ಬೆಂಗಳೂರಿನ 7 ವರ್ಷದ ಬಾಲಕಿ ಸಿರಿ ಸೊರಬ ಕೇವಲ ಮೂರು ತಿಂಗಳಲ್ಲಿ ಆರು ಇಂಗ್ಲಿಷ್ ಕಥೆಗಳನ್ನು ಬರೆದು ‘Whiskers and Tales’ ಕಥಾಸಂಕಲನ ಪ್ರಕಟಿಸಿದ್ದಾಳೆ. ಸಂಪೂರ್ಣ ವಿವರ ಇಲ್ಲಿದೆ.
ಸಾಹಿತ್ಯದ ಅಭಿರುಚಿ ಮತ್ತು ಸೃಜನಶೀಲತೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಬೆಂಗಳೂರಿನ ಕೇವಲ 7 ವರ್ಷದ ಪುಟ್ಟ ಬಾಲಕಿ ಸಿರಿ ಸೊರಬ ಸಾಬೀತುಪಡಿಸಿದ್ದಾಳೆ. ಆಟ, ಪಾಠ ಮತ್ತು ಮನರಂಜನೆಯತ್ತ ಹೆಚ್ಚು ಗಮನ ಹರಿಸುವ ವಯಸ್ಸಿನಲ್ಲಿ ಕಥೆ ಬರೆಯುವ ಹವ್ಯಾಸ ಬೆಳೆಸಿಕೊಂಡಿರುವ ಸಿರಿ, ಕೇವಲ ಮೂರು ತಿಂಗಳ ಅವಧಿಯಲ್ಲಿ ಆಂಗ್ಲ ಭಾಷೆಯಲ್ಲಿ ಆರು ಸುಂದರ ಕಥೆಗಳನ್ನು ರಚಿಸಿ ‘ವ್ಹಿಸ್ಕರ್ಸ್ ಅಂಡ್ ಟೇಲ್ಸ್’ ಎಂಬ ಆಂಗ್ಲ ಕಥಾಸಂಕಲನವನ್ನು ಹೊರತರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಬೆಂಗಳೂರಿನ ಮಲ್ಲಸಂದ್ರದ ಕುಮಾರನ್ಸ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಸಿರಿ, ಖ್ಯಾತ ಕವಿ ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ದಿವಂಗತ ವೇಣುಗೋಪಾಲ್ ಸೊರಬ ಅವರ ಮೊಮ್ಮಗಳು. ತಂದೆ ವ್ರಜಬಾಲ ಸೊರಬ (ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಅಸಿಸ್ಟೆಂಟ್ ರೀಜನಲ್ ಎಡಿಟರ್) ಹಾಗೂ ತಾಯಿ ಕಲಾಶ್ರೀ ಆನಂದ್ (ಎನರ್ಜಿ ಹೀಲರ್ ಮತ್ತು ಲೈಫ್ ಕೋಚ್) ಅವರ ಪುತ್ರಿಯಾದ ಸಿರಿಗೆ ಮನೆಯಲ್ಲಿಯೇ ಸಾಹಿತ್ಯ ಮತ್ತು ಕಲೆಯ ವಾತಾವರಣವಿದೆ.
ಈಗಾಗಲೇ ನಾಲ್ಕು ಪುಸ್ತಕಗಳಲ್ಲಿ ಕಥೆಗಳನ್ನು ಬರೆದಿರುವ ಹಾಗೂ ಮೃದಂಗ ನುಡಿಸುವುದರಲ್ಲಿ ಪರಿಣಿತನಾಗಿರುವ ತನ್ನ 12 ವರ್ಷದ ಅಣ್ಣ ವಿಹಾನ್ ಸೊರಬನನ್ನು ನೋಡಿ ಸ್ಫೂರ್ತಿಗೊಂಡ ಸಿರಿ, ತಾನೂ ಪುಸ್ತಕ ಬರೆಯಬೇಕೆಂದು ಆಸೆಪಟ್ಟಳು. ಮೊದಲು ತನ್ನ ಕಲ್ಪನೆಯ ಕಥೆಗಳನ್ನು ಪೋಷಕರಿಗೆ ಹೇಳುತ್ತಿದ್ದ ಸಿರಿ, ನಂತರ ಅವುಗಳನ್ನು ಲ್ಯಾಪ್ಟಾಪ್ನಲ್ಲಿ ಟೈಪ್ ಮಾಡಲು ಆರಂಭಿಸಿದಳು. ಪೋಷಕರು ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಆರು ಪೂರ್ಣ ಕಥೆಗಳು ಸಿದ್ಧಗೊಂಡವು.
