ಈ ಬಗ್ಗೆ ಬೆನ್ನುಡಿಯಲ್ಲಿ ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಅವರು, ‘ಈ ಹೊತ್ತಿಗೆಗಳಲ್ಲಿ ಕಂಡುಬರುತ್ತಿರುವುದು ವಚನಗಳ ಅಕಾಡೆಮಿಕ್ ಅಧ್ಯಯನವಲ್ಲ, ವಚನಕಾರರ ಕಾಲ ದೇಶಗಳನ್ನು ಕುರಿತ ಚಾರಿತ್ರಿಕ ಅಧ್ಯಯನವೂ ಅಲ್ಲ.

ಈ ಕೃತಿಯ ಕರ್ತೃ ಬಸವರಾಜ ಸ್ವಾಮಿ ವೃತ್ತಿಯಲ್ಲಿ ಪತ್ರಕರ್ತರು. ರಾಯಚೂರಿನ ‘ಸುದ್ದಿಮೂಲ’ ಪತ್ರಿಕೆಯ ಸಂಪಾದಕರು. ರಾಜ್ಯಮಟ್ಟದ ಪತ್ರಿಕೆಗಳಿಗೆ ಸರಿ ಸಮಾನವಾಗಿ ಜಿಲ್ಲಾ ಪತ್ರಿಕೆಯನ್ನು ಸಜ್ಜುಗೊಳಿಸಿದ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮೊದಲಾದ ಗೌರವಗಳು ಸಂದಿವೆ. ಸದ್ಯ ವಚನ ಸಾಹಿತ್ಯದಲ್ಲಿನ ತಮ್ಮ ನಿರಂತರ ಅಧ್ಯಯನದಿಂದ ಬರೆದ ಸರಣಿ ಕೃತಿಗಳ ಸಂಕಲನ ‘ಬಸವಗೀತೆ’. ಇದರಲ್ಲಿ ಜ್ಞಾನ ಭಂಡಾರಿ ಬಸವಣ್ಣ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ ಮೊದಲಾದ ಅನೇಕ ವಚನಕಾರರ ವಚನಾನುಭವ, ಶರಣ್ಯ ಸಾಹಿತ್ಯದ ಕುರಿತಾದ ವಿಶಿಷ್ಠ ಚಿಂತನೆಗಳ ಹರಿವು ಇದೆ.

ಈ ಬಗ್ಗೆ ಬೆನ್ನುಡಿಯಲ್ಲಿ ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಅವರು, ‘ಈ ಹೊತ್ತಿಗೆಗಳಲ್ಲಿ ಕಂಡುಬರುತ್ತಿರುವುದು ವಚನಗಳ ಅಕಾಡೆಮಿಕ್ ಅಧ್ಯಯನವಲ್ಲ, ವಚನಕಾರರ ಕಾಲ ದೇಶಗಳನ್ನು ಕುರಿತ ಚಾರಿತ್ರಿಕ ಅಧ್ಯಯನವೂ ಅಲ್ಲ. ಇದೊಂದು ಆಧ್ಯಾತ್ಮಿಕ ಅನುಭವಗಳ ಅರ್ಕ’ ಎಂದು ಈ ಕೃತಿಯ ವಿಶಿಷ್ಠತೆಯನ್ನು ಹೇಳಿದ್ದಾರೆ. ‘ಅಧ್ಯಯನ ಮಾಡುವ ಕರ್ತಾ, ಅಧ್ಯಯನ ಎನ್ನುವ ಕರ್ಮ ಮತ್ತು ಅಧ್ಯಯನದ ವಸ್ತುವೂ ತಾನೇ ಆಗಿರುವ ಏಕಾಗ್ರತೆ ಈ ಪುಸ್ತಕಗಳ ಹೆಚ್ಚುಗಾರಿಕೆ’ ಎಂದೂ ಹೇಳಿದ್ದಾರೆ. ಈ ಒಂಭತ್ತು ಸಂಪುಟಗಳಿರುವ ಈ ಗುಚ್ಛಕ್ಕೆ ‘ಸತ್ಯಸಂವಾದ’ ಎಂಬ ಅಡಿ ಬರಹವಿದೆ. ಅಂದರೆ ಈ ಕೃತಿಯುದ್ದಕ್ಕೂ ಬರಹಗಳು ಸಂವಾದದ ಮಾದರಿಯಲ್ಲಿವೆ. ತಾತ್ವಿಕ ಪ್ರಶ್ನೆಗಳು ಮತ್ತು ಅವಕ್ಕೆ ವಚನಕಾರರು ನೀಡುವ ಅರಿವಿನ ಉತ್ತರವಿದೆ.

