ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ ಅಂಡರ್‌-17 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ, ವಯೋಮಿತಿ ಅಕ್ರಮದ ಆರೋಪದ ಮೇಲೆ 500 ಕುಸ್ತಿಪಟುಗಳನ್ನು ಅನರ್ಹಗೊಳಿಸಲಾಗಿದೆ. ಭಾರತೀಯ ಕುಸ್ತಿ ಫೆಡರೇಶನ್‌ (WFI) ಆಧಾರ್ ಆಧಾರಿತ ಪರಿಶೀಲನೆ ನಡೆಸಿದಾಗ ಜನನ ಪ್ರಮಾಣ ಪತ್ರ ಮತ್ತು ಆಧಾರ್ ದಾಖಲೆಗಳಲ್ಲಿನ ವಯಸ್ಸಿನ ವ್ಯತ್ಯಾಸ ಪತ್ತೆಯಾಗಿದೆ.

ನವದೆಹಲಿ: ವಯೋಮಿತಿ ಅಕ್ರಮ ನಡೆಸಿದ 500 ಕುಸ್ತಿಪಟುಗಳನ್ನು ಉ.ಪ್ರದೇಶದ ಗೊಂಡಾದಲ್ಲಿ ಜೂ.6ರಿಂದ 8ರ ವರೆಗೂ ನಡೆದ ಅಂಡರ್‌-17 ರಾಷ್ಟ್ರೀಯ ಮುಕ್ತ ಕುಸ್ತಿ ಚಾಂಪಿಯನ್‌ಶಿಪ್‌ನಿಂದ ಹೊರಹಾಕಲಾಯಿತು ಎನ್ನುವ ವಿಷಯ ಬಹಿರಂಗವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಯೋಮಿತಿ ಅಕ್ರಮ ತಡೆಯಲು, ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಆಧಾರ್‌ ಆಧಾರಿತ ಪರಿಶೀಲನೆ ಆರಂಭಿಸಿದ್ದು, ಇದರ ಫಲವಾಗಿ ಸುಳ್ಳು ದಾಖಲೆಗಳನ್ನು ನೀಡಿ ಪಾಲ್ಗೊಳ್ಳುವವರನ್ನು ಪತ್ತೆ ಹಚ್ಚುವುಸು ಸುಲಭವಾಗಿದೆ.

1200 ಕುಸ್ತಿ ಕ್ರೀಡಾಪಟುಗಳು ನೋಂದಣಿ

ಕೂಟಕ್ಕೆ ಸುಮಾರು 1200 ಕುಸ್ತಿಪಟುಗಳು ನೋಂದಣಿ ಮಾಡಿಕೊಂಡಿದ್ದರು. ಎಲ್ಲ ಕುಸ್ತಿಪಟುಗಳು ಕಡ್ಡಾಯವಾಗಿ ಜನನ ಪ್ರಮಾಣ ಪತ್ರವನ್ನು ಸಲ್ಲಿಸಬೇಕಿತ್ತು. ದಾಖಲೆ ಪರಿಶೀಲನೆ ವೇಳೆ ಕುಸ್ತಿಪಟುಗಳಿಗೆ ತಮ್ಮ ಮೊಬೈಲ್‌ ಸಂಖ್ಯೆಗೆ ಲಿಂಕ್‌ ಆಗಿರುವ ಆಧಾರ್‌ ಕಾರ್ಡ್‌ಗಳನ್ನು ನೀಡುವಂತೆ ಕೇಳಲಾಯಿತು. ಜೊತೆಗೆ ಆಧಾರ್‌ ಆ್ಯಪ್‌ ಮೂಲಕ ಒಟಿಪಿ ದೃಢೀಕರಣ ಮಾಡುವಂತೆ ಸೂಚಿಸಲಾಯಿತು. ಜನನ ದಿನಾಂಕ, ವಿಳಾಸ, ಮೊಬೈಲ್‌ ಸಂಖ್ಯೆ ಹೀಗೆ ಆಧಾರ್‌ ಕಾರ್ಡ್‌ನಲ್ಲಿ ಯಾವುದೇ ದತ್ತಾಂಶ ಬದಲಿಸಿದ್ದರೂ ಆ್ಯಪ್‌ನಲ್ಲಿ ಅದರ ದಾಖಲೆ ಇರಲಿದೆ. ಈ ಪ್ರಕ್ರಿಯೆ ನಡೆಸಿದಾಗ, ಪುರುಷರ ಫ್ರೀ ಸ್ಟೈಲ್‌ನಲ್ಲಿ ಸುಮಾರು 325, ಗ್ರೀಕೋ ರೋಮನ್‌ನಲ್ಲಿ 125, ಮಹಿಳೆಯರ ಫ್ರೀ ಸ್ಟೈಲ್‌ ವಿಭಾಗದ 50 ಕುಸ್ತಿಪಟುಗಳು ಸುಳ್ಳು ದಾಖಲೆ ನೀಡಿರುವುದು ಪತ್ತೆಯಾಯಿತು.

ಒಬ್ಬ ಕುಸ್ತಿಪಟು ನೀಡಿದ ಜನನ ಪ್ರಮಾಣ ಪತ್ರದಲ್ಲಿ ಆತ 2007ರಲ್ಲಿ ದೆಹಲಿಯಲ್ಲಿ ಹುಟ್ಟಿದ್ದಾಗಿ ಇತ್ತು. ಆದರೆ ಆಧಾರ್‌ ದಾಖಲೆಯಲ್ಲಿ ಆತ 2004ರಲ್ಲಿ ಹರ್ಯಾಣದಲ್ಲಿ ಜನಿಸಿದ್ದಾಗಿ ತೋರಿಸಿತು. ಈ ರೀತಿ ಅನೇಕರು ತಮ್ಮ ನಿಜವಾದ ಜನನ ದಿನಾಂಕವನ್ನು ಮುಚ್ಚಿಟ್ಟು ಕೂಟದಲ್ಲಿ ಪಾಲ್ಗೊಳ್ಳಲು ಯತ್ನಿಸಿದ್ದರು ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಜನನ ಪ್ರಮಾಣ ಪತ್ರ ಹಾಗೂ ಆಧಾರ್‌ ಕಾರ್ಡ್‌ನಲ್ಲಿರುವ ಜನನ ದಿನಾಂಕದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ 500 ಕುಸ್ತಿಪಟುಗಳನ್ನು ಟೂರ್ನಿಯಿಂದ ಹೊರಗಟ್ಟಲಾಯಿತು.

4ನೇ ಗ್ಲೋಬಲ್‌ ಚೆಸ್‌ ಲೀಗ್‌ಗೆ ಬೆಂಗ್ಳೂರು ಆತಿಥ್ಯ

ನವದೆಹಲಿ: 4ನೇ ಆವೃತ್ತಿಯ ಗ್ಲೋಬಲ್‌ ಚೆಸ್‌ ಲೀಗ್‌ಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ತಂಡಗಳ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯು ಸೆ.3ರಿಂದ ಆರಂಭಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ತಾರಾ ಚೆಸ್‌ ಆಟಗಾರರಾದ ವಿಶ್ವನಾಥನ್‌ ಆನಂದ್‌, ಡಿ.ಗುಕೇಶ್‌. ಆರ್‌.ಪ್ರಜ್ಞಾನಂದ ಸೇರಿ ಹಲವು ಅಂ.ರಾ. ಆಟಗಾರರು ಪಾಲ್ಗೊಂಡಿದ್ದರು. ಈ ವರ್ಷವೂ ಅಗ್ರ ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ.