ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಸಂಸ್ಥೆಯು ಭಾರತದಲ್ಲಿ ಕಾರ್ಯನಿರ್ವಹಿಸಲು ಇತರ ದೇಶಗಳಂತೆ ಭದ್ರತಾ ಷರತ್ತುಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ಜಿಯೋ ಪರ ಒಲವು ತೋರಲಾಗುತ್ತಿದೆ ಎಂಬ ಮಸ್ಕ್ ಅವರ ಆರೋಪವನ್ನು ತಳ್ಳಿಹಾಕಿರುವ ರಾಜೀವ್ ಚಂದ್ರಶೇಖರ್, ಸಾಮಾಜಿಕ ಜಾಲತಾಣದ ಪ್ರಭಾವದಿಂದ ಭಾರತದ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

165 ದೇಶಗಳಂತೆ ಇಲ್ಲೂ ನಿಯಮ ಪಾಲಿಸಲಿ । ಸ್ಟಾರ್‌ಲಿಂಕ್‌ನಂತೆ ಇಲ್ಲಿ ಹಲವರ ಸರದಿ ಇದೆ

ರಾಜೀವ್‌ ಚಂದ್ರಶೇಖರ್‌ ಮಾಜಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ

ಭದ್ರತಾ ಅನುಮತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಇತರ 165 ದೇಶಗಳಲ್ಲಿ ಪೂರೈಸಿರುವಂತೆಯೇ ಭಾರತದ ಷರತ್ತುಗಳನ್ನೂ ಪೂರೈಸಿ. ಆಗ ಸ್ಟಾರ್‌ಲಿಂಕ್ ಭಾರತದಲ್ಲಿ ಕಾರ್ಯನಿರ್ವಹಿಸಬಹುದು. ಒಬ್ಬ ಸಂಸ್ಥಾಪಕನ ಸಾಮಾಜಿಕ ಮಾಧ್ಯಮದ ಪ್ರಭಾವದಿಂದ ನಿಯಂತ್ರಣಾತ್ಮಕ ಪ್ರಕ್ರಿಯೆಯನ್ನು ವೇಗಗೊಳಿಸಲು ಸಾಧ್ಯವಾದರೆ, ಅದನ್ನು ಪ್ರಕ್ರಿಯೆ ಎನ್ನಲಾಗುವುದಿಲ್ಲ. ಅದು ವಿಶೇಷ ಅನುಕೂಲ ನೀಡಿದಂತಾಗುತ್ತದೆ. ಭಾರತ ಇಂತಹ ತಂತ್ರಗಳ ಆಧಾರದಲ್ಲಿ ನಡೆಯುವುದಿಲ್ಲ.

ಎಲಾನ್ ಮಸ್ಕ್ ಈ ಕಾಲದ ಗಮನಾರ್ಹ ತಂತ್ರಜ್ಞಾನ ಉದ್ಯಮಿಗಳಲ್ಲಿ ಒಬ್ಬರು. ಸ್ಟಾರ್‌ಲಿಂಕ್‌ ನಿಜಕ್ಕೂ ಉಪಗ್ರಹ ಎಂಜಿನಿಯರಿಂಗ್‌ನ ಅದ್ಭುತ ಸಾಧನೆ. ಆದರೆ, ಭಾರತವು ‘ಸ್ವಜನಪಕ್ಷಪಾತದ ಬಂಡವಾಳಶಾಹಿಗಳನ್ನು’ (ಕ್ರೋನಿ ಕ್ಯಾಪಿಟಲಿಸ್ಟ್‌ಗಳನ್ನು) ರಕ್ಷಿಸುತ್ತಿದೆ ಎಂದು ಅ. 8ರಂದು ಅವರು ಮಾಡಿರುವ ಆರೋಪವು ವಾಸ್ತವಾಂಶ, ನಿರೂಪಣೆ ಹಾಗೂ ಕಾರ್ಯತಂತ್ರದ ದೃಷ್ಟಿಯಿಂದ ತಪ್ಪು.