‘ಬಸವಣ್ಣ : ಕಂಕಣ ಕಟ್ಟಿಕೊಂಡ ಕೈ ಕಣ್ಣಿಗೆ ಕಾಣುತ್ತದೆ, ಆದರೂ ಮನೆ ಕನ್ನಡಿಯ ಮೂಲಕ ಕಂಕಣ ನೋಡಲು ಹೊರಟಿದೆ. ಆಯ್ದಕ್ಕಿ ಮಾರಯ್ಯ: ಅದು ಹೇಗೆ ಬಸವರಸ? ಬಸವಣ್ಣ: ತನುವಿನಲ್ಲಿ ಹೇರಳವಾದ ಅರಿವಿನ ಸಂಪತ್ತು ಇದ್ದರೂ ಕೂಡ; ಆ ಸಂಪದ್ಭರಿತವಾದ ಗುರುದೇವ, ತನುವಿನಲ್ಲಿಯೇ ಸಂಗಮವಾಗಿ, ಕ್ಷಣ ಕ್ಷಣಕ್ಕೂ ತನುವಿಗೂ ಮತ್ತು ಮನಕ್ಕೂ ಪಾಠ ಮಾಡಿದರೂ ಕೂಡ, ಅರಿವಿನ ಸಂಪತ್ತು ತನುವಿನಲ್ಲಿಯೇ ತನ್ಮಯವಾಗಿದೆ ಎಂದು ಮನಕ್ಕೆ ಹೊಳೆಯುವುದಿಲ್ಲ.’ ಇದೇ ಮಾದರಿಯ ಸಂವಾದದಲ್ಲಿ ಅಷ್ಟೂ ಕೃತಿಗಳ ನಿರೂಪಣೆ ಇದೆ. ಬಸವಣ್ಣನನ್ನು ಕೇಂದ್ರವಾಗಿಟ್ಟುಕೊಂಡು, 12ನೇ ಶತಮಾನದ ಅನೇಕ ಶರಣ ಶರಣೆಯರ ನಡುವಿನ ಈ ಸಂವಾದ ‘ಅರಿವಿನ ಬೆಳಕಿನಲ್ಲಿ’ ನಡೆಯುವುದು ವಿಶೇಷ.

‘ವಚನಕಾರರನ್ನು ಯಾವ ಪರಿಕರಗಳಿಂದ ಗ್ರಹಿಸಬೇಕು, ಅದರ ತಾತ್ವಿಕತೆ ಏನು, ಅದನ್ನು ಬದುಕಿನ ನೆಲೆಯಲ್ಲಿ ಹೇಗೆ ಗ್ರಹಿಸಬೇಕು ಎಂದು ಲೇಖಕರು ಯೋಚಿಸುತ್ತಾರೆ. ಈ ರೀತಿಯ ಚಿಂತನೆ ಮಾದರಿ ವಚನಕಾರರನ್ನು ಅರ್ಥೈಸಿಕೊಳ್ಳುವ ಹೊಸ ರೀತಿ ಯಾವ ಕಡೆ ಚಲಿಸುತ್ತದೆ ಎಂಬುದನ್ನು ವಿವರಿಸುತ್ತದೆ’ ಎಂದು ಈ ಗುಚ್ಛದ ಮೊದಲ ಕೃತಿಗೆ ಮುನ್ನುಡಿ ಬರೆದ ರಾಯಚೂರು ವಿವಿ ಕುಲಪತಿ ಡಾ ಶಿವಾನಂದ ಕೆಳಗಿನಮನಿ ಹೇಳುತ್ತಾರೆ. ವಚನ ಸಾಹಿತ್ಯವನ್ನು ಏಕಕಾಲಕ್ಕೆ ಆ ಕಾಲ ಮತ್ತು ಈ ಕಾಲದ ಹಿನ್ನೆಲೆಯಲ್ಲಿ ಚರ್ಚಿಸುವ ಕ್ರಮವನ್ನೂ ಈ ಕೃತಿಯಲ್ಲಿ ನೋಡಬಹುದು. ಈ ಚರ್ಚೆಗಳು 12ನೇ ಶತಮಾನದವು ಅನಿಸಿದರೂ 21ನೇ ಶತಮಾನದ ವ್ಯಕ್ತಿ, ಸಮಾಜಕ್ಕೆ ಬೇಕಾದ ಮಹತ್ವದ ವಿಚಾರಗಳು ಕೃತಿಯಲ್ಲಿವೆ. ಸಾಹಿತ್ಯದ ದೃಷ್ಟಿಯಿಂದ ಅನುಭಾವಿ ನೆಲೆಯಿಂದ ಹಾಗೂ ಸಾಮಾಜಿಕ ಹಿನ್ನೆಲೆಯಲ್ಲೂ ಮಹತ್ವ ಪಡೆಯುವ ಕೃತಿಯಿದು. ಅಧ್ಯಯನ ಯೋಗ್ಯ ಸಂಗ್ರಹಪೂರ್ಣ ಕೃತಿಗಳ ಗುಚ್ಛ ಎನ್ನಲಡ್ಡಿಯಿಲ್ಲ.

ಬಸವ ಗೀತೆ
ಸತ್ಯ ಸಂವಾದ
ಲೇ: ಬಸವರಾಜ ಸ್ವಾಮಿ
ಪ್ರ: ಶ್ರೀ ಬಸವ ಸೇವಾ ಪ್ರತಿಷ್ಠಾನ, ರಾಯಚೂರು
ಮೊ: 99805 53750

ವಸ್ತುಸ್ಥಿತಿ ಮತ್ತು ಸ್ಥಿತ್ಯಂತರದ ಹಾದಿ ತೋರುವ ಕಥೆಗಳು
11 ಪುಟ್ಟ ಕಥೆಗಳ ಸಂಕಲನ. ಮನಸ್ಸಿನಾಳದ ತೀವ್ರ ಹಾಗೂ ಅತ್ಯಂತ ಮಾನವೀಯ ಬಂಧಗಳನ್ನು ಪರಿಚಯಿಸುವ ಕತೆಗಳು ಇಲ್ಲಿವೆ. ಬಡತನ ಮತ್ತು ಧರ್ಮ ಜಾತಿಯ ಪೂರ್ವಾಗ್ರಹ, ಲಿಂಗತ್ವ, ಸಮಾಜದ ಅನ್ಯಾಯಗಳು, ಒಂಟಿತನ, ಕಾಳಜಿ, ಸ್ನೇಹ ಪ್ರೇಮದ ಹಂಬಲಗಳು ಈ ಕತೆಗಳಲ್ಲಿ ಹಾಸುಹೊಕ್ಕಾಗಿದೆ. ಸಂಬಂಧಗಳ ಆಳಕ್ಕಿಯುವ ಕತೆಗಳು ಕುಟುಂಬಗಳ ಸಂಕೀರ್ಣತೆಯನ್ನು ತೋರಿಸುತ್ತದೆ. ಜಾತಿ ಲಿಂಗ ಅಥವಾ ಲೈಂಗಿಕ ಆಯ್ಕೆಗಳಲ್ಲಿ ಭಿನ್ನವಾಗಿರುವ ಕಾರಣಕ್ಕೆ ಎದುರಿಸಬೇಕಾದ ದೌರ್ಜನ್ಯಗಳನ್ನು ನಮ್ಮ ಮುಂದೆ ಬಿಚ್ಚಿಡುತ್ತದೆ (ತಾಹಾನ ಪತ್ರಗಳು). ಹಾಗೆಯೇ ಸ್ಪರ್ಧೆಗಳ ತೀರ್ಮಾನಗಳನ್ನು ಅಲ್ಲಿನ ಮಾನದಂಡ ಹಾಗೂ ಒತ್ತಡಗಳನ್ನು ಹೇಳುವ ಕಥೆಯೂ ಇದೆ (ಬಿಂಬದ ಬೆಳಕಿನ ಹಾದಿ). ಲೇಖಕರು ಈ ಕಥೆಗಳ ಮೂಲಕ ಬದಲಾಗುತ್ತಿರುವ ಸಮಾಜ, ಚಿಂತನೆಗಳು, ಯುವಜನಾಂಗ ಹೀಗೆ ಎಲ್ಲವನ್ನೂ ತಮ್ಮ ಕಥೆಗಳಲ್ಲಿ ತಂದಿದ್ದಾರೆ.

ಕೃತಿ: ಚೂರು ಬಿಂಬ
ಲೇ: ದಾದಾಪೀರ್ ಜೈಮನ್
ಪ್ರ: ಕಾವ್ಯಮನೆ ಪ್ರಕಾಶನ
ದೂ: 8722039612

ಓದಿ ಹಗುರಾಗಲು ಲಘು ದಾಟಿಯ ಕಥೆಗಳು

ಈ ಕೃತಿ ಹೈಸ್ಕೂಲು ಮತ್ತು ನಂತರದ ವಯೋಮಾನದವರ ಬಗ್ಗೆ ಬರೆದ ಕಥೆಗಳು. ಇಲ್ಲಿ ಮಗುತನದ ಮುಗ್ಧತೆ, ಅದರ ಆಲೋಚನೆಗಳು ಸಹಜವಾಗಿ ಅರಳಿ ಕತೆಗಳಾಗಿವೆ. ‘ಮೊಸಳೆ ಗೆಳೆಯರು’ ಕತೆಯಲ್ಲಿ ವೀರವಿಕ್ರಮ ತಂಡದ ರವಿ, ಶಶಿ, ಬಸು, ಮಾಧವ ಕಿರಣ ಮತ್ತು ರಹಮತ್ ಎಂಬ ಪಾತ್ರಗಳಿವೆ. ಕಲರಿಪಟ್ ಹುಡುಗಿಯರು ಕಥೆಯಲ್ಲಿ ಸಪ್ತ ಗೆಳತಿಯರಾದ ಆರುಷಿ, ಬೇಲಾ, ಚಿತ್ರಾ, ದೇವಿಕಾ ಇಶಾ, ಫರೀದಾ ಮತ್ತು ಗಾಯತ್ರಿ ಮುಖ್ಯ ಪಾತ್ರಗಳು. ಮೊದಲ ಕತೆಯ ಪಾತ್ರಧಾರಿ ರವಿ ತನ್ನ ಗೆಳೆಯರೊಡನೆ ಚಾರಣ ಹಾಗೂ ಈಜುವುದಕ್ಕೆ ಅಲ್ಲಿ ಇಲ್ಲಿ ಹೋಗುತ್ತಿರುತ್ತಾನೆ. ಹಾಗೆ ಒಮ್ಮೆ ಈಜಲು ಹೋದಾಗ ರವಿಯ ಕಾಲನ್ನು ಮೊಸಳೆ ಹಿಡಿಯುತ್ತದೆ ಆಗ ಅವನ ಗೆಳೆಯರು ಹೆದರದೆ ಅವನ್ನು ಹೇಗೆ ರಕ್ಷಿಸಿದರು ಎಂಬುದು ಸ್ವಾರಸ್ಯ.

ಎರಡನೇ ಕತೆಯ ಏಳು ಹುಡುಗಿಯರೂ ಸಾಹಸಪ್ರಿಯರು. ಶಾಲೆಯ ರಜಾಕಾಲದಲ್ಲಿ ಬೆಟ್ಟ ಗುಡ್ಡ ಗುಹೆ ಗೋಪುರ ಎಂದು ಅಲೆಯುವವರು. ಹಾಗೆ ಒಮ್ಮೆ ಅಲೆಯುವಾಗ ಒಂದು ಗುಹೆಯಲ್ಲಿ ಕಳ್ಳರನ್ನು ನೋಡಿ ಹೆದರದೆ ಅವರೊಡನೆ ಸಾಹಸದಿಂದ ಕಾದಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಹೇಗೆ ಎಂಬುದೇ ಇವರ ಕತೆಯ ಹೂರಣ. ಸ್ವಾರಸ್ಯವಾದ ಈ ಕತೆಗಳನ್ನು ಹಗುರಾದ ಮನಸ್ಸಲ್ಲಿ ಓದಿ ಆನಂದಿಸಬಹುದು.

ಕೃತಿ: ಮೊಸಳೆ ಗೆಳೆಯರು ಮತ್ತು ಕಲರಿಪಟ್ ಹುಡುಗಿಯರು
ಲೇ: ಶಿವಾನಂದ ಹೊಂಬಳ
ಪ್ರ: ನಲುಮೆ ಪ್ರಕಾಶನ
ದೂ: 9632441852