ಸಿಕ್ಕಿಂನ ಮಾಂಗನ್ ಜಿಲ್ಲೆಯ ಹಿಮಾಲಯದ ಮಡಿಲಲ್ಲಿರುವ ಗುರು ಡೋಂಗ್ಮರ್ ಸರೋವರವು 5430 ಮೀಟರ್ ಎತ್ತರದಲ್ಲಿರುವ ಅದ್ಭುತ ಪ್ರವಾಸಿ ತಾಣ. ಚಳಿಗಾಲದಲ್ಲಿ ಬಹುತೇಕ ಸಂಪೂರ್ಣವಾಗಿ ಹೆಪ್ಪುಗಟ್ಟುವ ಈ..

ಈಶಾನ್ಯ ಭಾರತದ ತುತ್ತ ತುದಿಯಲ್ಲಿರುವ ಸಿಕ್ಕಿಂ ರಾಜ್ಯವು ವಿಸ್ತೀರ್ಣದಲ್ಲಿ ಚಿಕ್ಕದಾಗಿದ್ದರೂ ಸಹ ಹತ್ತು ಹಲವು ವಿಸ್ಮಯ, ವೈವಿಧ್ಯ ಸ್ಥಳಗಳೊಂದಿಗೆ ಭರತ ಖಂಡದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಹಿಮಾಲಯ ಪರ್ವತ ಶ್ರೇಣಿ ಹೊಂದಿದ ಭಾರತದ ರಾಜ್ಯಗಳಲ್ಲಿ ಸಿಕ್ಕಿಂ ಕೂಡ ಒಂದು, ದೇಶದ ಅತಿ ಎತ್ತರದ ಶಿಖರ ಕಾಂಚನ ಗಂಗಾ, ಹಿಮಾನದಿಗಳಿಂದ ನಿರ್ಮಿತವಾದ ಗುರು ಡೋಂಗ್ಮರ್ ಸರೋವರ, ಯುನೆಸ್ಕೋ ಮನ್ನಣೆ ಪಡೆದ ಖಾಂಗ್ಚೆಂಡ್ಜೊಂಗಾ ರಾಷ್ಟ್ರೀಯ ಉದ್ಯಾನಗಳು ಸಿಕ್ಕಿಂ ಬೌಗೋಳಿಕ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ಪ್ರಸ್ತುತ ನಾನೀಗ ಹಿಮನದಿಗಳ ಹರಿಯುವಿಕೆಯಿಂದ ನಿರ್ಮಿತವಾದ ಗುರು ಡೋಂಗ್ಮರ್ ಸರೋವರದ ಬಗ್ಗೆ ಮಾತ್ರವಷ್ಟೇ ಒಂದಷ್ಟು ಮಾಹಿತಿ ಹಂಚಿಕೊಳ್ಳುವೆ. ಗುರು ಡೋಂಗ್ಮರ್ ಸರೋವರ ಸಿಕ್ಕಿಂ ರಾಜ್ಯದ ಮಾಂಗನ್ ಜಿಲ್ಲೆಯ ಹಿಮಾಲಯ ಪರ್ವತಗಳ ನಡುವೆ ರೂಪುಗೊಂಡ ಸುಂದರವಾದ ಸರೋವರವಾಗಿದೆ. ಸಮುದ್ರಮಟ್ಟದಿಂದ 5430 ಮೀಟರ್ ಎತ್ತರದಲ್ಲಿದ್ದು ವಿಶ್ವದ ಅತ್ಯಂತ ಎತ್ತರದಲ್ಲಿರುವ ಸರೋವರ ಎಂದೂ ಖ್ಯಾತಿ ಹೊಂದಿದೆ.

