ಸ್ವದೇಶಿ ವಿಚಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಧೀಮಂತ ಸಾಧಕ ರಾಜೀವ್ ದೀಕ್ಷಿತ್ ಅವರ ಬದುಕು  ಹೋರಾಟವನ್ನು ಈ ಲೇಖನ ಪರಿಚಯಿಸುತ್ತದೆ. ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧದ ಸಮರ 'ಆತ್ಮನಿರ್ಭರ ಭಾರತ' ಪರಿಕಲ್ಪನೆಗೆ ಅವರ ಚಿಂತನೆಗಳು ಹೇಗೆ ಪ್ರೇರಣೆ ಎಂಬುದನ್ನು ಇದು ವಿವರಿಸುತ್ತದೆ.

-ಡಾ. ಮಲ್ಲಿಕಾರ್ಜುನ ಬಾಳಿಕಾಯಿ

ಉಪಾಧ್ಯಕ್ಷರು, ರಾಜ್ಯ ಬಿಜೆಪಿ ಯುವಮೋರ್ಚಾ---------

ಇಂದು ‘ಸ್ವದೇಶಿ’ ವಿಚಾರ ದೇಶದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಸ್ವದೇಶಿ ವಿಚಾರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಕೆಲಸ ಮಾಡುತ್ತಿದೆ. ಮೋದಿಯವರ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ದೇಶದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ಸ್ವದೇಶಿ ಆಹಾರ, ವೈದ್ಯಕೀಯ ಪದ್ಧತಿ, ಉತ್ಪನ್ನ, ತಂತ್ರಜ್ಞಾನಗಳಿಗೆ ಬೇಡಿಕೆ ಹೆಚ್ಚಿದೆ. ಬ್ರಿಟಿಷ್‌ ವಸಾಹತುಶಾಹಿ ಗುರುತುಗಳಿದ್ದ ಹೆಸರುಗಳನ್ನು ಸ್ವದೇಶಿಯಾಗಿ ಮರುನಾಮಕರಣ ಮಾಡುವುದರಿಂದ ಹಿಡಿದು, ‘ವೆಡ್‌ ಇನ್ ಇಂಡಿಯಾ’ಗೆ ಕರೆ ನೀಡುವುದರ ವರೆಗೆ ಸ್ವದೇಶಿ ಚಿಂತನೆ ದೇಶವನ್ನು ವ್ಯಾಪಿಸುತ್ತಿದೆ. ದೇಶ ಸ್ವದೇಶೀಯತೆಯತ್ತ ದಾಪುಗಾಲಿಡುತ್ತಲೇ, ಜಗತ್ತನ್ನೇ ತನ್ನತ್ತ ಆಕರ್ಷಿಸುತ್ತಲೂ ಇದೆ. ಇದರ ಹಿಂದೆ, ಸ್ವದೇಶಿ ವಿಚಾರಕ್ಕಾಗಿ ತಮ್ಮಿಡೀ ಜೀವನವನ್ನು ಮುಡಿಪಾಗಿಟ್ಟ ಅನೇಕ ಸಾಧಕರ ಹೋರಾಟ, ಪರಿಶ್ರಮಗಳಿವೆ.