ನಾನು ಸ್ಟಾರ್‌ಲಿಂಕ್ ಬಳಸಿದ್ದೇನೆ. ಅದೊಂದು ಅದ್ಭುತ ತಂತ್ರಜ್ಞಾನ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇಲ್ಲಿ ಪ್ರಶ್ನೆಯಿರುವುದು, ‘ಭಾರತದಲ್ಲಿ ನಿಯಮ ಪಾಲನೆಗಿಂತ ಹೆಚ್ಚು ಸ್ವಜನಪಕ್ಷಪಾತಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ಮಸ್ಕ್ ಮಾಡಿದ ಪೋಸ್ಟ್‌ನಲ್ಲಿರುವ ವಾದದ ಬಗ್ಗೆ. ವಾಸ್ತವದಲ್ಲಿ ಅವರ ಈ ವಾದಕ್ಕೆ ಯಾವುದೇ ಆಧಾರ ಇಲ್ಲ.

ನಿರ್ಲಕ್ಷಿತ ವಾಸ್ತವಾಂಶಗಳು:

ಭಾರತದಲ್ಲಿ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್ ಸೇವೆ ನೀಡಲು ಪರವಾನಗಿಗಾಗಿ ಕಾಯುತ್ತಿರುವ ಏಕೈಕ ಕಂಪನಿ ಸ್ಟಾರ್‌ಲಿಂಕ್ ಅಲ್ಲ. ರಿಲಯನ್ಸ್ ಜಿಯೋದ ಉಪಗ್ರಹ ಸೇವಾ ಸಂಸ್ಥೆ ಜಿಯೋ ಸ್ಯಾಟ್‌ಕಾಮ್ ಮತ್ತು ಭಾರ್ತಿ ಏರ್‌ಟೆಲ್‌ನ ಯುಟೆಲ್‌ಸ್ಯಾಟ್ ಒನ್‌ವೆಬ್ ಸೇರಿದಂತೆ ಒಟ್ಟು 3 ಕಂಪನಿಗಳು ಸನ್ನದಿಗೆ ಕಾಯುತ್ತಿವೆ. ಈ 3 ಸಂಸ್ಥೆಗಳು ಪ್ರಕ್ರಿಯೆಯ ಒಂದೇ ಹಂತದಲ್ಲಿವೆ. ಮೊದಲು ಇವುಗಳ ಭದ್ರತಾ ಅನುಮತಿ ಪರಿಶೀಲನೆ ಪೂರ್ಣಗೊಳ್ಳಬೇಕು. ನಂತರ ಸ್ಪೆಕ್ಟ್ರಮ್ ಹಂಚಿಕೆಯಾಗುವುದು.

ರಿಲಯನ್ಸ್ ಜಿಯೋವನ್ನು ರಕ್ಷಿಸುವ ಉದ್ದೇಶದಿಂದ ಸ್ವಜನಪಕ್ಷಪಾತ ನಡೆಯುತ್ತಿದೆ ಎಂದು ಮಸ್ಕ್‌ ಆರೋಪಿಸಿದ್ದಾರೆ. ಆದರೆ ಜಿಯೋ ಸ್ಯಾಟ್‌ಕಾಮ್ ಕೂಡ ಸ್ಟಾರ್‌ಲಿಂಕ್‌ನ ಸಾಲಲ್ಲೇ ನಿಂತು ಅನುಮತಿಗಾಗಿ ಕಾಯುತ್ತಿದೆ ಮತ್ತು ಎರಡೂ ಸಂಸ್ಥೆಗಳಿಗೆ ಒಂದೇ ನಿಯಮಗಳು ಅನ್ವಯಿಸುತ್ತವೆ. ಹೀಗಾಗಿ, ಮಸ್ಕ್‌ರ ವಾದ ಅರ್ಥಹೀನವಾಗುತ್ತದೆ.

