ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಹಾಗೂ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರು ಹೊನ್ನಾವರದ ಬಂಗಾರಮಕ್ಕಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಶ್ರೀ ವೀರಾಂಜನೇಯ ಸ್ವಾಮಿಯ ದರ್ಶನ ಪಡೆದು, ಪೀಠಾಧಿಪತಿ ಶ್ರೀ ಮಾರುತಿ ಗುರೂಜಿ ಅವರಿಂದ ಆಶೀರ್ವಾದ ಪಡೆದುಕೊಂಡರು.

ಹೊನ್ನಾವರ (ಅ.2): ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ, ಸ್ಟಾರ್ ಆರಂಭಿಕ ಆಟಗಾರ್ತಿ ಹಾಗೂ ಮಹಿಳಾ ಪ್ರೀಮಿಯರ್ ಲೀಗ್ (WPL) ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎರಡು ಬಾರಿ (2024 ಮತ್ತು 2026) ಚಾಂಪಿಯನ್ ಪಟ್ಟಕ್ಕೇರಿಸಿದ ಯಶಸ್ವಿ ನಾಯಕಿ ಸ್ಮೃತಿ ಮಂಧಾನ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಕ್ಷೇತ್ರ ಬಂಗಾರಮಕ್ಕಿಗೆ (ಹೇಮಾಪುರ) ಭೇಟಿ ನೀಡಿದ್ದಾರೆ.

ಕ್ಷೇತ್ರಕ್ಕೆ ಆಗಮಿಸಿದ ಸ್ಮೃತಿ ಮಂಧಾನ ಅವರು ಶ್ರೀ ವೀರಾಂಜನೇಯ ಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕ್ಷೇತ್ರದ ಧರ್ಮದರ್ಶಿಗಳು ಹಾಗೂ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಪೂಜ್ಯ ಗುರೂಜಿಯವರು ಸ್ಮೃತಿ ಮಂಧಾನ ಅವರಿಗೆ ಆಂಜನೇಯ ಸ್ವಾಮಿಯ ಭಾವಚಿತ್ರ ನೀಡಿ, ಶಾಲು ಹೊದಿಸಿ ಗೌರವಿಸಿ ಆಶೀರ್ವದಿಸಿದರು.

ಶರಾವತಿ ನದಿ ತೀರದ ಪುಣ್ಯಕ್ಷೇತ್ರ ಬಂಗಾರಮಕ್ಕಿ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪೆ ಸಮೀಪವಿರುವ ಶ್ರೀಕ್ಷೇತ್ರ ಬಂಗಾರಮಕ್ಕಿಯು ಶರಾವತಿ ನದಿಯ ಬಲದಂಡೆಯಲ್ಲಿದ್ದು, ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳು ಮತ್ತು ನೈಸರ್ಗಿಕ ಸೌಂದರ್ಯದ ನಡುವೆ ಮೈದಳೆದು ನಿಂತಿದೆ. ದಿವಂಗತ ವೇದ ಬ್ರಹ್ಮ ಶ್ರೀ ಗಣೇಶ ಭಟ್ ಅವರು ಶ್ರೀಧರ ಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಸ್ಥಾಪಿಸಿದ ಈ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಪ್ರಮುಖ ಆರಾಧ್ಯ ದೈವವಾಗಿದೆ.

ಪ್ರತಿದಿನ ತ್ರಿಕಾಲ ಪೂಜೆ ನಡೆಯುವ ಈ ಕ್ಷೇತ್ರದಲ್ಲಿ ಶುಕ್ರವಾರ ಮತ್ತು ಸೋಮವಾರದಂದು 'ಹೇಳಿಕೆ ಸೇವೆ'ಯ ವಿಶೇಷ ದರ್ಶನವಿರುತ್ತದೆ. ಯುಗಾದಿ ವಸಂತೋತ್ಸವ, ಹನುಮ ಜಯಂತಿ ಬ್ರಹ್ಮರಥೋತ್ಸವ, ರಾಮೋತ್ಸವ, ಶರನ್ನವರಾತ್ರಿ ಯಕ್ಷಗಾನ ಹಾಗೂ ಕಾರ್ತಿಕ ದೀಪೋತ್ಸವಗಳು ಕ್ಷೇತ್ರದ ಪ್ರಮುಖ ಉತ್ಸವಗಳಾಗಿದ್ದು, ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರಸ್ತುತ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ಅವರು ಪೀಠಾಧಿಪತಿಗಳಾಗಿ ಕ್ಷೇತ್ರದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ.

ವಿಶ್ವದ ಶ್ರೇಷ್ಠ ಬ್ಯಾಟರ್, ಆರ್‌ಸಿಬಿ ಹಿರಿಮೆಯ ಸ್ಮೃತಿ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ವಿಶ್ವ ದಾಖಲೆಗಳನ್ನು ಬರೆದಿರುವ ಸ್ಮೃತಿ ಮಂಧಾನ ಪ್ರಸ್ತುತ ಜಾಗತಿಕ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌‌ಗಳಲ್ಲಿ ಒಬ್ಬರೆನಿಸಿದ್ದಾರೆ. ಮೈದಾನದಲ್ಲಿ ಸ್ಫೋಟಕ ಆಟದ ಮೂಲಕ ಕೋಟ್ಯಂತರ ಕನ್ನಡಿಗರು ಹಾಗೂ ಭಾರತೀಯರ ಮನಗೆದ್ದಿರುವ ಅವರು, ಬಿಡುವಿನ ವೇಳೆಯಲ್ಲಿ ಶರಾವತಿ ತೀರದ ಈ ಪವಿತ್ರ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.