Asianet Suvarna News Asianet Suvarna News

ಕಾಫಿ ಬೆಳೆಗಾರರಿಗೂ ಅದರ ಲಾಭ ಸಿಗುವಂತೆ ಮಾಡೋದು ಹೇಗೆ? ಇಲ್ಲಿದೆ ನೋಡಿ ಹಲವು ಬ್ಯುಸಿನೆಸ್ ಐಡಿಯಾ

ಮನಸ್ಸಿಗೆ ತಾಜಾತನ ನೀಡುವ ಕಾಫಿ ಮಾರಲು ಶುರು ಮಾಡಿದ ಉದ್ಯಮಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಆಗಿದ್ದಲ್ಲದೇ ಶ್ರೀಮಂತರು ಆಗಿದ್ದಾರೆ. ಆದರೆ ಸಣ್ಣಪುಟ್ಟ ಕಾಫಿ ಬೆಳೆಗಾರರು ಮಾತ್ರ ತಾವೆಲ್ಲಿದ್ದರೂ ಅಲ್ಲೇ ಇದ್ದಾರೆ. ಕೆಲ ಐಡಿಯಾಗಳನ್ನು ಮಾಡಿದ್ರೆ ಈ ಬೆಳೆಗಾರರು ಕೂಡ ಶ್ರೀಮಂತರಾಗ್ಬಹುದು. ಆ ಬಗ್ಗೆ ಇಲ್ಲಿದೆ ಒಂದು ಸ್ಟೋರಿ

How to make coffee planters become rich by coffee product Here are many business ideas akb
Author
First Published Sep 9, 2024, 1:47 PM IST

ನಂದಿನಿ ಹೆದ್ದುರ್ಗ
ತನ್ನ ಧಾರಣೆಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವ ಉತ್ಪನ್ನಗಳಲ್ಲಿ ಕಾಫಿ ಮುಖ್ಯವಾದುದು. ಯಾವುದೊ ದೇಶದ ಅತಿವೃಷ್ಟಿ ಅನಾವೃಷ್ಟಿ, ನೈಸರ್ಗಿಕ ಪ್ರಕೋಪಗಳು, ಯುದ್ದ, ಷೇರು ಮಾರುಕಟ್ಟೆಯ ಏರಿಳಿತಗಳಂತಹ ಸಂಗತಿಗಳು ಕಾಫಿ ಬೆಲೆಯನ್ನು ತೂಗುಯ್ಯಾಲೆಯಲ್ಲಿಟ್ಟಿವೆ.

ಶೇಡ್ ಗ್ರೋನ್, ಹ್ಯಾಂಡ್ ಪಿಕ್ಡ್ , ಸನ್‌ಡ್ರೈಡ್ ಎನ್ನುವುದು ನಮ್ಮ ಕಾಫಿಯ ವೈಶಿಷ್ಟ್ಯ.

ಕೇವಲ ಪಾನೀಯವಾಗಿ ಬಳಕೆಯಾಗ್ತಿರುವ ಕಾಫಿಯ ಇತರೆ ಸಾಧ್ಯತೆಗಳ ಅಧ್ಯಯನ ವ್ಯವಸ್ಥಿತವಾಗಿ ಆದಾಗ ಕಾಫಿಯ ಆದಾಯದ ಮೂಲಗಳೂ ಬದಲಾಗಬಹುದು. ಈ ನಿಟ್ಟಿನಲ್ಲಿ ಕೆಲವು ಸಾಧ್ಯತೆಗಳು ಇಲ್ಲಿವೆ.

ಕಾಫಿ vs ಬಿಯರ್: ಯಾವ ಪಾನೀಯ ದೇಹಕ್ಕೆ ಹೆಚ್ಚು ಉತ್ತೇಜಕವಾಗಿದೆ?

