ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ಸತತ 25 ವರ್ಷಗಳ ಅಧಿಕಾರ ಪೂರೈಸಿದ್ದಾರೆ. ಈ ಅಪರೂಪದ ಸಾಧನೆಗಾಗಿ ಕೇಂದ್ರ ಸಚಿವ ಸಂಪುಟವು ಅವರನ್ನು ಅಭಿನಂದಿಸಿ ನಿರ್ಣಯ ಅಂಗೀಕರಿಸಿದೆ. ಇದರ ನೆನಪಿಗಾಗಿ ಬಿಜೆಪಿ ದೇಶಾದ್ಯಂತ 'ಸೇವಾ ಸಂಕಲ್ಪ ಅಭಿಯಾನ' ಹಮ್ಮಿಕೊಂಡಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಅಧಿಕಾರದಲ್ಲಿ (ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ) ಅ,7ಕ್ಕೆ ಸರಿಯಾಗಿ 25 ವರ್ಷಗಳನ್ನು ಪೂರೈಸುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಯಾವುದೇ ಒಬ್ಬ ನಾಯಕನು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಸತತವಾಗಿ ಇಷ್ಟು ದೀರ್ಘಾವಧಿಗೆ ಕಾರ್ಯಾಂಗದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿರುವುದು ಅತ್ಯಂತ ಅಪರೂಪದ ರಾಜಕೀಯ ಮೈಲಿಗಲ್ಲಾಗಿದೆ.

ಮೋದಿ 2001ರ ಅ.7ರಂದು ಮೊದಲ ಬಾರಿಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಮ್ಮ ಆಡಳಿತಾತ್ಮಕ ಪಯಣ ಪ್ರಾರಂಭಿಸಿದ್ದರು. ನಂತರ ದೇಶದ ಪ್ರಧಾನಿ ಆಗುವ ಮೂಲಕ ಅವರು ಅಧಿಕಾರದಿಂದ ಈವರೆಗೆ ಒಂದು ದಿನವೂ ಕೆಳಗಿಳಿದಿಲ್ಲ.

ಮೋದಿ ಅವರ ಈ 25 ವರ್ಷಗಳ ಸಾರ್ವಜನಿಕ ಸೇವೆಯ ನೆನಪಿಗಾಗಿ, ಬಿಜೆಪಿ ದೇಶಾದ್ಯಂತ ಸೆ,17ರಿಂದ (ಅವರ ಜನ್ಮದಿನ) ಅ.17 ರವರೆಗೆ 1 ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ ಎಂಬ ವಿಶೇಷ ಜನಸಂಪರ್ಕ ಮತ್ತು ಸ್ವಯಂಸೇವಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

2001ರಲ್ಲಿ ಮುಖ್ಯಮಂತ್ರಿ

ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ 2001ರ ಅ.7ರಂದು ಪ್ರಮಾಣವಚನ ಸ್ವೀಕರಿಸಿದರು. ಆ ನಂತರ ಅವರು ಸತತ 13 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದರು. ಮೂಲಸೌಕರ್ಯ, ಕೈಗಾರಿಕೆ ಮತ್ತು ಜಲ ನಿರ್ವಹಣೆಗೆ ಒತ್ತು ನೀಡಿ, ಅಭಿವೃದ್ಧಿಯಲ್ಲಿ ‘ಗುಜರಾತ್ ಮಾದರಿ’ ಎಂಬುದನ್ನು ಜನಜನಿತಗೊಳಿಸಿದರು.

2014ರಲ್ಲಿ ಪ್ರಧಾನಿ

2013ರಲ್ಲಿ, ಮೋದಿ ಅವರನ್ನು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಒಂದು ವರ್ಷದ ನಂತರ ಅಂದರೆ 2014ರಲ್ಲಿ, ಬಿಜೆಪಿ ಲೋಕಸಭೆಯಲ್ಲಿ 282 ಸ್ಥಾನಗಳನ್ನು ಗೆದ್ದು ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಗುಜರಾತ್‌ನಿಂದ ದೆಹಲಿಗೆ ಮೋದಿಯವರ ಆಗಮನವು ರಾಜ್ಯ ಮಟ್ಟದ ಆಡಳಿತದಲ್ಲಿ ಭಾರಿ ಬದಲಾವಣೆ ತಂತು. ನಂತರ 2019 ಮತ್ತು 2024ರ ಸಾರ್ವತ್ರಿಕ ಚುನಾವಣೆಗಳಲ್ಲೂ ಸತತ ಜಯಗಳಿಸಿ ಸದ್ಯ ಮೂರನೇ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೋದಿ ಆಡಳಿತದ ಕ್ರಮಗಳು

