ಜಯಂತ ಕಾಯ್ಕಿಣಿ ಅವರ ‘ಅಮೃತ ಬಳ್ಳಿ ಕಷಾಯ’ ಕಥೆಗೆ ಶಿವ ರಂಗತಂಡ ನೀಡಿರುವ ರಂಗರೂಪವು ಮುಂಬೈನ ಯಾಂತ್ರಿಕ ಬದುಕು, ಮನುಷ್ಯ ಸಂಬಂಧಗಳ ವಿಘಟನೆ, ದ್ವೇಷ ಮತ್ತು ಗಲಭೆಗಳ ನಡುವಿನ ಮಾನವೀಯತೆಯನ್ನು ಮನಮುಟ್ಟುವಂತೆ ಅನಾವರಣಗೊಳಿಸುತ್ತದೆ.

ಡಾ. ಮುರಳಿ ಕೂಡ್ಲೂರು, ಕುದೂರು

ಕಥೆಯೊಂದರ ಅಕ್ಷರಗಳು ರಂಗದ ಮೇಲೆ ಜೀವ ತಳೆದು, ಪ್ರೇಕ್ಷಕರ ಎದುರು ದೃಶ್ಯವಾದಾಗ ಮೂಡುವ ಬೆರಗು ಅನನ್ಯ. ಸಾಹಿತಿ ಜಯಂತ ಕಾಯ್ಕಿಣಿ ಅವರು ಮೂರು ದಶಕಗಳ ಹಿಂದೆ ಬರೆದಿರುವ ‘ಅಮೃತ ಬಳ್ಳಿ ಕಷಾಯ’ ಕಥೆ ರಂಗದ ಮೇಲೆ ಅಂಥದ್ದೇ ಅನನ್ಯ ಭಾವನೆ ಮೂಡಿತು. ಯಾಂತ್ರಿಕ, ವೇಗದ ಬದುಕಿನ ಮಾಯಾನಗರಿ ಮುಂಬೈನಲ್ಲಿ ಕಳೆದುಹೋಗುತ್ತಿರುವ ಮನುಷ್ಯ ಸಂಬಂಧಗಳು, ಸಮಾಜವನ್ನು ಆವರಿಸಿರುವ ವಿಷಮತೆ, ದ್ವೇಷದ ವಾತಾವರಣಕ್ಕೆ ಮದ್ದರೆಯಲೇಬೇಕೆಂಬ ಆಶಯದ ಕಥೆಯನ್ನು ಮೈಸೂರಿನ ಶಿವ ರಂಗತಂಡವು ರಂಗದ ಮೇಲೆ ತಂದಿತು.

ರಂಗಾಯಣದ ಹಿರಿಯ ಕಲಾವಿದ ಪ್ರಶಾಂತ ಹಿರೇಮಠ ನಿರ್ದೇಶನ ಈ ನಾಟಕದ ಪ್ರಮುಖ ಜೀವಾಳ. ಮಹೇಶ್‌ ಕುಮಾರ್‌ ಎನ್. ಈ ಕಥೆಗೆ ಅತ್ಯಂತ ನಾಟಕೀಯ- ತೊಡಕಾಗದ ರಂಗರೂಪ, ಎಚ್.ಕೆ. ದ್ವಾರಕಾನಾಥ್ ಅವರ ಸೃಜನಶೀಲ ರಂಗವಿನ್ಯಾಸ, ಕೃಷ್ಣಕುಮಾರ್‌ ನಾರ್ಣಕಜೆ ಅವರ ಬೆಳಕಿನ ವಿನ್ಯಾಸ, ನಂದಿನಿ ಕೆ.ಆರ್‌. ಅವರ ವಸ್ತ್ರವಿನ್ಯಾಸ, ಸಂತೋಷ್‌ ಕುಮಾರ್‌ ಕುಸನೂರ್‌ ಅವರ ಪ್ರಸಾಧನ ನಾಟಕದ ದೃಶ್ಯ ವೈಭವವನ್ನು ಹಿಗ್ಗಿಸಿವೆ.

