ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಆಘಾತಕಾರಿ ಸೋಲು ಕಂಡಿದ್ದಾರೆ. ಗೆಲುವಿನ ಸನಿಹದಲ್ಲಿದ್ದ ಸಬಲೆಂಕಾ, ರಷ್ಯಾದ ಡಿಯಾನ ಶ್ನೈಡೆರ್ ವಿರುದ್ಧ 3-6, 7-5, 6-0 ಸೆಟ್‌ಗಳಿಂದ ಪರಾಭವಗೊಂಡು ಟೂರ್ನಿಯಿಂದ ಹೊರಬಿದ್ದರು. ಈ ಮೂಲಕ ಶ್ನೈಡೆರ್ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಂ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಪ್ಯಾರಿಸ್: ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಗ್ರ್ಯಾನ್‌ಸ್ಲಾಂ ಚಾಂಪಿಯನ್‌ಗಳಾದ ನೊವಾಕ್ ಜೋಕೋವಿಚ್, ಯಾನಿಕ್ ಸಿನ್ನರ್, ಇಗಾ ಸ್ವಿಯಾಟೆಕ್, ಕೊಕೊ ಗಾಫ್ ಬಳಿಕ ವಿಶ್ವ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಕೂಡಾ ಆಘಾತಕಾರಿ ಸೋಲನುಭವಿಸಿದ್ದಾರೆ.
4 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ, ಬೆಲಾರಸ್‌ನ ಸಬಲೆಂಕಾ ಬುಧವಾರ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಆಟಗಾರ್ತಿ, 25ನೇ ಶ್ರೇಯಾಂಕಿತೆ ಡಿಯಾನ ಶ್ನೈಡೆರ್ ವಿರುದ್ಧ 3-6, 7-5, 6-0 ಸೆಟ್‌ಗಳಲ್ಲಿ ಪರಾಭವಗೊಂಡರು. ಇದರೊಂದಿಗೆ ಡಿಯಾನ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು.
ಶ್ರೇಷ್ಠ ಕಮ್‌ಬ್ಯಾಕ್:
ಪಂದ್ಯದ ಬಹುತೇಕ ಸಮಯ ಸಬಲೆಂಕಾ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು ಮತ್ತು ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದರು. ಮೊದಲ ಸೆಟ್‌ನಲ್ಲಿ 6-3 ಅಂತರದಲ್ಲಿ ಗೆಲುವು ಸಾಧಿಸಿದ್ದ ಕಳೆದ ಬಾರಿ ರನ್ನರ್-ಅಪ್ ಸಬಲೆಂಕಾ, 2ನೇ ಸೆಟ್‌ನಲ್ಲಿ 4-1ರಲ್ಲಿ ಮುನ್ನಡೆಯಲ್ಲಿದ್ದರು. ಬಳಿಕ ಮುನ್ನಡೆಯನ್ನು 5-3ಕ್ಕೆ ಏರಿಸಿ, ಗೆಲುವಿನ ಸನಿಹ ತಲುಪಿದ್ದರು. ಆದರೆ ಸಬಲೆಂಕಾ ಇದ್ದಕ್ಕಿದ್ದಂತೆ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡರು. ಶ್ನೈಡೆರ್ ಆಟದ ಮುಂದೆ ಉತ್ತರವಿಲ್ಲದಂತೆ ಆಡಿದ ಸಬೆಲೆಂಕಾ, 2ನೇ ಸೆಟ್‌ಅನ್ನು 5-7ರಲ್ಲಿ ಕಳೆದುಕೊಂಡರು. 3ನೇ ಸೆಟ್‌ನಲ್ಲಂತೂ ಸಬಲೆಂಕಾ ವಿರುದ್ಧ ಶ್ನೈಡೆರ್ ಸಂಪೂರ್ಣ ಅಧಿಪತ್ಯ ಸಾಧಿಸಿದರು. ಈ ಸೆಟ್‌ನಲ್ಲಿ ಸಂಪೂರ್ಣ ತಾಳ್ಮೆ ಕಳೆದುಕೊಂಡು ರೇಗಾಡುತ್ತಿದ್ದ ಸಬಲೆಂಕಾ, ಒಂದೂ ಗೇಮ್ ಗೆಲ್ಲದೆ 0-6 ಅಂತರದಲ್ಲಿ ಸೋತು ಹೊರಬಿದ್ದರು.
ಚಾವ್ಲಿನ್ಸ್ಕ ಸೆಮಿಗೆ:
ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ 22ನೇ ಶ್ರೇಯಾಂಕಿತೆ ಅನ್ನಾ ಕಲಿನ್ಸ್‌ಕಯಾ ವಿರುದ್ಧ 7-6 3), 6-3 ಸೆಟ್‌ಗಳಲ್ಲಿ ಗೆದ್ದು ಪೋಲೆಂಡ್‌ನ ಮಜಾ ಚಾವ್ಲಿನ್ಸ್ಕ ಸೆಮಿಫೈನಲ್ ತಲುಪಿದರು. ಸೆಮೀಸ್‌ನಲ್ಲಿ ಶ್ನೈಡೆರ್‌ಗೆ ಚಾವ್ಲಿನ್ಸ್ಕ ಸವಾಲು ಎದುರಾಗಲಿದೆ.
ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ಬ್ರೆಜಿಲ್‌ನ ಫೊನ್ಸೆಕಾ ವಿರುದ್ಧ ಗೆದ್ದು ಚೆಕ್ ಗಣರಾಜ್ಯದ ಜಾಕುಬ್ ಮೆನ್ಸಿಕ್ ಸೆಮಿಫೈನಲ್ ಪ್ರವೇಶಿಸಿದರು.


