Thomas Cup ಜಯಿಸಿದ್ದು ಸಣ್ಣ ಸಾಧನೆಯಲ್ಲ; ಭಾರತ ತಂಡವನ್ನು ಗುಣಗಾನ ಮಾಡಿದ ಪ್ರಧಾನಿ ಮೋದಿ
* ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ
* ಭಾರತೀಯ ಬ್ಯಾಡ್ಮಿಂಟನ್ ತಂಡದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ
* 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಮಣಿಸಿದ್ದ ಭಾರತ ತಂಡ
ನವದೆಹಲಿ(ಮೇ.22): 73 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಥಾಮಸ್ ಕಪ್ ಟೂರ್ನಿಯಲ್ಲಿ ಭಾರತ ಬ್ಯಾಡ್ಮಿಂಟನ್ ತಂಡವು (Indian Men's Badminton Team) ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಅದ್ವಿತಿಯ ಸಾಧನೆಯನ್ನು ಮಾಡಿತ್ತು. 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಮಣಿಸಿ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಚಾರಿತ್ರ್ಯಿಕ ಸಾಧನೆಯನ್ನು ಮಾಡಿತ್ತು. ಇದೀಗ ಭಾರತೀಯ ತಂಡದ ಬ್ಯಾಡ್ಮಿಂಟನ್ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಆಟಗಾರರ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಇದೇ ಮೇ 15ರಂದು ನಡೆದ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡವು ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಥಾಮಸ್ ಕಪ್ ಟೂರ್ನಿಯಲ್ಲಿ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಬೇಕು ಎನ್ನುವ ದಶಕದ ಕನಸನ್ನು ಭಾರತೀಯ ಬ್ಯಾಡ್ಮಿಂಟನ್ ತಂಡವು ನನಸು ಮಾಡಿರುವುದು ಸಣ್ಣ ಸಾಧನೆಯೇನಲ್ಲ. ಇಡೀ ದೇಶವೇ ನಿಮ್ಮ ಸಾಧನೆಯನ್ನು ಕೊಂಡಾಡಿದೆ. ಥಾಮಸ್ ಕಪ್ ಟೂರ್ನಿಯಲ್ಲಿ ನಿಮ್ಮ ಪ್ರದರ್ಶನವನ್ನು ಇಡೀ ದೇಶವೇ ಮೆಚ್ಚಿಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಥಾಮಸ್ ಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡವು 3-0 ಅಂತರದಲ್ಲಿ ಇಂಡೋನೇಷ್ಯಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಥಾಮಸ್ ಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ಪುರುಷರ ತಂಡಕ್ಕೆ ದೂರವಾಣಿ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಆಟಗಾರರನ್ನು ಅಭಿನಂದಿಸಿದ್ದರು. ಮುಂದೆ ಇನ್ನಷ್ಟು ಸಾಧನೆ ಮಾಡಲು ಇದು ಪ್ರೇರಣೆಯಾಗಲಿ ಎಂದು ಶುಭ ಕೋರಿದರು. ಪ್ರಧಾನಿ ಕರೆ ಮಾಡಿ ಹುರಿದುಂಬಿಸಿದ್ದಕ್ಕೆ ಆಟಗಾರರು ಧನ್ಯವಾದ ತಿಳಿಸಿದ್ದರೆ. ಇದಕ್ಕೂ ಮುನ್ನ ಟ್ವೀಟ್ ಮಾಡಿ ಭಾರತ ತಂಡವನ್ನು ಮೋದಿ ಕೊಂಡಾಡಿದ್ದರು. ‘ಭಾರತ ತಂಡ ಬ್ಯಾಡ್ಮಿಂಟನ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಅವರ ಸಾಧನೆಗೆ ಇಡೀ ದೇಶವೇ ಸಂಭ್ರಮಿಸುತ್ತಿದೆ. ತಂಡಕ್ಕೆ ಅಭಿನಂದನೆಗಳು ಮತ್ತು ಮುಂದಿನ ಸ್ಪರ್ಧೆಗಳಿಗೆ ಶುಭ ಹಾರೈಕೆಗಳು. ಈ ಗೆಲುವು ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದರು.
