ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹಿಂದಿನ ಟ್ರೋಫಿ ವಿವಾದ ಮರುಕಳಿಸುವ ಆತಂಕ ದೂರವಾಗಲಿದೆಯಾ? ಅಥವಾ ಮತ್ತೆ ಪ್ರಶಸ್ತಿ ಸಮಾರಂಭ ವಿವಾದಿಂದ ಕೂಡಿರಲಿದೆಯಾ? ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಶನಿವಾರ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ರೋಮಾಂಚಕಾರಿ ದಿನವಾಗಲಿದೆ. ಏಷ್ಯನ್ ಗೇಮ್ಸ್‌ನ ಮಹಾ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಬೆಳಿಗ್ಗೆ 10 ಗಂಟೆಗೆ ಈ ಹೈ-ವೋಲ್ಟೇಜ್ ಕಾದಾಟ ಆರಂಭವಾಗಲಿದೆ. ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾಗುತ್ತವೆ ಎಂದರೆ ಅಲ್ಲಿ ಕ್ರಿಕೆಟ್‌ಗಿಂತಲೂ ಹೆಚ್ಚಾಗಿ ಭಾವನೆಗಳು, ಉತ್ಸಾಹ ಮತ್ತು ಅಭಿಮಾನಿಗಳ ರೋಮಾಂಚನ ಉನ್ನತ ಮಟ್ಟದಲ್ಲಿರುತ್ತದೆ. ಹೀಗಾಗಿ ಈ ಮಹಾಸಮರವನ್ನು ಕಣ್ಣುಂಬಿಕೊಳ್ಳಲು ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಬರ್ತಾರಾ ನಖ್ವಿ!
ಆದರೆ, ಈ ಫೈನಲ್ ಪಂದ್ಯ ಆರಂಭವಾಗುವ ಮುನ್ನವೇ ಮೈದಾನದ ಹೊರಗೆ ಒಂದು ದೊಡ್ಡ ಮಟ್ಟದ ಹೈ-ಡ್ರಾಮಾ ಮತ್ತು ಚರ್ಚೆ ಹುಟ್ಟಿಕೊಂಡಿತ್ತು. ಅದೇನೆಂದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥರಾಗಿರುವ ಮೊಹ್ಸಿನ್ ನಖ್ವಿ ಈ ಪಂದ್ಯಕ್ಕೆ ಹಾಜರಾಗಲಿದ್ದಾರೆಯೇ ಎಂಬ ಪ್ರಶ್ನೆ. ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವುದರಿಂದ ಎಸಿಸಿ ಅಧ್ಯಕ್ಷರಾಗಿ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುವುದು ಸಹಜ ಪ್ರಕ್ರಿಯೆಯಾಗಿತ್ತು.
ಈ ಹಿಂದಿನ 'ಟ್ರೋಫಿ ವಿವಾದ' ಮತ್ತು ನಖ್ವಿ ಗೊಂದಲ!
ಈ ಹಿಂದಿನ ಘಟನೆಗಳನ್ನು ಗಮನಿಸಿದರೆ, ಪುರುಷರ ಮತ್ತು ಮಹಿಳೆಯರ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ತಂಡಗಳು ಪಾಕಿಸ್ತಾನವನ್ನು ಮಣ್ಣು ಮುಕ್ಕಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು. ಆದರೆ, ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ನಾಯಕರು ಸಮ್ಮತಿಸಿರಲಿಲ್ಲ. ಪುರುಷರ ತಂಡದ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಪಡೆ ಹಾಗೂ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಪಡೆ ಮೊಹ್ಸಿನ್ ನಖ್ವಿ ಅವರಿಂದ ಪ್ರಶಸ್ತಿ ಪಡೆಯಲು ಸ್ಪಷ್ಟವಾಗಿ ನಿರಾಕರಿಸಿದ್ದವು. ಈ ರಾಜಕೀಯ ಮತ್ತು ಕ್ರೀಡಾ ತಂಟೆಯಿಂದಾಗಿ ಭಾರತ ಗೆದ್ದ ಆ ಎರಡೂ ಏಷ್ಯಾ ಕಪ್ ಟ್ರೋಫಿಗಳು ಇಂದಿಗೂ ಟೀಮ್ ಇಂಡಿಯಾದ ಪ್ರಶಸ್ತಿ ಕ್ಯಾಬಿನೆಟ್ ತಲುಪದೇ ವಿವಾದದ ಸುಳಿಯಲ್ಲಿ ಸಿಲುಕಿದ್ದವು.
ಟ್ರೋಪಿ ನಿರಾಕರಿಸುತ್ತಾ ಭಾರತ?
ಇದೀಗ ಏಷ್ಯನ್ ಗೇಮ್ಸ್ ಫೈನಲ್‌ನಲ್ಲೂ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿರುವುದರಿಂದ, ಮತ್ತೆ ಅದೇ ರೀತಿಯ ಮುಜುಗರದ ಸನ್ನಿವೇಶ ಮತ್ತು ಹೈ-ಡ್ರಾಮಾ ಸೃಷ್ಟಿಯಾಗಲಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿ ಇತ್ತು. ನಖ್ವಿ ಅವರೇನಾದರೂ ವೇದಿಕೆಗೆ ಬಂದು ಟ್ರೋಫಿ ನೀಡಲು ಮುಂದಾದರೆ ಭಾರತ ತಂಡ ಮತ್ತೆ ಅದನ್ನು ನಿರಾಕರಿಸುತ್ತದೆಯೇ ಎಂಬ ಕೌತುಕ ಮೂಡಿತ್ತು.
ಭಾರತಕ್ಕೆ ಸಿಕ್ತು ಬಹುದೊಡ್ಡ ರಿಲೀಫ್!
ಆದರೆ, ಫೈನಲ್ ಪಂದ್ಯದ ಕೆಲವೇ ಗಂಟೆಗಳ ಮುಂಚಿತವಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಈ ಎಲ್ಲಾ ವದಂತಿಗಳು ಮತ್ತು ಗೊಂದಲಗಳಿಗೆ ತೆರೆ ಎಳೆದಿದೆ. ಪಿಸಿಬಿ ಅಧ್ಯಕ್ಷ ಹಾಗೂ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ತಮ್ಮ ಪೂರ್ವ ನಿಯೋಜಿತ ವೇಳಾಪಟ್ಟಿ ಮತ್ತು ಕೆಲಸದ ಒತ್ತಡದ ಕಾರಣದಿಂದಾಗಿ ಈ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯಕ್ಕೆ ಹಾಜರಾಗುತ್ತಿಲ್ಲ ಎಂದು ಎಸಿಸಿ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಎಸಿಸಿಯ ಈ ಪ್ರಕಟಣೆಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಟೀಮ್ ಇಂಡಿಯಾಗೆ ದೊಡ್ಡ ಸಮಾಧಾನ ತಂದಿದೆ. ನಖ್ವಿ ಅವರ ಗೈರುಹಾಜರಿಯಿಂದಾಗಿ, ಪಂದ್ಯದ ನಂತರ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಾವುದೇ ರೀತಿಯ ರಾಜಕೀಯ ಅಥವಾ ಕ್ರೀಡಾ ವಿವಾದಗಳು ಎದುರಾಗುವುದಿಲ್ಲ.
ಹಾದಿ ಸುಗುಮ!
ಇದೀಗ ಶನಿವಾರ ನಡೆಯಲಿರುವ ಮಹಾಸಮರದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದರೆ, ಯಾವುದೇ ಅಡೆತಡೆ ಅಥವಾ ಮುಜುಗರವಿಲ್ಲದೆ ಪ್ರಶಸ್ತಿಯನ್ನು ಎತ್ತಿಹಿಡಿದು ವಿಜಯೋತ್ಸವ ಆಚರಿಸಲು ಹಾದಿ ಸಂಪೂರ್ಣ ಸುಗಮವಾಗಿದೆ. ಮೈದಾನದಲ್ಲಿ ಶ್ರೇಯಸ್ ಅಯ್ಯರ್ ಪಡೆ ಪಾಕಿಸ್ತಾನಕ್ಕೆ ಧೂಳೀಪಟ ಮಾಡಿ ಬಂಗಾರದ ಪದಕ ಹಾಗೂ ವಿಶ್ವ ಶ್ರೇಷ್ಠ ಟ್ರೋಫಿಯನ್ನು ಭಾರತಕ್ಕೆ ತರಲಿದೆಯೇ ಎಂಬುದನ್ನು ನೋಡಲು ಇಡೀ ದೇಶವೇ ಕಾಯುತ್ತಿದೆ!