‘ಸ್ವದೇಶಿ’ ಎನ್ನುವ ಶಬ್ದ ಕೇಳಿಸಿದ ತಕ್ಷಣ ಏನೋ ಒಂದು ವಿಶೇಷ ಅನುಭವವಾಗುತ್ತದೆ. ಶತಮಾನದ ಹಿಂದೆ ಇದೇ ಸ್ವದೇಶಿ ಮಂತ್ರ ಪಠಣ ಆರಂಭಿಸಿದ ಬಾಲ ಗಂಗಾಧರ ತಿಲಕರು ಅದರ ದೀಕ್ಷೆಯನ್ನು ಭಗತ್ ಸಿಂಗ್, ಆಜಾದ್, ರಾಜಗುರು, ಸುಖದೇವ್, ನೇತಾಜಿ ಮೊದಲಾದ ಕ್ರಾಂತಿಕಾರಿಗಳಿಗೆ ನೀಡಿದ್ದರು. ಅಂದು ಸ್ವದೇಶ ನಿಷ್ಠೆ ಜಾಗೃತ ಮಾಡಲು ವಿದೇಶಿ ವಸ್ತುಗಳ ದಹನವನ್ನೂ ಆರಂಭಿಸಿದರು. ಮಹಾತ್ಮ ಗಾಂಧೀಜಿ ಸಹ ಸ್ವದೇಶಿ ವಿಚಾರವನ್ನೇ ಬದುಕಾಗಿಸಿಕೊಂಡು ಲಕ್ಷಾಂತರ ದೇಶಭಕ್ತರಿಗೆ ದಾರಿ ತೋರಿದರು. ಅಪ್ರತಿಮ ಕ್ರಾಂತಿಕಾರಿ, ಸ್ವಾತಂತ್ರವೀರ ವಿನಾಯಕ ದಾಮೋದರ ಸಾವರ್ಕರ್ ಅವರಿಗೂ ಶಕ್ತಿ ಕೊಟ್ಟಿದ್ದು ಇದೇ ಸ್ವದೇಶಿ ಮಂತ್ರ.

ಸ್ವದೇಶಿ ವಿಚಾರಕ್ಕೆ ಬದುಕು ಮುಡಿಪು

ಮುಂದೆ ಸ್ವಾತಂತ್ರ್ಯಾನಂತರ ಇದೇ ಸ್ವದೇಶಿ ಮಂತ್ರವನ್ನು ಬದುಕಾಗಿಸಿಕೊಂಡು, ದೇಶಸೇವೆಗಾಗಿ ಜೀವನವನ್ನೇ ಸವೆಸಿದ ಧೀಮಂತ ವ್ಯಕ್ತಿ ರಾಜೀವ್ ದೀಕ್ಷಿತ್. ಇವರು ಸ್ವಾಭಿಮಾನಿ ಭಾರತ ಯಾವ ಕಾಲಕ್ಕೂ ಮರೆಯಲೇಬಾರದ ಹೆಸರು. ಎಲ್ಲಿಯ ತನಕ ಭಾರತ ಸ್ವದೇಶಿ ರೀತಿ ನೀತಿ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ-ವ್ಯಾಪಾರಗಳ ಮೇಲೆ ವಿಶ್ವಾಸವಿಟ್ಟು ವಿಕಾಸ ಹೊಂದುವುದಿಲ್ಲವೋ ಅಲ್ಲಿಯ ತನಕ ಭಾರತ ಸಂಪೂರ್ಣ ಸ್ವಾತಂತ್ರ್ಯ ಹೊಂದಿದಂತೆ ಆಗುವುದಿಲ್ಲ ಎಂದು ಚಿಂತನೆಯನ್ನು ಕೊಟ್ಟವರು ರಾಜೀವ್ ದೀಕ್ಷಿತ್. ಇಂದಿನಂತೆ ಸಾಮಾಜಿಕ ಜಾಲತಾಣಗಳು, ಸುದ್ದಿ ಮಾಧ್ಯಮಗಳು ಪರಿಣಾಮಕಾರಿಯಾಗಿ ಇಲ್ಲದೇ ಇದ್ದ ಕಾಲದಲ್ಲಿಯು ಸಹ ರಾಜೀವ್ ಭಾರತದ ಬಹುತೇಕ ದೊಡ್ಡ ಹಾಗೂ ಮಾಧ್ಯಮ ನಗರಗಳನ್ನು, ಹಲವು ಹಳ್ಳಿಗಳನ್ನು ತಲುಪಿದ್ದರು. ದೊಡ್ಡ ಸಂಖ್ಯೆಯ ಜನಮನಕ್ಕೆ ಸ್ವದೇಶಿ ವಿಚಾರವನ್ನು ಮುಟ್ಟಿಸಿದ್ದರು. ಬದುಕಿದ್ದ ನಾಲ್ಕೇ ದಶಕಗಳಲ್ಲಿ ಕಲ್ಪನೆಗೂ ನಿಲುಕದೇ ಇರುವಷ್ಟು ದೇಶ ಸುತ್ತಿ, ದೇಹ ಸವೆಸಿ ಕಾಯ ಬೀಳುವ ತನಕ ಕಾಯಕ ಬಿಡದ ಸ್ವದೇಶಿ ಹಠವಾದಿ ಅವರು. ಊರುಗಳ ಮಧ್ಯೆ ಸಂಪರ್ಕವೇ ಸರಿ ಇಲ್ಲದ ಕಾಲದಲ್ಲಿ ಸರಿಸುಮಾರು ಹದಿನೈದು ಸಾವಿರದಷ್ಟು ಭಾಷಣ ಮಾಡಿದ್ದರು ಎನ್ನುವುದು ಆಶ್ಚರ್ಯ ಆದರೂ ಸತ್ಯ.

