ಕಾಂಗ್ರೆಸ್ ಸರ್ಕಾರವು ರಾಜ್ಯ ರಾಜಕೀಯವನ್ನು ಮೆಜಾರಿಟಿ ವರ್ಸಸ್ ಮೈನಾರಿಟಿ, ಹಿಂದೂ ವರ್ಸಸ್ ಮುಸ್ಲಿಂ ಎನ್ನುವ ವಿಷ ವರ್ತುಲವನ್ನಾಗಿ ಮಾಡಿಟ್ಟಿದೆ. ಹೀಗೆ ಜನರ ಬದುಕಿಗೆ ಬೆಂಕಿ ಹಚ್ಚಿ, ಅದರ ಬಿಸಿಯಲ್ಲಿ ತನ್ನ ಚಳಿ ಕಾಯಿಸಿಕೊಳ್ಳುತ್ತಿದೆ.
ಲೇಖಕರು: ಡಾ.ಸಿ.ಎನ್.ಅಶ್ವತ್ ನಾರಾಯಣ್, ಶಾಸಕರು, ಮಾಜಿ ಉಪ ಮುಖ್ಯಮಂತ್ರಿ
ಕಾಂಗ್ರೆಸ್ ಸರ್ಕಾರವು ರಾಜ್ಯ ರಾಜಕೀಯವನ್ನು ಮೆಜಾರಿಟಿ ವರ್ಸಸ್ ಮೈನಾರಿಟಿ, ಹಿಂದೂ ವರ್ಸಸ್ ಮುಸ್ಲಿಂ ಎನ್ನುವ ವಿಷ ವರ್ತುಲವನ್ನಾಗಿ ಮಾಡಿಟ್ಟಿದೆ. ಹೀಗೆ ಜನರ ಬದುಕಿಗೆ ಬೆಂಕಿ ಹಚ್ಚಿ, ಅದರ ಬಿಸಿಯಲ್ಲಿ ತನ್ನ ಚಳಿ ಕಾಯಿಸಿಕೊಳ್ಳುತ್ತಿದೆ. ಆದರೆ ದಿನ ಬೆಳಗೆದ್ದು ಪ್ರಧಾನಿ ಮೋದಿಯವರನ್ನು ಟೀಕಿಸುವ, ಹಿಂದೂಗಳ ನಂಬಿಕೆಗಳನ್ನು ಅವಹೇಳನ ಮಾಡುವ ಕೆಲ ʻಆಯ್ದ ಬುದ್ಧಿಜೀವಿಗಳʼ ಬಗ್ಗೆ ಅದು ಜಾಣಮೌನ ಪ್ರದರ್ಶಿಸುತ್ತಿದೆ. ಹೀಗಾದರೆ, ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯದ ಹಕ್ಕು ಕೊಟ್ಟಿರುವ ಅಂಬೇಡ್ಕರ್ ಸಂವಿಧಾನದ ಗತಿ ಏನು?
ಹಿಂದೂಗಳ ದ್ವೇಷ, ಮೈನಾರಿಟಿಗಳ ಓಲೈಕೆ, ಕೋಮುವಾದ, ಭ್ರಷ್ಟಾಚಾರ, ಭಿನ್ನಾಭಿಪ್ರಾಯದ ದಮನ, ಜಾತಿವಾದ, ಕುಟುಂಬ ಕೇಂದ್ರಿತ ರಾಜಕಾರಣ- ಇವೆಲ್ಲವನ್ನೂ ಒಟ್ಟುಗೂಡಿಸಿದರೆ ಅದು ಕಾಂಗ್ರೆಸ್ ಪಕ್ಷವಾಗುತ್ತದೆ ಅಥವಾ ಇವೆಲ್ಲವೂ ಆ ಪಕ್ಷಕ್ಕೆ ಪರ್ಯಾಯ ಹೆಸರುಗಳಾಗಿವೆ. ಅದರಲ್ಲೂ ತಾವು ಅಧಿಕಾರಕ್ಕೆ ಬಂದಿರುವುದೇ ಮುಸ್ಲಿಮರ ವೋಟುಗಳಿಂದ ಮಾತ್ರ ಎನ್ನುವ ಭ್ರಮೆಯಲ್ಲಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ʻದ್ವೇಷʼವನ್ನು ತಡೆಗಟ್ಟುತ್ತೇನೆ ಎನ್ನುವ ಹುಸಿ ಪ್ರಚಾರದಲ್ಲಿ ತಾನೇ ಈ ಸಮಾಜದಲ್ಲಿ ದ್ವೇಷವನ್ನು ಬಿತ್ತುವ ದುಸ್ಸಾಹಸ ಮಾಡಲು ಹೊರಟಿದೆ.
