ಸ್ಮಾರ್ಟ್ ಮೀಟರ್ ಹಗರಣ ಸಂಬಂಧ ಲೋಕಾಯುಕ್ತ ನ್ಯಾಯಾಲಯ ಖಾಸಗಿ ದೂರು ದಾಖಲಿಸಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕೆ.ಜೆ.ಜಾರ್ಜ್ ಅವರನ್ನು ವಜಾಗೊಳಿಸಬೇಕು ಎಂದು ಶಾಸಕ ಡಾ। ಸಿ.ಎನ್.ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ.
ಬೆಂಗಳೂರು (ಜು.25): ಸ್ಮಾರ್ಟ್ ಮೀಟರ್ ಹಗರಣ ಸಂಬಂಧ ಲೋಕಾಯುಕ್ತ ನ್ಯಾಯಾಲಯ ಖಾಸಗಿ ದೂರು ದಾಖಲಿಸಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ವಜಾಗೊಳಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ। ಸಿ.ಎನ್.ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಕಿರೀಟಕ್ಕೆ ಈ ಭ್ರಷ್ಟಾಚಾರದ ಹಗರಣವು ಮತ್ತೊಂದು ಹೊಸ ಗರಿ. ಈಗಿನ ಗುತ್ತಿಗೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಎಲ್ಲ ಉಲ್ಲಂಘನೆಗಳನ್ನು ತಿಳಿಸಿದರೂ ಸ್ವಾರ್ಥಿಗಳಾಗಿ, ಎಟಿಎಂ ಸರ್ಕಾರದಂತೆ ಹಗಲು ದರೋಡೆ ಮಾಡಲು ಮುಂದಾದರು. ಏಪ್ರಿಲ್ ತಿಂಗಳಲ್ಲೇ ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ನಂತರ ಮರು ಮನವಿ ನೀಡಿದ್ದೇವೆ. ತಡವಾದ ಕಾರಣ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಖಾಸಗಿ ದೂರು (ಪಿಸಿಆರ್) ದಾಖಲು ಮಾಡಲು ಒಪ್ಪಿಗೆ ಲಭಿಸಿದೆ. ಬುಧವಾರ ಸಂಜೆ ಈ ಬಗ್ಗೆ ಮೌಖಿಕ ಆದೇಶ ಸಿಕ್ಕಿದೆ. ಲೋಕಾಯುಕ್ತರಿಗೂ ತಿಳಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು.
ಸರ್ಕಾರಕ್ಕೆ ಕಣ್ಣು, ಕಿವಿ, ತಲೆ ಇದೆಯೇ? ಯಾರಾದರೂ ಇದರ ಕುರಿತು ಮಾತನಾಡಿದ್ದಾರಾ? ರಾಜ್ಯಪಾಲರಿಗೂ ಅರ್ಜಿ ಕೊಟ್ಟಿದ್ದೇವೆ. ಮರು ಮನವಿ ಬಗ್ಗೆ ಸಲಹೆ ಬಂತು. ಅದರಂತೆ ಕೇಸು ದಾಖಲಿಸಿದೆವು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಗೆ ಅನುಮತಿ ಕೇಳಿದ್ದೇವೆ ಎಂದರು. ಹಗರಣದ ಬಗ್ಗೆ ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆವು. ಈಗ ಮುಂಬರುವ ಸದನದಲ್ಲೂ ಈ ವಿಚಾರದ ಕುರಿತು ಹೋರಾಟ ಮಾಡುವ ಬಗ್ಗೆ ಪ್ರತಿಪಕ್ಷ ನಾಯಕರ ಜೊತೆ ಸಮಾಲೋಚನೆ ಮಾಡುವುದಾಗಿ ಅಶ್ವತ್ಥನಾರಾಯಣ ಅವರು ಪ್ರಶ್ನೆಗೆ ಉತ್ತರಿಸಿದರು.
