ಪುಲ್ವಾಮ ದಾಳಿ: ಹುತಾತ್ಮರ ಕುಟುಂಬಗಳಿಗೆ ಬಿಸಿಸಿಐ 5 ಕೋಟಿ?
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಆಡಳಿತ ಸಮಿತಿಗೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಖನ್ನಾ ಮನವಿಮಾಡಿದ್ದಾರೆ. ಇಷ್ಟೇ ಅಲ್ಲ ಐಪಿಎಲ್ ಫ್ರಾಂಚೈಸಿಗಳು ಆಯಾ ರಾಜ್ಯದ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗಲು ಮನವಿ ಮಾಡಿದ್ದಾರೆ.
ನವದೆಹಲಿ(ಫೆ.18): ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಕುಟುಂಬಗಳಿಗೆ ಬಿಸಿಸಿಐ ಕನಿಷ್ಠ 5 ಕೋಟಿ ನೆರವು ನೀಡಬೇಕು ಎಂದು ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಭಾನುವಾರ, ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್‌ಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು CCI ಆಗ್ರಹ!
‘ನಮಗೆ ಅತೀವ ಬೇಸರವಾಗಿದೆ, ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ. ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳುತ್ತಾ, ಬಿಸಿಸಿಐ ಕನಿಷ್ಠ 5 ಕೋಟಿ ನೆರವು ನೀಡಬೇಕು ಎಂದು ಮನವಿ ಮಾಡುತ್ತೇನೆ. ಸರ್ಕಾರದ ಸೂಕ್ತ ಇಲಾಖೆಯ ಮುಖಾಂತರ ಹುತಾತ್ಮರ ಕುಟುಂಬಗಳಿಗೆ ಹಣ ತಲುಪಿಸಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಖನ್ನಾ, ರಾಯ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ನಿರ್ಬಂಧ!
ಇದೇ ವೇಳೆ ಬಿಸಿಸಿಐನೊಂದಿಗೆ ನೋಂದಾಯಿತ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಹಾಗೂ ಐಪಿಎಲ್ ಫ್ರಾಂಚೈಸಿ ಮಾಲೀಕರಿಗೂ ಹಣ ಸಹಾಯ ಮಾಡುವಂತೆ ಖನ್ನಾ ಮನವಿ ಮಾಡಿದರು. ಭಾರತ-ಆಸ್ಪ್ರೇಲಿಯಾ ನಡುವಿನ ಸರಣಿಯ ಆರಂಭಿಕ ಪಂದ್ಯ ಹಾಗೂ ಐಪಿಎಲ್‌ನ ಉದ್ಘಾಟನಾ ಪಂದ್ಯದ ವೇಳೆ ವೀರ ಯೋಧರಿಗೆ 2 ನಿಮಿಷ ಶ್ರದ್ಧಾಂಜಲಿ ಸಲ್ಲಿಸುವಂತೆ ಆಟಗಾರರಲ್ಲಿ ಮನವಿ ಮಾಡುವುದಾಗಿ ಖನ್ನಾ ಹೇಳಿದ್ದಾರೆ. ಫೆ.24ರಂದು ಭಾರತ-ಆಸ್ಪ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ನಡೆಯಲಿದ್ದು, ಮಾ.23ಕ್ಕೆ ಮೊದಲ ಐಪಿಎಲ್ ಪಂದ್ಯ ನಿಗದಿಯಾಗಿದೆ.