ಏಷ್ಯನ್ ಗೇಮ್ಸ್‌ನ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಮಹಿಳಾ ಹಾಕಿ ತಂಡ ಕೂಡ ಚೀನಾ ವಿರುದ್ಧ ಫೈನಲ್ ಆಡಲಿದ್ದು, 44 ವರ್ಷಗಳ ಬಳಿಕ ಚಿನ್ನದ ನಿರೀಕ್ಷೆಯಲ್ಲಿದೆ. ಭಾರತದ ಒಟ್ಟು ಪದಕಗಳ ಗಳಿಕೆ 64ಕ್ಕೆ ಏರಿಕೆಯಾಗಿದೆ.
ನಗೋಯಾ: ಈ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ತಂಡಗಳು ಹಾಕಿ ಹಾಗೂ ಕ್ರಿಕೆಟ್‌ನಲ್ಲಿ ಫೈನಲ್ ಪ್ರವೇಶಿಸಿವೆ. ಈ ಮೂಲಕ ದೇಶಕ್ಕೆ ಮತ್ತೆರಡು ಚಿನ್ನದ ಪದಕಗಳ ನಿರೀಕ್ಷೆ ಮೂಡಿವೆ. ಉಳಿದಂತೆ ಗುರುವಾರ ಭಾರತ ಸೇಲಿಂಗ್, ಕುಸ್ತಿ, ಸ್ಕ್ವಾಶ್ ಮತ್ತು ಆರ್ಚರಿಯಲ್ಲಿ ಭಾರತ ಪದಕ ಸಾಧನೆ ಮಾಡಿದ್ದು, ಪದಕ ಗಳಿಕೆ 64ಕ್ಕೆ ಏರಿಕೆಯಾಗಿದೆ.
ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಕೊನೆ ಕ್ಷಣದ ಮ್ಯಾಜಿಕ್‌ನಿಂದಾಗಿ 4-3 ಗೋಲುಗಳಿಂದ ರೋಚಕ ಗೆಲುವು ಸಾಧಿಸಿತು. 5 ಮತ್ತು 13ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದರು. ಸುಖ್‌ಜೀತ್ 23ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದಾಗಿ 3-0 ಮುನ್ನಡೆ ಪಡೆಯಿತು.
ಬಳಿಕ ಪಾಕ್ ತಿರುಗೇಟು ನೀಡಿತು. ಅಬು ಮಹ್ಮೂದ್(30ನೇ ನಿಮಿಷ), ಹನ್ನಾನ್ ಶಾಹಿದ್(45) ಹಾಗೂ ವಹೀದ್ ರಾಣಾ(49) ಗೋಲು ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕಗೊಳಿಸಿದರು. ಇನ್ನೇನು ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಹೋಗಲಿದೆ ಎನ್ನುವಷ್ಟರಲ್ಲಿ 60ನೇ ನಿಮಿಷದಲ್ಲಿ ಅಭಿಷೇಕ್ ಗೆಲುವಿನ ಗೋಲು ಬಾರಿಸಿದರು. ಕೊನೆ 45 ಸೆಕೆಂಡ್‌ಗಳಿರುವ ಅಭಿಷೇಕ್ ಬಾರಿಸಿದ ಚೆಂಡು ಪಾಕ್ ಡಿಫೆಂಡರ್ ಸುಫ್ಯಾನ್ ಕಾಲಿಗೆ ತಾಗಿ ಗೋಲು ಪೆಟ್ಟಿಗೆ ಸೇರಿತು. ಇದರೊಂದಿಗೆ ಭಾರತ ಗೆಲುವಿನೊಂದಿಗೆ ಸಂಭ್ರಮಿಸಿತು.
