ಇದು ಸಂಚು, ಪದತ್ಯಾಗ ಪ್ರಶ್ನೆಯೇ ಇಲ್ಲ: ಈಶ್ವರಪ್ಪ

  • ವಾಟ್ಸಾಪ್‌ ಸಂದೇಶ ಡೆತ್‌ನೋಟ್‌ ಅಲ್ಲ
  • ಇದು ನನ್ನ ವಿರುದ್ಧ ಷಡ್ಯಂತ್ರದ ಒಂದು ಭಾಗ
  • ಕಮೀಷನ್‌ ಕೇಳಿರುವುದಕ್ಕೆ ದಾಖಲೆ ಏನಿದೆ?
This is conspiracy, no question of Resignation Ishwarappa said akb

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣವನ್ನು ತಮ್ಮ ವಿರುದ್ಧ ಷಡ್ಯಂತ್ರದ ಒಂದು ಭಾಗವಾಗಿ ಬಳಸಲಾಗುತ್ತಿದ್ದು, ತಾವು ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜಿನಾಮೆ (resignation)ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಇನ್ನು, ಮೃತ ಸಂತೋಷ್‌ (Santhosh) ಬರೆದದ್ದು ಡೆತ್‌ನೋಟೇ(death note) ಅಲ್ಲ. ವ್ಯಾಟ್ಸಾಪ್‌ನಲ್ಲಿ (whatsapp) ಕಳಿಸಿದ್ದಾರೆನ್ನಲಾಗುವ ಸಂದೇಶವನ್ನು ಡೆತ್‌ನೋಟ್‌ ಎಂದು ಪರಿಗಣಿಸಲಾಗದು ಎಂದು ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ಕುರಿತಂತೆ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೊಂದಿಗೆ ಮಾತನಾಡಿದ್ದೇನೆ. ಇನ್ನೆರಡು ದಿನದೊಳಗೆ ಖುದ್ದಾಗಿ ಭೇಟಿ ಮಾಡಿ ಸಂಪೂರ್ಣ ವಿವರ ನೀಡುತ್ತೇನೆ. ಈ ಬಗ್ಗೆ ಇಲ್ಲಿಯವರೆಗೆ ಕೇಂದ್ರ ನಾಯಕರಾರ‍ಯರೂ ತಮ್ಮ ಬಳಿ ಮಾತನಾಡಿಲ್ಲ ಎಂದರು.

ಡೆತ್‌ನೋಟೇ ಬರೆದಿಲ್ಲ:

ಪೊಲೀಸ್‌ ಅಧಿಕಾರಿ ಗಣಪತಿ ಆತ್ಮಹತ್ಯೆ (Ganapati Suicide Case) ಮಾಡಿಕೊಂಡಿದ್ದ ಸಂದರ್ಭದಲ್ಲಿ ಅವರ ದೇಹದ ಸಮೀಪದಲ್ಲೇ ಡೆತ್‌ನೋಟ್‌ ದೊರಕಿತ್ತು. ಡೆತ್‌ನೋಟ್‌ನಲ್ಲಿ ಅವರ ಸಹಿ ಇತ್ತು. ಆದರೆ ಸಂತೋಷ್‌ ಡೆತ್‌ನೋಟನ್ನೇ ಬರೆದಿಲ್ಲ. ವಾಟ್ಸಾಪ್‌ನಲ್ಲಿ ಡೆತ್‌ನೋಟ್‌ ಬರೆದು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಸಂದೇಶವನ್ನು ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್‌ ಅವರೇ ಮಾಡಿದ್ದಾರೋ ಅಥವಾ ಬೇರೆ ಯಾರಾದರೂ ರವಾನೆ ಮಾಡಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್‌ನವರು ಮಾತ್ರ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್‌ ಪಾಟೀಲ್‌ ಅವರ ಮುಖವನ್ನು ಸಹ ನಾನು ನೋಡಿಲ್ಲ. ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರೇ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಸಂತೋಷ್‌ ಪಾಟೀಲ್‌ ಯಾವುದೋ ಷಡ್ಯಂತ್ರದಿಂದ ಮೃತಪಟ್ಟಿದ್ದಾರೋ ಅಥವಾ ಅನ್ಯಾಯಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಸತ್ಯ ಹೊರಬರಬೇಕಾದರೆ ಸಮಗ್ರ ತನಿಖೆ ನಡೆಯಬೇಕಿದೆ ಎಂದರು.

ಹಣ ಮಂಜೂರು ಸಾಧ್ಯವೇ?:

ನಾಲ್ಕು ಕೋಟಿ ರು. ಮೊತ್ತದ ಕಾಮಗಾರಿ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಇಲಾಖೆಯಿಂದ ಯಾವುದೇ ಕಾಮಗಾರಿ ನಡೆಯಬೇಕಾದರೆ ಮೊದಲು ಆಡಳಿತಾತ್ಮಕ ಮಂಜೂರಾತಿ, ತಾಂತ್ರಿಕ ಮಂಜೂರಾತಿ ದೊರಕಿದ ಬಳಿಕ ಕಾಮಗಾರಿಗೆ ಮಂಜೂರಾತಿ ದೊರಕಬೇಕು. ಗುತ್ತಿಗೆ ಪಡೆದವರಿಗೆ ಕಾಮಗಾರಿ ಪತ್ರ(ವರ್ಕ್ ಆರ್ಡರ್‌) ನೀಡದೇ ಹಣ ಮಂಜೂರು ಮಾಡುವುದಕ್ಕೆ ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. ತಮ್ಮ ಮೇಲೆ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ (D.K.Shivakumar) ಹಿಂದೆ ಅಧಿಕಾರದಲ್ಲಿದ್ದಾಗ ನಿಯಮ ಗಾಳಿಗೆ ತೂರಿ ಕಾಮಗಾರಿಗಳಿಗೆ ಹಣ ಪಾವತಿ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಕಮಿಷನ್‌ಗೆ ದಾಖಲೆ ಕೊಡಿ:

