ಭೂತಾನ್‌ನ ಮಾಜಿ ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷ್ಣುವಿನ 'ಕಲ್ಕಿ' ಅವತಾರ ಎಂದು ಬಣ್ಣಿಸಿದ್ದಾರೆ. ಮೋದಿಯವರ 'ವಿಕಸಿತ ಭಾರತ' ಪರಿಕಲ್ಪನೆ ಮತ್ತು 'B4B' ಮೂಲಕ ಭೂತಾನ್ ಅಭಿವೃದ್ಧಿಗೆ ಅವರು ನೀಡಿದ ಅಪಾರ ಕೊಡುಗೆಗಳನ್ನು ಈ ಲೇಖನದಲ್ಲಿ ಶ್ಲಾಘಿಸಲಾಗಿದೆ.
ವರದಿ: ಕನ್ನಡ ಪ್ರಭ
ಭೂತಾನ್‌ನ ಚುನಾವಣೆಯಲ್ಲಿ ನನ್ನ ಪಕ್ಷವು ಹತ್ತು ತಿಂಗಳ ಹಿಂದೆಯೇ ಸೋತು ನಿರ್ಗಮಿಸಿತ್ತು ಮತ್ತು ಸಂಸತ್ತಿನಲ್ಲಿ ಅದಕ್ಕೆ ಯಾವುದೇ ಪ್ರಾತಿನಿಧ್ಯವಿರಲಿಲ್ಲ. ನಾನು ಪ್ರಧಾನಿಯೂ ಆಗಿರಲಿಲ್ಲ ಅಥವಾ ಸಂಸದನೂ ಆಗಿರಲಿಲ್ಲ; ಹೀಗಾಗಿ, ಒಬ್ಬ ಸಾಮಾನ್ಯ ನಾಗರಿಕನಾಗಿಯೇ ನಾನು ಪ್ರಧಾನಿ ಮೋದಿಯವರನ್ನು ಭೇಟಿಯಾದೆ. ನನ್ನ ಅಧಿಕಾರಾವಧಿಯಲ್ಲಿ ಅವರು ನೀಡಿದ ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸಿದೆ. ಅಲ್ಲದೆ, ಅವರು ನನಗೆ ಸದಾ ಹಿರಿಯಣ್ಣನಂತೆ ಇರುತ್ತಾರೆ ಎಂದು ನಾನು ಅವರಿಗೆ ಹೇಳಿದೆ; ನಂತರ ನಾನು ಅವರಿಗೆ ಇನ್ನೊಂದು ವಿಷಯ ಹೇಳಿದೆ: ನಾನು ಅವರನ್ನು ವಿಷ್ಣುವಿನ ಅವತಾರವಾಗಿ ಕಂಡೆ. ನಮ್ಮ ಈ ಭೂಭಾಗದಲ್ಲಿ, ಜ್ಞಾನಿಗಳಾದ ಆಡಳಿತಗಾರರನ್ನು ದೀರ್ಘಕಾಲದಿಂದಲೂ ಹಾಗೆಯೇ ಪರಿಗಣಿಸಲಾಗುತ್ತದೆ ಎಂದು ನಾನು ವಿವರಿಸಿದೆ. ನನ್ನ ಮಾತುಗಳು ನನಗೇ ಆಶ್ಚರ್ಯ ಉಂಟುಮಾಡಿದವು. ಆನಂತರ, ಆ ಮಾತುಗಳನ್ನು ಆಡುವಂತೆ ನನ್ನನ್ನು ಪ್ರೇರೇಪಿಸಿದ್ದು ಯಾವುದು ಎಂದು ನಾನು ಯೋಚಿಸಿದೆ. ನಾನು ಭಾವಾವೇಶಕ್ಕೆ ಒಳಗಾಗಿದ್ದೆನೇ? ನಾನು ತಪ್ಪಾಗಿ ಹೇಳಿದ್ದೇನೆಯೇ? ನಂತರ, ನಾನು ಆಡಿದ ಮಾತುಗಳ ಬಗ್ಗೆ ಚಿಂತಿಸಿದಾಗ, ಅದಕ್ಕೆ ಉತ್ತರ ಸ್ಪಷ್ಟವಾಯಿತು. ಪ್ರಧಾನಿ ಮೋದಿಯವರನ್ನು ವಿಷ್ಣುವಿನ ಅವತಾರವೆಂದು ಕಂಡಿದ್ದು ಸರಿಯಾಗಿಯೇ ಇತ್ತು.