ಮುಂಬೈ ಎಂದರೆ ಭಯ ಹುಟ್ಟಿಸುವ, ವೇಗದ ಬದುಕು, ನುಗ್ಗಿ-ಬಾಚಿಕೊಂಡು ಹೋಗುವ ಜನಸಂದಣಿಯ ನಗರ. ಅಲ್ಲಿ ಉಸಿರಾಡುವುದೂ ಕಷ್ಟವೇನೋ ಎನಿಸುವಂತಹ ವಾತಾವರಣ. ಆದರೆ ಇಂತಹ ದಟ್ಟಣೆಯ ನಡುವೆಯೂ, ಲೋಕಲ್ ಟ್ರೈನ್‌ಗೆ ಹತ್ತುವ ತರಾತುರಿಯಲ್ಲಿಯೂ, ನಿಲ್ಲಲು ಜಾಗವಿಲ್ಲದ ಇಕ್ಕಟ್ಟಿನಲ್ಲಿಯೂ ಮಿಡಿಯುವ ಸೂಕ್ಷ್ಮ ಹೃದಯಗಳ ಒದ್ದೆತನವನ್ನು ನಾಟಕ ಅನಾವರಣಗೊಳಿಸುತ್ತದೆ. ಮನುಷ್ಯ ಸಂಬಂಧಗಳನ್ನು ಬೆಸೆಯಬೇಕಾದ ಸಮಾಜವು, ಇಂದು ತನ್ನನ್ನು ತಾನೇ ವಿಘಟಿಸಿಕೊಳ್ಳುತ್ತಿರುವ ಆತಂಕಕಾರಿ ಚಿತ್ರಣವನ್ನು ರಂಗದ ಮೇಲೆ ತರಲಾಗಿದೆ. ಮಹಾತ್ಮ ಗಾಂಧೀಜಿಯವರು ಹೇಳುವಂತೆ, ‘ಮರದಿಂದ ಉದುರಿದ ಎಲೆಗಳನ್ನು ಪ್ರತಿದಿನವೂ ಗುಡಿಸಿ, ಕಸವನ್ನು ಹೇಗೆ ಸ್ವಚ್ಛಗೊಳಿಸುತ್ತೇವೆಯೋ, ಹಾಗೆಯೇ ಸಮಾಜದಲ್ಲಿ ಶೇಖರವಾಗುವ ಕಲ್ಮಶವನ್ನು, ಕೊಳಕನ್ನು ನಾವು ನಿರಂತರವಾಗಿ ಸ್ವಚ್ಛಗೊಳಿಸುತ್ತಲೇ ಇರಬೇಕು’. ಈ ತಾತ್ವಿಕ ನಿಲುವು ಈ ನಾಟಕದ ಒಟ್ಟಾರೆ ಆಶಯಕ್ಕೆ ಕನ್ನಡಿ ಹಿಡಿಯುತ್ತದೆ.

ನಾಟಕದ ಪ್ರಮುಖ ವೇದಿಕೆಯಾಗಿ ಗಂಗಾಧರನ ಒಡೆತನದ ಒಂದು ಸಾಮಾನ್ಯ ಫೋಟೋ ಫ್ರೇಮ್‌ ಅಂಗಡಿ ಗೋಚರಿಸುತ್ತದೆ. ಚಿತ್ರನಟರು, ದೇವರ ಪಟಗಳು ಹಾಗೂ ಸಾಮಾನ್ಯ ಜನರ ಹಿರಿಯರ ಭಾವಚಿತ್ರಗಳಿಗೆ ಚೌಕಟ್ಟು ಹಾಕುವ ಈ ಅಂಗಡಿಯು, ಕೇವಲ ಮರದ ಚೌಕಟ್ಟುಗಳನ್ನಷ್ಟೇ ಒದಗಿಸುವುದಿಲ್ಲ. ಬದಲಾಗಿ, ಮನುಷ್ಯರ ಭಾವನೆಗಳಿಗೆ ಹಾಗೂ ತಲೆಮಾರುಗಳ ಸಂಬಂಧಗಳಿಗೆ ಚೌಕಟ್ಟು ಹಾಕುವ ದೊಡ್ಡ ರೂಪಕವಾಗಿ ಬದಲಾಗುತ್ತದೆ. ಚಿಕ್ಕ, ದೊಡ್ಡ, ವಿಸ್ತಾರವಾದ ಫೋಟೋ ಫ್ರೇಮ್‌ಗಳ ಒಳಗೆ ಭಾವನೆಗಳ ಮಿಡಿತವನ್ನು ನಿರ್ದೇಶಕರು ಬಹಳ ಸೃಜನಶೀಲವಾಗಿ ಕಟ್ಟಿಕೊಟ್ಟಿದ್ದಾರೆ. ಈ ದೃಶ್ಯವೈಭವಕ್ಕೆ ಮತ್ತು ಚೌಕಟ್ಟುಗಳ ಹಿಂದಿನ ಕಥೆಗಳಿಗೆ ಅಂಗಡಿಯ ಮಾಲೀಕ ಗಂಗಾಧರ ಮತ್ತು ಆತನ ಸಹಾಯಕ ವಿಕ್ಕಿಯ ಪಾತ್ರಗಳು ಮತ್ತಷ್ಟು ಜೀವ ತುಂಬುತ್ತವೆ. ಪ್ರಯಾಗ್ ಜೆ. ಕೋರೆ (ವಿಕ್ಕಿ) ಅವರ ರಂಗವಿಕಸಿತ ಅಭಿನಯ ಹಾಗೂ ಸ್ವರೂಪ್ (ಗಂಗಾಧರ) ಅವರ ಭಾವಪೂರ್ಣ ನಟನೆ ಪ್ರೇಕ್ಷಕರ ಗಮನ ಸೆಳೆಯುತ್ತವೆ.

ಸದಾ ಒತ್ತಡ ಹಾಗೂ ದಾವಂತದಲ್ಲಿರುವ ಮುಂಬೈ ನಗರದಲ್ಲಿ ಅರಳುವ ಅನಾಥ ಯುವಕ ಭಾಸ್ಕರ ಮತ್ತು ರಜನಿಯ ಪ್ರೇಮಕಥೆ ನಾಟಕದ ಮತ್ತೊಂದು ಪ್ರಮುಖ ಆಯಾಮ. ಯಾವುದೇ ಮನೆತನದ ಹಿನ್ನೆಲೆಯಿಲ್ಲದ ಮುಗ್ಧ ಯುವಕ ಭಾಸ್ಕರನಿಗೆ, ತನ್ನ ಪ್ರೇಯಸಿಯ ಮನೆಯವರನ್ನು ಒಪ್ಪಿಸಲು ‘ಮನೆತನದ ಹಿನ್ನೆಲೆ’ ಹಾಗೂ ಹಿರಿಯರ ತಲೆಮಾರಿನ ಅಗತ್ಯ ಬೀಳುತ್ತದೆ. ಅನಾಥನಿಗೆ ಬಂಧುತ್ವ ಎಲ್ಲಿದೆ? ತನಗಿಲ್ಲದ ಸಂಬಂಧಗಳನ್ನು ಸೃಷ್ಟಿಸಿಕೊಳ್ಳಲು ಹಾಗೂ ಹಿರಿಯರ ಪಟವೊಂದನ್ನು ಹುಡುಕಿಕೊಂಡು ಆತ ಗಂಗಾಧರನ ಫೋಟೋ ಫ್ರೇಮ್ ಅಂಗಡಿಯ ಮೆಟ್ಟಿಲೇರುತ್ತಾನೆ. ಆಗ ಗಂಗಾಧರ ತನ್ನದೇ ಮೃತ ತಂದೆಯ ಫೋಟೋವನ್ನು ಆ ಯುವಕನಿಗೆ ನೀಡುವ ಪ್ರಸಂಗ ಅತ್ಯಂತ ಭಾವುಕವಾಗಿದೆ. ಆ ಪಟವನ್ನು ಕೊಡುವಾಗ ತನ್ನ ತಂದೆಯನ್ನೇ ಬಿಟ್ಟುಕೊಟ್ಟಂತೆ ಗಂಗಾಧರ ಅನುಭವಿಸುವ ಭಾವನಾತ್ಮಕ ತೊಳಲಾಟ ಹಾಗೂ ಗಂಗಾಧರ ಮತ್ತು ಆತನ ಮೃತ ತಂದೆಯ ನಡುವಿನ ಸಂಭಾಷಣೆಯನ್ನು ದೃಶ್ಯರೂಪದಲ್ಲಿ ಹಿಡಿದಿಟ್ಟಿರುವ ಕಲ್ಪನೆ ನಿರ್ದೇಶಕರ ಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ. ತಂದೆಯ ಪಾತ್ರದಲ್ಲಿ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಅವರ ಹಿನ್ನೆಲೆಯ ಧ್ವನಿ ಮತ್ತು ಅಭಿನಯ ಮನಕಲುಕುವಂತಿದೆ.

ನಾಟಕದಲ್ಲಿ ಬರುವ ಮತ್ತೊಂದು ಅತ್ಯಂತ ಶಕ್ತಿಶಾಲಿ ಮತ್ತು ಸೂಕ್ಷ್ಮ ಸಂಕೇತವೆಂದರೆ ‘ಗುಲಾಬಿ’ ಹೂವು. ಪ್ರೇಮಿಗಳ ಕೈಯಲ್ಲಿರುವ ಈ ಗುಲಾಬಿ, ಪಾರ್ಕ್ ಸ್ಥಳದಲ್ಲಿ ನಿಲ್ಲುವಂತಿಲ್ಲದ ಕಾರಣ ಪಾರ್ಕ್ ಸಿಬ್ಬಂದಿಯ ಕೈಸೇರುತ್ತದೆ. ಅಲ್ಲಿಂದ ಗಲಭೆಯ ನಡುವೆ ಬರುವ ಪೊಲೀಸರ ಕೈಗೆ ಈ ಗುಲಾಬಿ ಸಾಗುವ ದೃಶ್ಯವು ನಾಟಕದ ಅರ್ಥಪೂರ್ಣತೆಯನ್ನು ಇಮ್ಮಡಿಗೊಳಿಸುತ್ತದೆ. ರೊಮ್ಯಾಂಟಿಕ್ ಆಗಬೇಕಿದ್ದ ದೃಶ್ಯವೊಂದು, ಸಮಾಜದ ವಾಸ್ತವದ ನೆಲೆಗೆ ಜಾರುವ ಪರಿಯನ್ನು ನಿರ್ದೇಶಕರು ಅತ್ಯಂತ ಜಾಣ್ಮೆಯಿಂದ ಕಟ್ಟಿಕೊಟ್ಟಿದ್ದಾರೆ.

ಇದೇ ಹೊತ್ತಿಗೆ ಮುಂಬೈ ನಗರದಲ್ಲಿ ಭುಗಿಲೇಳುವ ರಕ್ತಸಿಕ್ತ ಗಲಭೆ, ಎಲ್ಲೆಡೆ ಆವರಿಸುವ ಆತಂಕ, ದಿಕ್ಕೆಡಿಸುವ ಸ್ಥಿತಿಯನ್ನು ನಾಟಕವು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಕಲ್ಲು ತೂರಾಟ, ಪ್ರಾಣಭೀತಿ, ಅಂಬ್ಯುಲೆನ್ಸ್ ಮತ್ತು ಪೊಲೀಸ್ ವಾಹನಗಳ ಸೈರನ್, ಲೋಕಲ್ ಟ್ರೈನ್‌ಗಳ ಸದ್ದು ಈ ವಿಷಮ ಸನ್ನಿವೇಶಗಳನ್ನು ಮತ್ತು ಗಲಭೆಯ ಕಾಳ್ಗಿಚ್ಚನ್ನು ನಿರ್ದೇಶಕರು ವೇದಿಕೆಯ ಮೇಲೆ ಪ್ರತ್ಯಕ್ಷವಾಗಿ (ರಕ್ತಪಾತದ ಮೂಲಕ) ತೋರಿಸದೆ, ಕೇವಲ ಬೆಳಕು ಮತ್ತು ಧ್ವನಿ ವಿನ್ಯಾಸದ ಮೂಲಕವೇ ಪ್ರೇಕ್ಷಕರಿಗೆ ದಾಟಿಸಿದ್ದಾರೆ. ಕೃಷ್ಣಕುಮಾರ್‌ ನಾರ್ಣಕಜೆ ಅವರ ಬೆಳಕಿನ ವಿನ್ಯಾಸವು ಇಲ್ಲಿ ದಿಗಿಲು ಮತ್ತು ಆತಂಕವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ಈ ಎಲ್ಲಾ ತಲ್ಲಣಗಳ, ಗಲಭೆಗಳ ಹಾಗೂ ಯಾಂತ್ರಿಕತೆಯ ನಡುವೆ ನಾಟಕದ ಕೇಂದ್ರಬಿಂದು ಹಾಗೂ ಆತ್ಮವಾಗಿ ನಿಲ್ಲುವುದು ‘ಮಾಯಿ’ಯ ಪಾತ್ರ. ಮಾಯಿಯಾಗಿ ನಟಿ ಗೀತಾ ಅವರ ಅಭಿನಯ ಅದ್ಭುತವಾಗಿದೆ. ಯಾವುದೇ ಸಾಮಾಜಿಕ, ಧಾರ್ಮಿಕ ಪರದೆಗಳ ಹಂಗಿಲ್ಲದ, ಅಪ್ಪಟ ಭೂಮಿತಾಯಿಯ ಗುಣವನ್ನು ಹೊಂದಿರುವ ಈ ಪಾತ್ರವು ಮಾತೃತ್ವದ ನಿಜವಾದ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಸಮಾಜವು ಎಷ್ಟೇ ವಿಘಟನೆಗೆ ಒಳಗಾದರೂ, ಪ್ರೀತಿಯಿಂದ ಎಲ್ಲರನ್ನೂ, ಎಲ್ಲರ ನೋವುಗಳನ್ನು ತನ್ನ ಮಡಿಲಿಗೆ ಅಪ್ಪಿಕೊಳ್ಳುವ ಮಾಯಿಯ ನಿರ್ಮಲ ವ್ಯಕ್ತಿತ್ವವು ಕಲುಷಿತ ಸಮಾಜಕ್ಕೊಂದು ನೈಜ ‘ಅಮೃತ ಬಳ್ಳಿ ಕಷಾಯ’ವಾಗಿ ಪರಿಣಮಿಸುತ್ತದೆ. ಭಾಸ್ಕರನಾಗಿ ನಾಗೇಂದ್ರ ಶ್ರೀನಿವಾಸ್ ಮತ್ತು ದುರ್ಗಾಜಿಯಾಗಿ ರಮ್ಯಾ ಶೇಖರ್ ಅವರ ನಟನೆಯೂ ನಾಟಕದ ಜೀವಂತಿಕೆಯನ್ನು ಹೆಚ್ಚಿಸಿದೆ.

ನಾಟಕವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವುದು ಪ್ರಶಾಂತ ಹಿರೇಮಠ ಅವರ ಸಂಗೀತ. ಮರಾಠಿ ಗೀತೆಗಳನ್ನು ಬಳಸಿಕೊಂಡು ರೂಪಿಸಿದ ಹಿನ್ನೆಲೆ ಸಂಗೀತವು ಮುಂಬೈ ನಗರದ ನೈಜ ಮತ್ತು ಅಲ್ಲಿನ ಸಾಂಸ್ಕೃತಿಕ ಕಂಪನ್ನು ಕಣ್ಣಿಗೆ ಕಟ್ಟುತ್ತದೆ. ಸಂಕೀರ್ಣವಾದ ಕಥೆಯೊಂದನ್ನು, ಅತ್ಯಂತ ಸರಳವಾಗಿ, ಆಳವಾಗಿ ಪ್ರಭಾವ ಬೀರುವಂತೆ ರಂಗದ ಮೇಲೆ ತಂದಿರುವುದು ಶಿವ ತಂಡದ ದೊಡ್ಡ ಸಾಧನೆ. ಇದು ನಾಟಕವಾಗಿ ಉಳಿಯದೆ, ಕಲುಷಿತ ಮನಸ್ಸುಗಳನ್ನು ತೊಳೆಯುವ, ರಂಗದ ಮೇಲೆ ಜಿನುಗಿದ ಸುಂದರ ದೃಶ್ಯಕಾವ್ಯವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.