ಮೊದಲ ಪ್ರೀತಿ, ಹದಿಹರೆಯದ ಆಕರ್ಷಣೆ ಮತ್ತು ಪ್ರೀತಿಯ ನಿರಾಕರಣೆಯ ನೋವಿನ ನಡುವೆ ಬದುಕಿನ ಮಹತ್ವವನ್ನು ಸಾರುವ ಮನಮುಟ್ಟುವ ಕಥೆ. ಅವಿನಾಶ್ ತನ್ನ ಮೊದಲ ಪ್ರೀತಿಯ ನೆನಪುಗಳ ಮೂಲಕ ಬಾಲಕನಿಗೆ ಬದುಕಿನ ಹೊಸ ಪಾಠ ಕಲಿಸುತ್ತಾನೆ.
ಕನ್ನಡಕ್ಕೆ: ಆರ್ ಕೇಶವಮೂರ್ತಿ
ತೆಲುಗು ಮೂಲ: ಲಕ್ಷ್ಮಿ ಪ್ರಿಯಾಂಕ.. ಹುಟ್ಟಿದ್ದು ತೆಲಂಗಾಣದ ಸತ್ತುಪಲ್ಲಿ. ಸದ್ಯಕ್ಕೆ ಹೈದರಾಬಾದ್ ನಿವಾಸಿ. ಎಂ.ಟೆಕ್ ಓದಿ ಕೆಲವು ವರ್ಷಗಳ ಕಾಲ ಟಿಸಿಎಸ್ನಲ್ಲಿ ಸಾಫ್ಟ್ವೇರ್ ಉದ್ಯೋಗಿ. ಕಲೆ, ಸಾಹಿತ್ಯದ ಮೇಲಿನ ಆಸಕ್ತಿಯಿಂದ ಸಾಫ್ಟ್ವೇರ್ ಕೆಲಸಕ್ಕೆ ರಾಜಿನಾಮೆ ಕೊಟ್ಟು ಪ್ರಸ್ತುತ ಡೂಡುಲ್ ಆರ್ಟಿಸ್ಟ್ ಆಗಿ ಕೆಲಸ. ಜೊತೆಗೆ ಸಿನಿಮಾಗಳಿಗೆ ಹಾಡುಗಳನ್ನು ಬರೆಯುತ್ತಾ ಕತೆಗಳನ್ನು ರೂಪಿಸುತ್ತಿದ್ದಾರೆ. ಕವಿತೆಗಳೆಂದರೆ ಇಷ್ಟ. ಕಲೆಯಲ್ಲಿ ಜೀವನಪರ್ಯಾತೆ ಕಳೆಯಬೇಕು ಎನ್ನುವ ಆಸೆ. ‘ಮೊದಲ ಪ್ರೀತಿ’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಆಗಿರುವ ತೆಲುಗಿನ ಅನ್ವಿಕ್ಷಕಿ ಪಬ್ಲಿಷರ್ಸ್ ಪ್ರಕಟಣೆಯ ‘16 ತೊಲಿ ಪ್ರೇಮ ಕಥಲು’ ಪುಸ್ತಕದಿಂದ ಆಯ್ದ ‘ಕೆಮಿಸ್ಟ್ರಿ’, ಇವರ ಎರಡನೇ ಕತೆ. ‘ಎಂತೆಂತ ದೂರಂ’ ಇವರ ಇತ್ತೀಚಿನ ಕಥಾ ಸಂಕಲನ.
‘ಉಫ್.... ಈಗ ತಕ್ಷಣ ಒಂದು ಧಮ್ ಎಳೆದಿಲ್ಲ ಅಂದರೆ ಬ್ರೈನ್ ವರ್ಕ್ ಮಾಡಲ್ಲ ಅನಿಸುತ್ತೆ’. ಹೀಗೆ ಮನಸ್ಸಿನಲ್ಲೇ ಯೋಚಿಸುತ್ತಾ ತೊಡೆ ಮೇಲಿದ್ದ ಲ್ಯಾಪ್ ಟಾಪ್ ತೆಗೆದು ಸೋಫಾ ಮೇಲಿಟ್ಟು ಎದ್ದು ನಿಂತ ಅವಿನಾಶ್. ಆತ ಕೂತ ಜಾಗದಲ್ಲೇ ಬೆಳಗ್ಗಿನಿಂದ ಒಂದು ಪೋಗ್ರಾಮ್ ಡಿಸೈನ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಅದರ ಮೇಲೆಯೇ ಫೋಕಸ್ ಮಾಡಲು ಆಗುತ್ತಿಲ್ಲ. ಈ ಮಧ್ಯೆ ಪಕ್ಕದ ಮನೆಯಿಂದ ಒಂದೇ ಸಮನೆ ಜಗಳ, ಗಲಾಟೆ. ಸ್ವಲ್ಪ ಹೊತ್ತು ಅಮ್ಮ ಅಳ್ತಾಳೆ. ಆ ನಂತರ ಅಪ್ಪನ ಬೈಗಳು. ಸ್ವಲ್ಪ ಹೊತ್ತು ನಿಶ್ಯಬ್ದ. ಅಷ್ಟರಲ್ಲಿ ಮಗನ ಅಳು. ಎರಡು ದಿನಗಳಿಂದ ಇದೇ ಗೋಳಾಗಿದೆ.
ಲ್ಯಾಪ್ ಟಾಪ್ ಬ್ಯಾಗ್ ನಿಂದ ಸಿಗರೇಟು ಪ್ಯಾಕೆಟ್, ಲೈಟರ್ ತೆಗೆದುಕೊಂಡು ಇನ್ನೇನು ಸಿಗರೇಟಿನ ತುದಿಗೆ ಲೈಟರ್ ಕಿಡಿ ತಾಕಬೇಕು ಅಷ್ಟರಲ್ಲ, ‘ಓ... ಶಿಟ್! ವರ್ಕ್ ಫ್ರಮ್ ಹೋಮ್ ಅಲ್ವಾ! ಮರ್ತೋಗ್ಬಿಟ್ಟೆ. ಅಬ್ಬಾ ಬಚ್ಚಾವ್ ಸಿಗರೇಟು ಹೊತ್ತಿಸಿಕೊಂಡಿಲ್ಲ.’ ಎಂದುಕೊಳ್ಳುತ್ತಾ ಸ್ಕೈಪ್ ನಲ್ಲಿ ತನ್ನ ಸ್ಟೇಟಸ್ ‘awy’ ಅಂತ ಅಪ್ ಡೇಟ್ ಮಾಡಿ ಕಾರಿಡಾರ್ ಕಡೆ ಹೆಜ್ಜೆ ಹಾಕಿದ. ಮನೆಯೇ ಅಫೀಸ್ ಆಗಿದ್ದಾಗ ಮನೆಯಲ್ಲಿ ಸಿಗರೇಟ್ ಸೇದಬಾರದೆಂದು ರೂಲ್ ಹಾಕಿಕೊಂಡಿದ್ದಾನೆ. ‘ಎಷ್ಟೊಂದು ರೂಲ್ಸ್ ಇಟ್ಟು ಕೊಂಡವನನ್ನು ಸಿಗರೇಟ್ ಸೇದ ಬಾರದೆಂಬ ರೂಲ್ ಏಕೆ ಇಟ್ಟು ಕೊಳ್ಳಲಿ'' ಎಂದು ತುಂಬಾ ಸಲ ಅಂದುಕೊಂಡ ಅವಿನಾಶ್. ಅದಷ್ಟು ಸುಲಭ ಅಲ್ಲ ಅಂತಾನೂ ಆತನಿಗೆ ಗೊತ್ತು.
‘ನಮ್ಮ ಬಾಡಿ ಒಂದು ಕೆಮಿಕಲ್ ಫ್ಯಾಕ್ಟ್ರಿ. ಒಂದೊಂದು ತರಹ ಕೆಮಿಕಲ್ಸ್ ಬೇಕೆಂದು ಅದು ಬೇಡುತ್ತದೆ. ಅದರ ಅಗತ್ಯತೆಗಳ ಮೇರೆಗೆ ಬ್ರೈನ್ ಸಿಗ್ನಲ್ಸ್ ಕಳುಹಿಸಿ ಕೆಮಿಕಲ್ಸ್ ಪ್ರೊಡ್ಯೂಸ್ ಮಾಡುತ್ತಿರುತ್ತದೆ. ಕೆಲವನ್ನು ಹೊರಗಿನಿಂದ ನಾವೇ ಕೊಡಬೇಕೆನೋ! ಅದಕ್ಕೆ ನನಗೆ ಸಿಗರೇಟು ಅಭ್ಯಾಸ ಆಗಿರಬೇಕು.’ ಹಾಗಂತ ಮನಸ್ಸಿನಲ್ಲೇ ವಿಜ್ಞಾನದ ಲೆಕ್ಕಾ ಹಾಕಿದ ಅವಿನಾಶ್. ಪಕ್ಕದ ಮನೆಯಲ್ಲಿ ಗಲಾಟೆ ಕಮ್ಮಿ ಆಗಿದೆ. ಈಗ ಅಪಾರ್ಟ್ಮೆಂಟ್ ಪೂರ್ತಿ ನಿಶ್ಯಬ್ದವಾಗಿದೆ. ಯಾವಾಗಲೂ ಮಕ್ಕಳು ಅತ್ತಿತ್ತ ಓಡಾಡುತ್ತಾ, ಆಟವಾಡಿಕೊಳ್ಳುತ್ತಾ ಇರೋರು. ಅಲ್ಲಿಗೆ ಬರುವ ತರಕಾರಿ ಮಾರುವವರು, ಡೆಲವರಿ ಬಾಯ್ಸ್ ಕಾರಣಕ್ಕೆ ಗದ್ದಲದಿಂದ ಕೂಡಿರುತ್ತಿದ್ದ ಅಪಾರ್ಟ್ಮೆಂಟ್ ಆ ದಿನ ಯಾಕೋ ಬಿಕೋ ಎನ್ನುತ್ತಿತ್ತು. ತನ್ನನ್ನು ಮಾತನಾಡಿಸುವವರು, ತಾನೇ ಮಾತನಾಡಿಸಬೇಕೆಂದುಕೊಂಡ ಒಬ್ಬೇ ಒಬ್ಬನೂ ಕೂಡ ಕಾಣಿಸಲಿಲ್ಲ ಆತನಿಗೆ.
‘ಅದೇನೋ ಈ ಮನುಷ್ಯನಿಗೆ, ಸುತ್ತಾ ಜನ ಇದ್ದರೆ ಉಸಿರುಗಟ್ಟಿಸಿದಂತಾಗುತ್ತಾನೆ. ಯಾರೋ ಇಲ್ಲದೆ ಹೋದರೆ ಒಂಟಿಯಾಗ್ತಾನೆ.’ ಎಂದು ತನ್ನಲ್ಲಿ ತಾನೇ ಮಾತನಾಡಿಕೊಳ್ಳುತ್ತಾ ಟೆರೆಸ್ ಕಡೆ ಒಂದೊಂದೇ ಹೆಜ್ಜೆ ಹಾಕಿದ. ಎರಡು ದಿನಗಳ ಹಿಂದಿನವರೆಗೂ ಅಪಾರ್ಟ್ಮೆಂಟ್ ಪೂರ್ತಿ ಹೊಸ ಗದ್ದಲ, ಉತ್ಸಾಹದಿಂದ ಕೂಡಿತ್ತು. ಆ ‘ಗಲಾಟೆ’ ನಡೆದ ನಂತರ ಅಪಾರ್ಟ್ಮೆಂಟ್ನಲ್ಲಿ ಯಾರು ಹೊರಗೆ ಬರುತ್ತಿಲ್ಲ. ಹೀಗೆ ಯೋಚಿಸುತ್ತಾ ಮೆಟ್ಟಿಲು ಹತ್ತುತ್ತಿದ್ದಾನೆ ಅವಿನಾಶ್. ಎರೆಡೆರಡು ಮೆಟ್ಟಿಲುಗಳಿಗೆ ಒಂದರಂತೆ ಕ್ರೋಟನ್ ಗಿಡಗಳನ್ನು ನೆಟ್ಟಿರುವ ಹೂವಿನ ಕುಂಡಗಳು ಇವೆ.