ನಾನು ಅವರಲ್ಲಿ ಸಾರ್ವಜನಿಕ ಸೇವಕನನ್ನು ಸಹ ಗಮನಿಸಿದೆ: ಶಿಸ್ತುಬದ್ಧ, ಶಕ್ತಿಯುತ ಮತ್ತು ಅಸಾಧಾರಣ ರೀತಿಯ ಕಠಿಣ ಪರಿಶ್ರಮಿ. ಬಹಳ ಮುಖ್ಯವಾಗಿ, ಅವರು ಭಾರತೀಯರಲ್ಲಿ ತಮ್ಮ ಹಾಗೂ ತಮ್ಮ ದೇಶದ ಬಗ್ಗೆ ಪ್ರಬಲ ನಂಬಿಕೆ ಜಾಗೃತಗೊಳಿಸಿದರು.
ಮೋದಿ ಅವರ ಪ್ರಬುದ್ಧ ನಾಯಕತ್ವ:
ನನ್ನ ದೃಷ್ಟಿಯಲ್ಲಿ, ನಿಸ್ವಾರ್ಥ ಸೇವೆಯ ಮೂಲಕ ವಿವೇಕ, ಸಹಾನುಭೂತಿ ಮತ್ತು ಧೈರ್ಯ- ಈ ಮೂರು ಗುಣಗಳನ್ನು ಪ್ರಕಟಪಡಿಸುವುದೇ ಪ್ರಬುದ್ಧ ನಾಯಕತ್ವ. ಇಂದು ಪ್ರಧಾನಿ ಮೋದಿಯವರ ‘ವಿಕಸಿತ ಭಾರತ’ದ ದೃಷ್ಟಿಕೋನದಲ್ಲಿ ಈ ಗುಣಗಳು ಅತ್ಯಂತ ಸ್ಪಷ್ಟವಾಗಿ ಒಗ್ಗೂಡಿರುವುದನ್ನು ನಾನು ಕಾಣುತ್ತಿದ್ದೇನೆ. ಸ್ವಾತಂತ್ರ್ಯದ ನಂತರದ ಸರಿಯಾಗಿ ಒಂದು ಶತಮಾನದ ಅವಧಿಯಲ್ಲಿ, ಅಂದರೆ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದು. ‘ವಿಕಸಿತ ಭಾರತ’ದ ಮೂಲಕ ಅವರು ಆ ದೃಷ್ಟಿಕೋನಕ್ಕೆ ಒಂದು ಹೆಸರು, ಒಂದು ಗಡುವು ಮತ್ತು ಒಂದು ರಾಷ್ಟ್ರೀಯ ಅಭಿಯಾನದ ಸ್ವರೂಪ ನೀಡಿದ್ದಾರೆ.
ಸಹಾನುಭೂತಿಯು ಇತರರ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ ಮತ್ತು ವಿಕಸತಿ ಭಾರತ ನಿಖರವಾಗಿ ಅದನ್ನು ಪ್ರತಿಬಿಂಬಿಸುತ್ತದೆ: ಬಲಿಷ್ಠ, ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ದೇಶಕ್ಕಾಗಿ 1.4 ಶತಕೋಟಿ ಭಾರತೀಯರ ಸಾಮೂಹಿಕ ಮಹತ್ವಾಕಾಂಕ್ಷೆ. ‘ವಿಕಸಿತ ಭಾರತ’ ಎಂಬುದು ಕೇವಲ ಒಬ್ಬ ನಾಯಕನಿಗೆ ಅಥವಾ ಒಂದು ಚುನಾವಣಾ ಅವಧಿಗೆ ಸೀಮಿತವಾದ ವಿಷಯವಲ್ಲ; ಇದು ಪ್ರಸ್ತುತ ಹಾಗೂ ಮುಂದಿನ ಪೀಳಿಗೆಗೆ ಸಂಬಂಧಿಸಿದ ವಿಷಯವಾಗಿದೆ. ‘ಸಬ್ ಕಾ ಪ್ರಯಾಸ್’ (ಎಲ್ಲರ ಪ್ರಯತ್ನ) ಮೂಲಕ, ಪ್ರಧಾನಿ ಮೋದಿ ಅವರು ಪ್ರತಿಯೊಬ್ಬ ಭಾರತೀಯರಿಗೂ ಈ ಅಭಿಯಾನವನ್ನು ಕೇವಲ ಬೆಂಬಲಿಸುವುದಲ್ಲದೆ, ಅದರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆಯೂ ಕರೆ ನೀಡಿದ್ದಾರೆ.
‘ವಿಕಸಿತ ಭಾರತ’ದ ಪರಿಕಲ್ಪನೆಯು ಭಾರತದ ಗಡಿಗಳನ್ನು ಮೀರಿಯೂ ಮಹತ್ವದ್ದಾಗಿದೆ. ಪ್ರಧಾನಿ ಮೋದಿ ಅವರು ತಮ್ಮ ಅಂತಾರಾಷ್ಟ್ರೀಯ ಬಾಂಧವ್ಯಗಳಲ್ಲಿ ಭಾರತದ ನೆರೆಯ ರಾಷ್ಟ್ರಗಳಿಗೆ ಸದಾ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರು ‘ಗ್ಲೋಬಲ್ ಸೌತ್’ (ಜಾಗತಿಕ ದಕ್ಷಿಣ ರಾಷ್ಟ್ರಗಳ ಸಮೂಹ) ಹಿತಾಸಕ್ತಿಗಳನ್ನು ಬಲವಾಗಿ ಪ್ರತಿಪಾದಿಸಿದ್ದಾರೆ; ಇದಕ್ಕಾಗಿ ‘ವಾಯ್ಸ್ ಆಫ್ ಗ್ಲೋಬಲ್ ಸೌತ್’ ಶೃಂಗಸಭೆಗಳನ್ನು ಆಯೋಜಿಸುವುದರ ಜೊತೆಗೆ, ಆಫ್ರಿಕನ್ ಒಕ್ಕೂಟವನ್ನು ಜಿ20 ಗುಂಪಿನಲ್ಲಿ ಶಾಶ್ವತ ಸದಸ್ಯರನ್ನಾಗಿ ಸೇರ್ಪಡೆಗೊಳಿಸುವ ಯಶಸ್ವಿ ಪ್ರಯತ್ನಕ್ಕೂ ನೇತೃತ್ವ ವಹಿಸಿದ್ದಾರೆ. ಭಾರತವು ಹೆಚ್ಚು ಬಲಶಾಲಿಯಾದಂತೆ, ಹೆಚ್ಚಿನದನ್ನು ಅದು ಸಾಧಿಸಬಲ್ಲದು. ಅಭಿವೃದ್ಧಿ ಹೊಂದಿದ ಭಾರತವು ವಿಶಾಲವಾದ ಮಾರುಕಟ್ಟೆಯನ್ನು ಒದಗಿಸುತ್ತದೆ, ಹಂಚಿಕೊಳ್ಳಲು ಹೆಚ್ಚಿನ ಬಂಡವಾಳ ಮತ್ತು ತಂತ್ರಜ್ಞಾನವನ್ನು ಹೊಂದಿರುತ್ತದೆ ಹಾಗೂ ಈ ಪ್ರದೇಶ ಮತ್ತು ‘ಗ್ಲೋಬಲ್ ಸೌತ್’ನ (ಜಾಗತಿಕ ದಕ್ಷಿಣದ) ಹಿತಾಸಕ್ತಿಗಳನ್ನು ಪ್ರತಿಬಿಂಬಿಸುವಂತಹ ಜಾಗತಿಕ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಹೆಚ್ಚಿನ ಪ್ರಭಾವವನ್ನು ಬೀರುವ ಶಕ್ತಿಯನ್ನು ಹೊಂದುತ್ತದೆ.
