ಲಂಡನ್‌[ಸೆ.16]: ಆಸ್ಪ್ರೇ​ಲಿಯಾ ವಿರು​ದ್ಧದ ಆ್ಯಷಸ್‌ ಸರ​ಣಿಯ 5ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 135 ರನ್’ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. ಸರಣಿಯಲ್ಲಿ ಮೊದಲು ಮುನ್ನಡೆ ಸಾಧಿಸಿದೆ ಎನ್ನುವ ಕಾರಣಕ್ಕೆ ಆಸ್ಟ್ರೇಲಿಯಾ ಆ್ಯಷಸ್ ಟ್ರೋಫಿಯನ್ನು ಉಳಿಸಿಕೊಂಡಿದೆ.

ಗೆಲು​ವಿಗೆ 399 ರನ್‌ಗಳ ಬೃಹತ್‌ ಗುರಿ ಬೆನ್ನ​ತ್ತಿದ ಆಸ್ಪ್ರೇ​ಲಿಯಾ, 4ನೇ ದಿನವಾದ ಭಾನುವಾರ 263 ರನ್’ಗಳಿಗೆ ಆಲೌಟ್ ಆಯಿತು. ಮ್ಯಾಥ್ಯೂ ವೇಡ್ ಬಾರಿಸಿದ ಹೋರಾಟದ ಶತಕ[177] ತಂಡವನ್ನು ಸೋಲಿನಿಂದ ಪಾರು ಮಾಡಲಿಲ್ಲ.  ಸರ​ಣಿ​ಯು​ದ್ದಕ್ಕೂ ಅಬ್ಬ​ರಿ​ಸಿದ ಸ್ಟೀವ್‌ ಸ್ಮಿತ್‌, ಈ ಸರ​ಣಿಯ ಕೊನೆ ಇನ್ನಿಂಗ್ಸ್‌ನಲ್ಲಿ 23 ರನ್‌ಗೆ ಔಟಾ​ದರು. ಸರ​ಣಿ​ಯಲ್ಲಿ ಇದು ಅವರಿಂದ ದಾಖ​ಲಾದ ಕನಿಷ್ಠ ಮೊತ್ತ. ಸ್ಮಿತ್‌ ವಿಕೆಟ್‌ ಕಬ​ಳಿ​ಸು​ತ್ತಿ​ದ್ದಂತೆ ಆತಿ​ಥೇ​ಯರು ಪಂದ್ಯ ಗೆದ್ದಷ್ಟೇ ಸಂಭ್ರಮಪಟ್ಟರು.

ಆ್ಯಷಸ್‌ ಕದನ: ಡ್ರಾನತ್ತ ಅಂತಿಮ ಟೆಸ್ಟ್

4ನೇ ದಿನ ಇಂಗ್ಲೆಂಡ್‌ ತನ್ನ 2ನೇ ಇನ್ನಿಂಗ್ಸ್‌ನಲ್ಲಿ 329 ರನ್‌ಗಳಿಗೆ ಆಲೌಟ್‌ ಆಯಿತು. ಒಟ್ಟಾರೆ 398 ರನ್‌ ಮುನ್ನಡೆ ಸಾಧಿ​ಸಿದ ಇಂಗ್ಲೆಂಡ್‌, ಪ್ರವಾಸಿ ತಂಡಕ್ಕೆ ದೊಡ್ಡ ಗುರಿ ನೀಡಿತು. ಆಸ್ಪ್ರೇಲಿಯಾ ಮತ್ತೆ ಕಳಪೆ ಆರಂಭ ಪಡೆಯಿತು. 29 ರನ್‌ಗೆ ಆರಂಭಿಕರಿಬ್ಬರು ಪೆವಿಲಿಯನ್‌ ಸೇರಿದರು. ವಾರ್ನರ್‌(11), ಈ ಸರ​ಣಿ​ಯಲ್ಲಿ ಸ್ಟುವರ್ಟ್‌ ಬ್ರಾಡ್‌ಗೆ 7ನೇ ಬಾರಿ ವಿಕೆಟ್‌ ಒಪ್ಪಿ​ಸಿ​ದರು. ಈ ಬಾರಿ ಸ್ಮಿತ್‌ಗೆ ಸಾಥ್‌ ನೀಡದ ಲಬುಶೇನ್‌ ಭೋಜನ ವಿರಾಮಕ್ಕೂ ಮೊದಲೇ ಪೆವಿಲಿಯನ್‌ ಸೇರಿದ್ದರು. ಮಿಚೆಲ್‌ ಮಾರ್ಷ್ (24) ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲ​ಲಿಲ್ಲ. ಮ್ಯಾಥ್ಯೂ ವೇಡ್‌ ಅರ್ಧ​ಶ​ತ​ಕ​ದೊಂದಿಗೆ ತಂಡದ ಪರ ಹೋರಾಟ ನಡೆ​ಸಿ​ದರು.