ಯಾವ ಹೂವಿನ ಮಡಿಕೆ ನೋಡಿದರೂ ಅವು ಕಸ ಹಾಕಲಿಕ್ಕೇ ಲಾಯಕ್ಕು ಅನ್ನೋ ರೀತಿ ಇರಕ್ಕೆ ಕಾರಣ ಆ ಗಿಡಗಳ ಬದುವಿನ ಪೂರ ಹುಲ್ಲು ಬೆಳೆದು ಕಸ ತುಂಬಿಕೊಂಡಿರುವು. ಪ್ಯಾಕ್ ನಲ್ಲಿ ಒಂದೇ ಸಿಗರೇಟು ಇದೆ. ಆ ಒಂದು ಸಿಗರೇಟು ತೆಗೆದುಕೊಂಡು ಖಾಲಿ ಪ್ಯಾಕ್ ಅನ್ನು ಅವಿನಾಶ್ ಕೂಡ ಅದೇ ಹೂವಿನ ಕುಂಡದೊಳಗೆ ಬಿಸಾಕಿ ತನ್ನಲ್ಲೇ ತಾನು ನಕ್ಕ. ‘ಕೆಲವು ಸಲ ತಪ್ಪೆಂದು ಗೊತ್ತಾದರೂ, ಮನುಷ್ಯ ತನ್ನ ಸೋಮಾರಿತನದಿಂದಲೋ ಅಥವಾ ಬೇರೆ ಯಾವುದೋ ಕಾರಣಕ್ಕೋ ಆ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತಾನೆ. ಅದು ಮನುಷ್ಯನ ಸಹಜ ಲಕ್ಷಣ.’ ಎನ್ನುತ್ತಾ ತಾನು ಮಾಡಿದ ಕೆಲಸಕ್ಕೆ ತಾನೇ ಸಮಜಾಷಿ ಕೊಡಲು ಶುರು ಮಾಡಿದ.
ಟೆರೆಸ್ ಮೇಲೆ ಬಂದು ಆ ದಿನಕ್ಕೆ ಗುಡ್ ಬೈ ಹೇಳಕ್ಕೆ ಸಿದ್ದವಾಗುತ್ತಿದ್ದ ಸೂರ್ಯನ ಕಡೆ ನೇರವಾಗಿ ನೋಡಲಾಗದೆ, ತಲೆ ಪಕ್ಕಕ್ಕೆ ತಿರುಗಿಸುತ್ತಾ ಒಂದು ಧಮ್ ಎಳೆದ. ಬಿಟ್ಟ ಹೊಗೆ ಬೇಡ ಬೇಡ ಎಂದರೂ ತನ್ನ ಸುತ್ತಲೇ ತಿರುಗಿದಂತೆ ಅನಿಸಿ ತಾನು ಬಲಕ್ಕೆ ಹೆಜ್ಜೆ ಹಾಕಿದ. ಅದ್ಯಾಕೋ ಆ ಕಡೆ ಹೋದ ಪ್ರತಿ ಸಲವೂ ತನಗೆ ಅಶ್ಚರ್ಯ ಅನಿಸೋದು. ಅಷ್ಟು ಅಶ್ಚರ್ಯ ಪಡಕ್ಕೆ ಆತನಿಗೆ ಕಾರಣ ಇಲ್ಲವೆಂದಲ್ಲ. ತನ್ನ ಟೆರೆಸ್ ಮೇಲೆ ನಿಂತರೆ ಎಡಕ್ಕೆ ಪೂರ್ತಿ ದೊಡ್ಡ ದೊಡ್ಡ ಬಂಗಳೆಗಳು, ಕಾರ್ಪೊರೇಟ್ ಕಟ್ಟಡಗಳು, ಟ್ರಾಪಿಕ್- ಎಲ್ಲವೂ ಲವಲವಿಕೆಯಿಂದ ಕೂಡಿದ್ದರೆ, ಮತ್ತೊಂದು ಕಡೆ ಪಾಳುಬಿದ್ದ ಮನೆಗಳು, ಕೆಸರು ತುಂಬಿದ ಕಾಲುಗಳುವೆಗಳು, ನೊಣಗಳು, ಸೊಳ್ಳೆಗಳ ಮಧ್ಯೆ ಸಂದುಗೊಂದಿಗಳಿಂದ ಗಂದರಗೊಳವಾಗಿ ಇರುತ್ತೆ.
ಆ ಕಾರಣಕ್ಕೋ ಏನೋ ಸಿಟಿ ಕಾಣಿಸೋ ಕಡೆ ಟೆರೆಸ್ ಮೇಲೆ ಟೇಬಲ್ಸ್ ಹಾಕಿ ಸುತ್ತಾ ಗಿಡಗಳಿಂದ ಅಹ್ಲಾದಕರವಾಗಿದ್ದರೆ, ಕೊಳಚೆ ಪ್ರದೇಶಗಳು ಕಾಣಿಸೋ ಕಡೆ ಆ ಟೆರೆಸ್ ಯಾರಿಗೋ ಕಾಣಿಸದಂತೆ ಕಪ್ಪು ಮುಸುಕು ಹಾಕಿಕೊಂಡಂತಿರುತ್ತದೆ. ಹೂವಿನ ಪರಿಮಳವನ್ನು ಹೊಗೆಯಿಂದ ಹಾಳು ಮಾಡೋದು ಯಾಕೆಂದು ಭಾವಿಸಿದ ಅವಿನಾಶ್, ಅಪ್ರಯತ್ನವಾಗಿಯೇ ಬಲಕ್ಕೆ ತಿರುಗಿ ಯಾರು ಇರಲ್ಲ ಎಂದುಕೊಂಡು ಹೊಗೆಯನ್ನು ಬಿಟ್ಟ. ತನ್ನ ಯೋಚನೆಗಳಿಗೆ ಅಣೆಕಟ್ಟೆಯಂತೆ ಬಲ ಭಾಗದಿಂದ ಯಾರೋ ಮಾತನಾಡಿಕೊಳ್ಳುತ್ತಿರುವುದು ಕೇಳಿಸಿತು. ಆ ಕಡೆ ಹೆಜ್ಜೆ ಹಾಕಿದ. ಹತ್ತಿರ ಹೋಗುತ್ತಿದ್ದಂತೆ ಆ ಮಾತುಗಳು ಇನ್ನಷ್ಟು ಸ್ಪಷ್ಟವಾಗಿ ಕೇಳಿಸುತ್ತಿವೆ.
‘ಅವಳು ನನಗೆ ನೋ ಅಂದ್ಳು ಕಣೋ! ಇನ್ನೂ ನನಗೆ ಈ ಬದುಕೇ ವ್ಯರ್ಥ. ನನಗೇನೂ ಹೇಳ್ಬೇಡ ಕಣೋ. ಅವಳು ನನಗೆಷ್ಟು ಇಷ್ಟ ಅಂತ ಗೊತ್ತಲ್ವಾ? ಅವಳು ಪರಿಚಯ ಆದ್ಮೇಲೆ ತಾನೇ ನಾನು ಬದಲಾಗಿದ್ದು. ಸ್ಕೂಲ್ ಗೆ ಬಂಕ್ ಹಾಕದೆ ಬರ್ತಾ ಇದ್ದಾನೆ ಅಂತ ನೀವೆಲ್ಲ ಅಂತಿದ್ರಲ್ಲ. ಅಂತಾದ್ರಲ್ಲಿ ಅವಳೇ ಬೇಡ ಅಂದ್ರೆ ಇನ್ನು ನಾನು ಯಾರಿಗಾಗಿ ಬದುಕಬೇಕು?’ ಹತ್ತಿರ ಹೋದ. ತಾನು ಅಂದುಕೊಂಡಂತೆ ತನ್ನ ಪಕ್ಕದ್ಮನೆಯ ಹುಡುಗನೇ! ಆತನ ಹೆಗಲ ಮೇಲೆ ಕೈ ಹಾಕಿದ ಕೂಡಲೇ ಒಂದು ಕ್ಷಣ ಭಯ ಬಿದ್ದು ಅಳೋದನ್ನು ನಿಲ್ಲಿಸಿ ಹಿಂತಿರುಗಿ ನೋಡಿದ. ಎರಡು ನಿಮಿಷ ನಿಶ್ಯಬ್ದ. ಅವನ ಮುಖದಲ್ಲಿ ಗೊಂದಲ, ಭಯ.
ಪ್ರತಿ ದಿನಾ ಅಫೀಸಿಗೆ ಹೋಗೋ ಟೈಮ್ಗೆ ಲಿಫ್ಟ್ನಲ್ಲಿ ಅವಿನಾಶ್ಗೆ ಕಾಣಿಸುತ್ತಿದ್ದ ಆ ಹುಡುಗ. ಹೆಸರೇನು ಅಂತ ಯಾವತ್ತೂ ಕೇಳಿಲ್ಲ. ತುಂಬಾ ಆಕ್ಟೀವ್ ಆಗಿ ಇರೋನು. ಸಾಯಂಕಾಲ ಅಫೀಸಿನಿಂದ ಬರುವ ಹೊತ್ತಿಗೆ ಫ್ರೆಂಡ್ಸ್ ಜೊತೆ ಸೇರಿ ಬೀದಿಲಿ ಕ್ರಿಕೆಟ್ ಆಡುತ್ತಲೋ, ಅಪಾರ್ಟ್ಮೆಂಟ್ನಲ್ಲಿ ಮಕ್ಕಳನ್ನು ಆಡಿಸುತ್ತಲೋ ಕಾಣುತ್ತಿದ್ದ. ಮೊನ್ನೆ ಒಂದಿನಾ ಯಾರೋ ಇವರ ಮನೆಗೆ ಪೊಲೀಸರನ್ನು ಕರೆದುಕೊಂಡು ಬಂದಿದ್ದರು. ದೊಡ್ಡ ಗಲಾಟೆ ಆಗಿದೆ. ಶಾಲೆಯಲ್ಲಿ ಒಂದು ಹುಡುಗಿ ಹಿಂದೆ ಬಿದ್ದು ಪ್ರೀತಿ- ಪ್ರೇಮ ಅಂತ ಪೀಡಿಸುತ್ತಿದ್ದಾನಂತೆ. ಆ ಹುಡುಗಿ ತಂದೆ ಪೊಲೀಸರನ್ನು ಕರೆತಂದು ಗಲಾಟೆ ಮಾಡಿದ್ದಾನೆ. ಅಂದಿನಿಂದ ಪ್ರತಿ ದಿನ ಮನೆಯಲ್ಲಿ ಒಂದೇ ಗಲಾಟೆ.
