7 ಬಾಲ್‌ಗೆ 7 ಸಿಕ್ಸರ್: ಇತಿಹಾಸ ಬರೆದ ಆಫ್ಘನ್ ಕ್ರಿಕೆಟರ್ಸ್...!
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಫ್ಘಾನಿಸ್ತಾನ ಕ್ರಿಕೆಟಿಗರು ಸತತ 7 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಯುವಿ ಆರು ಎಸೆತದಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಇದೀಗ ಆಫ್ಘನ್‌ನ ಇಬ್ಬರು ಕ್ರಿಕೆಟಿಗರು ಸೇರಿ 7 ಸಿಕ್ಸರ್ ಸಿಡಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಢಾಕಾ[ಸೆ.15]: ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಆ್ಯಷಸ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಮತ್ತೊಂದು ಶತಕ ಸಿಡಿಸಬಹುದಾ..? ವಿರಾಟ್ ಕೊಹ್ಲಿ ಪಡೆ ತವರಿನಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಟಿ20 ಕ್ರಿಕೆಟ್ ಸೋಲಿಸಬಹುದಾ ಎಂದು ಯೋಚಿಸುತ್ತಿದ್ದಾರೆ. ಹೀಗಿರುವಾಗಲೇ ಆಫ್ಘಾನಿಸ್ತಾನದ ಕ್ರಿಕೆಟಿಗರು ಸದ್ದಿಲ್ಲದೇ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.
ಬಾಂಗ್ಲಾ ಮಣಿಸಿದ ಆಸ್ಟ್ರೇಲಿಯಾ ದಾಖಲೆ ಸರಿಗಟ್ಟಿದ ಅಫ್ಘಾನಿಸ್ತಾನ!
ಹೌದು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಸಿಕ್ಸರ್’ಗಳ ಸುರಿಮಳೆ ಸಿಡಿಸಿದೆ. ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ ಮೊಹಮ್ಮದ್ ನಬೀ ಹಾಗೂ ನಜಿಬುಲ್ಲಾ ಜದ್ರಾನ್ ಏಳು ಎಸೆತಗಳಲ್ಲಿ ಏಳು ಸಿಕ್ಸರ್ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಆಫ್ಘನ್ 16 ಓವರ್ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 123 ರನ್ ಬಾರಿಸಿತ್ತು. ಆ ನಂತರದ ಏಳು ಎಸೆತಗಳಲ್ಲಿ ನಬೀ-ಜದ್ರಾನ್ ಜೋಡಿ 42 ರನ್ ಚಚ್ಚಿದರು. ಇದರ ಜತೆಗೆ 107 ರನ್’ಗಳ ಜತೆಯಾಟವಾಡುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ 5ನೇ ವಿಕೆಟ್’ಗೆ ಎರಡನೇ ಗರಿಷ್ಠ ಜತೆಯಾಟ ನಿಭಾಯಿಸಿದ ದಾಖಲೆ ಬರೆದರು.
ಮೊದಲ ಟಿ20 ಪಂದ್ಯಕ್ಕೆ ಸಂಭವನೀಯ ಟೀಂ ಇಂಡಿಯಾ; ಯಾರಿಗಿದೆ ಚಾನ್ಸ್?
17ನೇ ಓವರ್ ಬೌಲಿಂಗ್ ಮಾಡಿದ ಜಿಂಬಾಬ್ವೆಯ ತೆಂಡೈ ಚಟಾರ ಮೂರನೇ ಎಸೆತವನ್ನು ನಬೀ ಮಿಡ್ ವಿಕೆಟ್’ನತ್ತ ಸಿಕ್ಸರ್ ಸಿಡಿಸಿದರು. ಆ ನಂತರ ನಬೀ ಹ್ಯಾಟ್ರಿಕ್ ಸಿಕ್ಸರ್ ಚಚ್ಚಿದರು. ಇದರ ಬೆನ್ನಲ್ಲೇ 18ನೇ ಓವರ್ ಎಸೆದ ನೇವಿಲ್ಲೇ ಮೆಡ್ವಜೀವಾಗೆ ನಜಿಬುಲ್ಲಾ ಜದ್ರಾನ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಆಫ್ಘಾನ್ ಬ್ಯಾಟ್ಸ್’ಮನ್’ಗಳು 7 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದರು.
ಜದ್ರಾನ್ ಆಕರ್ಷಕ ಅರ್ಧಶತಕ ಹಾಗೂ ನಬೀ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಫ್ಘಾನಿಸ್ತಾನ 5 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಜಿಂಬಾಬ್ವೆ 7 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಆಫ್ಘಾನಿಸ್ತಾನ 28 ರನ್’ಗಳ ಜಯ ದಾಖಲಿಸಿತು.