* ಅಂತರಿಕ ಬಳಕೆ ಹೆಚ್ಚಿಸುವುದು

ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಕಾಫಿ ಬಳಕೆಯ ಕುರಿತು ಅರಿವು ಮೂಡಿಸುವುದು ಮತ್ತು ಶೀತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸೈನಿಕರಿಗೆ ಕಾಫಿ ಒದಗಿಸುವುದು ಕಾಫಿಯ ಆಂತರಿಕ ಬಳಕೆಯನ್ನು ಹೆಚ್ಚಿಸುತ್ತದೆ.

* ಕಾಫಿ ಪ್ರವಾಸೋದ್ಯಮ

ಕಾಫಿ ತೋಟವೆಂದರೆ ಜೀವ ವೈವಿಧ್ಯತೆಯ ತಾಣ. ದಟ್ಟ ಹಸಿರಿನ ಕಾಫಿ ತೋಟಗಳ ಮಧ್ಯೆ ಕಾಟೇಜ್‌, ರೆಸಾರ್ಟುಗಳನ್ನು ನಿರ್ಮಿಸಿ ಮಹಾನಗರವಾಸಿಗಳಿಗೆ ಆತಿಥ್ಯ ಒದಗಿಸುವುದು. ಇದರೊಂದಿಗೆ ಪ್ರಾದೇಶಿಕ ಪ್ರವಾಸ ಸ್ಥಳಗಳ ಟೂರಿಸಮ್ ಮಾಡಿಸುವುದು, ಸ್ಥಳೀಯ ಊಟೋಪಚಾರಗಳ ಮೂಲಕ ಆತಿಥ್ಯ ಒದಗಿಸುವುದನ್ನು ಮಾಡಬಹುದು. ಆದರೆ ಇಲ್ಲಿರುವ ಇತಿಮಿತಿಗಳು ಸಾಕಷ್ಟಿದೆ. ರೆಸಾರ್ಟು ನಿರ್ಮಾಣದಲ್ಲಿ ಆದಾಯದ ಜೊತೆಗೆ ಪರಿಸರ ಕಾಳಜಿಯ ಅಗತ್ಯವಿದೆ. ಸ್ಥಳೀಯ ಸ್ಥಿತಿಗತಿಗಳ ಅಧ್ಯಯನ ಮಾಲೀಕರಿಗೆ ಇರಬೇಕಿದೆ.

* ಕಾಫಿ ಎಲೆಯ ಔಷಧೀಯ ಮತ್ತು ಪೇಯಭರಿತ ಗುಣಗಳ ಕುರಿತು ಸಂಶೋಧನೆ

ಈಗ್ಗೆ ಮೂರು ದಶಕದ ಹಿಂದೆ ದಿನಚರಿಯ ಆರೋಗ್ಯ ಸಮಸ್ಯೆಗೆ ಕಾಫಿಯ ಚಿಗುರನ್ನು ಬಿಸಿನೀರಿನಲ್ಲಿ ಕಿವುಚಿ ಅದಕ್ಕೆ ಅರಿಶಿನ ಬೆರೆಸಿ ಸ್ವಲ್ಪ ಜೇನು ಹಾಕಿ ಕುಡಿಸಿದರೆ ಅರ್ಧ ತಾಸಿನಲ್ಲಿ ಆರೋಗ್ಯ ಸಹಜವಾಗುತ್ತಿತ್ತು. ಕಾಫಿ ಎಲೆಯಲ್ಲಿರುವ ಕೆಫಿನ್ ರಿಚ್ ಸ್ವಭಾವ ಇದಕ್ಕೆ ಕಾರಣವಿರಬಹುದಾ, ಅದರ ಹೊರತಾಗಿ ಕಾಫಿ ಎಲೆಯಲ್ಲಿರುವ ಉತ್ತೇಜಕ ಗುಣಗಳು ಯಾವುದು? ಕಾಫಿ ಎಲೆಯ ರಾಸಾಯನಿಕ ಸಂಯೋಜನೆಗಳು ಇದಕ್ಕೆ ಕಾರಣವಾ?