ಕಾಂಗ್ರೆಸ್ ಎಂದರೆ, ಅದು ಹಿಂದೂ-ಮುಸ್ಲಿಂ ಸೂತ್ರದ ಮೇಲೆ ಈ ದೇಶವನ್ನೇ ಇಬ್ಭಾಗ ಮಾಡಿದ ಕಳಂಕ ಮೆತ್ತಿಕೊಂಡಿರುವ ಪಕ್ಷ. ಆ ಬಳಿಕ ದೇಶದ ಮೇಲೆ ತನ್ನ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ತುರ್ತುಪರಿಸ್ಥಿತಿ ಹೇರಿದ ಕುಖ್ಯಾತಿಯೂ ಅದಕ್ಕಿದೆ. ಇದಕ್ಕಾಗಿ, ದೇಶದ ಸಂವಿಧಾನಕ್ಕೆ ಮನಸೋಇಚ್ಛೆ ತಿದ್ದುಪಡಿ ತಂದು ತುರುಕಿದ ಕರಾಳತೆ ಅದಕ್ಕಿದೆ. ಹಾಗೆಯೇ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಇಲ್ಲದೇ ಇದ್ದಂತಹ ʻಜಾತ್ಯತೀತʼ ಮತ್ತು ʻಸಮಾಜವಾದಿʼ ಎನ್ನುವ ಪದಗಳನ್ನು ಸ್ವಾರ್ಥಕ್ಕಾಗಿ ಸೇರಿಸಿದ ಹೀನ ಚರಿತ್ರೆ ಕಾಂಗ್ರೆಸ್ಸಿನದು. ಅದಕ್ಕೆ ಅಂಟಿಕೊಂಡಿರುವ ಇಂತಹ ಕಳಂಕಗಳು ಜಗತ್ತಿನ ಯಾವ ಸುಗಂಧ ದ್ರವ್ಯ ಹಾಕಿದರೂ ಹೋಗುವುದಿಲ್ಲ!
ದೇಶಕ್ಕೆ ವಿರುದ್ಧವಾಗಿ ವರ್ತಿಸುವ ಗುಣ: ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಸಂವಿಧಾನ, ಸಂಸ್ಕೃತಿ, ಧರ್ಮ, ಮೌಲ್ಯ ಇವ್ಯಾವುಗಳ ಮೇಲೆ ಕಿಂಚಿತ್ತೂ ನಂಬಿಕೆ ಇಲ್ಲ. ಇದ್ದಿದ್ದರೆ ಆ ಪಕ್ಷ ಈಗಿನಂತೆ ಹತಾಶವಾಗಿ ವರ್ತಿಸುತ್ತಿರಲಿಲ್ಲ. ʻಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುವಂತೆʼ ಈಗ ಸಿದ್ದರಾಮಯ್ಯನವರ ಸರ್ಕಾರ ʻದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆʼಯನ್ನು ಈ ರಾಜ್ಯದ ಜನರ ಮೇಲೆ ಹೇರಿದೆ. ಇದರ ಹಿಂದಿರುವ ದುರುದ್ದೇಶಗಳೇನು ಎನ್ನುವುದು ಯಾರಿಗಾದರೂ ಗೊತ್ತಾಗುತ್ತದೆ. ಒಟ್ಟಿನಲ್ಲಿ ಆ ಪಕ್ಷ ಆಡಳಿತವನ್ನೇ ನಡೆಸುತ್ತಿರಲಿ, ವಿರೋಧ ಪಕ್ಷವೇ ಆಗಿರಲಿ ಈ ರಾಜ್ಯ/ದೇಶಗಳ ಹಿತಕ್ಕೆ ವಿರುದ್ಧವಾಗಿ ವರ್ತಿಸುವ ಅಪಾಯಕಾರಿ ಗುಣ ಮೈಗೂಡಿಸಿಕೊಂಡಿದೆ ಎನ್ನುವುದು ಸುಳ್ಳಲ್ಲ.