ಮಕ್ಕಳ ಸಾಹಿತ್ಯಕ್ಕಾಗಿಯೇ ‘ಇಂಕ್ಡ್ ಟೆಕ್’ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿರುವ ಲೇಖಕಿ ಹಾಗೂ ರೈಟಿಂಗ್ ಕೋಚ್ ನೀಲಿಮಾ ವಿನೋದ್ ಅವರ ಮಾರ್ಗದರ್ಶನದಲ್ಲಿ ಸಿರಿ ಈ ಕಥೆಗಳನ್ನು ಹೆಣೆದಿದ್ದಾಳೆ. ನೀಲಿಮಾ ಅವರ ಬಳಿ ತರಬೇತಿ ಪಡೆದ ಅತ್ಯಂತ ಕಿರಿಯ ಬಾಲಕಿ ಎಂಬ ಹೆಗ್ಗಳಿಕೆಯೂ ಸಿರಿಯದ್ದಾಗಿದೆ. ಒಟ್ಟು 50 ಪುಟಗಳ ಈ ಪುಸ್ತಕದಲ್ಲಿ 38 ಪುಟಗಳಷ್ಟು ಸಿರಿಯ ಕಥೆಗಳಿದ್ದು, ಉಳಿದ ಪುಟಗಳಲ್ಲಿ ಖ್ಯಾತ ಲೇಖಕರ ಮುನ್ನುಡಿ ಮತ್ತು ಮೆಚ್ಚುಗೆಯ ನುಡಿಗಳಿವೆ.
ಸಕಾರಾತ್ಮಕ ಸಂದೇಶ
ಇದು ವಯಸ್ಕರೊಬ್ಬರು ಮಕ್ಕಳಿಗಾಗಿ ಬರೆದ ಪುಸ್ತಕವಲ್ಲ, ಬದಲಾಗಿ ಮಗುವೊಂದು ಕಟ್ಟಿಕೊಟ್ಟ ಮಾಯಾಲೋಕ. ಸುತ್ತಲಿನ ಪರಿಸರ, ಪ್ರಾಣಿಗಳ ಸಂತಸ ಮತ್ತು ಅವುಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಈ ಕಥೆಗಳನ್ನು ರಚಿಸಲಾಗಿದೆ. ಪ್ರಾಣಿಗಳು ಮಾತನಾಡುವ, ಭಾವನೆಗಳನ್ನು ಅನುಭವಿಸುವ, ತಪ್ಪು ಮಾಡುವ, ಕ್ಷಮಿಸುವ ಮತ್ತು ಒಬ್ಬರಿಗೊಬ್ಬರು ಸಹಾಯ ಮಾಡುವ ಲೋಕ ಇದಾಗಿದೆ. ಪ್ರತಿ ಕಥೆಯಲ್ಲೂ ಗೆಳೆತನ, ಕುತೂಹಲ, ದಯೆ, ತುಂಟತನದ ಜೊತೆಗೆ ವ್ಯಾಂಪೈರ್ಗಳಂತಹ ಪಾತ್ರಗಳು ಕೊನೆಯಲ್ಲಿ ಒಳ್ಳೆಯವರಾಗಿ ಬದಲಾಗಬಹುದು ಎಂಬ ಸಕಾರಾತ್ಮಕ ಸಂದೇಶವಿದೆ. ವಿಶೇಷವೆಂದರೆ, ಪುಸ್ತಕದಲ್ಲಿರುವ ಎಲ್ಲಾ ಕಥೆಗಳಿಗೆ ವರ್ಣಮಯ ಚಿತ್ರಗಳನ್ನು ಹಾಗೂ ಮುಖಪುಟದ ವಿನ್ಯಾಸವನ್ನು ಸ್ವತಃ ಸಿರಿಯೇ ಮಾಡಿದ್ದಾಳೆ.
ಈ ಕೃತಿ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರಾದ ಆಶಾಕಿರಣ ರೈ, ಎಸ್.ಆರ್. ರಾಮಕೃಷ್ಣ, ಲೇಖಕಿಯರಾದ ಅನುಪಮಾ ಬೆಣಚಿನಮರಡಿ ಹಾಗೂ ಪ್ರಕಾಶಕಿ ನೀಲಿಮಾ ವಿನೋದ್ ಉಪಸ್ಥಿತರಿದ್ದು ಪುಟ್ಟ ಬಾಲಕಿಗೆ ಸ್ಫೂರ್ತಿ ತುಂಬಿದರು. ಈ ಸಂದರ್ಭದಲ್ಲಿ ಮಾತನಾಡಿದ ಲೇಖಕಿ ಅನುಪಮಾ ಬೆಣಚಿನಮರಡಿ, ‘7 ವರ್ಷದ ಮಗು ಬರೆದ ಪುಸ್ತಕ ನೋಡಿ ಥ್ರಿಲ್ ಆದೆ. ಆಕೆಯ ಎಲ್ಲಾ ಕಥೆಗಳಲ್ಲೂ ಒಂದು ಭರವಸೆ ಇದೆ. ಈ ಮಗುವಿನ ಪೋಷಕರ ಸಾಹಿತ್ಯಜ್ಞಾನ ಮತ್ತು ಬರವಣಿಗೆ ರಕ್ತದಲ್ಲೇ ಸಾಗಿಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಸೂಕ್ತ ಅವಕಾಶ, ಸಮಯ ನೀಡಿ ಪ್ರೋತ್ಸಾಹಿಸಿದರೆ ಅವರು ನಿಜವಾಗಿಯೂ ಸುಂದರವಾದದ್ದನ್ನು ಸೃಷ್ಟಿಸಬಲ್ಲರು ಎಂಬುದಕ್ಕೆ ಸಿರಿಯ ಈ ಕಥಾಸಂಕಲನವೇ ಸಾಕ್ಷಿಯಾಗಿದೆ.