ಶೇ.40 ಕಮಿಷನ್‌ ಪಡೆಯಲಾಗುತ್ತಿದೆ ಎಂಬ ಆರೋಪಕ್ಕೆ ಅರ್ಥವಿದೆಯೇ? ದಾಖಲೆ ಇದ್ದರೆ ಅದನ್ನು ಬಹಿರಂಗ ಪಡಿಸುವುದಕ್ಕೆ ತೊಂದರೆ ಆದರೂ ಏನು? ಕಾಂಗ್ರೆಸ್‌ ಆರೋಪ ಮಾಡುತ್ತದೆ ಎಂದಾಕ್ಷಣ ರಾಜೀನಾಮೆ ಸಲ್ಲಿಸಿದರೆ ಮಂತ್ರಿ ಮಂಡಲದಲ್ಲಿ ಒಬ್ಬ ಸಚಿವರು ಇರುವುದಿಲ್ಲ. ಪ್ರತಿಯೊಬ್ಬರೂ ರಾಜೀನಾಮೆ ನೀಡಬೇಕಾಗುತ್ತದೆ. ಕಾಂಗ್ರೆಸ್‌ ಮಾಡುತ್ತಿರುವ ಇಂತಹ ಆರೋಪಗಳಿಗೆ ನ್ಯಾವ್ಯಾರು ಬಗ್ಗುವುದಿಲ್ಲ ಎಂದು ತಿರುಗೇಟು ನೀಡಿದರು.

ಪದೇ ಪದೇ ದಿಲ್ಲಿಗೆ ಹೋಗಲು

ಟಿಕೆಟ್‌ ತೆಗೆಸಿಕೊಟ್ಟವರಾರ‍ಯರು?

ಸಂತೋಷ್‌ ಪಾಟೀಲ್‌ 80ಕ್ಕೂ ಹೆಚ್ಚು ಬಾರಿ ನನ್ನ ಮನೆಗೆ ಭೇಟಿ ನೀಡಿದ್ದೇನೆ ಎಂದಿದ್ದಾರೆ. ಆದರೆ ನಾನು ಒಮ್ಮೆಯೂ ಅವರ ಮುಖ ನೋಡಿಲ್ಲ. ಇನ್ನು, ಕಾಮಗಾರಿ ಮೊತ್ತ ಪಾವತಿಯಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi, ಗೃಹಸಚಿವ ಅಮಿತ್‌ ಷಾ (Amith Sha)ಅವರಿಗೆ ಸಂತೋಷ್‌ ಪತ್ರ ಬರೆದಿದ್ದರು ಎನ್ನಲಾಗಿದೆ. ದೆಹಲಿಗೂ ಕೂಡ ಹೋಗಿದ್ದರು. ಬಡತನದಲ್ಲಿದ್ದೇನೆ ಎಂದು ಹೇಳುತ್ತಿದ್ದ ಸಂತೋಷ್‌ಗೆ ದೆಹಲಿಗೆ ತೆರಳಲು ಟಿಕೆಟ್‌ ಕೊಡಿಸಿದ್ದು ಯಾರು ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು.

ಕೇಂದ್ರ ಕೃಷಿ ಸಚಿವ ಗಿರಿರಾಜ್‌ ಸಿಂಗ್‌ ಮಾಹಿತಿ ನೀಡುವಂತೆ ನಮ್ಮ ಇಲಾಖೆಗೆ ಪತ್ರ ಬರೆದಿದ್ದರು. ಅದಕ್ಕೆ ನಮ್ಮ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್‌ ಉತ್ತರಿಸಿ, ಸಂತೋಷ್‌ ಎಂಬುವವರಿಗೆ ಕಾಮಗಾರಿ ನಡೆಸುವಂತೆ ವರ್ಕ್ ಆರ್ಡರ್‌ ನೀಡಿಲ್ಲ. ಟೆಂಡರ್‌ ಅಪ್ರೂವಲ್‌ ಆಗಿಲ್ಲ. ಹೀಗಾಗಿ ಹಣ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದರು. ನಾನು ಸಹ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಹಾಗೂ ಖಾಸಗಿ ಸುದ್ದಿವಾಹಿನಿಯೊಂದರ ವಿರುದ್ಧ ಮಾನನಷ್ಟಮೊಕದ್ದಮೆ ದಾಖಲಿಸಿದ್ದೇನೆ. ನ್ಯಾಯಾಲಯ ನೋಟಿಸ್‌ ಜಾರಿಮಾಡಿದೆ. ನೋಟಿಸ್‌ ಬಂದ ತಕ್ಷಣ ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಹೆದರಿ ಆತ್ಮಹತ್ಯೆ ಮಾಡಿಕೊಂಡರಾ? ಸ್ಪಷ್ಟತೆ ಇಲ್ಲ ಎಂದರು.
 

Latest Videos
Follow Us:
Download App:
  • android
  • ios