ತಾನು ಅಧಿಕಾರದಲ್ಲಿದ್ದರೆ ಜನ ಯಾವುದೋ ಗುಮ್ಮನನ್ನು ತೋರಿಸಿ ಹತ್ತಿಕ್ಕುವುದು, ಪ್ರತಿಪಕ್ಷಗಳ ಸಾಲಲ್ಲಿದ್ದರೆ ಇನ್ಯಾವುದೋ ಬೆದರು ಬೊಂಬೆ ತೋರಿಸಿ ಹುಯಿಲೆಬ್ಬಿಸುವುದು- ಇವೇ ಅದಕ್ಕೆ ಅಂಟಿರುವ ಜಾಡ್ಯಗಳು. ಕನ್ನಡಿಗರು ಯಾವ ಕಾಲದಿಂದ ನೋಡಿದರೂ ಶಾಂತಿಪ್ರಿಯರು. ಸೌಹಾರ್ದ, ಸಹಬಾಳ್ವೆ, ಸಹೋದರತ್ವ, ಸಾಮರಸ್ಯ, ಸಂವಾದ...ಇವೆಲ್ಲವೂ ಕನ್ನಡ ಜನ ಸಮುದಾಯಗಳ ರಕ್ತದಲ್ಲೇ ಇದೆ. ಆದರೆ, ಇಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಈ ಸಹಜ ಸಾತ್ತ್ವಿಕತೆ ಬೇಕಾಗಿಲ್ಲ. ಹೀಗಾಗಿ ಅದು ʻದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆʼ ಎನ್ನುವ ನಾಟಕ ಶುರು ಮಾಡಿಕೊಂಡಿದೆ.
ಮೈನಾರಿಟಿಗಳ ರಮಿಸಲು ಹೊರಟಿದೆ: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗ ಜನಾಕ್ರೋಶ ಮಡುಗಟ್ಟಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಬರೀ ʻಗ್ಯಾರಂಟಿʼ ಹೆಸರಿನಲ್ಲಿ ನಾಟಕವಾಡುತ್ತಿರುವ ಈ ಸರ್ಕಾರದಲ್ಲಿ ಅಭಿವೃದ್ಧಿ ಚಟುವಟಿಕೆ ಎನ್ನುವುದು ಮರೀಚಿಕೆಯಾಗಿದೆ. ಇನ್ನೊಂದು ಕಡೆ ಅದು ಕುರ್ಚಿ ಕಿತ್ತಾಟದಲ್ಲಿ ಮುಳುಗಿದೆ. ಹೀಗಾಗಿ ವಿರೋಧ ಪಕ್ಷಗಳು ಸಹಜವಾಗಿಯೇ ಈ ಸರ್ಕಾರವನ್ನು ಟೀಕಿಸುತ್ತಿವೆ; ಪ್ರಜ್ಞಾವಂತರು ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದಾರೆ; ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆಗಳ ಮಹಾಪೂರ ಕಾಣುತ್ತಿದೆ.
ಇನ್ನೊಂದು ಕಡೆ, ಬಹುಸಂಖ್ಯಾತರು ಎಚ್ಚೆತ್ತುಕೊಂಡಿದ್ದು ತಮ್ಮ ಧರ್ಮ-ಸಂಸ್ಕೃತಿಗಳ ಪರ ಜಾಗೃತಿ ಮೂಡಿಸುತ್ತ, ಸಂಘಟಿತರಾಗುತ್ತಿದ್ದಾರೆ. ಇವೆಲ್ಲದರಿಂದ ಕಾಂಗ್ರೆಸ್ ಸರ್ಕಾರ ವಿಚಲಿತಗೊಂಡಿದೆ ಎಂಬುದು ಅದು ಇಡುತ್ತಿರುವ ಇಂತಹ ಹೆಜ್ಜೆಗಳಿಂದಲೇ ಸ್ಪಷ್ಟವಾಗುತ್ತದೆ. ಹೀಗಾಗಿ ಅದು ಈಗ ಮೈನಾರಿಟಿಗಳನ್ನು ರಮಿಸಲು ಹೊರಟಿದೆ. ಹಿಂದೆ ರಾಜೀವ್ ಗಾಂಧಿ ಕೂಡ ಶಾಬಾನು ಪ್ರಕರಣದಲ್ಲಿ ಇಂಥದೇ ಕಳ್ಳಾಟ ಆಡಿದ್ದು ನೆನಪಿದೆಯಲ್ಲವೇ? ಅಂದ ಹಾಗೆ, ಆ ಹೆಜ್ಜೆಯು ಕಾಂಗ್ರೆಸ್ ಪಕ್ಷದ ಅವನತಿಗೆ ಮುನ್ನುಡಿ ಬರೆಯಿತು ಎನ್ನುವುದು ಸಿದ್ದರಾಮಯ್ಯ ಆ್ಯಂಡ್ ಕಂಪನಿಗೆ ಗೊತ್ತಿಲ್ಲವೇನೋ..!
