ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ನೋವಾಕ್ ಜೋಕೋವಿಚ್ ಮತ್ತು ಕಾರ್ಲೊಸ್ ಆಲ್ಕರಜ್ ಮುಖಾಮುಖಿಯಾಗಲಿದ್ದಾರೆ. ಸೆಮಿಫೈನಲ್‌ನಲ್ಲಿ ಯಾನಿಕ್ ಸಿನ್ನರ್ ವಿರುದ್ಧ ಜೋಕೋ ಮತ್ತು ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಆಲ್ಕರಜ್ ರೋಚಕ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಮೆಲ್ಬರ್ನ್: ಈ ಬಾರಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಫೈನಲ್ ದಿಗ್ಗಜ ಟೆನಿಸಿಗ ನೋವಾಕ್ ಜೋಕೋವಿಚ್ ಹಾಗೂ ಯುವ ಸೂಪರ್‌ಸ್ಟಾರ್ ಕಾರ್ಲೊಸ್ ಆಲ್ಕರಜ್ ನಡುವಿನ ರೋಚಕ ಪೈಪೋಟಿಗೆ ವೇದಿಕೆ ಒದಗಿಸಿಕೊಡಲಿದೆ. ಶುಕ್ರವಾರ ನಡೆದ 2 ಅತಿರೋಚಕ ಸೆಮಿಫೈನಲ್ ಪಂದ್ಯಗಳ ಮೂಲಕ ಟೆನಿಸ್ ಪ್ರೇಮಿಗಳ ಮನಸೂರೆಗೊಳಿಸಿದ ಇವರಿಬ್ಬರು, ಭಾನುವಾರ ಪ್ರಶಸ್ತಿಗಾಗಿ ಪರಸ್ಪರ ಕಾದಾಡಲಿದ್ದಾರೆ.
ಮೊದಲ ಸೆಮಿಫೈನಲ್‌ನಲ್ಲಿ ವಿಶ್ವ ನಂ.1 ಆಲ್ಕರಜ್ ಅವರು ವಿಶ್ವ ನಂ.3 ಆಟಗಾರ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 6-4, 7-6(7/5), 6-7(3/7), 6-7(7/4), 7-5 ಸೆಟ್‌ಗಳಲ್ಲಿ ರೋಚಕ ಜಯಭೇರಿ ಬಾರಿಸಿದರು. ಈಗಾಗಲೇ 6 ಗ್ರ್ಯಾನ್‌ಸ್ಲಾಂ ಟ್ರೋಫಿ ಗೆದ್ದಿರುವ 22 ವರ್ಷದ ಆಲ್ಕರಜ್‌ಗೆ ಇದು ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಫೈನಲ್.
ಯಾನಿಕ್ ಸಿನ್ನರ್ ಔಟ್:
ಮತ್ತೊಂದು ಸೆಮೀಸ್‌ನಲ್ಲಿ ಕಳೆದೆರಡು ಬಾರಿಯ ಚಾಂಪಿಯನ್, ಇಟಲಿಯ ಯಾನಿಕ್ ಸಿನ್ನರ್ ವಿರುದ್ಧ ಸರ್ಬಿಯಾದ 38 ವರ್ಷದ ಜೋಕೋವಿಚ್ 3-6, 6-3, 4-6, 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 10 ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ಜೋಕೋ 11ನೇ ಬಾರಿ ಫೈನಲ್‌ಗೇರಿದ್ದಾರೆ. ಹ್ಯಾಟ್ರಿಕ್ ಕಪ್ ನಿರೀಕ್ಷೆಯಲ್ಲಿದ್ದ ಸಿನ್ನರ್ ನಿರಾಸೆ ಅನುಭವಿಸಿದರು.
ನನಸಾಗುತ್ತಾ ಜೋಕೋ 25 ಗ್ರ್ಯಾನ್‌ಸ್ಲಾಂ ಕನಸು?
ಜೋಕೋವಿಚ್ ಈವರೆಗೂ 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದಾರೆ. 10 ಆಸ್ಟ್ರೇಲಿಯನ್, 3 ಫ್ರೆಂಚ್, 7 ವಿಂಬಲ್ಡನ್, 4 ಯುಎಸ್ ಓಪನ್ ಗೆದ್ದಿದ್ದಾರೆ. ಆದರೆ 2025ರಲ್ಲಿ ನಾಲ್ಕೂ ಗ್ರ್ಯಾನ್‌ಸ್ಲಾಂನ ಸೆಮೀಸ್‌ನಲ್ಲಿ ಸೋಲುವ ಮೂಲಕ ಪ್ರಶಸ್ತಿ ತಪ್ಪಿಸಿಕೊಂಡಿದ್ದರು. ಈ ಬಾರಿ ಫೈನಲ್‌ಗೇರಿದ್ದು, ತಮ್ಮ 25ನೇ ಗ್ರ್ಯಾನ್‌ಸ್ಲಾಂ ಕನಸು ನನಸು ಮಾಡುವ ವಿಶ್ವಾಸದಲ್ಲಿದ್ದಾರೆ.
5:27 ಗಂಟೆ ಕಾದಾಡಿದ ಆಲ್ಕರಜ್-ಅಲೆಕ್ಸಾಂಡರ್
ಆಲ್ಕರಜ್ ಹಾಗೂ ಅಲೆಕ್ಸಾಂಡರ್ ಜ್ವೆರೆವ್ ನಡುವಿನ ಪಂದ್ಯ ಬರೋಬ್ಬರಿ 5 ಗಂಟೆ 27 ನಿಮಿಷಗಳ ಕಾಲ ನಡೆಯಿತು. ಇದು ಆಸ್ಟ್ರೇಲಿಯನ್ ಓಪನ್‌ನಲ್ಲೇ ದೀರ್ಘ ಅವಧಿಯ ಸೆಮಿಫೈನಲ್. ಪ್ರತಿ ಗೇಮ್‌ನಲ್ಲೂ ಇಬ್ಬರಿಂದ ತೀವ್ರ ಪೈಪೋಟಿ ಕಂಡುಬಂದರೂ, ಆಲ್ಕರಜ್‌ರನ್ನು ಸೋಲಿಸಲು ಜ್ವೆರೆವ್‌ಗೆ ಸಾಧ್ಯವಾಗಲಿಲ್ಲ. ಇನ್ನು, ಜೋಕೋ-ಸಿನ್ನರ್ ಪಂದ್ಯ 4 ಗಂಟೆ 9 ನಿಮಿಷಗಳ ಕಾಲ ನಡೆಯಿತು.
ಇಂದು ಮಹಿಳಾ ಸಿಂಗಲ್ಸ್ ಫೈನಲ್
ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ಶನಿವಾರ ನಡೆಯಲಿದೆ. ಬೆಲಾರಸ್‌ನ ಸಬಲೆಂಕಾ 3ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಕಜಕಸ್ತಾನದ ಎಲೆನಾ ರಬೈಕೆನಾ ಚೊಚ್ಚಲ ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಎನಿಸಿಕೊಳ್ಳುವ ಕಾತರದಲ್ಲಿದ್ದಾರೆ.