ಭಾರತದ ಕಾನೂನಿನ ಪ್ರಕಾರ, ದೇಶದಲ್ಲಿ ಉಪಗ್ರಹ ಆಧರಿತ ದೂರಸಂಪರ್ಕ ಸೇವೆ ಒದಗಿಸುವ ಯಾವುದೇ ಸಂಸ್ಥೆಯು ಹಲವು ಭದ್ರತಾ ಷರತ್ತುಗಳನ್ನು ಪೂರೈಸಬೇಕು. ಇವುಗಳಲ್ಲಿ ಕಾನೂನುಬದ್ಧ ಕಣ್ಗಾವಲು ಮತ್ತು ಸಂವಹನಗಳ ತಡೆಹಿಡಿಯುವ ಸಾಮರ್ಥ್ಯ, ನೆಟ್‌ವರ್ಕ್ ನೋಡ್‌ಗಳು ಹಾಗೂ ಭೂಸ್ಥಳೀಯ ಕೇಂದ್ರಗಳ ಪರಿಶೀಲನೆ ಮತ್ತು ಅನುಮತಿಯಿಲ್ಲದೆ ಭಾರತೀಯ ಬಳಕೆದಾರರ ದತ್ತಾಂಶವನ್ನು ವಿದೇಶಿ ಪ್ರದೇಶಗಳ ಮೂಲಕ ರವಾನಿಸಲಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸೇರಿವೆ. ಭಾರತದಲ್ಲಷ್ಟೇ ಅಲ್ಲ, ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಸಂವಹನ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುವ ಬಹುತೇಕ ಎಲ್ಲ ದೇಶಗಳಲ್ಲಿಯೂ ಇಂತಹುದೇ ನಿಯಮಗಳಿವೆ.

ಈ ನಿಯಮಗಳು ಕಟ್ಟುನಿಟ್ಟೇಕೆ?:

ಉಪಗ್ರಹ ಬ್ರಾಡ್‌ಬ್ಯಾಂಡ್‌ಗಳು ಭೂಮಿಯ ಮೇಲಿನ ಸಾಂಪ್ರದಾಯಿಕ ದೂರಸಂಪರ್ಕ ಸೇವೆಗಳಂತಲ್ಲ. ಮೊಬೈಲ್ ಟವರ್‌ಗಾದರೆ ನಿಗದಿತ, ಪರಿಶೀಲಿಸಬಹುದಾದ ಭೌತಿಕ ಸ್ಥಳವಿರುತ್ತದೆ. ಆದರೆ, ಸ್ಟಾರ್‌ಲಿಂಕ್‌ನ ಭೂಮಿಯ ಕೆಳಕಕ್ಷೆಯಲ್ಲಿರುವ ಉಪಗ್ರಹಗಳ ಮೂಲಕ ಸಾಗುವ ದತ್ತಾಂಶವು ಉಪಗ್ರಹಗಳು ಮತ್ತು ಭೂಸ್ಥಳೀಯ ಕೇಂದ್ರಗಳ ಮೂಲಕ ಹಾದುಹೋಗುತ್ತದೆ. ಇವುಗಳಲ್ಲಿ ಕೆಲವು ಭಾರತದ ಭೂಪ್ರದೇಶದ ಹೊರಗಿವೆ. ಹೀಗಿರುವಾಗ, ಸ್ಟಾರ್‌ಲಿಂಕ್ ಭಾರತೀಯ ಬಳಕೆದಾರರ ದತ್ತಾಂಶವನ್ನು ಹೇಗೆ ರವಾನಿಸುತ್ತದೆ ಮತ್ತು ಅದರ ಭೂಸ್ಥಳೀಯ ಕೇಂದ್ರಗಳು ಎಲ್ಲಿವೆ ಎಂಬುದು ಮುಖ್ಯವಾಗುತ್ತದೆ.