ಒಂದು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಇರಬೇಕೆನ್ನುವ ನಿರೀಕ್ಷೆಯಲ್ಲಿ ತಪ್ಪೇನಿಲ್ಲ. ಆದರೆ, ಇಂಥ ಗುಣ ಸಾವಿರಾರು ವರ್ಷಗಳ ಸಂಸ್ಕೃತಿಯಿಂದ ಅಂತರ್ಗತವಾಗಿ, ತನ್ನಷ್ಟಕ್ಕೆ ತಾನು ಸಹಜವಾಗಿ ಬರುತ್ತದೆಯೇ ವಿನಾ ಬೆದರಿಕೆ ಒಡ್ಡುವಂತಹ ಕಾನೂನುಗಳಿಂದಲ್ಲ ಎನ್ನುವ ಪ್ರಾಥಮಿಕ ತಿಳಿವಳಿಕೆಯೂ ಈ ಸರ್ಕಾರಕ್ಕೆ ಇಲ್ಲ ಎನ್ನುವುದು ಆಘಾತಕಾರಿ ಸಂಗತಿ. ನಿಜ ಹೇಳಬೇಕೆಂದರೆ, ಈಗಾಗಲೇ ಇರುವ ಹತ್ತು ಹಲವು ಕಾನೂನುಗಳಲ್ಲೇ ದ್ವೇಷ ಭಾಷಣ, ಪ್ರಚೋದನಕಾರಿ ಮಾತು ಇಂಥವುಗಳಿಗೆ ಕಡಿವಾಣ ಹಾಕಲು ಹೇರಳ ಅವಕಾಶಗಳಿವೆ. ಭಾರತೀಯ ನ್ಯಾಯ ಸಂಹಿತೆಯ ಅನೇಕ ಕಲಂಗಳಲ್ಲಿ ಇದನ್ನೆಲ್ಲ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿರುವಾಗ, ಸಿದ್ದರಾಮಯ್ಯ ಸರ್ಕಾರ ಯಾರನ್ನು ಮೆಚ್ಚಿಸಲೆಂದು ಈ ಕರಾಳ ಶಾಸನ ತರಲು ಹೊರಟಿದೆ?
ಅಸಹಿಷ್ಣುತೆಯ ಬೊಬ್ಬೆ ಹಾಕಿದವರು ಎಲ್ಲಿದ್ದಾರೆ?
ರಾಜ್ಯ ಸರ್ಕಾರದ ಈ ಉದ್ದೇಶಿತ ಕಾನೂನಿನಲ್ಲಿ ಯಾರನ್ನು ಬೇಕಾದರೂ ಏನಕೇನ ಪ್ರಕಾರೇಣ ಬಂಧಿಸಿ, ಜೈಲಿಗೆ ಅಟ್ಟುವ ಅವಕಾಶವನ್ನು ಇಟ್ಟುಕೊಳ್ಳಲಾಗಿದೆ. ಮೊದಲೇ ಅಮಾಯಕರ ಮೇಲೆ ದರ್ಪ ತೋರಿಸುವ ಪೊಲೀಸರಿಗೆ ಅಪರಿಮಿತ ಅಧಿಕಾರ ಕೊಡಲಾಗಿದೆ. ಈ ಮೂಲಕ ತಮ್ಮನ್ನು ಟೀಕಿಸುವವರನ್ನು, ಪ್ರಶ್ನಿಸುವವರನ್ನು ಯಾವುದೋ ನೆವದಲ್ಲಿ ದಮನಿಸುವ ದುಷ್ಟ ಆಲೋಚನೆ ಇದ್ದೇ ಇದೆ. ಇದನ್ನು ಬಿಜೆಪಿ ಒಂದು ಹೊಣೆಗಾರಿಕೆಯ ಪಕ್ಷವಾಗಿ ಖಂಡತುಂಡವಾಗಿ ವಿರೋಧಿಸುತ್ತದೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬ ಬೊಬ್ಬೆ ಹಾಕುತ್ತಾ, ಬೆತ್ತಲಾದವರು ಈಗ ಕಾಂಗ್ರೆಸ್ಸಿನ ಯಾವ ಗಂಜಿ ಕೇಂದ್ರಗಳಲ್ಲಿ ಅಡಗಿ ಕೂತಿದ್ದಾರೋ ದೇವರೇ ಬಲ್ಲ!