ಧಾರಾಕಾರ ಮಳೆಗೆ ನಷ್ಟವಾಯ್ತು ಕಾಫಿ ಬೆಳೆ! ಸಂಕಷ್ಟದಲ್ಲಿ ರೈತರು!

ಆರೋಗ್ಯ ಸುಧಾರಿಸುವುದರ ಜೊತೆಗೆ ಆ ಪಾನೀಯ ಕುಡಿಯಲು ಕೂಡ ಹದವಾಗಿರುತ್ತಿತ್ತು. ಆರೋಗ್ಯಕಷ್ಟೇ ಅಲ್ಲದೆ ಪೇಯವಾಗಿಯೂ(as tea) ಕಾಫಿಯ ಸೊಪ್ಪು ಬಳಕೆಯಾಗುವುದಾದರೆ ಕಸಿ, ಚಿಗುರು, ಕಂಬಚಿಗುರು ಸಮಯದಲ್ಲಿ ಹೊರೆಗಟ್ಟಲೆ ಬೀಳುವ ಸೊಪ್ಪು ಆದಾಯವಾಗಬಹುದೇ?

* ಪರಿಮಳ ದ್ರವ್ಯ ಮತ್ತು ಜೇನು ಸಾಕಾಣಿಕೆ.

ಸುಗಂಧ ದ್ರವ್ಯಗಳ ಉದ್ದಿಮೆ ಎಲ್ಲೆಡೆ ಬಹುದೊಡ್ಡ ಆರ್ಥಿಕತೆಯನ್ನು ಹೊಂದಿದೆ. ಅದರಲ್ಲೂ ಸ್ವಾಭಾವಿಕ ಪರಿಮಳಗಳ ಸುಗಂಧ ದ್ರವ್ಯಗಳಿಗೆ ಬಹು ಬೇಡಿಕೆ ಆದಿಕಾಲದಿಂದಲೂ ಇದೆ. ಕಾಫಿ ತೋಟದ ಒಂದಷ್ಟು ಭಾಗವನ್ನು(part of estate) ಕೃತಕ ಸಿಂಪರಣೆಯ ಮೂಲಕ ಮತ್ತೆ ಮತ್ತೆ ಹೂವು ಅರಳುವಂತೆ ಮಾಡಿ ಈ ಹೂವಿನಿಂದ ಸುಗಂಧ ದ್ರವ್ಯ ತಯಾರಿಸಲು ಸಾಧ್ಯವಿದೆಯಾ? ಈ ನಿಟ್ಟಿನಲ್ಲಿ ಅಗತ್ಯ ಸಂಶೋಧನೆ ಆಗಬೇಕಿದೆ. ಕಾಫಿ ಹೂವಿನಲ್ಲಿ ಮಕರಂದವೂ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಜೇನು ಸಾಕಾಣಿಕೆ ಕೂಡ ಸಾಧ್ಯವಿದೆ. ವಿಶೇಷವಾಗಿ ಕಾಫಿ ಹೂವಿನ ಜೇನು ರುಚಿಯಲ್ಲೂ ಬಣ್ಣದಲ್ಲೂ ವಿಶಿಷ್ಟವಾಗಿರುತ್ತದೆ. ಹಾಗಾಗಿ ಈ ಜೇನಿಗೆ ಬೇಡಿಕೆಯೂ ಬೆಲೆಯೂ ಸದಾ ಇರುತ್ತದೆ. ವಿದೇಶಿ ಮಾದರಿಯಲ್ಲಿ ಕಾಫಿ ಹೂವಿನ ಪರಾಗಸ್ಪರ್ಶ ಕ್ರಿಯೆಗೆ ಜೇನುಗಳನ್ನು ಬಹು ದೊಡ್ಡ ಮಟ್ಟದಲ್ಲಿ ಬಳಕೆ ಮಾಡಿಕೊಂಡರೆ ಕಾಫಿ ಇಳುವರಿಯು ಹೆಚ್ಚುತ್ತದೆ.