2017ರ ಆಗಸ್ಟ್‌ನಲ್ಲಿ ಸ್ಪೇಸ್‌ಎಕ್ಸ್ ತನ್ನ ಸ್ಟಾರ್‌ಲಿಂಕ್ ಟ್ರೇಡ್‌ಮಾರ್ಕ್ ನೋಂದಣಿಯನ್ನು ವಿಸ್ತರಿಸಿ, ಅದರಲ್ಲಿ ಉಪಗ್ರಹ ಚಿತ್ರಣ, ದೂರಸಂವೇದಿ ತಂತ್ರಜ್ಞಾನ ಮತ್ತು ಸೇನಾ ಉದ್ದೇಶಗಳಿಗಾಗಿ ಸಂವಹನ ಸೇವೆಗಳನ್ನು ಸೇರಿಸಿತ್ತು. ವಿವಿಧ ಉಪಗ್ರಹಗಳು ಸಂವಹನ, ವಿಚಕ್ಷಣ, ನ್ಯಾವಿಗೇಷನ್ ಮತ್ತು ಗುರಿ ಗುರುತಿಸುವ ಸಾಮರ್ಥ್ಯಗಳನ್ನು ಹೊಂದಿರುವ ಏಕೀಕೃತ ಯುದ್ಧತಂತ್ರದ ವ್ಯವಸ್ಥೆಯಾಗಿ ಸ್ಟಾರ್‌ಲಿಂಕ್ ಉಪಗ್ರಹ ಸಮೂಹವನ್ನು ಅಮೆರಿಕದ ಸೇನಾ ಕಾರ್ಯತಂತ್ರದಲ್ಲಿ ಸಂಯೋಜಿಸಲಾಗಿದೆ. ಇದು ನಾಗರಿಕ ಮತ್ತು ಸೇನಾ ಉದ್ದೇಶಗಳಿಗೆ ಬಳಸಬಹುದಾದ ಕಾರ್ಯತಂತ್ರದ ವ್ಯವಸ್ಥೆಯಾಗಿದೆ.

ಸ್ಟಾರ್‌ಲಿಂಕ್‌ಗೆ 165 ದೇಶಗಳಲ್ಲಿ ಪರವಾನಗಿ ಇದೆ ಎಂದು ಹೇಳುವ ಮಸ್ಕ್, ಆ ದೇಶಗಳೂ ಪರವಾನಗಿ ನೀಡುವ ಮುನ್ನ ಕಾನೂನುಬದ್ಧ ಕಣ್ಗಾವಲು, ಭೂಸ್ಥಳೀಯ ಕೇಂದ್ರಗಳ ಸ್ಥಳ ಮತ್ತು ದತ್ತಾಂಶ ರವಾನೆಯ ವಿಚಾರದಲ್ಲಿ ನಿರ್ದಿಷ್ಟ ಭದ್ರತಾ ಬದ್ಧತೆಗಳನ್ನು ಕಡ್ಡಾಯಗೊಳಿಸಿದ್ದವು ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಭಾರತವೂ ಆ ದೇಶಗಳು ಮಾಡಿದ್ದನ್ನೇ ಮಾಡುತ್ತಿದೆ.

ಪೋಸ್ಟ್‌ನಿಂದ ನೀತಿ ಬದಲಾಗದು:

ಎಕ್ಸ್‌ನಲ್ಲಿನ ಒಂದು ಪೋಸ್ಟ್ ಸರ್ಕಾರದ ನೀತಿ ನಿರೂಪಣೆಯನ್ನು ಬದಲಿಸುವುದಿಲ್ಲ. ಬದಲಿಸಬಾರದು ಕೂಡ. ಹಾಗೊಮ್ಮೆ ಆಗುವುದೇ ಆಗಿದ್ದರೆ, ಅದೇ ನಿಜವಾದ ಸ್ವಜನಪಕ್ಷಪಾತಕ್ಕೆ ಸಾಕ್ಷಿಯಾಗುತ್ತಿತ್ತು. ಅಂದರೆ, ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕಾದ ನೀತಿಯ ಬದಲಿಗೆ, ಒಬ್ಬ ಶತಕೋಟ್ಯಧಿಪತಿಯ ಸಾಮಾಜಿಕ ಮಾಧ್ಯಮದ ಪ್ರಭಾವದ ಆಧಾರದಲ್ಲಿ ನಿಯಂತ್ರಣಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗುತ್ತಿತ್ತು.

ಅಂಬಾನಿ ಭಾರತದ ಬಾಸ್‌?:

‘ಅಂಬಾನಿಯೇ ಭಾರತದ ನಿಜವಾದ ಮಾಲೀಕರೇ?’ ಎಂಬ ಮಸ್ಕ್‌ರ ಪ್ರಶ್ನೆಗೆ ನೇರವಾದ ಉತ್ತರ: ಇಲ್ಲ.

ಇದಕ್ಕೆ ಸಾಕ್ಷಿ ಮಸ್ಕ್ ಅವರ ವಾದದಲ್ಲೇ ಇದೆ. ಸರ್ಕಾರವು ಉಪಗ್ರಹ ಸೇವೆಗಳ ಸ್ಪರ್ಧೆಯಿಂದ ಜಿಯೊವನ್ನು ರಕ್ಷಿಸಲು ಬಯಸಿದ್ದರೆ, ಜಿಯೊ ಸ್ಯಾಟ್‌ಕಾಮ್ ಮತ್ತು ಒನ್‌ವೆಬ್‌ಗೆ ಈಗಾಗಲೇ ಪರವಾನಗಿ ನೀಡಿ, ಸ್ಟಾರ್‌ಲಿಂಕ್‌ನ ಅರ್ಜಿಯ ಅನುಮೋದನೆಯಲ್ಲಿ ಮಾತ್ರ ವಿಳಂಬ ಮಾಡುವುದು ತಾರ್ಕಿಕ ಕ್ರಮವಾಗಿರುತ್ತಿತ್ತು. ಆದರೆ, ವಾಸ್ತವದಲ್ಲಿ ಈ ಮೂರೂ ಸಂಸ್ಥೆಗಳು ಒಂದೇ ಸಾಲಿನಲ್ಲಿ ಕಾಯುತ್ತಿವೆ.

ಒಂದು ಉದ್ಯಮ ಸಮೂಹವೇ ಭಾರತದ ನಿಯಂತ್ರಣಾತ್ಮಕ ನಿರ್ಧಾರಗಳನ್ನು ನಿರ್ದೇಶಿಸುತ್ತದೆ ಎಂದು ಮಸ್ಕ್ ಬಣ್ಣಿಸಿರುವ ಭಾರತವು, 2014ಕ್ಕೂ ಹಿಂದಿನ ಭಾರತವಾಗಿದೆ. ಆಗ 2ಜಿ ಸ್ಪೆಕ್ಟ್ರಮ್ ಹಗರಣ ನಡೆದಿತ್ತು ಮತ್ತು ಸ್ಪೆಕ್ಟ್ರಮ್ ಅನ್ನು ಪಾರದರ್ಶಕತೆಯಿಲ್ಲದ ‘ಮೊದಲು ಬಂದವರಿಗೆ ಆದ್ಯತೆ’ ಎಂಬ ಉಚಿತ ಹಂಚಿಕೆ ಪದ್ಧತಿಯ ಮೂಲಕ ನೀಡಲಾಗಿತ್ತು. ಸಂಸದನಾಗಿ ನಾನು ಸಾಕಷ್ಟು ವೈಯಕ್ತಿಕ ಬೆಲೆ ತೆತ್ತು ಹೋರಾಡಿದ ಸ್ಪೆಕ್ಟ್ರಮ್ ಹರಾಜು ವ್ಯವಸ್ಥೆ ಸೇರಿದಂತೆ, ಮೋದಿ ಸರ್ಕಾರದ ಸುಧಾರಣೆಗಳು ಇಂತಹ ವ್ಯವಸ್ಥೆಯನ್ನು ಬದಲಿಸುವ ಉದ್ದೇಶ ಹೊಂದಿದ್ದವು.