ನಾಳೆ ಮಲೇಷ್ಯಾ ವಿರುದ್ಧ ಫೈನಲ್
ಏಷ್ಯಾಡ್‌ನ ಹಾಲಿ ಹಾಗೂ ಒಟ್ಟಾರೆ 4 ಬಾರಿ ಚಾಂಪಿಯನ್ ಭಾರತ ತಂಡ ಈ ಬಾರಿ ಫೈನಲ್‌ನಲ್ಲಿ ಶನಿವಾರ ಮಲೇಷ್ಯಾ ವಿರುದ್ಧ ಸೆಣಸಾಡಲಿದೆ. ಮಲೇಷ್ಯಾ ಸೆಮೀಸ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಗೆದ್ದು ಫೈನಲ್‌ಗೇರಿದೆ. ಮಲೇಷ್ಯಾ 2010, 2018ರಲ್ಲಿ ಬೆಳ್ಳಿ ಗೆದ್ದಿತ್ತು.
ಭಾರತ-ಪಾಕ್ ಆಟಗಾರರ ಹಸ್ತಲಾಘವ, ಆಲಿಂಗನ
ಹಾಕಿ ಸೆಮಿಫೈನಲ್ ಬಳಿಕ ಭಾರತ ಹಾಗೂ ಪಾಕಿಸ್ತಾನ ತಂಡದ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿದರು. ಕೆಲ ಆಟಗಾರರು ಆಲಂಗಿಸಿ, ಅಭಿನಂದನೆಯನ್ನೂ ಸಲ್ಲಿಸಿದರು. ಭಾರತದ ಕ್ರಿಕೆಟಿಗರು ಪಾಕ್ ಆಟಗಾರರ ಜೊತೆ ಹಸ್ತಲಾಘವ ಮಾಡಲು ನಿರಾಕರಿಸುತ್ತಿರುವ ನಡುವೆಯೇ, ಹಾಕಿ ಹಾಗೂ ಇತರ ಕ್ರೀಡೆಗಳ ಸ್ಪರ್ಧಿಗಳು ಹಸ್ತಲಾಘವ, ಆಲಿಂಗನದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ವನಿತಾ ಹಾಕಿ ಫೈನಲ್‌ನಲ್ಲಿ ಇಂದು ಭಾರತ vs ಚೀನಾ
ಕಕಮಿಗಹರ: ಏಷ್ಯಾಡ್ ಮಹಿಳಾ ಹಾಕಿ ಫೈನಲ್ ಶುಕ್ರವಾರ ನಡೆಯಲಿದ್ದು, ಭಾರತ ತಂಡ ಚೀನಾ ವಿರುದ್ಧ ಸೆಣಸಾಡಲಿದೆ. ಈ ಮೂಲಕ ಬರೋಬ್ಬರಿ 44 ವರ್ಷಗಳ ಬಳಿಕ ಭಾರತ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದೆ.
ಹಾಲಿ ಚಾಂಪಿಯನ್ ಚೀನಾ ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ, ಭಾರತ 8ನೇ ಸ್ಥಾನದಲ್ಲಿದೆ. ಆದರೆ ಇತ್ತೀಚೆಗೆ ವಿಶ್ವಕಪ್‌ನಲ್ಲಿ ಚೀನಾ ವಿರುದ್ಧ 2-2 ಡ್ರಾ ಸಾಧಿಸಿದ್ದ ಭಾರತ, ಈಗ ಫೈನಲ್‌ನಲ್ಲಿ ಇನ್ನಷ್ಟು ಸುಧಾರಿತ ಆಟವಾಡುವ ವಿಶ್ವಾಸದಲ್ಲಿದೆ. ಭಾರತ ಏಷ್ಯಾಡ್‌ನಲ್ಲಿ ಏಕೈಕ ಚಿನ್ನ ಗೆದ್ದಿದೆ. ಮೊದಲ ಬಾರಿ ಮಹಿಳಾ ಹಾಕಿ ಆಡಿಸಿದ್ದ 1982ರಲ್ಲಿ ಭಾರತ ಚಾಂಪಿಯನ್ ಆಗಿತ್ತು. ಆ ಬಳಿಕ 1998, 2018ರಲ್ಲಿ ಫೈನಲ್‌ಗೇರಿದ್ದರೂ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತ್ತು. ಇನ್ನು, 5ನೇ ಬಾರಿ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದೆ.