* ಕಾಫಿ ಬೊಡ್ಡೆಯಿಂದ ಕರಕುಶಲ ಕಲೆಗಳು ಮತ್ತು ಫರ್ನಿಚರ್ ತಯಾರಿಕೆ

ಕಾಫಿ ಬಹು ವಾರ್ಷಿಕ ಬೆಳೆಯೇ ಆದರೂ ಕಾರಣಾಂತರಗಳಿಂದ ಇಪ್ಪತ್ತು ಮುವ್ವತ್ತು ವರ್ಷಗಳಲ್ಲಿ ಕಾಫಿಯನ್ನು ಕೀಳಬೇಕಾಗುತ್ತದೆ. ರೋಗಪೀಡಿತ ಹಾಗು ವಯಸ್ಸಾದ ಕಾಫಿಬೊಡ್ಡೆಗಳನ್ನು ಪ್ರತಿವರ್ಷ ಕೀಳುತ್ತೇವೆ. ಕಿತ್ತ ಕಾಫಿ ಬೊಡ್ಡೆಗಳಿಂದ ಅತ್ಯುತ್ತಮ ಕರಕುಶಲ ಕಲೆಗಳು ಪೀಠೋಪಕರಣಗಳನ್ನು ಮಾಡಬಹುದಾಗಿದೆ. ಸರ್ಕಾರ ಸ್ಥಳೀಯ ಆಸಕ್ತರಿಗೆ ತರಬೇತಿ ಕೊಟ್ಟರೆ ಎರಡನೇ ಹಂತದ ಉದ್ಯೋಗ ಸೃಷ್ಟಿ ಸಾಧ್ಯ.

* ಕಾಫಿ ಸಿಪ್ಪೆಯಿಂದ ಇಂಧನ ತಯಾರಿಕೆ ಮಾಡುವುದು.

ಬಹುತೇಕ ಕಾಫಿಯ ಕೊನೆಯ ಹಂತ ಪಲ್ಪರ್. ಅಲ್ಲಿ ಬೇಳೆ ಮತ್ತು ಸಿಪ್ಪೆ ಬೇರೆಯಾಗುತ್ತದೆ. ಪಲ್ಪರಿನಲ್ಲಿ ಸಿಕ್ಕುವ ಕಾಫಿ ಸಿಪ್ಪೆಯನ್ನು ಫ್ಯಾಕ್ಟರಿಗೆ ಒದಗಿಸಿ ಕಟ್ಟಿಗೆ ಆಕಾರ ಕೊಟ್ಟು ಈಗಾಗಲೆ ಅಲ್ಲಲ್ಲಿ ಇಂಧನವಾಗಿ ಬಳಸುತ್ತಿದ್ದಾರೆ. ಇದರಲ್ಲಿ ಇನ್ನಷ್ಟು ಇನ್ನೋವೇಟಿವ್ ಐಡಿಯಾಗಳು ಮುಂದೆ ಸಿಗಬಹುದು. ಕಾಕಂಬಿಯಿಂದ ಇಥೆನಾಲ್ ತಯಾರಿಸಿದಂತೆ ಕಾಫಿ ಸಿಪ್ಪೆಯಿಂದ ತಯಾರಿಸುವ ಸಾಧ್ಯತೆ ಇದೆಯಾ? ಸಂಶೋಧನೆಯ ಅಗತ್ಯವಿದೆ.

* ಸಿಪ್ಪೆಯ ಚೊಗರು ಹುದುಗಿಸಿ ಕೃತಕ ಬಣ್ಣ ತಯಾರಿಕೆ

ಅಡಿಕೆ ಬೇಯಿಸುವಾಗ ಬರುವ ಚೊಗರಿನಿಂದ ಕೃತಕ ಬಣ್ಣ ತಯಾರಿಸಿದಂತೆ ಕಾಫಿ ಸಿಪ್ಪೆಯಲ್ಲೂ ಕೂಡ ಸಾಧ್ಯವಿದೆ. ಇದು ನೈಸರ್ಗಿಕ ಬಣ್ಣವಾದ್ದರಿಂದ ಉತ್ತಮ ಮಾರುಕಟ್ಟೆಯ ಸಾಧ್ಯತೆ ಇದೆ.

* ಕಾಫಿ ವೈನ್.

ಕಾಫಿ ವಿಸ್ಕಿ, ಕಾಫಿ ವೈನ್ ಗಳು ಈಗಾಗಲೆ ಜನಪ್ರಿಯವಾಗಿವೆ. ಇವುಗಳ ಬಳಕೆ ಮತ್ತು ಉಪಯೋಗ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪುಗೊಳ್ಳಬೇಕಾಗಿದೆ.

* ಕಾಫಿ ಕಾಂಪೋಸ್ಟ್

ಕಾಫಿ ಸಿಪ್ಪೆಯನ್ನು ವಿಘಟಿಸಿ ಮಾಡುವ ಗೊಬ್ಬರ ಮಣ್ಣಿಗೆ ಶಕ್ತಿಯನ್ನು ಹೆಚ್ಚಿಸುತ್ತದೆ.

* ಕಾಫಿ ಗಿಫ್ಟ್.

ಕಾಫಿ ಬೇಳೆ ,ಹಣ್ಣು ,ಕಾಫಿಯ ಸಂಸ್ಕರಿಸಿದ ಒಣ ಹೂವು ಇವುಗಳನ್ನು ಉಡುಗೊರೆಗಳಾಗಿ ಕಲಾವಿದರು ಬದಲಿಸಿದ್ದಾರೆ. ಕಾಫಿ ನಾಡಿನಲ್ಲಿ ಕಾಫಿ ಹಾರಗಳು, ಕಾಫಿ ವಾಲ್ ಆರ್ಟ್‌ಗಳು, ಕಾಫಿ ಪೇಂಟಿಂಗ್‌ಗಳು ಜನಪ್ರಿಯವಾಗಿದೆ. ನೈಸರ್ಗಿಕ ಬಣ್ಣವಾದ್ದರಿಂದ ಉತ್ತಮ ಆದಾಯದ ಸಾಧ್ಯತೆ ಇದೆ.

* ಕಾಫಿಯಿಂದ ಸೌಂದರ್ಯ ಸಾಮಗ್ರಿಗಳು

ಕಾಫಿಯಲ್ಲಿರುವ ಕೆಫಿನ್ ಚರ್ಮಕ್ಕೆ ಉಪಯುಕ್ತ. ಕಾಫಿಯಿಂದ ಥರಾವರಿ ಸ್ಕಿನ್ ಕೇರ್ ಸಾಮಗ್ರಿಗಳು ಈಗಾಗಲೇ ಜನಪ್ರಿಯವಾಗಿವೆ. ಫೇಸ್ ಮಾಸ್ಕ್, ಸ್ಕ್ರಬರ್, ಲಿಪ್ ಕೇರ್, ಸ್ಕಿನ್ ಮಾಯಿಶ್ಚರೈಸರ್‌ನಂತಹ ಹತ್ತು ಹಲವು ಪ್ರಸಾದನಗಳನ್ನ ಕಾಫಿಯನ್ನು ಬಳಸಿ ತಯಾರಿಸಲಾಗುತ್ತಿದೆ. ಇವುಗಳ ಉಪಯೋಗ ಮತ್ತು ಜನಪ್ರಿಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ಆಗಬೇಕಿದೆ.

* ಕಾಫಿ ಪರ್ಫ್ಯೂಮ್ಸ್.

ದುಬಾರಿಯಾದ ಈ ಪರಿಮಳ ದ್ರವ್ಯ ಜನರನ್ನು ತಲುಪುವಲ್ಲಿ ಯೋಜನೆಗಳನ್ನು ರೂಪಿಸಬೇಕಾಗಿದೆ.

* ಕಾರ್ಬನ್ ಕ್ರೆಡಿಟ್.

ಕಾಫಿ ಮೂರು ಹಂತಗಳ ನೆರಳಿನಲ್ಲಿ ಬೆಳೆಯುವ ಬೆಳೆ. ಹಾಗಾಗಿ ಇಲ್ಲಿ ಜೀವ ವೈವಿಧ್ಯತೆ ಸಹಜ. ಇದರಿಂದಾಗಿ ತೋಟದಲ್ಲಿರುವ ಕಾರ್ಬನ್ ಪ್ರಮಾಣ ಕೂಡ ಉತ್ತಮವಾಗಿರುತ್ತದೆ. ಕಾರ್ಬನ್ ಕ್ರೆಡಿಟ್ ಈ ಹೊತ್ತಿನಲ್ಲಿ ಸದ್ದು ಮಾಡುತ್ತಿರುವ ವಿಷಯ. ಕಾಫಿ ಬೆಳೆಗಾರರಿಗೆ ಪ್ರತಿ ಎಕರೆಗೆ ಗರಿಷ್ಠ ಪ್ರಮಾಣದಲ್ಲಿ ಕಾರ್ಬನ್ ಕ್ರೆಡಿಟ್ ಪಡೆಯುವ ಎಲ್ಲ ಅರ್ಹತೆಯು ಇದೆ. ಸರ್ಕಾರ ಈ ನಿಟ್ಟಿನಲ್ಲಿ ಬೆಳೆಗಾರರ ಸಹಾಯಕ್ಕೆ ಬರಬೇಕಿದೆ.

* ಕಾಫಿ ಔಷಧಿಗಾಗಿ.

ಕಾಫಿಯಲ್ಲಿರುವ ಕೆಫಿನ್ ತನ್ನ ಉತ್ತೇಜಕ ಗುಣಗಳಿಂದ ಆರೋಗ್ಯಕ್ಕೆ ಉತ್ತಮ ಪರಿಣಾಮ ಕೊಡುತ್ತದೆ. ಮುಖ್ಯವಾಗಿ ಅಲ್ಜೀಮರ್‌ನಂತಹ ತೊಂದರೆಗಳು, ಹೃದಯಘಾತ, ದೇಹದ ಉರಿಯೂತ, ಸಂಧಿವಾತ ಇಂತಹ ಸಮಸ್ಯೆಗಳಿಗೆ ಕಾಫಿ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.

* ಕಾಫಿ ಆಯಿಲ್

ಕಾಫಿಯಲ್ಲಿರುವ ಎಣ್ಣೆ, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಬಳಕೆಯಾಗುತ್ತಿದೆ. ದೇಹದ ಕೊಲೆಸ್ಟ್ರಾಲ್ ನಿರ್ವಹಣೆಯಲ್ಲಿ ಕೂಡ ಈ ಕಾಫಿ ಆಯಿಲ್ ಪ್ರಮುಖ ಪಾತ್ರ ವಹಿಸುತ್ತಿದೆ.

* ಕಾಫಿ ಫುಡ್

ಕಾಫಿಯಿಂದ ಬಿಸ್ಕೆಟ್, ಬನ್, ಕೇಕು, ಚಾಕಲೇಟ್, ಕುಕೀಸ್‌ನಂತಹ ಖಾದ್ಯಗಳು ಆಹಾರಪ್ರಿಯರನ್ನು ಸೆಳೆದಿವೆ. ಜನಸಾಮಾನ್ಯರಿಗೆ ಸುಲಭವಾಗಿ ಸಿಗುವಂತಾದರೆ ಇದರ ಬಳಕೆಯು ಹೆಚ್ಚುತ್ತದೆ.