ದೇಶಿ ವಿಚಾರಗಳ ಅಧ್ಯಯನ

ಐಐಟಿ ಕಾನ್ಪುರದಲ್ಲಿ ಎಂ.ಟೆಕ್. ಪದವಿ ಪಡೆದಿದ್ದ ಅವರು ಸ್ವಂತಕ್ಕಾಗಿ ನೌಕರಿ ಮಾಡಿದ್ದರೆ ಹತ್ತರಲ್ಲಿ ಹನ್ನೊಂದರಂತೆ ಆಗಿಬಿಡುತ್ತಿದ್ದರೋ ಏನೋ. ಆದರೆ ಅವರು ವೈಯಕ್ತಿಕ ಜೀವನದ ಆಸೆ ಬಿಟ್ಟು, ಭಾರತದ ಸ್ವಾಭಿಮಾನ ಬೆಳಗಿಸುವ ಹುಚ್ಚು ಹಿಡಿಸಿಕೊಂಡರು. ಭಾರತದ ಹಿರಿಮೆ ಗರಿಮೆಗಳ ಬಗ್ಗೆ ತಿಳಿಯಲು ಯುರೋಪ್‌ನಲ್ಲಿ ನೆಲೆಸಿದ್ದ ಶ್ರೇಷ್ಠ ಇತಿಹಾಸ ತಜ್ಞ ಧರ್ಮಪಾಲ್ ಅವರನ್ನು ಭೇಟಿ ಮಾಡಿ, ಅವರಿಂದ ಸಾವಿರಾರು ಪುಟಗಳ ದಾಖಲೆಗಳನ್ನು ಅಧ್ಯಯನ ಮಾಡಿದರು. ಅದು ಬ್ರಿಟಿಷರು ನಮ್ಮ ದೇಶದಿಂದ ಕದ್ದು ಒಯ್ದು ಸಂಪತ್ತು. ನಮ್ಮ ಪೂರ್ವಜರು ಸಾಧನೆ ಮಾಡಿದ ವಿಜ್ಞಾನ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಮಾಹಿತಿಯಾಗಿತ್ತು. ರಾಜೀವ್ ಸುದೀರ್ಘ ಕಾಲ ಐವತ್ತು ಸಾವಿರ ಪುಟಗಳ ಅಧ್ಯಯನ ಮಾಡಿದರು. 18ನೇ ಶತಮಾನದಲ್ಲಿ ಮಧ್ಯಪ್ರದೇಶದಲ್ಲಿ ಯೂರೋಪ್‌ಗಿಂತ ಉತ್ಕೃಷ್ಟ ಗುಣಮಟ್ಟದ ಮತ್ತು ಇಡೀ ಜಗತ್ತಿಗೆ ಸಾಕಾಗುವಷ್ಟು ಉಕ್ಕು ತಯಾರಿಸುತ್ತಿದ್ದರು. ಅನಕ್ಷರಸ್ಥ ಹಳ್ಳಿಗರು ಅದನ್ನು ತಯಾರು ಮಾಡುವ ತಂತ್ರಜ್ಞಾನ ತಿಳಿದುಕೊಂಡಿದ್ದರು ಎಂಬಂಥ ಅಸಂಖ್ಯ ಅಮೂಲ್ಯ ಮಾಹಿತಿಗಳನ್ನು ರಾಜೀವರು ಅಧ್ಯಯನ ಮಾಡಿದರು.

