ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 6 ಚಿನ್ನ ಸೇರಿ 10 ಪದಕಗಳನ್ನು ಗೆದ್ದುಕೊಂಡಿದೆ. ಮಹಿಳಾ ಹಾಕಿ ತಂಡವು ಚೀನಾ ವಿರುದ್ಧ ಜಯ ಸಾಧಿಸಿ 44 ವರ್ಷಗಳ ಬಳಿಕ ಐತಿಹಾಸಿಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತ 2028ರ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ.
ಕಕಮಿಗಹರ/ನಗೋಯಾ: ಈ ಬಾರಿ ಏಷ್ಯನ್ ಗೇಮ್ಸ್ ಮುಗಿಯುವ ಹಂತಕ್ಕೆ ತಲುಪಿರುವಾಗಲೇ ಭಾರತ ಚಿನ್ನದ ಬೇಟೆಯನ್ನು ಹೆಚ್ಚಿಸಿದೆ. ಶುಕ್ರವಾರ ಒಂದೇ ದಿನ ಭಾರತ 6 ಚಿನ್ನ ಸೇರಿ ಬರೋಬ್ಬರಿ 10 ಪದಕಗಳನ್ನು ಬಾಚಿಕೊಂಡಿದೆ. ಈ ಪೈಕಿ ಹಾಕಿಯಲ್ಲಿ ಮಹಿಳಾ ತಂಡ ಐತಿಹಾಸಿಕ ಚಿನ್ನ ಗೆದ್ದರೆ, ಬಾಕ್ಸಿಂಗ್‌ನಲ್ಲಿ ಮೂವರು ಚಿನ್ನಕ್ಕೆ ಪಂಚ್ ಮಾಡಿದರು. ಉಳಿದಂತೆ ಆರ್ಚರಿಯಲ್ಲಿ ಚಿನ್ನ ಸೇರಿ 3 ಪದಕ ಬಂದರೆ, ಸೆಪಾಕ್‌ಟೆಕ್ರಾ, ಸೇಲಿಂಗ್‌ನಲ್ಲೂ ಭಾರತಕ್ಕೆ ಮೆಡಲ್ ಹರಿದುಬಂದವು. ಸದ್ಯ ಭಾರತ ಪದಕ ಗಳಿಕೆ 75ಕ್ಕೆ ಏರಿಕೆಯಾಗಿದ್ದು, ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.
1984ರ ಬಳಿಕ ಮೊದಲ ಚಿನ್ನ
ಏಷ್ಯಾಡ್ 1951ರಲ್ಲೇ ಆರಂಭಗೊಂಡಿದ್ದರೂ, ಮಹಿಳಾ ಹಾಕಿಯನ್ನು ಕ್ರೀಡಾಕೂಟದಲ್ಲಿ ಮೊದಲ ಬಾರಿ ಆಡಿಸಿದ್ದು 1984ರಲ್ಲಿ. ಆ ವರ್ಷ ಭಾರತ ಚಾಂಪಿಯನ್ ಆಗಿತ್ತು. ಅದಾಗಿ 44 ವರ್ಷಗಳ ಬಳಿಕ ಭಾರತ ಮತ್ತೊಮ್ಮೆ ಚಿನ್ನದ ಪದಕ ಗೆದ್ದಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ಭಾರತ ತಂಡ ಕಳೆದ ಬಾರಿಯ ಚಾಂಪಿಯನ್, ಒಲಿಂಪಿಕ್ಸ್‌ನ ಬೆಳ್ಳಿ ವಿಜೇತ ಚೀನಾ ವಿರುದ್ಧ 1-0 ಗೋಲಿನಿಂದ ಗೆಲುವು ಸಾಧಿಸಿತು.
ಭಾರತ ಪರ 200ನೇ ಪಂದ್ಯ ಆಡಿದ ಲಾಲ್ರೆಮ್‌ಸಿಯಾಮಿ, ಪಂದ್ಯದ 10ನೇ ನಿಮಿಷದಲ್ಲೇ ಆಕರ್ಷಕ ಗೋಲು ಬಾರಿಸಿದರು. ಆ ಬಳಿಕ ಭಾರತಕ್ಕೆ ಕೆಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ಗೋಲು ದಾಖಲಾಗಲಿಲ್ಲ. ಪ್ರಮುಖವಾಗಿ, ಭಾರತ ಡಿಫೆನ್ಸ್ ಹಾಗೂ ಗೋಲ್‌ಕೀಪಿಂಗ್‌ನಲ್ಲಿ ಅತ್ಯದ್ಭುತ ಆಟ ಪ್ರದರ್ಶಿಸಿತು. ಗೋಲ್‌ಕೀಪರ್ ಬಿಚು ದೇವಿ ಬಂಡೆಯಂತೆ ನಿಂತು ಚೀನಾದ ಗೋಲು ಅವಕಾಶಗಳನ್ನು ತಡೆದರು. 24ನೇ ನಿಮಿಷದಲ್ಲಿ ಚೀನಾಗೆ ಪೆನಾಲ್ಟಿ ಸ್ಟ್ರೋಕ್ ಅವಕಾಶ ಸಿಕ್ಕಿತಾದರೂ, ಅದನ್ನು ಅನುಭವಿ ಗೋಲ್‌ಕೀಪರ್ ಸವಿತಾ ಪೂನಿಯಾ ತಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
2028ರ ಒಲಿಂಪಿಕ್ಸ್‌ಗೆ ಅರ್ಹತೆ