‘ಮನೆಯಲ್ಲಿ ಯಾರೂ ಇಲ್ವಾ? ’ ಕೇಳಿದ ಅವಿನಾಶ್. ‘ಡ್ಯಾಡಿ ಅಫೀಸಿಗೆ ಹೋಗಿದ್ದಾರೆ. ಅಮ್ಮ ಈಗಷ್ಟೇ ಸೂಪರ್ ಮಾರ್ಕೆಟ್ಗೆ ಹೋದರು....’ ತಲೆ ತಗ್ಗಿಸಿಕೊಂಡೇ ಉತ್ತರಿಸಿದ. ‘ಈಗಲೇ ಸತ್ತೋಗ್ತಿಯಾ? ಇನ್ನೂ ಸ್ವಲ್ಪ ಏನಾದರೂ ಟೈಮ್ ಇದಿಯಾ? ಆದರೂ ಸತ್ತೋಗಬೇಕು ಅಂದುಕೊಂಡ ಮೇಲೆ ಯಾರಾದರೂ ದಂಡೋರ ಸಾರಿ ಹೋಗ್ತರಾ ಹೇಳು!? ಬಂದ್ವಾ, ಹೋದ್ವ ಅಂದಂಗಿರಬೇಕೇ ಹೊರತು!’ ಅವಿನಾಶ್ ಸೇದಿದ ಸಿಗರೇಟ್ ತುಂಡನ್ನು ಕಾಲಿನ ಕೆಳಗೆ ಹಾಕಿ ತುಳಿಯುತ್ತಾ ಆತನ ಕಡೆ ನೋಡಿದ. ಅವನೇನು ಮಾತನಾಡುತ್ತಿಲ್ಲ. ಕಣ್ಣಲ್ಲಿ ಇನ್ನೂ ನೀರು ಹಾಗೆ ತುಂಬಿಕೊಂಡಿದೆ.
‘ಹುಡುಗಿ ಚೆನ್ನಾಗಿ ಇರ್ತಾಳಾ?’ ನಿನ್ ಕ್ಲಾಸ್ಮೆಂಟಾ?’ ಕೇಳಿದ ಅವಿನಾಶ್. ಈ ಬಾರಿ ತಲೆ ಎತ್ತಿ ನೋಡಿದ. ಆದರೆ, ಆ ಹುಡುಗ ಏನೂ ಸಮಾಧಾನ ಹೇಳುತ್ತಿಲ್ಲ. ‘ಆಯ್ತು ಬಿಡು, ನಾನು ನಿನ್ನ ಅನಗತ್ಯವಾಗಿ ಡಿಸ್ಟರ್ಬ್ ಮಾಡುತ್ತಿದ್ದೇನೆ ಅನಿಸುತ್ತಿದೆ. ಪಾಪ ನೀನೇನೋ ಸತ್ತೋಗ್ಬೇಕು ಅಂದುಕೊಳ್ತಿದ್ದಿಯಲ್ಲ. ಕಂಟಿನ್ಯೂ. ನಾನು ಹೊರಡ್ತೀನಿ’ ಅಂತೇಳಿ ಅಲ್ಲಿಂದ ಹೊರಡಕ್ಕೆ ಸಿದ್ದನಾದ ಅವಿನಾಶ್. ‘ಅವ್ಳ ಹೆಸ್ರು ಸಹನಾ. ನನ್ನ ಕ್ಲಾಸ್ಮೆಂಟ್. ತುಂಬಾ ಚೆನ್ನಾಗಿರ್ತಾಳೆ ನೋಡಕ್ಕೆ. ನನ್ನ ಜೊತೆಗೆ ತುಂಬಾ ಕ್ಲೋಸ್ ಆಗಿರ್ತಾಳೆ. ಅವಳಿಗೂ ನಾನೆಂದರೆ ತುಂಬಾ ಇಷ್ಟನೇ, ಆದರೆ, ಯಾಕೋ ಬೇಡ ಅಂದುಕೊಂಡಿದ್ದಾಳೆ’ ಮುಗ್ಧವಾಗಿ ಹೇಳಿಕೊಂಡ.
‘ಫಸ್ಟ್ ಲವ್ವಾ?’ ನಗುತ್ತಾ ಕೇಳಿದ ಅವಿನಶ್. ‘ನಂದು ಪ್ರೀತಿನೇ ಅಲ್ವಂತೆ! ಅಟ್ರಾಕ್ಷನ್ ಅಂತೇಳಿ ಹೋಗ್ಬಿಟ್ಳು’ ಬೇಸರದಿಂದ ಕಣ್ಣು ಉಚ್ಚಿಕೊಂಡ ಆ ಹುಡುಗ. ‘ಹೋಗ್ಲಿ ಬಿಡು, ಈ ಹುಡುಗಿನೇ ಬೆಟರ್. ಅಟ್ರಾಕ್ಷನ್ ಅಂದಿದ್ದಾಳೆ’ ಅವಿನಾಶ್ ತೀರಾ ನಿರ್ಲಿಪ್ತವಾಗಿ ಹೇಳಿದ. ಅರ್ಥ ಆಗದಂತೆ, ಕ್ಯೂರಾಸಿಟಿಯಿಂದ ಅವಿನಾಶ್ ಮುಖವನ್ನೇ ನೋಡುತ್ತಿವೆ ಆ ಹುಡುಗನ ಕಣ್ಣುಗಳು. ‘ನಿನಗೊಂದು ವಿಷಯ ಹೇಳ್ತಿನಿ ಕೇಳು. ಈ ಲವ್ ಅನ್ನೋದು ಚೆನ್ನಾಗಿರುತ್ತೆ. ಆದ್ರೆ, ಅದಕ್ಕಾಗಿ ಪ್ರಾಣ ತಗೋಬೇಕು ಅಂತ ಅನಿಸಬಾರದು. ಈಗ ಹಸಿವಾದ್ರೆ ಊಟ ಮಾಡ್ತೀವಿ. ನಿದ್ದೆ ಬಂದ್ರೆ ನಿದ್ದೆ ಮಾಡ್ತೀವಿ. ಹಾಗೆನೇ ನಮಗೆ ಒಬ್ಬರು ಜೊತೆ ಬೇಕೆಂದಾಗ ಪ್ರೀತಿ ಬೇಕನಿಸುತ್ತದೆ.
ಅಷ್ಟೇ! ಇದೆಲ್ಲವೂ ನಮ್ಮ ದೇಹ ಆಡ್ತಿರೋ ಒಂದು ಬಾಡಿ ಗೇಮ್. ಲವ್ ಈಸ್ ಜಸ್ಟ್ ಎ ಕೆಮಿಕಲ್ ರಿಯಾಕ್ಷನ್. ಅಕ್ಸಿಟೋಸಿನ್, ವಾಸೊಪ್ರೆಸಿನ್, ಟೆಸ್ಟೊಸ್ಪಿರಾನ್, ಈಸ್ಟ್ರೊಜನ್, ಡೊಪಮೈನಂತಹ ರಾಸಾಯನಿಕಗಳ ಪ್ರಭಾವದಿಂದ ನಮ್ಮಲ್ಲಿ ಉಂಟಾಗುವ ಕೆಮಿಕಲ್ ರಿಯಾಕ್ಷನ್ಗೆ ನಾವು ಪ್ರೀತಿ ಅನ್ನೋ ಹೆಸರು ಇಟ್ಟುಕೊಳ್ಳುತ್ತಿದ್ದೇವೆ. ಎವಲ್ಯೂಷನರಿ ಸೈಕಾಲಜಿ ಪ್ರಕಾರ ನೋಡಿದರೆ ನಾವು ಮಾತಾಡೋ ಭಾಷೆ, ವ್ಯಕ್ತಪಡಿಸೋ ಭಾವನೆಗಳು ಎಲ್ಲವೂ ಕೂಡ ನಮ್ಮ ಸಂಗಾತಿಗಳನ್ನು ಆಕರ್ಷಿಸಲು ಆಡುವ ಒಂದು ಸರ್ಕಸ್ ಚಮತ್ಕಾರಗಳಂತೆ. ಜೀವಶಾಸ್ತ್ರ ಓದಿಲ್ವಾ? ಸರಿ, ಈಗಲಾದರೂ ನಾನು ಹೇಳ್ತಾ ಇದ್ದೇನೆ ಕೇಳು. ನೀನು ಇಂಥ ಕೆಲಸಕ್ಕೆ ಬಾರದ ಫೀಲಿಂಗ್ಸ್ಗೆ ಏನೋ ಒಂದು ಹೆಸರು ಇಡೋದನ್ನು ಬಿಟ್ಟು ಓದಿನ ಕಡೆ ಗಮನ ಕೊಡು!’ ಅಂತ ಒಂದು ಉದ್ದದ ಭಾಷಣವನ್ನು ಆ ಹುಡುಗನ ಪ್ರಸ್ತುತಪಡಿಸಿದ ಅವಿನಾಶ್.
‘ನೀವು ಎಂದಾದರು ಯಾರನ್ನಾದರೂ ಪ್ರೀತಿಸಿದ್ರೆ ಗೊತ್ತಿರೋದು ನನ್ ಕಷ್ಟ ಏನೂ ಅಂತ?’ ಅಂದ ಆಕ್ರೋಶದಿಂದ ಆ ಹುಡುಗ. ‘ತಮ್ಮ, ಈ ಮೊದಲ ಪ್ರೀತಿಯ ಬಾಧೆ ಯಾರಿಗೂ ತಪ್ಪಿದ್ದಲ್ಲ. ಆದರೆ, ವಿಚಿತ್ರ ಸಂಗತಿ ಏನೆಂದರೆ ಪ್ರತಿಯೊಬ್ಬರಿಗೂ ತಮ್ಮ ತಮ್ಮದೇ ಒಂದು ದೊಡ್ಡ ಪ್ರೇಮ ಕತೆ ಎನ್ನುವ ಭ್ರಮೆಯಲ್ಲಿರುತ್ತಾರೆ. ಸೋ, ಫೀಲಾಗ್ಬೇಡ ಅಂತ ನಾನೇನು ಹೇಳಲ್ಲ. ಆದರೆ, ತೀರಾ ಈ ಹುಚ್ಚು ಆಲೋಚನೆಗಳನ್ನು ಕಡಿಮೆ ಮಾಡ್ಕೋ!’ ಅಂತೇಳುತ್ತಾ ಆ ಹುಡುಗನ ಜೊತೆಗೂಡಿ ಕೆಳಗೆ ಇಳಿದು ಬಂದ ಅವಿನಾಶ್. ಆ ಹುಡುಗ ಮನೆಯೊಳಗೆ ಹೋಗ್ತಾ ಕೇಳಿದ, ‘ನಿಮ್ ಲವ್ವರ್ ಹೆಸರೇನು?’