ಆರ್ಥರ್ ಡಂಕಲ್‌ಗೆ ಧರ್ಮದೇಟು

ಮುಂದೆ ಅವರು ಎಲ್ಲ ಕ್ಷೇತ್ರಗಳಲ್ಲೂ ಭಾರತ ಸ್ವಂತಿಕೆಯ ಆಧಾರದ ಮೇಲೆಯೇ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಪ್ರತಿಪಾದಿಸಿ ಅದರಂತೆ ನಡೆದು ತೋರಿಸಿದರು. ರಾಜಕೀಯ, ಉದ್ಯಮ, ಆಹಾರ, ವಿಚಾರ, ತೆರಿಗೆ ಪದ್ಧತಿ, ಶಿಕ್ಷಣ ನೀತಿ, ಆರೋಗ್ಯ.. ಹೀಗೆ ಎಲ್ಲೆಡೆ ಸ್ವದೇಶೀಯತೆಯನ್ನೇ ತರಲು ಯತ್ನಿಸಿದರು. ಸ್ವಭಾವತಃ ಅಹಿಂಸಾವಾದಿಯಾಗಿದ್ದ ಅವರು ದೇಶದ ಸ್ವಾಭಿಮಾನದ ವಿಚಾರ ಬಂದಾಗ ಮಾತ್ರ ಯಾವ ಮಟ್ಟಕ್ಕೂ ಇಳಿಯಲು ಹಿಂಜರಿಯುತ್ತಿರಲಿಲ್ಲ. ಒಮ್ಮೆ ಗ್ಯಾಟ್ ಒಪ್ಪಂದದ ರೂವಾರಿ ಯುರೋಪಿನ ಆರ್ಥರ್ ಡಂಕಲ್ ಭಾರತಕ್ಕೆ ಬಂದ. ಆ ಒಪ್ಪಂದದಿಂದ ನಮಗೆ ಬಹಳ ದೊಡ್ಡ ನಷ್ಟವಾಗುವುದಿತ್ತು. ಡಂಕಲ್ ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಅವನಿಗೆ ರಾಜೀವ್ ಅವರ ತಂಡ ಚಪ್ಪಲಿಯೇಟು ಕೊಟ್ಟಿತ್ತು. ಅವನನ್ನು ರನ್‌ವೇಯಲ್ಲಿ ಓಡುವಂತೆ ಮಾಡಿ ಅಪಮಾನ ಮಾಡಿತ್ತು. ರಾಜೀವ್ ದೀಕ್ಷಿತರನ್ನು ಇದರಿಂದಾಗಿ ತಿಹಾರ್ ಜೈಲಿಗೆ ಕಳಿಸಲಾಯಿತು. ಭಾರತ ಸರ್ಕಾರದ ಅತಿಥಿಗೆ ಧರ್ಮದೇಟು ಕೊಟ್ಟು ತಾವು ಜೈಲಿನ ಅತಿಥಿಯಾಗಿದ್ದರು.