ಭಾರತದ ತಂತ್ರಜ್ಞಾನ ವಲಯದಲ್ಲಿ ಈಗ ಜಾರಿಯಲ್ಲಿರುವ ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಹೊಣೆಗಾರಿಕೆಯ (ಒಎಸ್‌ಟಿಎ- Open, Safe, Trusted, and Accountable) ಚೌಕಟ್ಟು ಎಲ್ಲ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಸ್ವದೇಶಿಯಾಗಿರಲಿ ಅಥವಾ ವಿದೇಶದ್ದಾಗಿರಲಿ, ದೊಡ್ಡದಾಗಿರಲಿ ಅಥವಾ ಸಣ್ಣದಾಗಿರಲಿ, ಎಲ್ಲ ಕಂಪನಿಗಳಿಗೂ ಭಾರತದಲ್ಲಿ ಒಂದೇ ನಿಯಮಗಳು ಅನ್ವಯಿಸುತ್ತವೆ. ಇದು ಸ್ವಜನಪಕ್ಷಪಾತಕ್ಕೆ ವಿರುದ್ಧವಾದ ವ್ಯವಸ್ಥೆ ಎಂಬುದು ಸ್ಪಷ್ಟ.

ಸಂಪತ್ತು V/S ಸಾರ್ವಭೌಮ ನೀತಿ:

ಅಪಾರ ಸಂಪತ್ತು ಮತ್ತು ಜಾಗತಿಕ ಖ್ಯಾತಿಯನ್ನು ಬಳಸಿ ಪ್ರಜಾಪ್ರಭುತ್ವ ರಾಷ್ಟ್ರಗಳ ನೀತಿಗಳ ಮೇಲೆ ಪ್ರಭಾವ ಬೀರುವುದಕ್ಕೆ ಸಾಧ್ಯವಾಗದು ಎಂಬುದು ಮಸ್ಕ್‌ ಅವರಿಗಷ್ಟೇ ಅಲ್ಲ, ಈ ಹಿಂದೆ ಹಲವು ಟೆಕ್‌ ದಿಗ್ಗಜರಿಗೆ ಅರಿವು ಆಗಿದೆ. ಮಾರ್ಕ್ ಜುಕರ್‌ಬರ್ಗ್ ಭಾರತದ ದತ್ತಾಂಶವನ್ನು ದೇಶದೊಳಗೇ ಸಂಗ್ರಹಿಸಬೇಕೆಂಬ ನಿಯಮಗಳನ್ನು ವಿರೋಧಿಸಿ ಹಲವು ವರ್ಷಗಳ ಕಾಲ ಹೋರಾಡಿದರು. ಭಾರತೀಯ ಸ್ಪರ್ಧಾ ಆಯೋಗದೊಂದಿಗೆ ಸಂಘರ್ಷಕ್ಕಿಳಿದಿರುವ ಗೂಗಲ್‌ಗೆ, ಅನ್ಯ ದೇಶಗಳಂತೆ ಭಾರತದ ಮಾರುಕಟ್ಟೆಯಲ್ಲಿಯೂ ನಿರ್ದಿಷ್ಟ ನಿಯಮಗಳಿವೆ ಎಂಬುದನ್ನು ತಿಳಿಸಲಾಗಿದೆ. ಜೆಫ್ ಬೆಜೋಸ್ 2020ರಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಘೋಷಣೆಯೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಆದರೆ, ಕೇವಲ ಭೇಟಿ ನೀಡುವುದರಿಂದ ನಿಯಮಗಳನ್ನು ಪಾಲಿಸಿದಂತಾಗುವುದಿಲ್ಲ ಎಂಬುದನ್ನು ಅವರು ಬಳಿಕ ಅರಿತುಕೊಂಡರು.

