Ashwath Narayan on Congress government : ಆರೆಸ್ಸೆಸ್ ಮೇಲೆ ನಿರ್ಬಂಧ ಹೇರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಡಾ. ಅಶ್ವತ್ಥ ನಾರಾಯಣ ತೀವ್ರವಾಗಿ ಖಂಡಿಸಿದ್ದಾರೆ. ಇದು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಅಧಿಕಾರ ದುರ್ಬಳಕೆ ಎಂದ ಅವರು, ಆದೇಶ ಹಿಂಪಡೆಯದಿದ್ದರೆ ಜನಾಂದೋಲನ ನಡೆಸುವುದಾಗಿ ಎಚ್ಚರಿಕೆ 

ಬೆಂಗಳೂರು (ಅ.16): RSS ಮೇಲೆ ನಿರ್ಬಂಧ ವಿಧಿಸಿರೋದು ಇದು ರಾಜ್ಯ ಸರ್ಕಾರದ ಅಧಿಕಾರ ದುರ್ಬಳಕೆ ಎಂದು ಡಾ ಅಶ್ವತ್ಥ ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

ಆರೆಸ್ಸೆಸ್ ನಿರ್ಬಂಧ ಕುರಿತು ಕ್ಯಾಬಿನೆಟ್ ತೀರ್ಮಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ರು. ಈಗ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆಯಲ್ಲಿ ನಿರ್ಬಂಧಕ್ಕೆ ತೀರ್ಮಾನ ಮಾಡಿದ್ದಾರೆ. ಪ್ರತಿದಿನ ಆಗುವ ಕಾರ್ಯಕ್ರಮಕ್ಕೆ ಪರ್ಮಿಶನ್ ತಗೊಬೇಕು ಎಂದಿದ್ದಾರೆ. ಇದು ಜನ ವಿರೋಧಿ ನಿಯಮ ಎಂದು ಕಿಡಿಕಾರಿದರು.

ವೈಫಲ್ಯ ಮುಚ್ಚಿಕೊಳ್ಳಲು ಈ ತಂತ್ರ:

ರಾಜ್ಯ ಸರ್ಕಾರ ಕಾನೂನು, ಆಡಳಿತ ಎಲ್ಲ ರಂಗದಲ್ಲೂ ವಿಫಲವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನರ ಗಮನ ಬೇರೆಡೆ ಸೆಳೆಯಲು. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಇಂಥ ನಿಯಮ ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಸರ್ಕಾರಿ ಜಾಗದಲ್ಲಿ RSS ಚಟುವಟಿಕೆಗೆ ಕಡಿವಾಣ, ಸಂಘದ ಹೆಸರು ಉಲ್ಲಂಘಿಸದೇ ಜಾಣ ನಡೆ

ಕಾಂಗ್ರೆಸ್‌ನ ಬಾಯಲ್ಲಿ ಪ್ರಜಾಪ್ರಭುತ್ವ, ಸಂವಿಧಾನ:

ಕಾಂಗ್ರೆಸ್ ನಾಯಕರು ಮಾತೆತ್ತಿದರೆ ಸಂವಿಧಾನ ಕಾನೂನು ವಾಕ್ ಅಭಿವ್ಯಕ್ತಿ ಸ್ವಾತಂತ್ರ್ಯ ಅಂತಾ ಮಾತಾಡ್ತಾರೆ. ಆದರೆ ಎಲ್ಲಿದೆ ಅಭಿವ್ಯಕ್ತಿ ಸ್ವಾತಂತ್ರ್ಯ, ಎಲ್ಲಿದೆ ಕಾನೂನು? ಈ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಸರ್ಕಾರವಾಗಿದೆ. ನಿಮಗೆ ಆತ್ಮಸಾಕ್ಷಿ ಇಲ್ಲದೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜನರನ್ನು, ವ್ಯವಸ್ಥೆಯನ್ನ ಬಲಿಕೊಡುವ ಕೆಲಸ ಮಾಡುತ್ತಿದ್ದೀರಿ. ಈಗಲೇ ಆದೇಶ ವಾಪಸ್ ಪಡೆಯಿರಿ. ಇಲ್ಲವಾದರೆ ಹಿಂದೆಂದೂ ಇಲ್ಲದ ಹಣೆಪಟ್ಟಿ ಮತ್ತು ಪಟ್ಟ ನಿಮ್ಮ ಮೇಲೆ ಸದಾ ಇರುತ್ತದೆ. ನಾವು ಸಮಾಲೋಚನೆ ಮಾಡಿ ಜನಾಂದೋಲನ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ:

ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಹೀಗಾಗಿ ಇಂಥ ನಿರ್ಧಾರಗಳನ್ನ ಮಾಡುತ್ತಿದೆ. ರಾಜ್ಯದ ಜನರು ನಿಮ್ಮನ್ನು ಯಾವುದೇ ಕಾರಣಕ್ಕೂ ಸಹಿಸೊಲ್ಲ. ಇವತ್ತಲ್ಲ ನಾಳೆ ಸರಿಯಾಗಬಹುದು ಎಂದು ಇಷ್ಟು ದಿನ ಜನ ಸುಮ್ಮನಿದ್ದರು. ಆದರೆ ಇನ್ನು ನಿಮ್ಮನ್ನು ಸಹಿಸಿಕೊಳ್ಳುವುದಿಲ್ಲ, ಕ್ಷಮಿಸೊಲ್ಲ ಎಂದು ಎಚ್ಚರಿಕೆ ನೀಡಿದರು.

ಧಾರ್ಮಿಕ ಸ್ವಾತಂತ್ರ್ಯ ಗೊತ್ತಿಲ್ಲವಾ?

ಮಾತೆತ್ತಿದ್ರೆ ಸಂವಿಧಾನ ಎನ್ನುವ ಇವರು ಸಂವಿಧಾನವನ್ನೇ ಓದಿಕೊಂಡಿಲ್ಲ, ಅರ್ಥ ಮಾಡಿಕೊಂಡಿಲ್ಲವಾ? ನಮ್ಮ ಉಡುಪು, ನಮ್ಮ ಕೆಲಸ, ಧಾರ್ಮಿಕ ಚಟುವಟಿಕೀಯಲ್ಲಿ ಭಾಗಿಯಾಗಬಹುದು, ಧಾರ್ಮಿಕ ಸ್ವಾತಂತ್ರ್ಯ ಹಕ್ಕಿದೆ. ಗಣವೇಶ ಧರಿಸಲು ಅನುಮತಿ ಇದೆಯಾ, ಇಲ್ಲ? ಎಲ್ಲರಿಗೂ ವೇಷ-ಭೂಷಣ ಹಾಕಿಕೊಳ್ಳಲು ಸ್ವಾತಂತ್ರ್ಯವಿದೆ. ಇವರಿಗೆ ಇಷ್ಟೂ ತಿಳಿವಳಿಕೆ ಇಲ್ವ? ಅಥವಾ ಅಜ್ಞಾನಿಗಳಾ? ಮನಸಿಗೆ ಬಂದಂತೆ, ತಲೆಗೆ ಬಂದಂತೆ ಮಾತಾಡ್ತಾರೆ. ಇವರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಇವರಿಗೆ ಪಾಠ ಕಲಿಸಲು ಇದೇ ಸರಿಯಾದ ಸಮಯ ಎಂದರು.

ಇದನ್ನೂ ಓದಿ: ಸರ್ಕಾರಿ ನೌಕರರು RSS ಚಟುವಟಿಕೆಯಲ್ಲಿ ಭಾಗವಹಿಸೋದನ್ನ ನಿಷೇಧಿಸಿ: ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಂದು ಪತ್ರ

ಐಎಎಸ್ ಅಧಿಕಾರಿಗಳೇ ಇಂಥ ಕೆಲಸ ಮಾಡ್ತಾರೆ!

ಕನ್ನೇರಿ ಸ್ವಾಮೀಜಿ ವಿರುದ್ಧವಾಗಿ ಕ್ರಮ ವಹಿಸಬೇಕಿದ್ದರೆ ಅದಕ್ಕೆ ಅದರದ್ದೇ ಕ್ರಮ ಇದೆ. ಮೊದಲು ನೋಟಿಸ್ ಕೊಟ್ಟು ಕಾರಣ ಕೇಳಬೇಕು. ಏಕಾಏಕಿ ನಿರ್ಧಾರ ಮಾಡೋದು ಸರಿಯಲ್ಲ. ಜಿಲ್ಲಾಧಿಕಾರಿಗೆ ಇದೆಲ್ಲ ತಿಳಿದಿಲ್ಲವ? ಯಾರ ಸೂಚನೆ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಐಎಎಸ್ ಅಧಿಕಾರಿಗಳೇ ಇಂಥ ಕೆಲಸ ಮಾಡಿದ್ರೆ ಹೇಗೆ? ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಲಿದೆ. ಸ್ವಾಮೀಜಿ ವಿರುದ್ಧ ಹೊರಡಿಸಿರುವ ನೋಟಿಸ್ ವಾಪಸ್ ಪಡೆಯಲಿ ತಾಕೀತು ಮಾಡಿದರು.