* ಗ್ರೀನ್ ಕಾಫಿ

ದೇಹ ತೂಕವನ್ನು ನಿಯಂತ್ರಣದಲ್ಲಿಡಲು ಮತ್ತು ಕಾಫಿಯಲ್ಲಿರುವ ಉತ್ಕ್ರಷ್ಟ ಆ್ಯಂಟಿ ಆಕ್ಸಿಡೆಂಟ್‌ಗಳ ಸಹಜ ಉಪಯೋಗಕ್ಕೆ ಗ್ರೀನ್ ಕಾಫಿ ಬಳಕೆ ಆಗ್ತಿದೆ.

* ಕಾಫಿ ಕೆಫೆಸ್

ಕಾಫಿ ಬೆಳೆಯುವ ಮೂರೂ ಜಿಲ್ಲೆಗಳಲ್ಲೂ ಒಳ್ಳೆಯ ಕಾಫಿ ಕುಡಿಯಲು ಸಿಕ್ಕುವುದಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯ. ಯುವ ಸಮುದಾಯ ಈ ನಿಟ್ಟಿನಲ್ಲಿ ಕೆಫೆ ರೆಸ್ಟುರಾಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಮಾಡುವುದರ ಮೂಲಕ ಕಾಫಿಯ ಸ್ಥಳೀಯ ಬಳಕೆ ಹೆಚ್ಚಿಸುವುದರ ಜೊತೆಗೆ ಉದ್ದಿಮೆದಾರರಾಗುವ ಅವಕಾಶಗಳಿವೆ.

* ಕಾಫಿ ಮೌಲ್ಯವರ್ಧನೆ (value addition).

ಕಾಫಿ ಡಿಕಾಕ್ಶನ್ ಪೌಚ್‌ಗಳು ,ರಿಫೀಲ್ ಪ್ಯಾಕುಗಳಿಗೆ ಉತ್ತಮ ಮಾರುಕಟ್ಟೆ ಸಾಧ್ಯತೆ ಇದೆ.

ಸದ್ಯ ಇಷ್ಟು ಸಂಗತಿಗಳು ಕಾಫಿಯ ಇತರೆ ಅದಾಯ ಮೂಲಗಳಾಗಿ ಗೋಚರಿಸುತ್ತಿವೆ. ಆದರೆ ಹೊಸ ಪೀಳಿಗೆಯವರು ತಮ್ಮ ಸೃಜನಶೀಲ ಮತ್ತು ತರ್ಕಬದ್ಧ ನೋಟದಿಂದ ಇಲ್ಲಿ ಇನ್ನಷ್ಟು ಸಾಧ್ಯತೆಗಳನ್ನು ಗುರುತಿಸಿ ಅಳವಡಿಸಿಕೊಳ್ಳಬಹುದು. ಕಾಫಿ ಬೆಳೆಗಾರರು ಒಂದು ಸರ್ಕಾರ ಮಾಡಬಹುದಾದ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದಾರೆ ಎನ್ನುವಾಗ ವ್ಯವಸ್ಥೆ ಬೆಳೆಗಾರರ ಏಳಿಗೆಗೆ ನಿಲ್ಲಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮೇಲಿನ ಸಂಗತಿಗಳು ಸಣ್ಣ ಮಟ್ಟದಲ್ಲಿಯಾದರೂ ಅಳವಡಿಕೆಯಾದರೆ ಕಾಫಿಯ ಪ್ರಾದೇಶಿಕ ಬಳಕೆ ಹೆಚ್ಚಾಗಿ ಮಾರುಕಟ್ಟೆಗಾಗಿ ಅಂತಾರಾಷ್ಟ್ರೀಯ ಅವಲಂಬನೆ ಕ್ರಮೇಣ ನಿಲ್ಲಬಹುದಾದ ಸಾಧ್ಯತೆಗಳಿವೆ.

Follow Us:
Download App:
  • android
  • ios