ನ. 23 ರಿಂದ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಒಲಿಂಪಿಕ್‌ ಕ್ರೀಡಾಕೂಟ

ರಾಜ್ಯ ಒಲಿಂಪಿಕ್‌ಗೆ ಭರದ ಸಿದ್ಧತೆ| ನ.23​-30ರವರೆಗೆ ಶಿವಮೊಗ್ಗದಲ್ಲಿ ನಡೆವ ಕ್ರೀಡಾಕೂಟಕ್ಕೆ ಕೈಜೋಡಿಸಲು ಸಚಿವ ಈಶ್ವರಪ್ಪ ಮನವಿ| ಒಟ್ಟು 25 ವಿವಿಧ ಕ್ರೀಡಾಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಸುಮಾರು 4 ಸಾವಿರ ಕ್ರೀಡಾಪಟುಗಳು ಭಾಗಿ| ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ವಾಸ್ತವ್ಯ, ಊಟ​-ಉಪಾಹಾರ ಮತ್ತು ಸಾರಿಗೆ ವ್ಯವಸ್ಥೆಗೆ ಕ್ರಮ|

State Level Olympic Games Will Be Start on Nov.23rd in Shivamogga

ಶಿವಮೊಗ್ಗ(ಅ.17): ನ. 23 ರಿಂದ 30ರವರೆಗೆ ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಒಲಿಂಪಿಕ್‌ ಕ್ರೀಡಾಕೂಟದ ಯಶಸ್ವಿ ಆಯೋಜನೆಗೆ ಎಲ್ಲರೂ ಕೈಜೋಡಿಸುವಂತೆ ಯುವಜನಸೇವಾ ಮತ್ತು ಕ್ರೀಡಾ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ರೀಡಾಕೂಟ ಆಯೋಜನೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ವಾಸ್ತವ್ಯ, ಊಟ​-ಉಪಾಹಾರ ಮತ್ತು ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಎಲ್ಲಾ ಕ್ರೀಡಾ ಸಂಸ್ಥೆಗಳು ಸಕ್ರಿಯವಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು. ಕ್ರೀಡಾಕೂಟ ಆಯೋಜನೆಗೆ ಪೂರ್ವದಲ್ಲಿ ಕ್ರೀಡಾಂಗಣವನ್ನು ಸುಸಜ್ಜಿತಗೊಳಿಸಬೇಕು. ದುರಸ್ತಿ ಕಾರ್ಯಗಳಿದ್ದರೆ ತಕ್ಷಣ ಪ್ರಸ್ತಾವ ಸಲ್ಲಿಸಬೇಕು. ಕ್ರೀಡಾಕೂಟದ ಬಳಿಕ ಕ್ರೀಡಾ ಸಾಮಗ್ರಿಗಳನ್ನು ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯ ಒಲಿಂಪಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಒಟ್ಟು 25 ವಿವಿಧ ಕ್ರೀಡಾಸ್ಪರ್ಧೆ ಆಯೋಜಿಸಲಾಗುತ್ತಿದೆ. ಸುಮಾರು 4 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಶಿವಮೊಗ್ಗ ಹಾಗೂ ಕೆಲವು ತಾಲೂಕು ಕೇಂದ್ರಗಳಲ್ಲಿ ಕೆಲ ಸ್ಪರ್ಧೆ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಅಥ್ಲೆಟಿಕ್ಸ್‌, ಸ್ವಿಮ್ಮಿಂಗ್‌, ವ್ರೆಸ್ಲಿಂಗ್‌, ಆರ್ಚರಿ, ಫೆನ್ಸಿಂಗ್‌, ಸೈಕ್ಲಿಂಗ್‌, ಜೂಡೋ, ಹಾಕಿ, ಬ್ಯಾಡ್ಮಿಂಟನ್‌, ನೆಟ್ಬಾಲ…, ಬಾಲ್‌ ಬ್ಯಾಡ್ಮಿಂಟನ್‌ ಸೇರಿ 25 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ. ಈ ಸ್ಪರ್ಧೆ ನಡೆಸಬಹುದಾದ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ನೆಹರು ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರೀಡಾ ಸಂಕೀರ್ಣ, ಕೃಷಿ ವಿಶ್ವವಿದ್ಯಾಲಯ, ಪೆಸೆಟ್‌ ಕಾಲೇಜು, ಡಿವಿಎಸ್‌ ಕಾಲೇಜು, ಅಕ್ಷರ ಒಳಾಂಗಣ ಕ್ರೀಡಾಂಗಣ ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶ್ರೀನಿವಾಸ್‌ ಮಾತನಾಡಿ, ಶಿವಮೊಗ್ಗದಲ್ಲಿ ಕ್ರೀಡಾಕೂಟ ಆಯೋಜನೆಯಿಂದ ಸ್ಥಳೀಯವಾಗಿ ಕ್ರೀಡಾ ಮೂಲಸೌಕರ್ಯಗಳ ಉನ್ನತೀಕರಣ ಸಾಧ್ಯವಿದೆ. ಹಾಗೂ ಸ್ಥಳೀಯ ಕ್ರೀಡಾಪಟುಗಳ ಭವಿಷ್ಯದ ದೃಷ್ಟಿಯಿಂದ ಇದೊಂದು ಉತ್ತಮ ಅವಕಾಶ ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಮಾತನಾಡಿ, ಕ್ರೀಡಾಪಟುಗಳಿಗೆ ವಾಸ್ತವ್ಯಕ್ಕಾಗಿ ಈಗಾಗಲೇ ಪೂರ್ವಭಾವಿ ಸಿದ್ಧತೆ ನಡೆಸಲಾಗಿದೆ. ಶಿವಮೊಗ್ಗ ನಗರದಲ್ಲಿ 450, ಸಾಗರದಲ್ಲಿ 300 ಹಾಗೂ ಭದ್ರಾವತಿಯಲ್ಲಿ 100 ಹೋಟೆಲ್‌ ರೂಮ್‌ ಗುರುತಿಸಲಾಗಿದ್ದು, ಹಾಸ್ಟೆಲ್‌ಗಳು ಸೇರಿ ವಾಸ್ತವ್ಯಕ್ಕೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜು, ಸಿಇಒ ವೈಶಾಲಿ, ಶಾಸಕ ಅಶೋಕ ನಾಯ್ಕ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ, ಕರ್ನಾಟಕ ರಾಜ್ಯ ಒಲಿಂಪಿಕ್‌ ಸಂಸ್ಥೆ ಕಾರ್ಯದರ್ಶಿ ಅನಂತರಾಜು, ಅರುಣ್‌ ಮತ್ತಿತರರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios