ಜನರಿಗೆ ತಲುಪದ ಯೋಜನೆಯನ್ನು ಹಾಗೇ ಇಟ್ಟುಕೊಳ್ಳುವುದೋ ಅಥವಾ ಅದನ್ನು ಆಧುನಿಕ ಮತ್ತು ಅನುಷ್ಠಾನಯೋಗ್ಯಗೊಳಿಸುವುದೋ ಯಾವುದು ಸರಿ ಎಂದು ನಿರ್ಧರಿಸುವುದು ಮುಖ್ಯ. ಅಭಿವೃದ್ಧಿಯ ಮೂಲಕ ಕಲ್ಯಾಣವನ್ನು ಖಚಿತಪಡಿಸುತ್ತದೆ. ಕೆಲಸಕ್ಕೆ ಕಾನೂನಿನ ಭದ್ರತೆಯನ್ನು ಒದಗಿಸುವುದಲ್ಲದೆ, ಹಕ್ಕುಗಳನ್ನು ವಿಸ್ತರಿಸುತ್ತದೆ.
-ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಕೃಷಿ ಸಚಿವ
ವಿಕಸಿತ ಭಾರತ ಗ್ಯಾರಂಟಿ ರೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ 2025ಕ್ಕೆ (ಜಿ ರಾಮ್ ಜಿ) ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ಈ ಕಾಯ್ದೆಯು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತರಿಯನ್ನು 125 ದಿನಗಳಿಗೆ ವಿಸ್ತರಿಸುತ್ತದೆ. ಅಲ್ಲದೆ, ಗ್ರಾಮೀಣ ಜನರ ಜೀವನೋಪಾಯವನ್ನು ಬಲಪಡಿಸುತ್ತದೆ. ಇದರಿಂದ ಬಲಿಷ್ಠ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣವಾಗಲಿದೆ.
ಈ ಹೊಸ ಕಾಯ್ದೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಉದ್ಯೋಗ ಖಾತರಿ ದುರ್ಬಲಗೊಂಡಿದೆ, ಸಮಾಲೋಚನೆ ಇಲ್ಲದೆ ಜಾರಿಗೆ ತಂದಿದ್ದರಿಂದ ವಿಕೇಂದ್ರೀಕರಣ ಮತ್ತು ಬೇಡಿಕೆ ಆಧರಿತ ಹಕ್ಕುಗಳು ಹಾಳಾಗಿವೆ, ಯಾವುದೇ ಚರ್ಚೆ ಇಲ್ಲದೆ ಕಾಯ್ದೆಯ ಸುಧಾರಣೆ ಮಾಡಲಾಗಿದೆ, ರಾಜ್ಯಗಳಿಗೆ ಹಣ ಬಿಡುಗಡೆ ಕಡಿಮೆ ಮಾಡುವುದನ್ನು ಮರೆಮಾಚಿ ಕಾನೂನನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ ಈ ಎಲ್ಲ ಆರೋಪಗಳೂ ಕಾಯ್ದೆಯ ನಿಜವಾದ ಆಂತರ್ಯ ಮತ್ತು ಉದ್ದೇಶವನ್ನು ತಪ್ಪಾಗಿ ಓದಿದ್ದರಿಂದ ಬಂದಿವೆ.
ಈ ತಪ್ಪು ತಿಳಿವಳಿಕೆಗೆ ಮೂಲ ಕಾರಣವೇನೆಂದರೆ, ಕಲ್ಯಾಣ ಮತ್ತು ಅಭಿವೃದ್ಧಿಯನ್ನು ಒಂದಕ್ಕೊಂದು ವಿರೋಧಿ ಎಂದು ಭಾವಿಸುವುದು. ಆದರೆ ಹೊಸ ಕಾಯ್ದೆಯನ್ನು ಇದಕ್ಕೆ ವಿರುದ್ಧವಾಗಿ ನಿರ್ಮಿಸಲಾಗಿದೆ. ಜನರ ಜೀವನೋಪಾಯವನ್ನು ಬಲಪಡಿಸುವ ‘ಕಲ್ಯಾಣ’ ಮತ್ತು ಶಾಶ್ವತ ಮೂಲಸೌಕರ್ಯ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ‘ಅಭಿವೃದ್ಧಿ’ – ಇವೆರಡೂ ಒಂದಕ್ಕೊಂದು ಪೂರಕ. ಆದಾಯ ಹೆಚ್ಚಳ, ಆಸ್ತಿ ನಿರ್ಮಾಣ, ಕೃಷಿ ಸ್ಥಿರತೆ ಮತ್ತು ದೀರ್ಘಕಾಲೀನ ಗ್ರಾಮೀಣ ಉತ್ಪಾದಕತೆಯನ್ನು ಈ ಕಾನೂನಿನಲ್ಲಿ ಒಂದೇ ನಿರಂತರ ಪ್ರಕ್ರಿಯೆಯಾಗಿ ನೋಡಲಾಗಿದೆ. ಇದು ಕೇವಲ ಆಶಯದ ಮಾತಲ್ಲ; ಕಾಯ್ದೆಯ ವಿನ್ಯಾಸದಲ್ಲೇ ಅಡಕವಾಗಿದೆ.
ಕಾನೂನು ಭದ್ರತೆ ದುರ್ಬಲವಾಗಿಲ್ಲ
ಹೊಸ ಕಾಯ್ದೆಯಲ್ಲಿ, ಉದ್ಯೋಗಕ್ಕೆ ಕಾನೂನಿನ ಭದ್ರತೆ ದುರ್ಬಲಗೊಂಡಿದೆ ಎಂದು ಆರೋಪಿಸಲಾಗುತ್ತಿದೆ. ಇದು ಸಂಪೂರ್ಣ ತಪ್ಪು. ಕಾಯ್ದೆಯು ಉದ್ಯೋಗ ಖಾತರಿಯ ಕಾನೂನುಬದ್ಧ ಮತ್ತು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾದ ಹಕ್ಕನ್ನು ಉಳಿಸಿಕೊಂಡಿದೆ. ಅದರ ಜಾರಿಯನ್ನು ಇನ್ನಷ್ಟು ಬಲಪಡಿಸಿದೆ. ಉದ್ಯೋಗ ಖಾತರಿ ಈ ಹಿಂದಿನ 100 ದಿನದಿಂದ 125 ದಿನಗಳಿಗೆ ಹೆಚ್ಚಾಗಿದೆ. ಹಿಂದೆ ನಿರುದ್ಯೋಗ ಭತ್ಯೆಯನ್ನು ರದ್ದುಗೊಳಿಸುತ್ತಿದ್ದ ನಿಯಮಗಳನ್ನು ಈಗ ತೆಗೆದುಹಾಕಲಾಗಿದೆ. ಸಮಯಕ್ಕೆ ಸರಿಯಾಗಿ ದೂರು ನಿವಾರಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ಸುಧಾರಣೆಯು ಕಾನೂನು ಭರವಸೆ ಮತ್ತು ನೈಜ ಜೀವನದ ನಡುವೆ ಇದ್ದ ದೊಡ್ಡ ಅಂತರವನ್ನು ನಿವಾರಣೆ ಮಾಡುತ್ತದೆ.
ಗ್ರಾಮೀಣ ಭಾಗದಲ್ಲಿ ಬೇಡಿಕೆಯಿರುವ ಮತ್ತು ಅಗತ್ಯವಾದ ಉದ್ಯೋಗವನ್ನು ಬಿಟ್ಟು ಕೇಂದ್ರದಿಂದ ತಮಗೆ ಬೇಕಾದ ಯೋಜನೆ ಹೇರುತ್ತಾರೆ ಎಂಬ ಆರೋಪವೂ ಸುಳ್ಳು. ಹೊಸ ಕಾಯ್ದೆಯಿಂದಾಗಿ ಕೆಲಸಕ್ಕೆ ಬೇಡಿಕೆ ಕಾರ್ಮಿಕರಿಂದಲೇ ಸೃಷ್ಟಿಯಾಗುತ್ತದೆ. ಈ ಮೊದಲು ಯಾವುದಾದರೂ ಸಮಸ್ಯೆ ಉಂಟಾದ ನಂತರವಷ್ಟೇ ಅದಕ್ಕೆ ಪರಿಹಾರ ನೀಡಲಾಗುತ್ತಿತ್ತು. ಆದರೆ ಈಗ ಮುಂಚಿತವಾಗಿ ಗ್ರಾಮ ಮಟ್ಟದಲ್ಲಿಯೇ ಬಗೆಹರಿಸುವ ಯೋಜನೆ ಮಾಡಲಾಗುತ್ತದೆ. ಇದರಿಂದ ಕಾರ್ಮಿಕರು ಕೆಲಸ ಕೇಳಿದಾಗ ಆಡಳಿತದ ಕಾರಣದಿಂದ ನಿರಾಕರಣೆ ಆಗುವುದಿಲ್ಲ. ತಕ್ಷಣ ಕೆಲಸ ಲಭ್ಯವಿರುತ್ತದೆ. ಯೋಜನೆಯು ಕೆಲಸದ ಬೇಡಿಕೆಯನ್ನು ಕುಗ್ಗಿಸುವುದಿಲ್ಲ; ಅದನ್ನು ಹೆಚ್ಚಿಸುತ್ತದೆ.
ಗ್ರಾಮ ಪಂಚಾಯತ್‌ಗಳಿಗೆ ಅಧಿಕಾರ
ಈ ಕಾಯ್ದೆಯಿಂದ ಕೇಂದ್ರೀಕರಣ ಉಂಟಾಗುತ್ತದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಆರೋಪವೂ ಸರಿಯಲ್ಲ. ಗ್ರಾಮ ಪಂಚಾಯತ್‌ಗಳೇ ಕಾಯ್ದೆಯ ಮುಖ್ಯ ಯೋಜನೆ ಮತ್ತು ಜಾರಿ ಸಂಸ್ಥೆಗಳಾಗಿವೆ. ಗ್ರಾಮಸಭೆಗಳು ಸ್ಥಳೀಯ ಯೋಜನೆಗಳಿಗೆ ಅನುಮೋದನೆ ನೀಡುತ್ತವೆ. ಬದಲಾವಣೆ ಏನೆಂದರೆ, ವಿಕೇಂದ್ರೀಕೃತ ಯೋಜನೆ ಈಗ ಸಂಘಟಿತ ಪ್ರಕ್ರಿಯೆಯಾಗಿ ರೂಪುಗೊಂಡಿದೆ. ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳನ್ನು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಒಟ್ಟುಗೂಡಿಸಿ ಸಂಯೋಜನೆ ಮಾಡಲಾಗುತ್ತದೆ. ಸ್ಥಳೀಯ ಆದ್ಯತೆಗಳನ್ನು ತಡೆಯುವುದು ಇವುಗಳ ಉದ್ದೇಶ ಖಂಡಿತ ಅಲ್ಲ. ಕೇಂದ್ರೀಕೃತವಾಗಿರುವುದು ಕೇವಲ ಸಮನ್ವಯತೆ; ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸ್ಥಳೀಯವಾಗಿಯೇ ಉಳಿದಿದೆ.
ಹೊಸ ಕಾಯ್ದೆಯ ವಿರುದ್ಧ ಕೇಳಿಬರುತ್ತಿರುವ ಮತ್ತೊಂದು ಆರೋಪ, ಚರ್ಚೆ ಇಲ್ಲದೆ ಇದನ್ನು ಜಾರಿಗೆ ತರಲಾಗಿದೆ ಎಂಬುದು. ಇದು ಕೂಡ ಸತ್ಯಕ್ಕೆ ದೂರ. ಈ ಮಸೂದೆಯನ್ನು ಮಂಡಿಸುವುದಕ್ಕೂ ಮೊದಲು ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಚರ್ಚೆಗಳು, ತಾಂತ್ರಿಕ ಕಾರ್ಯಾಗಾರಗಳು ಮತ್ತು ಬಹುಪಕ್ಷೀಯ ಸಭೆಗಳನ್ನು ನಡೆಸಲಾಗಿದೆ. ಕಾಯ್ದೆಯ ಯೋಜನೆಗಳು, ಕಾರ್ಯವಿಧಾನ ಮತ್ತು ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ರಾಜ್ಯಗಳ ಪ್ರತಿಕ್ರಿಯೆ ಮತ್ತು ವರ್ಷಗಳ ಅನುಷ್ಠಾನದ ಅನುಭವವನ್ನು ಪಡೆದೇ ರೂಪಿಸಲಾಗಿದೆ.
ಹೆಚ್ಚಿದ ಬಜೆಟ್ ಮತ್ತು ಸಮಾನತೆ:
ಕಳೆದ ಒಂದು ದಶಕದ ಎನ್‌ಡಿಎ ಅವಧಿಯಲ್ಲಿ ಉದ್ಯೋಗ ಖಾತರಿಯನ್ನು ದುರ್ಬಲಗೊಳಿಸಲಾಗಿದೆ ಎಂದು ವಿರೋಧಿಗಳು ಆರೋಪಿಸುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು. 2013-14ರಲ್ಲಿ 33,000 ಕೋಟಿ ರು.ಗಳಿದ್ದ ಬಜೆಟ್ ಹಂಚಿಕೆ 2024-25ಕ್ಕೆ 2,86,000 ಕೋಟಿ ರು.ಗೆ ಏರಿದೆ. ಕೆಲಸದ ದಿನಗಳು 1,660 ಕೋಟಿಯಿಂದ 3,210 ಕೋಟಿಗೆ ಏರಿಕೆಯಾಗಿವೆ. ಕೇಂದ್ರದಿಂದ ಬಿಡುಗಡೆಯಾದ ಹಣ 2.13 ಲಕ್ಷ ಕೋಟಿ ರು.ನಿಂದ 8.53 ಲಕ್ಷ ಕೋಟಿ ರು.ಗೆ ಏರಿದೆ. ಪೂರ್ಣಗೊಂಡ ಕಾಮಗಾರಿಗಳು 153 ಲಕ್ಷದಿಂದ 862 ಲಕ್ಷಕ್ಕೆ ವಿಸ್ತರಣೆಯಾಗಿವೆ. ಮಹಿಳೆಯರ ಭಾಗವಹಿಸುವಿಕೆ ಶೇ.48ರಿಂದ ಶೇ.56.73ಕ್ಕೆ ಏರಿದೆ. ಈಗ ಶೇ.99ರಷ್ಟು ಹಣ ವರ್ಗಾವಣೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿವೆ ಮತ್ತು ಬಹುತೇಕ ಕಾರ್ಮಿಕರು ಆಧಾರ್ ಕಾರ್ಡ್‌ನೊಂದಿಗೆ ಜೋಡಿಸಿಕೊಂಡಿದ್ದಾರೆ. ಆದರೆ ಹಿಂದಿನ ಕಾಯ್ದೆಯಲ್ಲೇ ಕೆಲವು ನ್ಯೂನತೆಗಳಿದ್ದವು. ಕೆಲ ಕಾಲವಷ್ಟೇ ಉದ್ಯೋಗ, ನಿರುದ್ಯೋಗ ಭತ್ಯೆಯ ಅನಿಗದಿತ ಜಾರಿ ಮತ್ತು ನಕಲಿ ಎಂಟ್ರಿಗಳಂತಹ ದೋಷಗಳಿದ್ದವು. ಇವು ಬರಗಾಲ, ವಲಸೆ ಮತ್ತು ಕೋವಿಡ್ ಸಮಯದಲ್ಲಿ ಸ್ಪಷ್ಟವಾಗಿ ಗೋಚರವಾದವು.
ಹೊಸ ಕಾಯ್ದೆಯಡಿ ಉದ್ಯೋಗ ಖಾತರಿ ಯೋಜನೆಗೆ ನೀಡುವ ಹಣದಲ್ಲಿ ಕಡಿತ ಮಾಡಲಾಗುತ್ತದೆ ಎಂಬ ಸುಳ್ಳನ್ನು ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ ಹೊಸ ಕಾಯ್ದೆಯ ಮೂಲಕ ಕೇಂದ್ರದ ಹಣಕಾಸಿನ ಕೊಡುಗೆ ಇನ್ನೂ ಹೆಚ್ಚಾಗುತ್ತಿದೆ. ಈ ಹಿಂದಿನ 86,000 ಕೋಟಿ ರು.ಗಳಿಂದ ಸುಮಾರು 2,95,000 ಕೋಟಿ ರು.ಗೆ ಮೊತ್ತ ಏರಿಕೆಯಾಗಿದೆ.
ಯುಪಿಎ ಸರ್ಕಾರದಿಂದ ವೈಫಲ್ಯ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮೊದಲ ಅವಧಿಯಿಂದಲೇ ನರೇಗಾ ವೈಫಲ್ಯ ಆರಂಭವಾಯಿತು. ಕಾಂಗ್ರೆಸ್ ಚುನಾವಣಾ ಪೂರ್ವ ಘೋಷಣೆಯಲ್ಲಿ ಕನಿಷ್ಠ 100 ದಿನಗಳ ಕೆಲಸ ಮತ್ತು ದಿನಕ್ಕೆ 100 ರು. ವೇತನ ಎಂದು ಭರವಸೆ ನೀಡಿತ್ತು. ಆದರೆ 2009ರಲ್ಲೇ ವೇತನವನ್ನು 100 ರು.ಗೆ ಮಿತಿಗೊಳಿಸಿತು. ಇದು ವರ್ಷಗಳ ಕಾಲ ಮುಂದುವರಿಯಿತು. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಗ್ರಾಮೀಣ ಸಮಸ್ಯೆಗಳನ್ನು ನಿರ್ಲಕ್ಷಿಸಿ ಇದನ್ನು ಜಾರಿಗೊಳಿಸಲಾಯಿತು. ರಾಜ್ಯಗಳು ಈ ಯೋಜನೆಯಡಿ ಅನಿಯಂತ್ರಿತವಾಗಿ ವರ್ತಿಸುತ್ತಿವೆ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿತು. ವೇತನ ಸ್ಥಗಿತವನ್ನು ನೆಪವಾಗಿಟ್ಟುಕೊಂಡು ರಾಜ್ಯ ಸರ್ಕಾರಗಳು ಅವ್ಯವಹಾರ ನಡೆಸುತ್ತಿವೆ ಎಂದು ದೂಷಿಸಿತು. ಕೇಂದ್ರದ ಈ ಒಪ್ಪಿಗೆಯೇ ಗಂಭೀರ ಆಡಳಿತ ವೈಫಲ್ಯವನ್ನು ಬಯಲುಮಾಡಿತು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ತನ್ನದೇ ರಾಜ್ಯ ಸರ್ಕಾರಗಳನ್ನು ನಿಯಂತ್ರಿಸಲಾಗದ ಸ್ಥಿತಿಯಲ್ಲಿತ್ತು. ಇದರಿಂದ ನರೇಗಾ ಯೋಜನೆಯು ದುರುಪಯೋಗಕ್ಕೆ, ನಕಲಿ ಜಾಬ್ ಕಾರ್ಡ್‌ಗಳಿಗೆ ಮತ್ತು ಹಣ ಸೋರಿಕೆಗೆ ಬಲಿಯಾಯಿತು.
ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಈ ಯೋಜನೆಗೆ ಬದ್ಧತೆ ಮತ್ತಷ್ಟು ಕಡಿಮೆಯಾಯಿತು. ರಾಜ್ಯಗಳ ಬೇಡಿಕೆ ಹೆಚ್ಚುತ್ತಿದ್ದರೂ ಬಜೆಟ್ ಹಂಚಿಕೆಯನ್ನು 2010-11ರಲ್ಲಿ 40,100 ಕೋಟಿ ರು.ಗಳಿಂದ 2012-13ಕ್ಕೆ 33,000 ಕೋಟಿ ರು.ಗೆ ಇಳಿಕೆ ಮಾಡಲಾಯಿತು. 2013ರಲ್ಲಿ ಸಂಸತ್‌ನಲ್ಲಿ ಕೇಂದ್ರ ರಾಜ್ಯ ಸಚಿವ ರಾಜೀವ್ ಶುಕ್ಲಾ ಅವರು ಈ ಕುರಿತು ಉತ್ತರ ನೀಡಿದರು. ನರೇಗಾ ಯೋಜನೆಯಡಿ ಉದ್ಯೋಗ ಪಡೆದ ಕಾರ್ಮಿಕರ ಸಂಖ್ಯೆ 2010-11ರಲ್ಲಿ 7.55 ಕೋಟಿಯಿಂದ 2013ರ ನವೆಂಬರ್‌ವರೆಗೆ 6.93 ಕೋಟಿಗೆ ತೀವ್ರವಾಗಿ ಇಳಿದಿದೆ ಎಂದು ಒಪ್ಪಿಕೊಂಡರು.
ವರದಿಯಿಂದ ಭ್ರಷ್ಟಾಚಾರ ಬಹಿರಂಗ:
2013ರ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯು ಯುಪಿಎ ಸರ್ಕಾರದ ಅವಧಿಯಲ್ಲಿ ನರೇಗಾ ಯೋಜನೆಯ ನೈಜ ಪರಿಸ್ಥಿತಿಯನ್ನು ಬಯಲುಮಾಡಿತು. ಇದು ವ್ಯಾಪಕ ಭ್ರಷ್ಟಾಚಾರ ಮತ್ತು ಕೆಟ್ಟ ಆಡಳಿತವನ್ನು ಎತ್ತಿ ತೋರಿಸಿತು. ವರದಿಯು 4.33 ಲಕ್ಷಕ್ಕೂ ಹೆಚ್ಚು ನಕಲಿ ಅಥವಾ ದೋಷಯುಕ್ತ ಜಾಬ್ ಕಾರ್ಡ್‌ಗಳನ್ನು ಗುರುತಿಸಿತು ಎಂದು ಕೆಲವು ಮೂಲಗಳು ಹೇಳುತ್ತವೆ. ಸಾವಿರಾರು ಕೋಟಿ ರುಪಾಯಿ ಹಣ ಕಣ್ಮರೆಯಾಯಿತು. ಅನಿಯಮಿತ ಕೆಲಸಗಳು ನಡೆದವು. 23 ರಾಜ್ಯಗಳಲ್ಲಿ ವೇತನ ವಿಳಂಬ ಅಥವಾ ನಿರಾಕರಣೆಯಾಗಿತ್ತು. ಭಾರತದ ಅರ್ಧಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್‌ಗಳಲ್ಲಿ ದಾಖಲೆಗಳು ಸರಿಯಾಗಿ ನಿರ್ವಹಣೆಯಾಗಿರಲಿಲ್ಲ. ಬಡ ಗ್ರಾಮೀಣ ಜನರು ಹೆಚ್ಚಿರುವ ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಒಟ್ಟು ಹಂಚಿಕೆಯಾದ ಹಣದ ಕೇವಲ ಶೇ.20ರಷ್ಟನ್ನು ಮಾತ್ರ ಬಳಸಿದ್ದವು. ಇದು ಯೋಜನೆಯು ಅತ್ಯಂತ ಅಗತ್ಯವಿದ್ದ ಕಡೆಗಳಲ್ಲೇ ವಿಫಲವಾದುದನ್ನು ಎತ್ತಿ ತೋರಿಸುತ್ತದೆ.
ಅನುಭವದಿಂದ ಪಕ್ವಗೊಂಡ ಕಾಯ್ದೆ:
ಕಲ್ಯಾಣ ಮತ್ತು ಅಭಿವೃದ್ಧಿಯ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡುವಂತೆ ಚರ್ಚೆಯನ್ನು ಎಳೆದು ತರುವುದು ತಪ್ಪು. ಜೀವನೋಪಾಯದಲ್ಲಿ ನೆಲೆಗೊಂಡ ಕಲ್ಯಾಣ, ಶಾಶ್ವತ ಗ್ರಾಮೀಣ ಮೂಲಸೌಕರ್ಯ ಹಾಗೂ ಉತ್ಪಾದಕತೆಯಲ್ಲಿ ನೆಲೆಗೊಂಡ ಅಭಿವೃದ್ಧಿ – ಇವು ಪರಸ್ಪರ ವಿರೋಧಿ ಗುರಿಗಳಲ್ಲ. ಬದಲಾಗಿ ಇವು ಒಂದಕ್ಕೊಂದು ಅವಲಂಬಿತವಾಗಿವೆ. ಸರಿಯಾಗಿ ಜನರಿಗೆ ತಲುಪದ ಯೋಜನೆಯನ್ನು ಹಾಗೇ ಇಟ್ಟುಕೊಳ್ಳುವುದೋ ಅಥವಾ ಅದನ್ನು ಆಧುನಿಕ, ಅನುಷ್ಠಾನಯೋಗ್ಯ ಮತ್ತು ಸಂಯೋಜಿತ ಉದ್ಯೋಗ ಖಾತರಿಯನ್ನಾಗಿ ಸುಧಾರಿಸುವುದೋ - ಯಾವುದು ಸರಿ ಎಂದು ನಿರ್ಧರಿಸುವುದು ಅತ್ಯಂತ ಮುಖ್ಯ. ಈ ಸುಧಾರಣೆಯು ಅಭಿವೃದ್ಧಿಯ ಮೂಲಕ ಕಲ್ಯಾಣವನ್ನು ಖಚಿತಪಡಿಸುತ್ತದೆ. ಕೆಲಸಕ್ಕೆ ಕಾನೂನಿನ ಭದ್ರತೆಯನ್ನು ಒದಗಿಸುವುದಲ್ಲದೆ, ಆ ಹಕ್ಕುಗಳನ್ನು ಮತ್ತಷ್ಟು ವಿಸ್ತರಿಸುತ್ತದೆ. ನರೇಗಾ ಯೋಜನೆಯನ್ನು ಜಾರಿಗೊಳಿಸಿದ ವರ್ಷಗಳ ಅನುಭವದ ಮೂಲಕ ಹೊಸ ಕಾಯ್ದೆಯಲ್ಲಿ ರಚನಾತ್ಮಕ ಸುಧಾರಣೆಗಳನ್ನು ಮಾಡಲಾಗಿದೆ. ಇದು ನಾಶವಲ್ಲ; ಬದಲಾಗಿ ಅನುಭವದಿಂದ ಪಕ್ವಗೊಂಡ ಸುಧಾರಣಾ ಪ್ರಕ್ರಿಯೆ.