ಭಾರತ ಈ ಗೆಲುವಿನೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದುಕೊಂಡಿತು. ಇತ್ತೀಚೆಗಷ್ಟೇ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 5ನೇ ಸ್ಥಾನಿಯಾಗಿದ್ದ ಭಾರತ, ಈಗ ಏಷ್ಯಾಡ್‌ನಲ್ಲಿ ಗೆಲ್ಲುವುದರೊಂದಿಗೆ ಒಲಿಂಪಿಕ್ಸ್‌ಗೂ ಮುನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಸೇಲಿಂಗ್‌ನಲ್ಲಿ ಭಾರತಕ್ಕೆ ಒಟ್ಟು ಮೂರು ಮೆಡಲ್
ಸೇಲಿಂಗ್‌ನಲ್ಲಿ ಭಾರತ 3ನೇ ಪದಕ ಗೆದ್ದಿದೆ. ಕ್ರೀಡೆಯ ದಿಂಘಿ ವಿಭಾಗದಲ್ಲಿ ಭಾರತದ ನೇತ್ರಾ ಕುಮಣನ್ ಕಂಚಿನ ಪದಕ ಗೆದ್ದಿದ್ದಾರೆ. 4ನೇ ಬಾರಿ ಏಷ್ಯಾಡ್ ಆಡುತ್ತಿರುವ ನೇತ್ರಾಗೆ ಇದು ಚೊಚ್ಚಲ ಪದಕ. 2 ಬಾರಿ ಒಲಿಂಪಿಯನ್, ಚೆನ್ನೈನ 29 ವರ್ಷದ ನೇತ್ರಾ ಅವರು ಸ್ಪರ್ಧೆಯಲ್ಲಿ ಒಟ್ಟು 14 ಅಂಕಗಳೊಂದಿಗೆ 3ನೇ ಸ್ಥಾನಿಯಾದರು. ಇನ್ನು, ಕಳೆದ ಏಷ್ಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿಷ್ಣು ಸರವಣನ್ ಅವರು ಈ ಬಾರಿ ಪದಕ ತಪ್ಪಿಸಿಕೊಂಡರು. ಗುರುವಾರ ಸೇಲಿಂಗ್‌ನ ಪುರುಷರ ಸ್ಕಿಫ್ ವಿಭಾಗದಲ್ಲಿ ಮನು ಫ್ರಾನ್ಸಿನ್-ಪ್ರಿನ್ಸ್ ಬೆಳ್ಳಿ, ಮಹಿಳಾ ವಿಭಾಗದಲ್ಲಿ ಹರ್ಷಿತಾ ತೋಮರ್-ಶೀತಲ್ ವರ್ಮಾ ಕಂಚು ಗೆದ್ದಿದ್ದರು.
ಆರ್ಚರಿಯಲ್ಲಿ ಮತ್ತೆ 1 ಚಿನ್ನ, 2 ಬೆಳ್ಳಿ
ಆರ್ಚರಿಯಲ್ಲಿ ಭಾರತ ಮತ್ತೆ 3 ಪದಕ ಗೆದ್ದಿದೆ. ಇದರೊಂದಿಗೆ ಕ್ರೀಡಾಕೂಟದ ಆರ್ಚರಿಯಲ್ಲಿ ಭಾರತದ ಪದಕ ಗಳಿಕೆ 7ಕ್ಕೆ ಏರಿಕೆಯಾಗಿದೆ. ಇದರಲ್ಲಿ 4 ಚಿನ್ನ, 2 ಬೆಳ್ಳಿ, 1 ಕಂಚು ಇವೆ.
ರೀಕರ್ವ್ ಮಹಿಳಾ ವಿಭಾಗದಲ್ಲಿ ಅಂಕಿತಾ ಭಕತ್, ಕೀರ್ತಿ ಶರ್ಮಾ ಹಾಗೂ 17 ವರ್ಷದ ಕುಮ್ಕುಮ್ ಅನಿಲ್ ಮೊಹೊದ್ ಅವರನ್ನೊಳಗೊಂಡ ತಂಡ 10 ಬಾರಿ ಒಲಿಂಪಿಕ್ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟಿತು. ಹಾಲಿ ಚಾಂಪಿಯನ್ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 5-3 ಅಂತರದಲ್ಲಿ ಗೆಲುವು ಲಭಿಸಿತು.
ಬಳಿಕ ಕುಮ್ಕುಮ್ ಅವರು ಧೀರಜ್ ಬೊಮ್ಮದೇವರ ಜೊತೆಗೂಡಿ ಮಿಶ್ರ ರೀಕರ್ವ್ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಫೈನಲ್‌ನಲ್ಲಿ ಈ ಜೋಡಿಗೆ ಚೀನಾ ವಿರುದ್ಧ ಸೋಲು ಎದುರಾಯಿತು.
ಇನ್ನು, ರೀಕರ್ವ್ ಪುರುಷರ ವಿಭಾಗದಲ್ಲಿ ಧೀರಜ್, ಸಂಜಯ್ ಭೋಗೆ ಹಾಗೂ ನೀರಜ್ ಚೌಹಾಣ್ ಅವರಿದ್ದ ತಂಡ ಕೊರಿಯಾ ವಿರುದ್ಧ 1-5 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು.