ಐತಿಹಾಸಿಕ ಹಿನ್ನೆಲೆ

ಒಟ್ಟು 118 ಹೆಕ್ಟೇರ್ ನಷ್ಟು ವಿಸ್ತೀರ್ಣ ಹೊಂದಿರುವ ಸರೋವರ ಚಳಿಗಾಲದಲ್ಲಿ ಸಂಪೂರ್ಣ ಹಿಮದಿಂದ ಹೆಪ್ಪುಗಟ್ಟಿರುತ್ತದೆ. ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಚಮರೀಮೃಗಗಳು, ಹಿಮ ಕರಡಿಗಳು, ನೀಲಿ ಕುರಿಗಳು ಹೆಚ್ಚಾಗಿ ಕಂಡುಬರುವ ಜೀವಿಗಳಾಗಿವೆ. ಈ ಸರೋವರವು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಕ್ರಿಶ 8ನೇ ಶತಮಾನದಲ್ಲಿ ಟಿಬೆಟ್ ಧರ್ಮಗುರು ಪದ್ಮಸಂಭವರು ಲೋಕ ಸಂಚರಿಸುವಾಗ ಈ ಸರೋವರಕ್ಕೆ ಭೇಟಿ ನೀಡಿದ್ದರು.

ಆಗ ಇಲ್ಲಿನ ಜನರು ಸರೋವರ ಸಂಪೂರ್ಣ ಹೆಪ್ಪುಗಟ್ಟಿದ್ದರಿಂದ ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದಾಗ ಇವರ ಕಷ್ಟ ತೀರಿಸಲು ಗುರು ಸಂಭವರು ಸರೋವರದ ಒಂದು ಭಾಗವನ್ನು ತಮ್ಮ ದಿವ್ಯ ಹಸ್ತದಿಂದ ಸ್ಪರ್ಶಿಸಿದಾಗ ಹೆಪ್ಪುಗಟ್ಟಿದ ಭಾಗ ಕುಡಿಯಲು ಯೋಗ್ಯ ನೀರಾಗಿ ಬದಲಾಯಿತು. ಅಂದಿನಿಂದ ಇಂದಿನವರೆಗೂ ಸರೋವರದ ಮಿಕ್ಕೆಲ್ಲ ಭಾಗ ಚಳಿಗಾಲದಲ್ಲಿ ಸಂಪೂರ್ಣ ಹಿಮದಿಂದ ಆವೃತವಾದರೂ ಗುರು ಪದ್ಮಸಂಭವರು ಸ್ಪರ್ಶಿಸಿ ಆಶೀರ್ವದಿಸಿದ ಒಂದು ಭಾಗ ಮಾತ್ರ ಹೆಪ್ಪುಗಟ್ಟುವುದಿಲ್ಲ ಎಂಬ ಪ್ರತೀತಿ ಇದೆ.

ಮಾಂತ್ರಿಕ ಸೊಬಗು

ಗುರುಡೊಂಗ್ಮರ್ ಸರೋವರದ ನೀರಿಗೆ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಇಲ್ಲಿನ ಬೌದ್ಧರು ಮತ್ತು ಹಿಂದೂಗಳು ನಂಬುತ್ತಾರೆ. ಈ ಸರೋವರಕ್ಕೆ ಮಕ್ಕಲಾಗದಿರುವ ದಂಪತಿಗಳು ಬಂದು ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರೆ ಅವರಿಗೆ ಮಕ್ಕಳಾಗುತ್ತವೆ ಎಂಬುವುದು ಕೂಡ ಮತ್ತೊಂದು ಪ್ರಬಲ ನಂಬಿಕೆಯಾಗಿದೆ. ಒಟ್ಟಾರೆಯಾಗಿ ಗುರು ಡೊಂಗ್ಮರ್ ಸರೋವರವನ್ನೂ ಇಲ್ಲಿನ ಹಿಂದೂ ಹಾಗೂ ಬೌದ್ಧ ಧರ್ಮದ ಜನರು ದೈವಿಕ ಭಾವನೆಯೊಂದಿಗೆ ಕಂಡರೆ ಪ್ರವಾಸಿಗರು ಇಲ್ಲಿನ ಮಾಂತ್ರಿಕ ಸೊಬಗು, ಮನೋಹರ ವಾತಾವರಣವನ್ನೂ ಪ್ರಕೃತಿ ಪ್ರೇಮದೊಂದಿಗೆ ಕಾಣುತ್ತಾರೆ.