ಅವಿನಾಶ್ ಸಮಾಧಾನ ಕೊಡದೆ ಸಣ್ಣಗೆ ಒಂದು ಸ್ಮೈಲ್ ಕೊಟ್ಟ. ಯಾಕೋ ಗೊತ್ತಿಲ್ಲ, ಆತನಲ್ಲಿ ತುಂಬಾ ದಿನಗಳ ನಂತರ ಒಂದು ಹೊಸ ಫೀಲಿಂಗ್ ಉಂಟಾದ ಅನುಭವ. ಆತನಲ್ಲಿ ಉಂಟಾದ ಆ ಫೀಲಿಂಗ್ಸ್ಗೆ ಕಾರಣ ಒಂದು ಹುಡುಗಿ. ಆ ಹುಡುಗಿಯ ಹೆಸರು ಯಮುನಾ. ಹೆಸರಿಗೆ ತಕ್ಕಂತೆ ನದಿಯಂತ ಹುಡುಗಿ. ಒಮ್ಮೆ ಆವೇಶದಿಂದ, ಕೆಲವೊಮ್ಮೆ ಮುಗ್ಧವಾಗಿ... ಯಾರ ಜೊತೆಗೆ ಬೇಕಾದರೂ ಸುಲಭಕ್ಕೆ ಬೆರೆತು ಹೋಗುವ ಹುಡುಗಿ. ‘ಸರಿ, ಒಳಗೆ ಬಾ’ ಅಂತ ಆ ಹುಡುಗನನ್ನು ಮನೆಯೊಳಗೆ ಕರೆದ. ಅವಿನಾಶ್ ಏನೇಳಬಹುದು ಅಂತ ತುಂಬಾ ಆಸಕ್ತಿಯಿಂದ ಎದುರು ನೋಡುತ್ತಿದ್ದಾನೆ ಆ ಹುಡುಗ. ಆ ಕೆಲ ಕ್ಷಣಗಳಲ್ಲೇ ಅವಿನಾಶ್ ಮನಸ್ಸಿನ ತುಂಬಾ ಯಮುನಾಳ ಆಲೋಚನೆಗಳೇ ತುಂಬಿಕೊಂಡಿದೆ. ಆಕೆಯ ನೆನಪುಗಳು ಅಲೆಗಳಾಗಿ ಆಚೆ ಬರುತ್ತಿವೆ.
‘ಬೇಕಾಬಿಟ್ಟಿ ಅಲೆಯೋದು ಬಿಟ್ಟು ಶ್ರದ್ಧೆಯಿಂದ ಓದು ಅಂತ ನೀನೇ ಹೇಳ್ತಿಯಾ. ಈ ಚಿಲ್ರೆ ಅಂಗಡಿಗಳಿಗೆ ಹತ್ತು ಸಲ ನೀನೇ ಕಳುಸ್ತಿಯಾ ಏನಮ್ಮ ಇದೆಲ್ಲ?’ ಕೊಸರಿಕೊಳ್ಳುತ್ತಾ ಹೀರೋ ಸೈಕಲ್ ತೆಗೆದುಕೊಂಡು ಆಚೆ ಬಂದ ಅವಿನಾಶ್. ಅವನಿಗಾಗಿ ಮನೆ ಕಡೆಯೇ ಬರುತ್ತಿದ್ದ ವಿವೇಕ್ನನ್ನು ತಡೆದು ಎಲ್ಲಿಗೆ ಅಂತ ಕೂಡ ಹೇಳದೆ ಸೈಕಲ್ ಹಿಂದೆ ಕೂರಿಸಿಕೊಂಡು ಪಕ್ಕದ ಬೀದಿಯಲ್ಲಿ ಇರೋ ಅಂಗಡಿ ಕಡೆ ಸೈಕಲ್ ತಿರುಗಿಸಿದ.
ಸಂದಿನ ತಿರುವಿನಲ್ಲಿ ಯಾರೋ ಆಕ್ಸಿಡೆಂಟ್ ಮಾಡಿಕೊಂಡಿದ್ದಾರೆ. ಸೈಕಲ್ ನಿಲ್ಲಿಸಿ ಹತ್ತಿರ ಹೋದರು ಇಬ್ಬರು. ಆಗ ನೋಡಿದ ನೋಡಿ, ಅವಳನ್ನು. ಮೇಲೆ ಬಿದ್ದ ಸೈಕಲ್ ಅನ್ನು ಯಾರೋ ಎತ್ತಿ ಪಕ್ಕಕ್ಕಿಟ್ಟು ಸ್ಟ್ಯಾಂಡ್ ಹಾಕುತ್ತಿದ್ದರೆ ತನಗೆ ತಗುಲಿದ ಪೆಟ್ಟುಗಳಿಗೆ ಧೂಳು ಹೊರೆಸಿಕೊಳ್ಳುತ್ತಾ ಮೇಲಕ್ಕೆ ಏಳುತ್ತಿದ್ದಾಳೆ. ಮೊಣಕಾಲಿನವರೆಗೂ ಶಾರ್ಟ್ಸ್ ಹಾಕಿಕೊಂಡು, ಅದರ ಮೇಲೆ ಕಪ್ಪು ಬಣ್ಣದ ಕಾಲರ್ ಟೀ ಶರ್ಟ್ ಧರಿಸಿದ್ದಾಳೆ. ಹಿಂದಕ್ಕೆ ಚಿಕ್ಕ ಪೋನಿ ಟೈಲ್ ಇದ್ದಿದ್ದರಿಂದ ಆಕೆ ಹುಡುಗಿ ಅಂತ ಗೊತ್ತಾಗುತ್ತಿದೆ ಅನ್ನೋದು ಬಿಟ್ಟರೆ ಹಿಂದಿನಿಂದ ನೋಡಿದ ಯಾರಾದರೂ ಸರಿ, ಹುಡುಗನೇ ಅಂದುಕೊಳ್ಳಬೇಕಿತ್ತು! ಮೊಣಕಾಲಿನ ಮೇಲೆ ಜೋರಾಗಿಯೇ ಪೆಟ್ಟು ಬಿದ್ದಿರಬೇಕು, ರಕ್ತ ಬರುತ್ತಿತ್ತು. ಅದನ್ನು ನೋಡಿ ಎಲ್ಲರು ಕುಡಿಯಕ್ಕೆ ನೀರು, ಬ್ಯಾಂಡೇಜ್ ತರುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ಮಾತ್ರ ತನಗೆ ಯಾವ ಪೆಟ್ಟು ಬಿದ್ದಿಲ್ಲ, ಏನೂ ಆಗೇ ಇಲ್ಲ ಅನ್ನೋ ರೀತಿ ತನ್ನನ್ನು ಗುದ್ದಿದ ಸ್ಪ್ಲೆಂಡರ್ ಬೈಕ್ ಸವಾರನ ಕಾಲರ್ ಹಿಡಿದುಕೊಂಡಿದ್ದಾಳೆ.
ಅಲ್ಲಿದ್ದ ಎಲ್ಲರು ಒಂದು ಕ್ಷಣ ಶಾಕ್ ಆದರು. ‘ಕಣ್ಣು ಜೇಬಲ್ಲಿ ಇಟ್ಟುಕೊಂಡು ಗಾಡಿ ಓಡಿಸ್ತಿದ್ದಿಯೇನೋ? ನಡಿ ಮೊದ್ಲು ಪೊಲೀಸ್ ಸ್ಟೇಷನ್ಗೆ?’ ‘ಅಯ್ಯೋ ನಾನು ಬೇಕಂತ ಗುದ್ದಿಲ್ಲ’ ‘ಬೇಕಂತ ಗುದ್ದಿದ್ದರೆ ಇಷ್ಟೊತ್ತಿಗೆ ನಿನ್ಗೆ ಸರಿಯಾಗಿ ಮದ್ವೆ ಆಗಿರೋದು, ಮೊದ್ಲು ನಡಿ ನೀನು’ ‘ತಪ್ಪಾಯಿತು ಅಂತ ಸಾರಿ ಕೇಳ್ತಿದ್ದಾನಲ್ಲಮ್ಮ... ಬಿಟ್ಬಿಡು’ ಎಂದ ಪಕ್ಕದ ವ್ಯಕ್ತಿಯ ಕಡೆ ಕೋಪದಿಂದ ನೋಡುತ್ತಾ ‘ಸರಿ, ಬಿಟ್ರೆ... ನನ್ನ ಸೈಕಲ್ನ ನೀವು ಸರಿ ಮಾಡಿ ಕೊಡ್ತಿರಾ? ಈ ಗಾಯಕ್ಕೆ ಸಮಾಧಾನವನ್ನು ನಮ್ಮ ಮನೆಯಲ್ಲಿ ನೀವು ಹೇಳ್ತೀರಾ?’ ಎಳ್ಳಷ್ಟೂ ಹಿಂಜರಿಕೆ ಇಲ್ಲದೆ ದಬಾಯಿಸಿದಳು. ‘ಅಬ್ಬಾ! ಎಷ್ಟು ಧೈರ್ಯ ಕಣೋ ಇವಳಿಗೆ. ಇದರಲ್ಲಿ ಅರ್ಧ ನಮಗಿದ್ದಿದ್ದರೂ ಈ ಚಿಲ್ರೆ ಅಂಗಡಿಗಳ ಸುತ್ತಾ ತಿರುಗೋ ಬಾಧೆನಾದರು ತಪ್ಪಿರೋದು’ ವಿವೇಕ್ ಪಕ್ಕದಲ್ಲೇ ನಿಂತು ಗೊಣಗುತ್ತಿದ್ದಾನೆ.
‘ನಾನೇ ಸರಿ ಮಾಡಿ ಕೊಡುತ್ತೇನೆ’ ಅಂದ ಸ್ಪ್ಲೆಂಡರ್ ಬಾಯ್ ‘ಸರಿ, ಹಾಗಾದರೆ ಮೊದ್ಲು ನನ್ನನ್ನ ನಮ್ಮ ಮನೆಯಲ್ಲಿ ಬಿಟ್ಟು, ನಮ್ಮ ಅಪ್ಪನಿಗೆ ಹೇಳಿ, ಆ ನಂತರ ಬಂದು ಸೈಕಲ್ ಸರಿ ಮಾಡಿಕೊಂಡು, ನಾಳೆ ಬೆಳಗ್ಗೆ 9 ಗಂಟೆ ಒಳಗೆ ಲಿಟಿಲ್ ಫ್ಲವರ್ ಸ್ಕೂಲ್ ಗೇಟ್ ಮುಂದೆ ತೆಗೆದುಕೊಂಡು ಬಾ’ ಅಂತ ಆರ್ಡರ್ ಮಾಡಿದಳು. ಇದನ್ನು ಕೇಳಿದ ಸುತ್ತಾ ಇದ್ದ ಜನ, ಆ ಹುಡುಗಿ ಧೈರ್ಯ ಮೆಚ್ಚಿಕೊಂಡೋ, ಬೈಯ್ದುಕೊಂಡೋ, ‘ಮಕ್ಕಳನ್ನು ಯಾರಾದರು ಹೀಗಾ ಬೆಳೆಸೋದು?’ ಇಂಥ ಕೆಲ ಪ್ರಶ್ನೆಗಳನ್ನುಈ ಸಮಾಜದ ಮೇಲೆ ಸುರಿದು ಹೋದರು. ಎಲ್ಲರು ಹೋದ ನಂತರವೂ ಕೂಡ ಅಲ್ಲಿದ್ದರೆ ಚೆನ್ನಾಗಿರಲ್ಲ ಅಂದುಕೊಂಡು ಅವರಿಬ್ಬರು ಸೈಕಲ್ ತಗೊಂಡು ಜಾಗ ಖಾಲಿ ಮಾಡಿದರು.