ಮೋದಿ ಆಡಳಿತದಲ್ಲಿ ಜಿಎಸ್‌ಟಿ ಸುಧಾರಣೆ, ಕಪ್ಪು ಹಣದ ಹಾವಳಿ ನಿವಾರಣೆಗೆ ನೋಟು ರದ್ದತಿ, ಡಿಜಿಟಲ್‌ ಪಾವತಿ- ಮುಂತಾದ ಕ್ರಾಂತಿಕಾರಿ ಕ್ರಮಗಳು ಸದ್ದು ಮಾಡಿವೆ.

ಇದೇ ವೇಳೆ, 2016 ರಲ್ಲಿ ಉರಿ ದಾಳಿಯ ನಂತರ, ಭಾರತವು ಗಡಿಯಾಚೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ , 2019 ರಲ್ಲಿ ಪುಲ್ವಾಮಾ ದಾಳಿಯ ನಂತರ, ಭಾರತವು ಬಾಲಕೋಟ್‌ ಮೇಲೆ ನಡೆಸಿದ ವಾಯುದಾಳಿ, 2025ರಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನಡೆಸಿದ ಆಪರೇಷನ್ ಸಿಂದೂರ- ಇವು ದೇಶ-ವಿದೇಶಗಳಲ್ಲಿ ಸಂಚಲನ ಮೂಡಿಸಿದವು.

ಇನ್ನು ರಾಜತಾಂತ್ರಿಕವಾಗಿ ವಿವಿಧ ದೇಶಗಳ ಜತೆ ಭಾರತ ಸಮತೋಲಿತ ಸಂಬಂಧ ಹೊಂದಿತು. ಕೋವಿಡ್‌ ಅವಧಿಯಲ್ಲಿ ಮೋದಿ ಕೈಗೊಂಡ ರೋಗ ನಿಯಂತ್ರಣ ಹಾಗೂ ಆರ್ಥಿಕ ರಕ್ಷಣಾ ಕ್ರಮಗಳು ಬಹು ಮೆಚ್ಚುಗೆ ಪಡೆದವು.

ಸಾರ್ಥಕ 25 ವರ್ಷ ಸೇವೆ: ಮೋದಿಗೆ ಸಂಪುಟ ಅಭಿನಂದನೆ

ಕಳೆದ 25 ವರ್ಷಗಳಲ್ಲಿ ಪ್ರಧಾನಿಯಾಗಿ ಮತ್ತು ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರ ಸಾಧನೆಗಳನ್ನು ಶ್ಲಾಘಿಸುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿದೆ.

ಈ ನಿರ್ಣಯವು 2001ರ ಅ.7ರಿಂದ 2026ರ ಅ.7ರವರೆಗಿನ ಮೋದಿಯವರ ನಿರಂತರ ಸಾರ್ವಜನಿಕ ಸೇವೆಯನ್ನು ಗುರುತಿಸುತ್ತದೆ ಹಾಗೂ ಅವರ ವಿವಿಧ ನಿರ್ಧಾರಗಳನ್ನು ಪಟ್ಟಿ ಮಾಡಿದೆ. ‘ಈ ನಿರ್ಧಾರಗಳು ಹಾಗೂ ಮೋದಿ ಅವರ ದೀರ್ಘಕಾಲೀನ ಸೇವೆಗಳು ಸಾಮಾನ್ಯ ಜನರಿಗೆ ಲಾಭ ತಂದಿವೆ ಮತ್ತು ದೇಶಕ್ಕೆ ಆತ್ಮವಿಶ್ವಾಸವನ್ನು ನೀಡಿವೆ. ಭಾರತೀಯ ಪ್ರಜಾಪ್ರಭುತ್ವದ ಬಲವರ್ಧನೆಗೆ ಇದು ಒಂದು ಎದ್ದುಕಾಣುವ ಉದಾಹರಣೆಯಾಗಿದೆ’ ಎಂದಿದೆ.