಕೂಲವಾಗುವಂತೆ ವೇದಿಕೆ ಹಿಂಭಾಗದಲ್ಲಿ ಶೌಚಾಲಯ ವ್ಯವಸ್ಥೆ ಕೂಡ ಮಾಡಾಲಾಗಿದೆ. ಈ ಬಾರಿ ಯುವ ದಸರಾ ತುಂಬಾ ಚಿನ್ನಾಗಿ ಮೂಡಿಬರಲು ಎಲ್ಲಾ ರೀತಿಯಲ್ಲೂ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಯುವ ದಸರಾ ಉಪ ಸಮಿತಿ ಅಧ್ಯಕ್ಷ ಗೋಕುಲ್ ಗೋವರ್ಧನ್, ಉಪಾಧ್ಯಕ್ಷರಾದ ಶಿವು, ಎಲ್.ಆರ್. ಮಹದೇವಸ್ವಾಮಿ, ಕಾರ್ಯಾಧ್ಯಕ್ಷ ಡಿ.ಬಿ. ಲಿಂಗಣ್ಣಯ್ಯ, ಕಾರ್ಯದರ್ಶಿ ಜಿ.ಎಸ್. ಸೋಮಶೇಖರ್ ಇದ್ದರು.
ಯುವ ದಸರಾ ಕಾರ್ಯಕ್ರಮಗಳ ವಿವರ:
ಅ.1 ರಂದು ಚಿತ್ರ ನಿರ್ದೇಶಕ ನಾಗಶೇಖರ್ ತಂಡದಿಂದ ಕೇಳದೆ ನಿಮಗೀಗ ವಿಶೇಷ ಕಾರ್ಯಕ್ರಮ, ಬಾಲಿವುಡ್ ಗಾಯಕ ಗುರು ರಾಂಧವ ಅವರಿಂದ ಸಂಗೀತ ರಸಮಂಜರಿ
ಅ.2 ರಂದು ಸಂಗೀತ ರವೀಂದ್ರನಾಥ್ ಅವರಿಂದ ಸಂಗೀತ ರಸಸಂಜೆ. ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಅವರಿಂಗ ಸಂಗೀತ ರಸಮಂಜರಿ
ಅ.3 ರಂದು ಬಾಲಿವುಡ್ ಗಾಯಕಿ ಮನಾಲಿ ಠಾಕೂರ್ ಅವರಿಂದ ಸಂಗೀತ ರಸಮಂಜರಿ
ಅ.4 ರಂದು ಗಾಯಕರಾದ ಚಂದನ್ ಶೆಟ್ಟಿ, ಸಂಚಿತ್ ಹೆಗ್ಡೆ ಅವರಿಂದ ಸಂಗೀತ ರಸಮಂಜರಿ. ಮಾನ್ವಿತ ಹರೀಶ್, ಸಂಯುಕ್ತ ಹೆಗಡೆ ಇತರೆ ಕಲಾವಿದರಿಂದ ನೃತ್ಯ ಪ್ರದರ್ಶನ
ಅ.5 ರಂದು ಸ್ಯಾಂಡಲ್‌ವುಡ್ ನೈಟ್- ನಟ ದರ್ಶನ್ ಸೇರಿದಂತೆ ಕನ್ನಡ ನಟ, ನಟಿಯರು ಭಾಗಿ
ಅ.6 ರಂದು ಬಾಲಿವುಡ್ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ ಅವರಿಂದ ಸಂಗೀತ ಕಾರ್ಯಕ್ರಮ