ಅಲ್ಲಿಂದ ಶಾಪ್ಗೆ ಹೋಗಿ ಏನು ಕೇಳಿದ್ನೋ, ಏನು ತಂದ್ನೋ, ಅಸಲಿಗೆ ಮನೆಗೆ ಹೇಗೆ ಬಂದ್ನೋ ಏನೂ ನೆನಪಿನಲ್ಲಿ ಅವಿನಾಶ್ಗೆ. ತನ್ನ ಮನಸ್ಸಿನ ತುಂಬಾ ಆ ಹುಡುಗಿ ರೂಪನೇ ತುಂಬಿದೆ. ಬೇಡ ಬೇಡವೆಂದರೂ ಆಕೆ, ಆಕೆಯ ಧೈರ್ಯ, ಅವಳ ಮಾತುಗಳೇ ಮತ್ತೆ ಮತ್ತೆ ನೆನಪಾಗುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ, ‘ಆ ಹುಡುಗಿ ನಮ್ಮ ಲಿಟಿಲ್ ಫ್ಲವರ್ ಸ್ಟೂಡೆಂಟ್ ಕಣೋ!’ ಅಂತ ವಿವೇಕ್ ಹೇಳಿದ ಮಾತೇ ನೆನಪಾಗುತ್ತಿದೆ. ಅದು ಆಕಸ್ಮಿಕವಾಗಿ ನಡಿತೋ, ಇಲ್ಲವೋ ಅವಳೇ ಆ ರಸ್ತೆಯಲ್ಲಿ ಆಕ್ಸಿಡೆಂಟಲ್ಲಾಗಿ ಕಾಣಿಸಿಕೊಳ್ಳುವಂತೆ ಮೊದಲೇ ಆ ದೇವರೇ ಪ್ಲಾನ್ ಮಾಡಿದನೋ ಗೊತ್ತಿಲ್ಲ. ಆದರೆ, ಆಕೆ ತನ್ನ ಶಾಲೆಯವಳು ಎನ್ನುವ ವಿಷಯ ಕೇಳಿದಾಗ ಮಾತ್ರ ತುಂಬಾ ಆನಂದ, ಸಂತೋಷ ಉಂಟಾಗ್ತಿತ್ತು.
‘ನಾನು ಅವಳನ್ನು ಇಷ್ಟು ದಿನ ಯಾಕೆ ನೋಡ್ಲಿಲ್ಲ? ಬಹುಶಃ ನ್ಯೂ ಆಡ್ಮಿಷನ್ ಇರಬೇಕು! ಒಂದು ವೇಳೆ ಆಕೆ ನಮ್ಮ ತರಗತಿನೇ ಆಗಿದ್ದರೆ ಖಂಡಿತವಾಗಲೂ ಆಕೆಯೇ ನಮ್ಮ ಕ್ಲಾಸ್ ಲೀಡರ್ ಆಗುತ್ತಾಳೆ ಈ ವರ್ಷ. ಯಾಕೆಂದರೆ ಅವಳಿಗಿಂತಲೂ ಧೈರ್ಯವಂತರು ಯಾರಿದ್ದಾರೆ! ಎಲ್ರು ಪೆದ್ದುಗಳೇ. ಈ ಲೆಕ್ಕದಲ್ಲಿ ಮುಂದಿನ ವರ್ಷ ಟೆನ್ತ್ ಆಗಿರೋದ್ರಿದ, ಕ್ಲಾಸ್ ಲೀಡರ್ ಇವಳೇ ಎಂಬುದರಲ್ಲಿ ಅನುಮಾನ ಇಲ್ಲ. ಇವಳು ಕ್ಲಾಸ್ ಲೀಡರ್ ಆದರೆ ಯಾರಾದರೂ ಸರಿ, ನೆಟ್ಟಗೆ ದಾರಿಗೆ ಬರಬೇಕಾದದ್ದೇ. ಟೀಟರ್ಸ್! ಅಷ್ಟಕ್ಕೂ ಅವಳನ್ನು ಹೊಡೀತಾರ? ಹೊಡೆದರೆ, ಅವಳು ಮಾತ್ರ ಖಂಡಿತ ಸುಮ್ಮನಿರಲ್ಲ’ ಇಂಥ ನೂರಾರು ಪ್ರಶ್ನೆಗಳಿಂದ ಆತನಿಗೆ ನಿದ್ದೆನೇ ಬರಲಿಲ್ಲ. ಈ ಪ್ರಶ್ನೆಗಳಿಗೆಲ್ಲ ನಾಳೆ ಬೆಳಗ್ಗೆ ತನಕ ಉತ್ತರ ಸಿಗಲ್ಲ ಅಂತ ಗೊತ್ತಾಗಿ ತಾನು ಆ ರಾತ್ರಿಯನ್ನ ಶಪಿಸುತ್ತಲೇ ಇದ್ದಾನೆ.
ಅವತ್ತು ಬೆಳಗ್ಗೆ ಸೂರ್ಯನಿಗಿಂತ ಮೊದಲೇ ಎದ್ದು, ಮಲಗಿದ್ದ ಕೋಳಿಯಿಂದ ಬಲವಂತವಾಗಿ ಕೂಗಿಸಿದ ಅವಿನಾಶ್. 9 ಗಂಟೆಗೆ ಸೈಕಲ್ ತಗೊಂಡು ಬಂದು ಕೊಡು ಅಂತೇಳಿದ್ದಾಳೆಂದರೆ, 9 ಗಂಟೆಗೆ ಬರುತ್ತಾಳೆ ಎಂದರ್ಥ. ಆದರೂ ಆತನ ಕಾಲು ಮಾತ್ರ ಮನೆಯಲ್ಲಿ ನಿಲ್ಲುತ್ತಿಲ್ಲ. ಎಷ್ಟೊತ್ತಿಗೆ ಶಾಲೆಗೆ ಹೋಗೋದು, ಎಷ್ಟೊತ್ತಿಗೆ ಅವಳನ್ನು ನೋಡೋದು, ಆಕೆ ಯಾವ ತರಗತಿಯಲ್ಲಿರುತ್ತಾಳೆಂದು ತಿಳಿದುಕೊಳ್ಳಬೇಕು ಅನಿಸುತ್ತಿದೆ ಆತನಿಗೆ. ಈ ಯೋಚನೆಗಳು ಆತನನ್ನು ಒಂದು ಕಡೆ ನಿಲ್ಲಕ್ಕೆ ಬಿಡುತ್ತಿಲ್ಲ. ಆ ಕಾರಣಕ್ಕೆ ಸಮಯಕ್ಕಿಂತ ಮೊದಲೇ ಹೊರಟಿದ್ದಾನೆ.
‘ಲೇ ತಿಂಡಿ ತಿಂದು ಹೋಗೋ’ ಅಂತ ಕರೆಯುತ್ತಿದ್ದ ಅವರ ಅಮ್ಮನ ಮಾತುಗಳನ್ನೂ ಕೂಡ ಕೇರ್ ಮಾಡದೆ ಆಗಷ್ಟೇ ಗಡಿಯಾರದ ಮುಳ್ಳುಗಳು ಎಂಟರ ಮೇಲೆ ಮಾಡಿದ ಸದ್ದನ್ನು ಕಿವಿ ಮೇಲೆ ಹಾಕಿಕೊಳ್ಳುತ್ತಾ, ಸ್ಕೂಲ್ ಬ್ಯಾಗ್ ಬುಜಕ್ಕೆ ನೇತಾಕಿಕೊಂಡು ಗುರಿ ಇಟ್ಟ ಬಾಣದಂತೆ ಓಡಕ್ಕೆ ಶುರು ಮಾಡಿದ. ಈ ಮೊದಲು ಆತನಿಗೆ ಸ್ಕೂಲ್ ದೂರ ಅನಿಸಿಲ್ಲ. ಈಗ ಯಾಕೋ ಸ್ಕೂಲ್ ದೂರ ಅನಿಸುತ್ತಿದೆ. ‘ಏನೋ ಒಂದು ಸಬೂಬು ಹೇಳಿ ಅಪ್ಪನ ಸೈಕಲ್ ತೆಗೆದುಕೊಂಡು ಬರಬೇಕಿತ್ತು’ ಅಂತ ತನ್ನನ್ನು ತಾನೇ ಬೈಯ್ದುಕೊಳ್ಳುತ್ತಾ ಎಲ್ಲೂ ನಿಲ್ಲದೆ ಓಡಿ ಬಂದು ಸ್ಕೂಲ್ ಗೇಟ್ ಮುಂದೆ ನಿಂತ. ಪಕ್ಕದಲ್ಲೇ ಇದ್ದ ಗಿಡಿದ ಮರೆಯಲ್ಲಿ ಅವಿತುಕೊಂಡು ಯಮುನಾಳಿಗಾಗಿ ಕಾದು ಕೂತ.
ಅಷ್ಟರಲ್ಲಿ ಆಟೋದಿಂದ ಯಮುನಾ ಇಳಿದಳು. ತನ್ನ ಸೈಕಲ್ ಕಡೆ ಹೋಗುತ್ತಾ ಸುತ್ತಾ ನೋಡಿ ಗಿಡದ ಮರೆಯಿಂದ ತನ್ನನ್ನೇ ನೋಡುತ್ತಿದ್ದ ಅವಿನಾಶ್ನನ್ನು ಹತ್ತಿರುವ ಬರುವಂತೆ ಸನ್ನೆ ಮಾಡಿದಳು. ‘ಯಾಕೆ ಕರೆಯುತ್ತಿರಬಹುದು?’ ಎಂದು ಭಯದಲ್ಲೇ ಹತ್ತಿರ ಹೋದ. ‘ನಾವು ಗಿಡಿದ ಮರೆಯಲ್ಲಿ ಕೂತು ಆಕೆಯನ್ನು ನೋಡುತ್ತಿರುವುದನ್ನು ಕಂಡು ಹಿಡಿದು ಬಿಟ್ಲಾ ಹೇಗೆ? ಅಥವಾ ನಾನು ಆಕ್ಸಿಡೆಂಟ್ ಮಾಡಿದವನ ಫ್ರೆಂಡ್ ಅಂದುಕೊಂಡಿರಬಹುದಾ?’ ಹೀಗೆ ತನ್ನಲ್ಲಿ ತಾನೇ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಒಂದೊಂದೇ ಹೆಜ್ಜೆ ಹಾಕುತ್ತಿದ್ದ ಅವಿನಾಶ್ನನ್ನು ಬೇಗ ಬರುವಂತೆ ಮತ್ತೆ ಯಮುನಾ ಸನ್ನೆ ಮಾಡಿದಳು. ಈಗ ತಡ ಮಾಡದೆ ಓಡೋಗಿ ಆಕೆ ಪಕ್ಕದಲ್ಲಿ ನಿಂತುಕೊಂಡ.
‘ನನಗೆ ಪೆಟ್ಟಾಗಿದೆ. ಸ್ವಲ್ಪ ಈ ಸೈಕಲ್ ತಗೊಂಡು ಬಂದು ಪಾರ್ಕಿಂಗ್ನಲ್ಲಿ ನಿಲ್ಲಿಸುತ್ತೀರಾ?’ ಅತ್ತಿತ್ತ ನೋಡುತ್ತಾ ಪಾರ್ಕಿಂಗ್ ಜಾಗದ ಕಡೆ ಬೆರಳು ತೋರಿಸುತ್ತಾ ಹೇಳುತ್ತಿದ್ದಾಳೆ ಯಮುನಾ. ‘ಆಯಿತು...’ ಅಂತ ಅಶ್ಚರ್ಯದಿಂದ ನೋಡುತ್ತಲೇ ಇದ್ದಾನೆ ಅವಿನಾಶ್. ‘ಸರಿ ನಡಿ, ನನಗೆ ಅವನ ಮೇಲೆ ತುಂಬಾ ಕೋಪ ಬಂದಿತ್ತು. ಅದಕ್ಕೆ ಆ ದಿನ ಸೈಕಲ್ ಇಲ್ಲಿಗೆ ತಕೊಂಡು ಬಂದು ಕೊಡುವಂತೆ ಹೇಳಿ ಒಂದು ಗಂಟೆ ಕಾಯಿಸಿದೆ’ ಅಂತ ನಕ್ಕಳು. ‘ಬೈ ದ ವೇ, ಐ ಯಾಮ್ ಯಮುನಾ,’ ಅಂದಳು ಕೂಡಲೇ. ‘ನಾನು ಅವಿನಾಶ್,’ ಅಂದ ತಡಬಡಾಯಿಸುತ್ತಾ. ಇಬ್ಬರು ಸ್ಕೂಲ್ ಕಡೆ ಹೆಜ್ಜೆ ಹಾಕುತ್ತಿದ್ದಾರೆ.