7 ಬಾಲ್‌ಗೆ 7 ಸಿಕ್ಸರ್: ಇತಿಹಾಸ ಬರೆದ ಆಫ್ಘನ್ ಕ್ರಿಕೆಟರ್ಸ್...!

ಸರ​ಣಿ​ಯಲ್ಲಿ ಸ್ಮಿತ್‌ 774 ರನ್‌!

ಸರಣಿ ಆರಂಭದಲ್ಲಿ ಸ್ಟೀವ್‌ ಸ್ಮಿತ್‌ರನ್ನು ಹೀಯಾ​ಳಿ​ಸಿದ್ದ ಇಂಗ್ಲೆಂಡ್‌ ಅಭಿ​ಮಾ​ನಿ​ಗಳು, ಸರಣಿಯಲ್ಲಿ ತಮ್ಮ ಕೊನೆ ಇನ್ನಿಂಗ್ಸ್‌ ಆಡಿ ಹೊರ​ನ​ಡೆದ ಸ್ಮಿತ್‌ಗೆ ಎದ್ದು ನಿಂತು, ಚಪ್ಪಾಳೆ ತಟ್ಟುತ್ತಾ ಅಭಿನಂದಿ​ಸಿ​ದರು. ಈ ಆ್ಯಷಸ್‌ನಲ್ಲಿ 7 ಇನಿಂಗ್ಸ್‌ಗಳ​ನ್ನು ಆಡಿದ ಸ್ಮಿತ್‌ 3 ಶತ​ಕ, 3 ಅರ್ಧ​ಶ​ತ​ಕ​ಗ​ಳೊಂದಿಗೆ 774 ರನ್‌ ಗಳಿ​ಸಿ​ದರು. ಅವರ ಸರಾ​ಸರಿ 110.57. ಗರಿಷ್ಠ ಮೊತ್ತ 211 ರನ್‌.

ಸ್ಮಿತ್‌ ಕೆಲ ದಾಖಲೆಗಳನ್ನು ಬರೆ​ದ​ರು. 1994ರ ನಂತರ ಟೆಸ್ಟ್‌ ಸರಣಿಯಲ್ಲಿ ಅತಿಹೆಚ್ಚು ರನ್‌ ದಾಖಲಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಸ್ಮಿತ್‌ ಬರೆದರು. 25 ವರ್ಷ ಹಿಂದೆ ಬ್ರಿಯಾನ್‌ ಲಾರಾ ಸರಣಿಯೊಂದರಲ್ಲಿ 778 ರನ್‌ ದಾಖಲಿಸಿದ್ದರು. ಭಾರತ ವಿರುದ್ಧ 2014-15ರಲ್ಲಿ ಸ್ಮಿತ್‌ 769 ರನ್‌ ಗಳಿಸಿದ್ದರು. ಟೆಸ್ಟ್‌ ಸರಣಿಯಲ್ಲಿ 2ನೇ ಬಾರಿ 700ಕ್ಕೂ ಹೆಚ್ಚು ರನ್‌ ಕಲೆಹಾಕಿದವರ ಪಟ್ಟಿಗೆ ಸ್ಮಿತ್‌ ಸೇರ್ಪಡೆಗೊಂಡರು.

ಒಂದೇ ಸರಣಿಯಲ್ಲಿ 12 ಆಟಗಾರರನ್ನು ಹಿಂದಿಕ್ಕಿದ ಸ್ಮಿತ್: ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿದ್ದ ಸ್ಟೀವ್ ಸ್ಮಿತ್ ತಾವಾಡಿದ ಮೂರನೇ ಟೆಸ್ಟ್ ವೇಳೆಗೆ ಮತ್ತೆ ಐಸಿಸಿ ನಂ.1 ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಆ್ಯಷಸ್ ಸರಣಿ ಆರಂಭಕ್ಕೂ ಮುನ್ನ ಸ್ಮಿತ್ 6,199 ಬಾರಿಸಿದ್ದರು. ಇದಾದ ಬಳಿಕ ಆ್ಯಷಸ್ ಮುಕ್ತಾಯದ ವೇಳೆಗೆ ಬರೋಬ್ಬರಿ 12 ಆಟಗಾರರನ್ನು ಹಿಂದಿಕ್ಕಿ 6973 ರನ್ ಬಾರಿಸಿದ್ದಾರೆ. ಇನ್ನು ತಮಗಿಂತ ರನ್‌ಗಳಿಕೆಯಲ್ಲಿ ಮುಂದಿದ್ದ,  ಇದೇ ವೇಳೆ ಟೆಸ್ಟ್ ಪಂದ್ಯಗಳನ್ನಾಡುತ್ತಿದ್ದ ರಾಸ್ ಟೇಲರ್, ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕುವಲ್ಲಿ ಸ್ಮಿತ್ ಸಫಲರಾಗಿದ್ದಾರೆ.

ಸ್ಕೋರ್‌:

ಇಂಗ್ಲೆಂಡ್‌ 294 ಹಾಗೂ 329, 
ಆಸ್ಪ್ರೇಲಿಯಾ 225 ಹಾಗೂ 263