900 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆ ಅಳವಡಿಕೆಯ ಪ್ರವೃತ್ತಿಯನ್ನು ಹೊಂದಿದೆ. ಆದ್ದರಿಂದಲೇ, ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಕಂಪನಿಗಳು ಬಯಸುತ್ತಿವೆ. ಹೀಗಿರುವಾಗ, ಭಾರತಕ್ಕೆ ಮಾರುಕಟ್ಟೆ ಪ್ರವೇಶದ ಅವಕಾಶ ನೀಡುವ ಮೂಲಕ ತಾವೇ ಉಪಕಾರ ಮಾಡುತ್ತಿರುವಂತೆ ಪಾಶ್ಚಿಮಾತ್ಯ ತಂತ್ರಜ್ಞಾನ ಕಂಪನಿಗಳು ಷರತ್ತುಗಳನ್ನು ವಿಧಿಸುತ್ತಿದ್ದ ಕಾಲ ಮುಗಿದಿದೆ. ಈ ವಾಸ್ತವವನ್ನು ಭಾರತದಲ್ಲಿ ಕಾರ್ಯನಿರ್ವಹಿಸಿರುವ ತಂತ್ರಜ್ಞಾನ ಕಂಪನಿಗಳು ಈಗಾಗಲೇ ಅರ್ಥಮಾಡಿಕೊಂಡಿವೆ.

ಆ್ಯಪಲ್ ಸ್ಥಳೀಯವಾಗಿ ಉತ್ಪಾದನೆ ಮತ್ತು ಬಿಡಿಭಾಗಗಳ ಪೂರೈಕೆಗೆ ಸಂಬಂಧಿಸಿದ ಸಂಕೀರ್ಣ ನಿಯಮಗಳನ್ನು ತಾಳ್ಮೆಯಿಂದ ಪಾಲಿಸಿತು. ಪರಿಣಾಮವಾಗಿ, ಅದು ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ರಫ್ತುದಾರನಾಯಿತು. ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆ ಜನಪ್ರಿಯವಾಗುವುದಕ್ಕೂ ಬಹಳ ಮೊದಲೇ ಸ್ಯಾಮ್‌ಸಂಗ್ ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸಿತ್ತು. ಈ ಕಂಪನಿಗಳು, ಭಾರತದ ನಿಯಮಗಳ ಬಗೆಗಿನ ಅಸಮಾಧಾನವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಿಲ್ಲ. ಬದಲಿಗೆ ಸಂಬಂಧಪಟ್ಟ ಅಧಿಕೃತ ಮಾರ್ಗಗಳ ಮೂಲಕ ತಮ್ಮ ವಾದವನ್ನು ಮಂಡಿಸಿದವು. ನಿಯಂತ್ರಣಾತ್ಮಕ ನಿರ್ಧಾರವೊಂದನ್ನು ಮೀರಿ ದೀರ್ಘಕಾಲ ಉಳಿಯುವ ಸಂಬಂಧಗಳನ್ನು ನಿರ್ಮಿಸಿದವು.

ಎಲಾನ್, ಮುಖ್ಯ ವಿಚಾರದತ್ತ ಗಮನಹರಿಸಿ

ಸ್ಟಾರ್‌ಲಿಂಕ್ ಪ್ರತಿನಿಧಿಸುವ ತಂತ್ರಜ್ಞಾನ ಮತ್ತು ಮಸ್ಕ್ ನಿರ್ಮಿಸಿರುವ ಉದ್ಯಮದ ಬಗ್ಗೆ ನನಗಿರುವ ನೈಜ ಗೌರವದೊಂದಿಗೆ ಈ ಲೇಖನವನ್ನು ಆರಂಭಿಸಿದ್ದೇನೆ. ಅದೇ ಗೌರವದೊಂದಿಗೆ ಮುಕ್ತಾಯಗೊಳಿಸಲು ಬಯಸುತ್ತೇನೆ.

ಸ್ಟಾರ್‌ಲಿಂಕ್ ಆಗಿರಲಿ, ಜಿಯೊ ಸ್ಯಾಟ್‌ಕಾಮ್ ಆಗಿರಲಿ ಅಥವಾ ಒನ್‌ವೆಬ್ ಆಗಿರಲಿ, ಇವುಗಳಲ್ಲಿ ಯಾವುದಾದರೂ ಭಾರತದಲ್ಲಿ ಪರವಾನಗಿ ಪಡೆದ ದಿನವು ಭಾರತೀಯ ಸಂಪರ್ಕ ವ್ಯವಸ್ಥೆಗೆ ಉತ್ತಮ ದಿನವಾಗಿರಲಿದೆ. ವಿಶೇಷವಾಗಿ, ಸಾಂಪ್ರದಾಯಿಕ ದೂರಸಂಪರ್ಕ ಮೂಲಸೌಕರ್ಯ ಕಡಿಮೆ ಇರುವ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಆ ದಿನವನ್ನು ನಾನು ಎದುರು ನೋಡುತ್ತಿದ್ದೇನೆ.