‘ಸಾರಿ, ನಿನಗೆ ತೊಂದರೆ ಕೊಡುತ್ತಿದ್ದೇನೆ.’ ‘ಅಯ್ಯೋ ಹಾಗೇನು ಇಲ್ಲ,’ ‘ಎಲ್ಲಿರೋದು ನೀನು?’ ‘ಕಾಕತಿಯ ಕಾಲೋನಿ, ರೋಡ್ ನಂಬರ್ 14.’ ‘ಹೌದಾ? ಹಾಗಾದ್ರೆ ಸೂಪರ್, ನಮ್ಮದು ರೋಡ್ ನಂಬರ್ 13. ಮೊನ್ನೆಯಷ್ಟೆ ಇಲ್ಲಿಗೆ ಶಿಫ್ಟ್ ಆದ್ವಿ. ಇಫ್ ಯೂ ಡೊಂಟ್ ಮೈಂಡ್ ನನ್ನ ನಮ್ಮ ಮನೆಗೆ ಡ್ರಾಪ್ ಮಾಡ್ತಿಯಾ, ಈವಿನಿಂಗ್?’ ‘ಮಾಡ್ತೀನಿ...’ ಈ ಅವಕಾಶ ಮತ್ತೆ ಬರಲ್ಲ ಅನ್ನೋ ರೀತಿ ತಲೆಯಾಡಿಸಿದ ಅವಿನಾಶ್. ‘ಸರಿ ಹಾಗಾದರೆ, ಕೀ ನಿನ್ ಹತ್ತಿರನೇ ಇಟ್ಕೋ. ಈವಿನಿಂಗ್ ಸೈಕಲ್ ಹತ್ತಿರ ಸಿಗೋಣ. ನನ್ ಕ್ಲಾಸ್ ಇದೆ, ಬೈ.’ ಅಂತೇಳಿ ಸೈಕಲ್ ಕೀ ಅವಿನಾಶ್ ಕೈಯಲ್ಲಿಟ್ಟು ಹೋದಳು.
ಆತುರದಿಂದ ಮೇಲೆ ನೋಡಿದ ಅವಿನಾಶ್ಗೆ ಹತ್ತನೇ ತರಗತಿ ಅಂತ ಕಾಣಿಸಿದ್ದರಿಂದ, ಯಮುನಾ ತನಗಿಂತಲೂ ಸೀನಿಯರ್ ಎಂದು ಗೊತ್ತಾಗಿ ಕ್ಷಣ ಮಾತ್ರ ನಿರಾಸೆಗೊಂಡ. ಆದರೆ, ಪ್ರೀತಿಗೆ ಈ ವ್ಯತ್ಯಾಸಗಳೇನು ಗೊತ್ತಾಗಲ್ಲ. ಆ ದಿನ ಸಂಜೆ ಶಾಲೆ ಮುಗಿದ ಕೂಡಲೇ ಆಕೆಗಾಗಿ ಕಾಯುತ್ತಾ ನಿಂತಿದ್ದಾನೆ. ಯಮುನಾ ಬಂದಿದ್ದೇ ತಡ ಆತನಿಗೆ ಬೊಟ್ಟು ಇಟ್ಟಳು. ಇದೇನು ಅನ್ನೋ ರೀತಿ ನೋಡಿದ ಅವಿನಾಶ್.
‘ಈಗಷ್ಟೇ ಒಂದು ಗಿಳಿಯನ್ನ ಹಿಡಿದುಕೊಂಡ್ನಲ್ಲಾ, ಇದು ಅದರ ರೆಕ್ಕೆಗಳ ನುಸಿ. ಇದನ್ನು ಬೊಟ್ಟು ಇಟ್ಟುಕೊಂಡರೆ ಕಾಸು ಸಿಗುತ್ತದೆ.’ ಹೇಳಿದಳು ಯಮುನಾ. ಅವಿನಾಶ್ಗೆ ಈ ವಿಷಯ ಹೊಸದು ಅನಿಸಿತು. ಆ ದಿನ ಸಂಜೆ ಆಕೆಯನ್ನು ಸೈಕಲ್ ಮೇಲೆ ಹತ್ತಿಸಿಕೊಂಡು ಅವರ ಮನೆ ಬಳಿ ಇಳಿಸಿದ. ಅವರ ಮನೆಯಲ್ಲಿರುವವರಿಗೆ ಪರಿಚಯ ಮಾಡಿಸಿದಳು. ಅವರ ಮನೆಯಲ್ಲಿದ್ದಷ್ಟು ಹೊತ್ತು, ಎಲ್ಲಿ ಯಮುನಾ ತನಗೆ ಅಕ್ಕ ಅಂತ ಹೇಳ್ತಾರೋ ಅನ್ನೋ ಭಯ ಕಾಡ್ತಾನೆ ಇತ್ತು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಯಮುನಾ ಅವರ ತಾಯಿ ಬಳಿ, ‘ಅಮ್ಮಾ... ಇವತ್ತು ಗಿಳಿ ಹಿಡಿದುಕೊಂಡು ಬೊಟ್ಟು ಇಟ್ಟುಕೊಂಡ್ವಿ. ಆದರೆ, ಏನೂ ಸಿಗಲಿಲ್ಲ.’ ಅಂತ ಬೇಸರದಿಂದಲೇ ಹೇಳಿದಳು.
ಅದೇ ಸಮಯಕ್ಕೆ ಹೊರ ಬರುತ್ತಿದ್ದ ಅವಿನಾಶ್ ತನ್ನ ಬೇಜಿನಲ್ಲಿದ್ದ ಹೊಸ ಐದು ರೂಪಾಯಿ ಕಾಯಿನ್ ತೆಗೆದು ಬಾಗಿಲಲ್ಲಿ ಬೀಳಿಸಿದ. ಎರಡು ಹೆಜ್ಜೆ ಕಾಯಿನ್ ಕಡೆ ಹೆಜ್ಜೆ ಹಾಕಿ ಯಮುನಾ ಅಂತ ಜೋರಾಗಿ ಕರೆದ. ಯಮುನಾ, ಇಲ್ನೋಡು, ಅಂತಿದ್ರೆ... ಯಮುನಾ ಓಡಿ ಹೊರಗೆ ಬಂದು, ಕಾಯಿನ್ ತೆಗೆದುಕೊಳ್ಳುತ್ತಿದ್ದ ಅವಿನಾಶ್ ಕಡೆ ನೋಡಿದಳು. ‘ಎಷ್ಟು? ನಾನು ಹೇಳಿಲ್ವಾ ಸಿಗುತ್ತೆ ಅಂತ’ ಎಂದು ಕುಣಿಯುತ್ತಾ ಬಂದು ಅವಿನಾಶ್ ಕೈ ಹಿಡಿದು ಆತನ ಕೈಯಲ್ಲಿದ್ದ ಕಾಯಿನ್ ತನ್ನ ಕೈಗೆ ತೆಗೆದುಕೊಂಡು, ಕಣ್ಣು ಅರಳಿಸಿ ನೋಡಿದಳು.
ಆ ದಿನ ಆಕೆಗೆ ಸಿಕ್ಕಿದ್ದು ಐದು ರೂಪಾಯಿನೇ! ಆದರೆ, ಅವಿನಾಶ್ಗೆ ಪ್ರಪಂಚದಲ್ಲೇ ಅತ್ಯಂತ ಬೆಲೆಬಾಳುವ ಏನೋ ಸಿಕ್ಕಿದ ಆನಂದ. ಅವತ್ತು ಸಾಯಂಕಾಲ ಮನೆಗೆ ಬಂದಾಗಿನಿಂದಲೂ ಯಮುನಾ ಬಗ್ಗೆನೇ ಅವರ ತಾಯಿಗೆ ಹೇಳ್ತಾನೆ ಇದ್ದಾನೆ ಅವಿನಾಶ್. ತುಂಬಾ ಹೊತ್ತಾದ ಮೇಲೆ ನಾಳೆ ಯಾವಾಗ ಬರುತ್ತೋ ಅನ್ನೋ ಯೋಚನೆಯಲ್ಲೇ ನಿದ್ದೆಗೆ ಜಾರಿದ. ಆ ಮರು ದಿನದಿಂದ ಪ್ರತಿ ದಿನ ಜೊತೆಯಾಗಿಯೇ ಶಾಲೆಗೆ ಹೋಗುವುದು, ಜೊತೆಯಲ್ಲೇ ಮನೆಗೆ ಬರುವುದು, ಆಡಿಕೊಳ್ಳುವುದು, ಓದಿಕೊಳ್ಳುವುದು, ಏನೇ ಮಾಡಿದರೂ ಇಬ್ಬರು ಜೊತೆಗೆನೇ! ತನ್ನ ಜೊತೆ ಸೇರುತ್ತಿಲ್ಲ, ತಿರುಗಾಡುತ್ತಿಲ್ಲ ಅಂತ ವಿವೇಕ್ ಎಷ್ಟು ಸಲ ಕೋಪಿಸಿಕೊಂಡಿದ್ದಾನೆ ಎಂಬುದಕ್ಕೆ ಲೆಕ್ಕವಿಲ್ಲ.