ಬಹುರಾಷ್ಟ್ರೀಯ ಕಂಪನಿಗಳು (ಎಂಎನ್‌ಸಿ) ದೇಶದ ವಿರೋಧಿಗಳು ಎಂದು ಮೊದಲ ಬಾರಿಗೆ ಪರಿಣಾಮಕಾರಿಯಾಗಿ ಹೇಳಿದ್ದು ರಾಜೀವ್ ದೀಕ್ಷಿತ್. ಹೇಳಿ ಸುಮ್ಮನೆ ಕೂರದೆ ಅದರ ವಿರುದ್ಧ ಬಹುದೊಡ್ಡ ಜಾಗೃತಿ ಮೂಡಿಸಿ, ಹೋರಾಟ ಮಾಡಿ ಅನೇಕ ಕಂಪನಿಗಳನ್ನು ದೇಶದಿಂದ ಹೊರಹಾಕಿದ ದೈತ್ಯ ಅವರು. ರಾಜಸ್ಥಾನದಲ್ಲಿ ಒಮ್ಮೆ ಒಂದು ವಿದೇಶಿ ಲಿಕ್ಕರ್ ಕಂಪನಿ ಆರಂಭವಾಗಲಿತ್ತು. 4 ಕೋಟಿ ಲೀ. ಮದ್ಯ ತಯಾರು ಮಾಡುವುದು ಅದರ ಉದ್ದೇಶ. ಆಗ ಹೋರಾಟ ಮಾಡಿದ ರಾಜೀವ್ ಅವರ ತಂಡ ‘ಕುಡಿಯಲಿಕ್ಕೆ ನೀರು ಸಿಗದ ರಾಜಸ್ಥಾನದಲ್ಲಿ ನೀವು ಹೇಗೆ ಮದ್ಯದ ಕಂಪನಿ ಆರಂಭ ಮಾಡುತ್ತೀರಿ?’ ಎಂದು ಪ್ರಶ್ನಿಸಿ, ಕಂಪನಿ ಅಲ್ಲಿ ನೆಲೆಯೂರದಂತೆ ಮಾಡುವಲ್ಲಿ ಯಶಸ್ವಿಯಾಯಿತು. ದೇಶದಲ್ಲಿ ಬಹಳ ದೊಡ್ಡ ಮಟ್ಟದ ಸುದ್ದಿ ಮಾಡಿದ್ದ ಕಪ್ಪುಹಣದ ಬಗ್ಗೆ ಮೊದಲ ಬಾರಿಗೆ ದಾಖಲೆಯೊಂದಿಗೆ ಅಧಿಕೃತ ಮಾಹಿತಿ ಕೊಟ್ಟವರು ರಾಜೀವ್. ಅಂದು ರಾಜೀವ್ ಪ್ರಸ್ತಾವಿಸಿದ್ದ, ವಿದೇಶದಲ್ಲಿ ಇಟ್ಟಿದ್ದ ಕಪ್ಪು ಹಣ ಮುಂದೆ ಚುನಾವಣೆಗಳಿಗೆ ವಸ್ತುವಾಗಿ ದೇಶದ ಗಮನ ಸೆಳೆಯಿತು. ಬಾಬಾ ರಾಮದೇವ್ ಅವರ ಜೊತೆ ಸೇರಿ ಭಾರತ್ ಸ್ವಾಭಿಮಾನಿ ಟ್ರಸ್ಟ್ ಕಟ್ಟಿ ದೇಶಾದ್ಯಂತ ಸಂಚಲನ ಮೂಡಿಸಿದ್ದರು. ಬಾಬಾ ರಾಮದೇವ್ ಅವರ ಹಿಂದಿನ ಬುದ್ಧಿಶಕ್ತಿ ರಾಜೀವ್ ದೀಕ್ಷಿತ್ ಆಗಿದ್ದರು ಎಂದರೆ ಅತಿಶಯೋಕ್ತಿಯಲ್ಲ.