ಕಾಂಗ್ರೆಸ್ ಸರ್ಕಾರವು ರಾಜ್ಯ ರಾಜಕೀಯವನ್ನು ಮೆಜಾರಿಟಿ ವರ್ಸಸ್ ಮೈನಾರಿಟಿ, ಹಿಂದೂ ವರ್ಸಸ್ ಮುಸ್ಲಿಂ ಎನ್ನುವ ವಿಷ ವರ್ತುಲವನ್ನಾಗಿ ಮಾಡಿಟ್ಟಿದೆ. ಹೀಗೆ ಜನರ ಬದುಕಿಗೆ ಬೆಂಕಿ ಹಚ್ಚಿ, ಅದರ ಬಿಸಿಯಲ್ಲಿ ತನ್ನ ಚಳಿ ಕಾಯಿಸಿಕೊಳ್ಳುತ್ತಿದೆ. ಆದರೆ ದಿನ ಬೆಳಗೆದ್ದು ಪ್ರಧಾನಿ ಮೋದಿಯವರನ್ನು ಟೀಕಿಸುವ, ಹಿಂದೂಗಳ ನಂಬಿಕೆಗಳನ್ನು ಅವಹೇಳನ ಮಾಡುವ ಕೆಲ ʻಆಯ್ದ ಬುದ್ಧಿಜೀವಿಗಳʼ ಬಗ್ಗೆ ಅದು ಜಾಣಮೌನ ಪ್ರದರ್ಶಿಸುತ್ತಿದೆ. ಹೀಗಾದರೆ, ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯದ ಹಕ್ಕು ಕೊಟ್ಟಿರುವ ಅಂಬೇಡ್ಕರ್ ಸಂವಿಧಾನದ ಗತಿ ಏನು?
ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಮೇಲೆ ತನ್ನ ಸ್ವಾರ್ಥಕ್ಕಾಗಿ ಎಮರ್ಜೆನ್ಸಿ ಹೇರಿದ ಕೆಟ್ಟ ಚರಿತ್ರೆ ಇದೆ. ಇದರ ವಿರುದ್ಧ ಈ ದೇಶದ ಪ್ರತಿಪಕ್ಷಗಳು ಮತ್ತು ಜನಸಾಮಾನ್ಯರು ದನಿ ಎತ್ತಿ, ಆ ಪಕ್ಷಕ್ಕೆ ಮರೆಯಬಾರದಂತಹ ಪಾಠವನ್ನು ಐವತ್ತು ವರ್ಷಗಳ ಹಿಂದೆಯೇ ಕಲಿಸಿದ್ದಾರೆ. ಈ ಅರ್ಧ ಶತಮಾನದಲ್ಲಿ ಆ ಪಕ್ಷ ನಾಮಾವಶೇಷವಾಗಿ ಹೋಗುವ ಹಂತಕ್ಕೆ ಬಂದು ನಿಂತಿದೆ. ಈ ದೇಶದಲ್ಲಿ ತನ್ನ ಮೂಗಿನ ನೇರಕ್ಕೆ ಇಲ್ಲದ ಸಾಹಿತ್ಯವನ್ನು ನಿಷೇಧಿಸಿದ, ಸಿನಿಮಾಗಳನ್ನು ರದ್ದುಪಡಿಸಿದ, ತನ್ನನ್ನು ಪ್ರಶ್ನಿಸಿದವರನ್ನು ಜೈಲಿಗೆ ಹಾಕಿದ ದುರುಳತೆ ಕಾಂಗ್ರೆಸ್ ಪಕ್ಷದ್ದು.
ಈಗ ಅದು ಧರ್ಮ, ಜನಾಂಗ, ಭಾಷೆ, ಸಮುದಾಯ ಇತ್ಯಾದಿಗಳನ್ನು ಹಿಡಿದುಕೊಂಡು ಈ ನಾಡಿನ ಜನರ ಸದ್ದಡಗಿಸಲು ಹೊರಟಿದೆ. ಇದಕ್ಕೆ ಅದು ತಕ್ಕ ಬೆಲೆ ತೆತ್ತೇ ತೆರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಅದರ ದುರುದ್ದೇಶಗಳಿಗೆ ಬಿಜೆಪಿ ಆಸ್ಪದ ಕೊಡುವುದಿಲ್ಲ. ಆದ್ದರಿಂದ ಸಿದ್ದರಾಮಯ್ಯನವರ ಸರ್ಕಾರ ಈ ಅವಿವೇಕದಿಂದ ಹಿಂದಕ್ಕೆ ಸರಿಯಲೇಬೇಕು. ಇಲ್ಲದೆ ಹೋದರೆ, ಎಮರ್ಜೆನ್ಸಿ ಕಾಲದಲ್ಲಿ ಬಿಜೆಪಿ ನಡೆಸಿದಂಥ ಮತ್ತೊಂದು ಚಾರಿತ್ರಿಕ ಪ್ರತಿರೋಧ ಅನಿವಾರ್ಯ. ವಿನಾಶ ಕಾಲೇ ವಿಪರೀತ ಬುದ್ಧಿಃ!