ಯಮುನಾ ತುಂಬಾ ಚೆನ್ನಾಗಿ ಓದ್ತಾಳೆ. ಅದರಿಂದ ಅವಿನಾಶ್ಗೆ ಡೌಟ್ಸ್ ಇದ್ದರೂ ಇಲ್ಲದಿದ್ದರೂ, ಡೌಟ್ಸ್ ಕೇಳೋ ನೆಪದಲ್ಲಿ ಯಮುನಾ ಜೊತೆ ಕಾಲ ಕಳೆಯುವುದು ರೂಢಿ ಮಾಡಿಕೊಂಡ. ಫೈನಲ್ ಪರೀಕ್ಷೆಗಳು ಹತ್ತಿರ ಬಂದಿದ್ದರಿಂದ ಇಬ್ಬರು ಜೊತೆಗೂಡಿ ಓದಿಕೊಳ್ಳಬೇಕೆಂದು ನಿರ್ಧರಿಸಿಕೊಂಡಂತೆ ಯಮುನಾ ಮನೆಗೆ ಓದಿಕೊಳ್ಳುವುದಕ್ಕೆ ಬಂದ ಅವಿನಾಶ್. ಯಮುನಾ ರೂಮಿನಲ್ಲಿ ಕೂತು ಓದಿಕೊಳ್ಳುತ್ತಿದ್ದರೆ, ಯಮುನಾ ತಾಯಿ ಅವರ ಪಕ್ಕದ್ಮನೆಗೆ ಹೋಗಿ ಬರುತ್ತೇನೆ ಎಂದೇಳಿ ಹೋದಳು. ಯಮುನಾ ಚರಿತ್ರೆ ಓದುತ್ತಾ ಅವಿನಾಶ್ಗೆ ಹೇಳುತ್ತಿದ್ದಾಳೆ. ಅವಿನಾಶ್ ಅರ್ಥ ಆಗ್ದಿರೋ ಜೀವಶಾಸ್ತ್ರದ ಜೊತೆಗೆ ಕುಸ್ತಿ ಆಡೋ ಕೆಲಸದ ಭಾಗವಾಗಿ ಕಾಲು ಚಾಚಿಕೊಂಡು ಕೂತು ಏನೋ ಗಂಭೀರವಾಗಿ ಓದುತ್ತಿರುವಂತೆ ಪೋಸು ಕೊಡುತ್ತಿದ್ದಾನೆ. ಈ ನಡುವೆ ತನ್ನ ಕಾಲು ಮೇಲೆ ಮಲಗಿಕೊಂಡು ಯಮುನಾ ಹಿಸ್ಟರಿ ಬುಕ್ ಒಳಗೆ ನೋಡುತ್ತಿದ್ದಾಳೆ. ಅವಿನಾಶ್ಗೆ ಅಲ್ಲಿವರೆಗೂ ಅರ್ಥ ಆಗದಿದ್ದ ಜೀವಶಾಸ್ತ್ರ ಒಂದೇ ಸಲ ಅರ್ಥವಾದಂತೆ ಹೊಸದಾಗಿ ಅವಳನ್ನು ನೋಡಿದ.
‘ನನಗ್ಯಾಕೋ ಹಿಸ್ಟರಿ ಓದೋ ಪ್ರತಿ ಸಲಾನೂ ನಿದ್ದೆ ಬರುತ್ತೆ? ಇಷ್ಟಕ್ಕೂ ಈ ದಿನವನ್ನು ಆನಂದಿಸೋದು ಬಿಟ್ಟು ಹಿಂದಕ್ಕೆ ತಿರುಗಿ ನೋಡೋದು ಏನಕ್ಕೆ ಅಲ್ವಾ!’ ಎನ್ನುತ್ತಾ ಕೈಯಲ್ಲಿದ್ದ ಇತಿಹಾಸದ ಪುಸ್ತಕವನ್ನು ಮೊದಲಿಸಿದಳು. ಅವಿನಾಶ್ ಮಾತ್ರ ಹೌದು, ಅಲ್ಲ ಅಂತ ಏನೂ ಹೇಳದೆ ಆಕೆಯನ್ನೇ ನೋಡುತ್ತಿದ್ದಾನೆ. ತನಗೇನಾಗಿದೆ, ಏನಾಗುತ್ತಿದೆ, ಏನೂ ಅರ್ಥ ಆರ್ಥವಾಗದವನಂತೆ ನೋಡುತ್ತಿದ್ದಾನೆ.
‘ಏಯ್... ನಿನಗೆ ಯಾವತ್ತಾದ್ರು ಹೇಳಿದ್ನಾ? ಹೀಗೆ ನೀನು ಬೆರಗಿನಿಂದ ನೋಡುತ್ತಿದ್ದರೆ ಸಖತ್ತಾಗಿ ಇರ್ತಿಯಾ,’ ಅಂತ ಅವಿನಾಶ್ ಕೆನ್ನೆಗಳನ್ನು ತನ್ನ ಕೈಗಳಿಂದ ಚಿವುಟುತ್ತಾ ಹೇಳಿದಳು. ಅವಿನಾಶ್ ಬೆವರುತ್ತಿದ್ದಾನೆ, ಆತನ ದೇಹ ಅಲ್ಲಿದೆಯೇ ಹೊರತು, ಮನಸ್ಸು, ಆಲೋಚಗಳು ಮತ್ತೆಲ್ಲೋ ಸುತ್ತಾಡುತ್ತಿವೆ. ‘ಏಯ್ ಅವಿನಾಶ್, ’ ಅಂತ ಆತನನ್ನು ಎಚ್ಚರಿಸೋ ಪ್ರಯತ್ನದ ಭಾಗವಾಗಿ ತಾನು ಕೂತಿರುವ ಜಾಗದಿಂದ ಎದ್ದು ಕರೆದಳು. ‘ಕಾಲುಗಳು ನೋಯಿತ್ತಿರಬೇಕು ಪಾಪ?’ ‘ಇಲ್ಲ ಇಲ್ಲ ಮಲ್ಕೋ ಪರ್ವಾಗಿಲ್ಲ!’ ತಡಬಡಾಯಿಸುತ್ತಾ ಆಕೆಯನ್ನ ಎದ್ದೇಳಬೇಡ ಎಂದು ಹೇಳುತ್ತಾ.
‘ಸೋ ಕ್ಯೂಟ್!’ ಅಂತೇಳಿ ಯಮುನಾ ನಗುತ್ತಾ ಎದ್ದು ಅವಿನಾಶ್ ಕೆನ್ನೆ ಮೇಲೆ ಮುತ್ತು ಕೊಟ್ಟಳು. ಅಲ್ಲಿ ಏನ್ ನಡೀತೋ, ಅಷ್ಟಕ್ಕೂ ತನಗೇನಾಗಿದೆ ಏನೂ ತಿಳಿಯದು ಅವಿನಾಶ್ಗೆ. ಎನೋ ಗೊತ್ತಿಲ್ಲದ ಫೀಲಿಂಗ್! ಅದನ್ನು ಏನನ್ನ ಬೇಕು, ಯಾರಿಗೆ ಹೇಳಿಕೊಳ್ಳಬೇಕೋ ಗೊತ್ತಿಲ್ಲ ಆತನಿಗೆ. ಆಗಲೇ ವಿವೇಕ್ ನೆನಪಾದ. ಆತನಿಗೆ ಎಷ್ಟೋ ಹೇಳಬೇಕೆಂದುಕೊಂಡು ಹೋಗಿ ಏನೂ ಹೇಳಕ್ಕಾಗದೆ ವಿವೇಕ್ ಮುಂದೆ ಮೌನವಾಗಿ ಕೂತು ಬಿಟ್ಟಿದ್ದಾನೆ ಅವಿನಾಶ್. ಏನಾಗಿದೆ ಅಂತ ಅರ್ಥವಾಗದ ವಿವೇಕ್, ತುಂಬಾ ಸಲ ಕೇಳಿ ಕೇಳಿ ಕೊನೆಗೆ ಬೇಸರ ಮಾಡಿಕೊಂಡು ಅಲ್ಲಿಂದ ಹೊರಟಕ್ಕೆ ಸಿದ್ದನಾದ.
‘ಲೋ ನನಗೆ ಯಮುನಾ ಅಂದ್ರೆ ಇಷ್ಟ ಕಣೋ!’ ಅಂದ ಅವಿನಾಶ್. ‘ಮತ್ತೇನು ಹೋಗಿ ಹೇಳಬೇಕು ತಾನೆ!’ ವಿವೇಕ್ ಅತ್ಯುತ್ಸಾಹದಿಂದ ಸಲಹೆ ಕೊಟ್ಟ. ‘ಹೇಳಿದರೆ ಅವಳು ಹೋಗಿ ಅವರ ತಂದೆಗೆ ಹೇಳಿದರೆ?’ ಆತಂಕದಿಂದ ವಿವೇಕ್ ಮುಖ ನೋಡಿದ ಅವಿನಾಶ್. ‘ಹಾಗೇನು ಹೇಳಲ್ಲ ಕಣೋ! ನನಗೆ ಗೊತ್ತಿರುವಂತೆ ಅವಳಿಗೂ ನೀನಂದ್ರೆ ಇಷ್ಟ ಇದ್ದೇ ಇರುತ್ತೆ. ಇಲ್ದೆ ಹೋಗಿದ್ರೆ ತನ್ನ ಸಹಪಾಠಿಗಳನ್ನು ಬಿಟ್ಟು ನಿನ್ನ ಜೊತೆಗೇ ಯಾಕೆ ತಿರುಗುತ್ತಿದ್ದಾಳೆ?’ ಲಾಜಿಕ್ ಮುಂದಿಟ್ಟ ವಿವೇಕ್. ‘ಹಾಗಂತಿಯಾ?’ ಮುಗ್ಧವಾಗಿ ಕೇಳಿದ. ಹೌದೆಂದು ಗ್ಯಾರಂಟಿ ಕೊಟ್ಟಿದ್ದರಿಂದ, ಮರು ದಿನ ಆಕೆಗೆ ತನ್ನ ಪ್ರೀತಿಯನ್ನು ಹೇಳಬೇಕೆಂದು ನಿರ್ಧರಿಸಿಕೊಂಡು, ತನಗೆ ಅನಿಸಿದ್ದನ್ನೆಲ್ಲ ಬರುವ ದಾರಿಯಲ್ಲಿ ತಕೊಂಡು ಕಲರ್ ಪೇಪರ್ಗಳ ಮೇಲೆ ಬರೆದು, ನಾಚೂಕಾಗಿ ಮಡಚಿ, ತನ್ನ ಯೂನಿಫಾರಂ ಜೇಬಿನಲ್ಲಿ ಇಟ್ಟು ಮಲಗಿದ.
ಬೆಳ ಬೆಳಗ್ಗೇನೆ ಎಂದು ಅವಳಿಗಾಗಿ ಅರ್ಧ ಗಂಟೆ ಮೊದಲೇ ಆಕೆ ಮನೆಗೆ ಹೋದ. ಎಂದಿನಂತೆ ಆಕೆಯನ್ನ ಸೈಕಲ್ ಮೇಲೆ ಹತ್ತಿಸಿಕೊಂಡು ಶಾಲೆಗೆ ಹೋಗ್ತಾ, ದಾರಿ ಮಧ್ಯೆ ಸೈಕಲ್ ನಿಲ್ಲಿಸಿ, ಯಮುನಾಳನ್ನೂ ಇಳಿಯುವಂತೆ ಹೇಳಿ, ಅವಳಿಗೆ ಇಷ್ಟವಾದ ಚೆಂಡು ಮಲ್ಲಿಗೆ ಹೂವು ತಂದುಕೊಟ್ಟ. ‘ಥಾಂಕ್ಸ್ ಅವಿನಾಶ್. ನನಗೆ ಈ ಹೂವು ಇಷ್ಟ ಅಂತೇಳಿದ್ದು ನಿನ್ಗೆ ನೆನಪಿದಿಯಾ!’ ಅಶ್ಚರ್ಯದಿಂದ ನೋಡಿದಳು. ‘ನಾನು ನಿನಗೊಂದು ವಿಷಯ ಹೇಳಬೇಕು ಯಮುನಾ,’ ಅಂತೇಳುತ್ತ ತನ್ನ ಜೇಬಿನಿಂದ ಒಂದು ಲೆಟರ್ ಹಾಗೂ ಫೈವ್ ಸ್ಟಾರ್ ಚಾಕ್ಲೈಟ್ ತೆಗೆದು ಅವಳಿಗೆ ಕೊಟ್ಟ. ‘ಎನಿದು?’