ಪ್ರಧಾನಿಯವರನ್ನು ಭೇಟಿಯಾದ ಬಳಿಕ ಮಾತನಾಡಿದ, ಥಾಮಸ್ ಕಪ್ ಗೆಲುವಿನ ಹೀರೋ ಕಿದಂಬಿ ಶ್ರೀಕಾಂತ್, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸದಾ ಕಾಲ ಅಥ್ಲೀಟ್‌ಗಳ ಬೆಂಬಲಕ್ಕೆ ನಿಲ್ಲುತ್ತಿರುವುದು ಅವರ ಬಗ್ಗೆ ಯಾವಾಗಲೂ ಹೆಮ್ಮೆಯ ಭಾವ ಮೂಡುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ಇನ್ನು ಭಾರತೀಯ ಪುರುಷರ ತಂಡದ ಬ್ಯಾಡ್ಮಿಂಟನ್ ಕೋಚ್ ಮಥಿಯಾಸ್ ಬೋ, ನಾನು ಓರ್ವ ಆಟಗಾರನಾಗಿ ನನ್ನ ದೇಶಕ್ಕೆ ಹಲವು ಪ್ರಶಸ್ತಿ ಹಾಗೂ ಪದಕಗಳನ್ನು ಜಯಿಸಿದ್ದೇನೆ, ಆದರೆ ಯಾವತ್ತೂ ನನ್ನ ದೇಶದ ಪ್ರಧಾನಿ ಈ ರೀತಿ ಗೌರವಿಸಿಲ್ಲ ಎಂದು ಹೇಳಿದ್ದಾರೆ.
ಐತಿಹಾಸಿಕ Thomas Cup ಗೆಲುವು ಸಾಧಿಸಿದ ಭಾರತ ಬ್ಯಾಡ್ಮಿಂಟನ್ ತಂಡ!
ಭಾರತ ತಂಡವು ಥಾಮಸ್ ಕಪ್ ಟೂರ್ನಿಯ ಕೊನೆ 3 ಪಂದ್ಯಗಳಲ್ಲಿ 3 ಮಾಜಿ ಚಾಂಪಿಯನ್ ತಂಡಗಳನ್ನು ಬಗ್ಗು ಬಡಿದು ಪ್ರಶಸ್ತಿ ಗೆದ್ದಿದೆ. ಮಲೇಷ್ಯಾ ಹಾಗೂ ಡೆನ್ಮಾರ್ಕ್ ವಿರುದ್ಧ ಕ್ರಮವಾಗಿ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್‌ನಲ್ಲಿ ಗೆದ್ದಿತ್ತು. ಥಾಮಸ್ ಕಪ್‌ನಲ್ಲಿ ಚಾಂಪಿಯನ್ ಆದ 6ನೇ ದೇಶ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಂಡೋನೇಷ್ಯಾ ದಾಖಲೆಯ 14 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಚೀನಾ 10 ಹಾಗೂ ಮಲೇಷ್ಯಾ 5 ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಡೆನ್ಮಾರ್ಕ್ ಹಾಗೂ ಜಪಾನ್ ತಲಾ 1 ಬಾರಿ ಚಾಂಪಿಯನ್ ಪಟ್ಟಅಲಂಕರಿಸಿವೆ.
1949ರಲ್ಲಿ ಆರಂಭಗೊಂಡಿದ್ದ ಥಾಮಸ್ ಕಪ್‌ನ ಮಾದರಿ 1984ರಲ್ಲಿ ಬದಲಾಗಿತ್ತು. 1982ರ ವರೆಗೂ ಮೊದಲೆರಡು ಸ್ಥಾನಗಳನ್ನು ಪಡೆದ ತಂಡಗಳಿಗೆ ಮಾತ್ರ ಪದಕ ನೀಡಲಾಗುತ್ತಿತ್ತು. 1979ರಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಭಾರತ ಮತ್ತೊಮ್ಮೆ ಸೆಮೀಸ್‌ಗೇರಿ ಪದಕ ಖಚಿತಪಡಿಸಿಕೊಳ್ಳಲು 43 ವರ್ಷ ಕಾಯಬೇಕಾಯಿತು.