ಫ್ರೆಂಚ್ ಓಪನ್ ಟೆನಿಸ್‌ ಟೂರ್ನಿಯಲ್ಲಿ ಅಲೆಕ್ಸಾಂಡರ್‌ ಜ್ವೆರೆವ್‌ ಪುರುಷರ ಸಿಂಗಲ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ರಷ್ಯಾದ ಮಿರ್ರಾ ಆ್ಯಂಡ್ರೀವಾ ಮತ್ತು ಪೋಲೆಂಡ್‌ನ ಮಜಾ ಚ್ವಾಲಿನ್ಸ್ಕಾ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಪ್ಯಾರಿಸ್: ಚೊಚ್ಚಲ ಗ್ರ್ಯಾನ್‌ಸ್ಲಾಂ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇದರೊಂದಿಗೆ ಸೂಪರ್‌ಸ್ಟಾರ್‌ಗಳ ಅನುಪಸ್ಥಿತಿಯಲ್ಲಿ ಟ್ರೋಫಿ ಗೆಲುವಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಶಸ್ತಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿರುವ ಜ್ವೆರೆವ್

ಜೋಕೋವಿಚ್‌, ಸಿನ್ನರ್‌ ಸೇರಿದಂತೆ ಪ್ರಮುಖರು ಟೂರ್ನಿಯ ಆರಂಭದಲ್ಲೇ ಹೊರಬಿದ್ದ ಬಳಿಕ ಟ್ರೋಫಿ ಗೆಲುವಿನ ಫೇವರಿಟ್‌ ಎನಿಸಿಕೊಂಡಿರುವ ವಿಶ್ವ ನಂ.3 ಆಟಗಾರ ಜ್ವೆರೆವ್‌, ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಚೆಕ್‌ ಗಣರಾಜ್ಯದ ಯಾಕುಬ್‌ ಮೆನ್ಸಿಕ್‌ ವಿರುದ್ಧ 7-5, 6-2, 3-6, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 

ಆರಂಭಿಕ 2 ಸೆಟ್‌ ಬಳಿಕ ಮೆನ್ಸಿಕ್‌ ಪ್ರತಿರೋಧ ತೋರಿದರಾದರೂ, ತಮಗಿಂತ ಹಿರಿಯ ಹಾಗೂ ಅನುಭವಿ ಆಟಗಾರನ ಮುಂದೆ ಗೆಲ್ಲಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಜ್ವೆರೆವ್‌ ಫ್ರೆಂಚ್‌ ಓಪನ್‌ನಲ್ಲಿ 2ನೇ ಬಾರಿ ಫೈನಲ್‌ ತಲುಪಿದರೆ, 26ನೇ ಶ್ರೇಯಾಂಕಿತ ಮೆನ್ಸಿಕ್‌ರ ಚೊಚ್ಚಲ ಗ್ರ್ಯಾನ್‌ಸ್ಲಾಂ ಫೈನಲ್‌ ಕನಸು ಭಗ್ನಗೊಂಡಿತು. ಅವರು ಗ್ರ್ಯಾನ್‌ಸ್ಲಾಂನಲ್ಲಿ ಮೊದಲ ಬಾರಿ ಸೆಮಿಫೈನಲ್‌ ಆಡಿದರು.

Scroll to load tweet…

--

ಮಹಿಳಾ ಫೈನಲ್‌ನಲ್ಲಿಂದು ಚ್ವಾಲಿನ್ಸ್ಕಾ vs ಆ್ಯಂಡ್ರೀವಾ

ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ ಫೈನಲ್‌ ಹಣಾಹಣಿ ಶನಿವಾರ ನಡೆಯಲಿದ್ದು, ರಷ್ಯಾದ ಮಿರ್ರಾ ಆ್ಯಂಡ್ರೀವಾ ಹಾಗೂ ಪೋಲೆಂಡ್‌ನ ಮಜಾ ಚ್ವಾಲಿನ್ಸ್ಕಾ ಮುಖಾಮುಖಿಯಾಗಲಿದ್ದಾರೆ. ಸೆಮಿಫೈನಲ್‌ನಲ್ಲಿ ಆ್ಯಂಡ್ರೀವಾ ಅವರು ಉಕ್ರೇನ್‌ ಮಾರ್ಟಾ ಕೋಸ್ಟ್ಯುಕ್‌ ವಿರುದ್ಧ ಗೆದ್ದಿದ್ದರೆ, ಚ್ವಾಲಿನ್ಸ್ಕಾ ರಷ್ಯಾದ ಡಿಯಾನ ಶ್ನೈಡೆರ್‌ ಅವರನ್ನು ಸೋಲಿಸಿ ಫೈನಲ್‌ ತಲುಪಿದ್ದರು. ಇವರಿಬ್ಬರೂ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.