‘ಅದು... ನೀನಂದ್ರೆ ನನಗೆ ಇಷ್ಟ’ ಅಂದ ಭಯದಲ್ಲೇ. ‘ಏನು ಲವ್ವಾ? ನಿನ್ನೆ ಕೊಟ್ಟು ಒಂದೇ ಒಂದು ಮುತ್ತುಗೇ?’ ‘ಊಂ.. ಅಲ್ಲ!’ ಎಂದು ತಲೆ ಬಗ್ಗಿಸ ನೆಲ ನೋಡಿದ. ‘ಮತ್ತೆ?’ ಅಂದಳು. ಈ ಬಾರಿ ಅವಿನಾಶ್ ಸಮಾಧಾನ ಹೇಳಲಿಲ್ಲ. ‘ಸರಿ, ಸಂಜೆ ಸ್ಕೂಲ್ ಮುಗಿದ ನಂತರ ಸಿಕ್ಕಿ ಮಾತಾಡೋಣ. ನಡಿ,’ ಅಂತೇಳಿ ಸೈಕಲ್ ಹತ್ತಿ ಕೂತುಳು. ಅವಿನಾಶ್ಗೆ ಏನೂ ಅರ್ಥ ಆಗಲಿಲ್ಲ. ಮೌನವಾಗಿ ಶಾಲೆ ಕಡೆ ಸೈಕಲ್ ತುಳಿದ. ಅವಿನಾಶ್ ತನ್ನ ಪ್ರೇಮ ಪ್ರಯಾಣದ ಕತೆ ಹೇಳುವುದನ್ನು ನಿಲ್ಲಿಸಿದ ಕೂಡಲೇ ಅಲ್ಲಿವರೆಗೂ ತುಂಬಾ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ ಆ ಹುಡುಗ, ‘ಆ ನಂತರ ಏನಾಯಿತು?’ ಅಂತ ಕೇಳಿದ.
‘ಏನಾಗುತ್ತೆ? ರೊಟಿನ್ ಸ್ಟೋರಿನೇ!’ ಎಂದ ಅವಿನಾಶ್. ‘ನನ್ನ ಬಗ್ಗೆ ನಿನಗೇನು ಗೊತ್ತು ಅಂತ ನನ್ನ ಪ್ರೀತಿ ಮಾಡ್ತಿದ್ದಿಯಾ? ನನ್ನ ಹೆಸರಷ್ಟೇ ಗೊತ್ತು ನಿನಗೆ. ನನಗೇನು ಇಷ್ಟ, ಯಾಕಿಷ್ಟ. ಇದ್ಯಾವುದೂ ಗೊತ್ತಿಲ್ಲ. ಆದರೂ ಆಗಲೇ ಲವ್ ಅಂತಿದ್ದಿಯಾ! ಇದು ಸಿನಿಮಾ ಅಲ್ಲ ಅವಿನಾಶ್. ಹೇಳೋದು ಮರತೆ, ನನ್ನ ಮುಂದಿನ ಎಜುಕೇಷನ್ಗೆ ಹೈದರಾಬಾದ್ಗೆ. ಹೋಗುತ್ತಿದ್ದೇನೆ. ಸೋ ಪರೀಕ್ಷೆ ಮುಗಿದ ಮೇಲೆ ನಾವು ಮತ್ತೆ ಸಿಗದೆ ಇರಬಹುದು’- ಎಂದು ಆಕೆ ಇನ್ನೂ ಏನೇನೋ ಮಾತಾಡುತ್ತಿದ್ದಾಳೆ. ಆದರೆ, ನನಗೇನು ಕೇಳಿಸುತ್ತಿಲ್ಲ. ಕಣ್ಣು ಮುಂದೆಯೇ ಆಕೆ ಮಾಯ ಆಗ್ತಿದ್ದಾಳೆ ಅಂತ ಅನಿಸುತ್ತಿತ್ತು.
‘ಹಾಗಾದರೆ ಮತ್ತೆ ಯಾವತ್ತು ಭೇಟಿನೇ ಆಗ್ಲಿಲ್ವಾ?’ ‘ಇಲ್ಲ. ಹಾಗೆ ಕಣ್ಮರೆಯಾದಳು!’ ಅಂದ ಅವಿನಾಶ್. ‘ನೀವು ವೇಸ್ಟ್ ಅಣ್ಣ? ಪ್ರೀತಿಗಾಗಿ ಫೈಟ್ ಮಾಡಬೇಕು! ನಾನು ನಿಮ್ಮಂತೆ ಅಲ್ಲ’ ಅಂದ ಆ ಹುಡುಗ. ಅವಿನಾಶ್ ನಕ್ಕ. ‘ಸಿನಿಮಾಗಳನ್ನು ನೋಡಿ ನೀವೆಲ್ಲ ಹಾಳಾಗ್ತಿದ್ದೀರ! ನಿನ್ಗೊಂದು ವಿಷಯ ಹೇಳಲಾ? ಫಸ್ಟ್ ಲವ್ ಈಸ್ ಆಲ್ವೇಸ್ ಲೈಕ್ ದಟ್. ಆಕೆ ಹೊರತಾಗಿ ನಿನಗೆ ಬೇರೆ ಜಗತ್ತೇ ಇಲ್ಲ ಅಂದುಕೊಳ್ಳುತ್ತಿದ್ದಿಯಾ. ಆದರೆ, ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಾಗಲ್ಲೂ ಅದೇ ರೀತಿ ಅನಿಸುತ್ತದೆಂದು ನಮಗೆ ಸಿನಿಮಾಗಳಲ್ಲಿ ತೋರಿಸಲ್ಲ. ಸಾಹಿತ್ಯದಲ್ಲೂ ಈ ವಿಷಯವನ್ನು ಅಷ್ಟಾಗಿ ಬರೆದಿಲ್ಲ. ಮೊದಲ ಪ್ರೀತಿ ಯಾವಾಗಲೂ ಸ್ಪೆಷಲ್.
ಆದರೆ, ಕೆಲವನ್ನು ಬಿಟ್ಟು ಬಿಡಬೇಕು. ಇಲ್ಲದೆ ಹೋದರೆ ನಾವು ಗತದಲ್ಲೇ ನಿಂತೋಗುತ್ತೇವೆ. ನಾನು ನಿನ್ನ ಮೊದಲ ಪ್ರೀತಿಯನ್ನು ಮರೆತೋಗು ಅಂತ ಹೇಳುತ್ತಿಲ್ಲ. ಯಾವಾಗಲಾದರೂ ಹೀಗೆ ನೆನಪಿಸಿಕೊಂಡು ರಿಲ್ಯಾಕ್ಸ್ ಆಗಕ್ಕೆ ಈ ಫಸ್ಟ್ ಲವ್ ಕೆಲಸಕ್ಕೆ ಬರುತ್ತದೆ. ಈ ಮೊದಲ ಪ್ರೀತಿ ಒಂಥರಾ ರಿಚ್ಯುವಲ್ನಂತೆ. ನಮ್ಮ ಬಾಲ್ಯಕ್ಕೆ ಬೀಳ್ಕೊಡಿಗೆ ಕೊಟ್ಟು, ಯೌವ್ವನಕ್ಕೆ ಅಹ್ವಾನಿಸುತ್ತದೆ. ಇನ್ನೂ ಹೇಳಬೇಕು ಎಂದರೆ ಫಸ್ಟ್ ಲವ್ ಈಸ್ ಎ ರೈಟ್ಸ್ ಆಫ್ ಪ್ಯಾಸೆಜ್. ಅದನ್ನು ದಾಟಿಕೊಂಡು ನೀನು ಮುಂದಕ್ಕೆ ಹೋಗಲೇಬೇಕು. ಅಷ್ಟೇ ಹೊರತು, ಸಿನಿಮಾಗಳಲ್ಲಿ ತೋರಿಸಿದಂತೆ, ನಾವು ಫಸ್ಟ್ ಲವ್ ಮಾಡಿದವರನ್ನೇ ಮದುವೆ ಆಗಬೇಕೆಂದು, ಇಲ್ಲದೆ ಹೋದರೆ ಅವರು ರಿಜೆಕ್ಟ್ ಮಾಡಿದರೆ ಸತ್ತೋಗಬೇಕು- ಇಂಥ ಯೋಚನೆಗಳು ತುಂಬಾ ತಪ್ಪು. ಆಗಲೇ ಹೇಳಿದ್ನಲ್ಲಾ! ಲವ್ ಈಸ್ ಜಸ್ಟ್ ಎ ಕೆಮಿಕಲ್ ರಿಯಾಕ್ಷನ್.
ಅಕ್ಸಿಟೋಸಿನ್, ವಾಸೊಪ್ರೆಸಿನ್, ಟೆಸ್ಟೊಸ್ಪಿರಾನ್, ಈಸ್ಟ್ರೊಜನ್, ಡೊಪಮೈನಂತಹ ರಾಸಾಯನಿಕಗಳ ಪ್ರಭಾವದಿಂದ ನಮ್ಮಲ್ಲಿ ಉಂಟಾಗುವ ರಿಯಾಕ್ಷನ್ಗೇ ನಾವು ಪ್ರೀತಿ ಎನ್ನುವ ಹೆಸರು ಇಟ್ಟುಕೊಂಡಿದ್ದೇವೆ. ಎವಲ್ಯೂಷನರಿ ಸೈಕಲಾಜಿ ಪ್ರಕಾರ ನೋಡಿದರೆ ನಾವು ಮಾತಾಡೋ ಭಾಷೆ, ವ್ಯಕ್ತಪಡಿಸೋ ಭಾವನೆಗಳು ಎಲ್ಲವೂ ಕೂಡ ನಮ್ಮ ಸಹಚರರನ್ನು ಆಕರ್ಷಿಸುವುದಕ್ಕೆ ಮಾಡುವ ಒಂದು ಸರ್ಕಸ್ ಆಟದಂತೆ. ಬಯಾಲಾಜಿನಲ್ಲಿ ಇದೆಲ್ಲ ಓದಿಲ್ವಾ? ಸರಿ, ಈಗಲಾದರೂ ಕೇಳಿಸಿಕೋ ನಾನು ಹೇಳದನ್ನ. ನೀನು ಇಂಥ ಭಾವನೆಗಳಿಂದ ಫೀಲ್ ಅತಿಯಾಗಿ ಮಾಡಿಕೊಂಡು ಸತ್ತೋಗೋಣ ಅಂತೇಳಿ ಎಲ್ಲರಿಗೂ ಹೇಳೋದನ್ನು ಬಿಟ್ಟು ಶ್ರದ್ಧೆಯಿಂದ ಓದಿನ ಕಡೆ ಗಮನ ಕೊಡು. ನಿನ್ನ ಪ್ರೀತಿಗಾಗಿ ಯಾರೋ ಇನ್ನೊಬ್ಬರು ಸಿಗದೆ ಹೋಗಲ್ಲ, ಸಿಕ್ಕು ಪರಿಚಯ ಆಗದೆ ಇರಲ್ಲ. ಅರ್ಥ ಆಯಿತಾ?’ ಎಂದ ಅವಿನಾಶ್. ಆ ಹುಡುಗನಿಗೆ ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ, ಅವಿನಾಶ್ ಮಾತ್ರ ಅವತ್ತು ತಾನು ಮಾಡಬೇಕಾದ ಕೆಲಸವನ್ನು ಮಾಡಿ ಮುಗಿಸಿದೆ ಎನ್ನುವಂತೆ ಹೋಗಿ ನೆಮ್ಮದಿಯಾಗಿ ನಿದ್ದೆ ಮಾಡಿದ.