ಕಾನೂನು ರೀತಿ ಎದುರಿಸುವೆ: ಸ್ಮಾರ್ಟ್ ಮೀಟರ್ ವಿಚಾರವಾಗಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ರಾಜ್ಯಪಾಲರಿಂದ ಹಿಡಿದು ಹೈಕೋರ್ಟ್‌ವರೆಗೆ ಎಲ್ಲೆಲ್ಲಿ ಹೋಗಿದ್ದಾರೆ ಎಂಬುದೆಲ್ಲಾ ಗೊತ್ತಿದೆ. ಎಲ್ಲವನ್ನೂ ನಾನು ಕಾನೂನು ಪ್ರಕಾರವೇ ಎದುರಿಸುತ್ತೇನೆ. ಅವರ ಎಲ್ಲಾ ಆರೋಪಗಳಿಗೂ ವಕೀಲರ ಮೂಲಕ ವಿವರಣೆ ನೀಡಲು ಸಿದ್ಧನಿದ್ದೇನೆ ಎಂದು ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದಿಂದ ಇಂಧನ ಸಚಿವರ ವಿರುದ್ಧ ಎಫ್‌ಐಆರ್ ಹಾಕಲು ಸೂಚಿಸಿರುವ ಬಗ್ಗೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ನನ್ನ ಮೇಲೆ ಎಫ್‌ಐಆರ್ ಹಾಕುವಂತೆ ನ್ಯಾಯಾಲಯ ಆದೇಶಿಸಿರುವುದು ಗೊತ್ತಿಲ್ಲ. ಒಂದು ವೇಳೆ ಆ ರೀತಿ ಆಗಿದ್ದರೆ ಆದೇಶದ ಪ್ರತಿ ನೀಡಿ’ ಎಂದು ವರದಿಗಾರರನ್ನೇ ಕೇಳಿದರು. ಜನಪ್ರತಿನಿಧಿಗಳ ನ್ಯಾಯಾಲಯದಿಂದ ಆದೇಶ ಆಗಿರುವುದು ನಾನು ನೋಡಿಲ್ಲ. ಸ್ಮಾರ್ಟ್ ಮೀಟರ್ ವಿಚಾರದಲ್ಲಿ ನಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಕಾನೂನು ಪ್ರಕಾರವೇ ಟೆಂಡರ್ ಮಾಡಿರುವುದಾಗಿ ಈಗಾಗಲೇ ಹೇಳಿದ್ದೇವೆ ಎಂದರು.
ನ್ಯಾಯಾಲಯ ತೀರ್ಪಿಗೆ ತಲೆಬಾಗುವೆ: ಡಾ.ಅಶ್ವತ್ಥನಾರಾಯಣ್ ಹಾಗೂ ಅವರ ತಂಡ ಜನಪ್ರತಿನಿಧಿಗಳ ನ್ಯಾಯಾಲಯ, ರಾಜ್ಯಪಾಲರ ಕಚೇರಿ, ಹೈಕೋರ್ಟ್, ಪಿಐಎಲ್ ಎಲ್ಲಾ ಕಡೆ ಹೋಗಿದೆ. ಅವರ ಎಲ್ಲಾ ಪ್ರಯತ್ನಗಳಿಗೂ ನಾನು ಕಾನೂನು ಪ್ರಕಾರವೇ ಉತ್ತರ ಕೊಡುತ್ತೇನೆ. ಹಿಟ್ ಆ್ಯಂಡ್ ರನ್ ಮಾಡದೆ ದಾಖಲೆ ಇದ್ದರೆ ನ್ಯಾಯಾಲಯದಲ್ಲಿ ಸಲ್ಲಿಸಲಿ. ನ್ಯಾಯಾಲಯದ ತೀರ್ಪಿಗೆ ತಲೆ ಬಾಗುತ್ತೇನೆ ಎಂದು ಜಾರ್ಜ್ ಹೇಳಿದರು.