ನುಡಿದಂತೆ ನಡೆದ ಸಾಧಕ

ರಾಜೀವ್‌ ವಿದೇಶಿ ನೇರ ಬಂಡವಾಳ ಹೂಡಿಕೆ ವಿರೋಧಿಸಿ ಅದರ ದುಷ್ಪರಿಣಾಮಗಳನ್ನು ದೇಶದ ಮುಂದೆ ಇಟ್ಟರು. ಅವರ ಭಾಷಣಗಳಿಂದ ಪ್ರಭಾವಿತರಾಗಿ ದೇಶೀಯತೆ ಅಳವಡಿಕೊಂಡು ಯಶಸ್ವಿ ಆದವರು ಹಲವರು. ಯೋಗ, ಸ್ವದೇಶಿ ಗೋವು, ಆಯುರ್ವೇದ, ಹೋಮಿಯೋಪತಿ, ಮನೆಮದ್ದು, ಸಾವಯುವ ಕೃಷಿ, ರಾಜನೀತಿ, ಅರ್ಥನೀತಿ, ಗ್ರಾಮವಿಕಾಸ, ಇತಿಹಾಸ, ಹಬ್ಬಗಳು.. ಹೀಗೆ ರಾಜೀವ್ ಅವರು ಅಧ್ಯಯನ ಮಾಡಿ ಜನರಿಗೆ ತಿಳಿಸದ ವಿಷಯವಿಲ್ಲ. ಅವರು ಭಾಷಣ ಮಾಡಿ ಸುಮ್ಮನೆ ಕುಳಿತಿದ್ದರೆ ಇಂದು ಅವರನ್ನು ಸ್ಮರಿಸುವ ಅಗತ್ಯ ಬರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ನುಡಿದಂತೆ ನಡೆದರು. ಅತ್ಯಂತ ಸರಳ ಜೀವನ ನಡೆಸಿ, ಕೊನೆಯ ತನಕ ಸ್ವದೇಶಿ ಸಂಕೇತವಾದ ಖಾದಿ ಬಟ್ಟೆಯನ್ನೇ ಧರಿಸಿದರು. ಸಂನ್ಯಾಸ ದೀಕ್ಷೆ ಪಡೆಯದಿದ್ದರೂ ಒಬ್ಬ ಸಂತನಂತೆ ಬದುಕಿ, ಸಾವಿರಾರು ಜನರಿಗೆ ಸ್ವದೇಶಿ ದೀಕ್ಷೆ ನೀಡಿದರು.

ಜಗತ್ತಿನ ತುಂಬೆಲ್ಲಾ ಈಗ ‘ಆತ್ಮನಿರ್ಭರ ಭಾರತ’ದ ಚರ್ಚೆಯಾಗುತ್ತಿದೆ. ಇದೇ ಸ್ವದೇಶಿ ವಿಚಾರದ ಪ್ರೇರಣೆಯಿಂದ ಅನವರತ ಸೇವೆಗೈಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈಗಾಗಲೇ ‘ಮೇಕ್ ಇನ್ ಇಂಡಿಯಾ’ ದೊಡ್ಡ ಮಟ್ಟದ ಯಶಸ್ಸು ಕಂಡಿದೆ ಮತ್ತು ಭಾರತದ ವಿಶ್ವಾಸ ವೃದ್ಧಿಮಾಡಿದೆ. ಶಿಕ್ಷಣದಿಂದ ಹಿಡಿದು ರಕ್ಷಣಾ ಕ್ಷೇತ್ರದ ತನಕ, ಕೃಷಿಯಿಂದ ಹಿಡಿದು ತಂತ್ರಜ್ಞಾನದ ತನಕ ಭಾರತ ಸ್ವಾವಲಂಬಿಯಾಗುತ್ತಿದೆ. ಭಾರತದ ಈ ಸಾಧನೆಯ ಹಿಂದೆ ರಾಜೀವ್‌ ದೀಕ್ಷಿತರಂತಹ ಮಹಾಪುರುಷರ ಜೀವನ, ಚಿಂತನೆ, ತ್ಯಾಗ, ಪರಿಶ್ರಮದ ಕೊಡುಗೆಯಿದೆ ಎಂಬುದನ್ನು ಮರೆಯುವಂತಿಲ್ಲ.