ಆದರೆ, ಸದ್ಯ ಮಸ್ಕ್ ಸಾಕಷ್ಟು ಗದ್ದಲವನ್ನು ಸೃಷ್ಟಿಸುತ್ತಿದ್ದಾರೆ. ಇದು ಸರ್ಕಾರದ ಮೇಲೆ ಸಾರ್ವಜನಿಕ ಒತ್ತಡ ಹೇರುವ ಪ್ರಯತ್ನಗಳಷ್ಟೇ. ಇವುಗಳಲ್ಲಿ ಯಾವುದೂ ಮುಖ್ಯ ವಿಚಾರವಲ್ಲ. ಮುಖ್ಯ ವಿಚಾರ ಸರಳವಾಗಿದೆ. ಭದ್ರತಾ ಅನುಮತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಇತರ 165 ದೇಶಗಳಲ್ಲಿ ಪೂರೈಸಿರುವಂತೆಯೇ ಭಾರತದ ಷರತ್ತುಗಳನ್ನೂ ಪೂರೈಸಿ. ಆಗ ಸ್ಟಾರ್‌ಲಿಂಕ್ ಭಾರತದಲ್ಲಿ ಕಾರ್ಯನಿರ್ವಹಿಸಬಹುದು.

ಒಬ್ಬ ಸಂಸ್ಥಾಪಕನ ಸಾಮಾಜಿಕ ಮಾಧ್ಯಮದ ಪ್ರಭಾವದಿಂದ ನಿಯಂತ್ರಣಾತ್ಮಕ ಪ್ರಕ್ರಿಯೆಯನ್ನು ವೇಗಗೊಳಿಸಲು ಸಾಧ್ಯವಾದರೆ, ಅದನ್ನು ಪ್ರಕ್ರಿಯೆ ಎನ್ನಲಾಗುವುದಿಲ್ಲ. ಅದು ವಿಶೇಷ ಅನುಕೂಲ ನೀಡಿದಂತಾಗುತ್ತದೆ. ಭಾರತ ಇನ್ನು ಮುಂದೆ ಇಂತಹ ವಿಶೇಷ ಅನುಕೂಲಗಳ ಆಧಾರದಲ್ಲಿ ನಡೆಯುವುದಿಲ್ಲ.

ಸ್ಟಾರ್‌ಲಿಂಕ್‌ ಅನ್ನು ಭಾರತಕ್ಕೆ ತರುವ ವಿಷಯದಲ್ಲಿ ತಾಳ್ಮೆ ಅಗತ್ಯವಷ್ಟೇ ಅಲ್ಲ, ಅನಿವಾರ್ಯವೂ ಹೌದು. ಭಾರತ ತನ್ನ ನಾಗರಿಕರಿಗಾಗಿ, ಭದ್ರತೆಗಾಗಿ ಮತ್ತು ನಿಯಮಾಧರಿತ ವ್ಯವಸ್ಥೆಯನ್ನು ನಿರ್ಮಿಸುವುದಕ್ಕಾಗಿ ಏನು ಮಾಡಬೇಕೋ ಅದನ್ನೇ ಮಾಡುತ್ತಿದೆ. ಪ್ರಕ್ರಿಯೆ ಪೂರ್ಣಗೊಂಡಾಗ ಆ ವ್ಯವಸ್ಥೆಯು ಸ್ಟಾರ್‌ಲಿಂಕ್‌ಗೂ ಪ್ರಯೋಜನಕಾರಿಯಾಗಲಿದೆ. ಆ ವ್ಯವಸ್ಥೆಯ ಮೇಲೆ ವಿಶ್ವಾಸವಿಡಿ.