ವಿಕಸಿತ ಭೂತಾನ್‌ಗೆ ಬದ್ಧತೆ:
ನನ್ನ ಮಟ್ಟಿಗೆ ಇದು ಹೆಚ್ಚು ವೈಯಕ್ತಿಕವಾದ ವಿಷಯವಾಗಿದೆ. ‘ವಿಕಸಿತ ಭಾರತ’ ಎಂದರೆ ‘ವಿಕಸಿತ ಭೂತಾನ್’ ಎಂದರ್ಥ. 2014ರ ಜೂನ್‌ನಲ್ಲಿ, ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ, ಪ್ರಧಾನಿ ಮೋದಿ ತಮ್ಮ ಮೊದಲ ವಿದೇಶ ಪ್ರವಾಸಕ್ಕಾಗಿ ಭೂತಾನ್ ಆಯ್ಕೆ ಮಾಡಿಕೊಂಡರು. ಆ ಸಮಯದಲ್ಲಿ ನಾನು ಪ್ರಧಾನ ಮಂತ್ರಿಯಾಗಿದ್ದೆ ಮತ್ತು ಅವರನ್ನು ಸ್ವಾಗತಿಸುವ ಸೌಭಾಗ್ಯ ನನಗೆ ದೊರೆತಿತ್ತು. ಆ ಭೇಟಿಯ ಸಂದರ್ಭದಲ್ಲಿ, ಅವರು ನಮ್ಮ ಸಂಬಂಧವನ್ನು ಮೂರು ಅಕ್ಷರಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಿದರು.B4B: ಭಾರತಕ್ಕಾಗಿ ಭೂತಾನ್; ಭೂತಾನ್‌ಗಾಗಿ ಭಾರತ.
ಈ ನುಡಿಗಟ್ಟು ಸರಳವಾಗಿದ್ದರೂ ಆಳವಾದ ಅರ್ಥ ಹೊಂದಿದೆ. ಕಳೆದ ವರ್ಷಗಳಲ್ಲಿ, ಅವರು ಇದಕ್ಕೆ ಬದ್ಧರಾಗಿ ನಡೆದುಕೊಂಡಿದ್ದಾರೆ. ಅದಕ್ಕಾಗಿಯೇ, ನಮ್ಮ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಭಾರತ ನೀಡಿದ ನೆರವು, ನನ್ನ ಮೊದಲ ಸರ್ಕಾರವು ಮಹತ್ವಾಕಾಂಕ್ಷೆಯ ಅಭಿವೃದ್ಧಿ ಕಾರ್ಯಕ್ರಮವನ್ನು ಸಾಕಾರಗೊಳಿಸಲು ಸಹಕಾರಿಯಾಯಿತು. ಇದೇ ಕಾರಣಕ್ಕಾಗಿ, ಪ್ರಧಾನಿ ಮೋದಿ ಅವರು ನಮ್ಮ 12ನೇ ಯೋಜನೆಯ ಅವಧಿಯಲ್ಲೂ ಆ ಉದಾರ ಪಾಲುದಾರಿಕೆಯನ್ನು ಮುಂದುವರಿಸಿದರು. ಹಾಗಾಗಿಯೇ, 2024ರಲ್ಲಿ ನಾನು ಮತ್ತೆ ಅಧಿಕಾರಕ್ಕೆ ಬಂದಾಗ, ಅವರು ನಮ್ಮ 13ನೇ ಯೋಜನೆಗಾಗಿ ಭಾರತದ ಬೆಂಬಲವನ್ನು ದ್ವಿಗುಣಗೊಳಿಸಿ ₹10,000 ಕೋಟಿಗೆ ಏರಿಸಿದರು. ಇಂದು, ಶಾಲೆಗಳು ಮತ್ತು ಆಸ್ಪತ್ರೆಗಳು, ರಸ್ತೆಗಳು ಮತ್ತು ಸೇತುವೆಗಳು, ಜಲವಿದ್ಯುತ್ ಮತ್ತು ತಂತ್ರಜ್ಞಾನ ಹಾಗೂ ಕೃಷಿ ಮತ್ತು ಉದ್ಯಮಗಳ ಮೂಲಕ ಭೂತಾನ್‌ನಾದ್ಯಂತ ‘B4B’ (ಭೂತಾನ್-ಭಾರತ ಸಹಭಾಗಿತ್ವ) ಎದ್ದು ಕಾಣುತ್ತಿದೆ. ಆದರೆ ಗೆಲೆಫು ಮೈಂಡ್ಫುಲ್ನೆಸ್ ಸಿಟಿಯ ಬಗ್ಗೆ ಮಹಾರಾಜರ ದೃಷ್ಟಿಕೋನಕ್ಕೆ ಭಾರತ ನೀಡಿದ ಬೆಂಬಲದ ಪ್ರಮಾಣಕ್ಕೆ ಹೋಲಿಸಿದರೆ B4B ಬೇರೆಲ್ಲದಕ್ಕಿಂತ ಇಲ್ಲಿಯೇ ಹೆಚ್ಚು ಸಕಾಲಿಕವಾಗಿ ಪರಿಣಾಮಕಾರಿಯಾಗಿದೆ.
ನಾನು ಆಡಿದ ಮಾತುಗಳು ಸರಿ:
ಭೂತಾನ್‌ಗೆ ಪ್ರಧಾನಿ ಮೋದಿ ಅವರು ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ನಮ್ಮ ಅತ್ಯುನ್ನತ ಗೌರವವಾದ ‘ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ’ (Order of the Druk Gyalpo) ಪ್ರಶಸ್ತಿಯನ್ನು ಮಹಾರಾಜರು ಅವರಿಗೆ ಪ್ರದಾನ ಮಾಡಿದಾಗ ಎಲ್ಲಾ ಭೂತಾನ್ ಪ್ರಜೆಗಳೂ ಹರ್ಷಗೊಂಡರು. ಈ ಗೌರವವನ್ನು ಪಡೆದ ಮೊದಲ ಮತ್ತು ಏಕೈಕ ವಿದೇಶಿ ನಾಯಕ ಅವರಾಗಿದ್ದಾರೆ. ನನ್ನ ಮಟ್ಟಿಗೆ ಹೇಳುವುದಾದರೆ, ಅವರ ಪ್ರಭಾವವು ಅತ್ಯಂತ ವೈಯಕ್ತಿಕ ಮಟ್ಟದಲ್ಲಿಯೂ ಆಗಿದೆ. ಇಂದು, ಪ್ರಧಾನಿ ಮೋದಿ ಅವರು ಸರ್ಕಾರಿ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, 2019ರಲ್ಲಿ ನಡೆದ ಆ ಹಠಾತ್ ಸಂಭಾಷಣೆ ಹಾಗೂ 2024ರ ಮಾರ್ಚ್ 14ರಂದು ನಡೆದ ನಮ್ಮ ಮುಂದಿನ ಭೇಟಿಯ ನೆನಪುಗಳು ನನ್ನ ಮನಸ್ಸಿನಲ್ಲಿ ಮೂಡುತ್ತಿವೆ. ಅವರನ್ನು ವಿಷ್ಣುವಿನ ಅವತಾರವೆಂದು ನಾನು ಹೇಳಿದ್ದ ಐದು ವರ್ಷಗಳ ನಂತರದ ಭೇಟಿ ಅದು. ಐದು ವರ್ಷಗಳ ಹಿಂದೆ ನಾನು ಆಡಿದ ಮಾತುಗಳ ಬಗ್ಗೆ ದೀರ್ಘವಾಗಿ ಯೋಚಿಸಿದ್ದಾಗಿಯೂ, ಆಗ ನಾನು ತಪ್ಪಾಗಿ ಭಾವಿಸಿದ್ದೆನೇನೋ ಎಂದು ಸಂಶಯಗೊಂಡಿದ್ದನ್ನೂ ಅವರಿಗೆ ತಿಳಿಸಿದೆ. ಆದರೆ ಅಂತಿಮವಾಗಿ, ನಾನು ಹೇಳಿದ್ದು ಸರಿಯೇ ಆಗಿತ್ತು ಎಂಬ ನಿರ್ಧಾರಕ್ಕೆ ಬಂದಿದ್ದೆ. ವಿಷ್ಣುವಿನ ಕೊನೆಯ ಅವತಾರ-ಅವ್ಯವಸ್ಥೆಯನ್ನು ಹೋಗಲಾಡಿಸುವುದು, ಧರ್ಮವನ್ನು ಪುನಃ ಸ್ಥಾಪಿಸುವುದು ಮತ್ತು ನವಚೈತನ್ಯವನ್ನು ತರುವುದಕ್ಕೆ ಸಂಬಂಧಿಸಿದ ಅವತಾರ. ಕಲ್ಕಿ.



