ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. 8 ವರ್ಷದ ಬಾಲಕನೊಬ್ಬ ಕಡಜ ಹುಳು ಕಚ್ಚಿ ಮೃತಪಟ್ಟಿದ್ದಾನೆ. ಇನ್ನೂ ಅವರ ತಂದೆಗೆ ಗಂಭೀರ ಗಾಯವಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ..

ಸಾಗರ: ತಾಲೂಕಿನ ಹತ್ತಿಸರ ಗ್ರಾಮದಲ್ಲಿ ಕಡಜದ ಹುಳು ಕಚ್ಚಿ ಎರಡನೇ ತರಗತಿಯಲ್ಲಿ ಓದುತ್ತಿದ್ದ ಎಂಟು ವರ್ಷದ ಬಾಲಕನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಘಟನೆಯ ವಿವರ

ಹತ್ತಿಸರ ಗ್ರಾಮದ ನಿವಾಸಿ ವೆಂಕಟೇಶ್ ಎಂಬುವವರ ಪುತ್ರ ನಿಷ್ಮಿತ್ (8) ಮೃತಪಟ್ಟ ಬಾಲಕ. ಮನೆಯ ಹಿತ್ತಲಿನಲ್ಲಿರುವ ಬಾಳೆ ಗಿಡದಲ್ಲಿದ್ದ ಕಡಜದ ಗೂಡು ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ಈ ವೇಳೆ ಬಾಲಕ ನಿಷ್ಮಿತ್ ಹಾಗೂ ಆತನ ತಂದೆ ವೆಂಕಟೇಶ್ ಇಬ್ಬರಿಗೂ ಕಡಜದ ಹುಳುಗಳು ತೀವ್ರವಾಗಿ ಕಚ್ಚಿವೆ.

ಹುಳು ಕಚ್ಚಿದ ತಕ್ಷಣವೇ ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಸಮೀಪದ ಹೆಗ್ಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಷ್ಮಿತ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾನೆ. ಬಾಲಕನ ಜೊತೆಗೆ ಆತನ ತಂದೆ ವೆಂಕಟೇಶ್ ಅವರಿಗೂ ಕಡಜದ ಹುಳುಗಳು ತೀವ್ರವಾಗಿ ಕಚ್ಚಿದ್ದು, ಅವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕಂಬನಿ ಮಿಡಿದ ಗ್ರಾಮಸ್ಥರು

2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ನಿಷ್ಮಿತ್ ಚುರುಕಾಗಿದ್ದನು. ಮಗುವಿನ ಸಾವಿನಿಂದ ಹತ್ತಿಸರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಕಡಜ ಹುಳು..?

ಕಡಜದ ಹುಳು (Wasp) ಎನ್ನುವುದು ಕಣಜ ಜಾತಿಗೆ ಸೇರಿದ ಒಂದು ಕೀಟ. ಇದು ತನ್ನ ನೋವಿನ ಕಡಿತ ಮತ್ತು ಗೂಡು ಕಟ್ಟುವ ತಂತ್ರಗಾರಿಕೆಗೆ ಹೆಸರುವಾಸಿಯಾಗಿದೆ. ಕಡಜ ಕಚ್ಚಿದರೆ ತೀವ್ರವಾದ ಉರಿ, ನೋವು ಮತ್ತು ಊತ ಉಂಟಾಗುತ್ತದೆ.ಇವು ಸಾಮಾನ್ಯವಾಗಿ ಆಕ್ರಮಣಕಾರಿಯಾಗಿ ತಮ್ಮ ಗೂಡುಗಳನ್ನು ರಕ್ಷಿಸಿಕೊಳ್ಳುತ್ತವೆ. ಮರಗಳು, ಪೊದೆಗಳು ಅಥವಾ ಮನೆಗಳ ಗೋಡೆಗಳ ಮೇಲ್ಭಾಗದಲ್ಲಿ ಕಾಗದದಂತ da ಅಥವಾ ಮಣ್ಣಿನ ಗೂಡುಗಳನ್ನು ಕಟ್ಟುತ್ತವೆ. ಜೇನುಹುಳುವಿಗಿಂತ ಇವುಗಳ ಕೊಂಡಿ ಹೆಚ್ಚು ಅಪಾಯಕಾರಿ ಮತ್ತು ನೋವಿನಿಂದ ಕೂಡಿರುತ್ತದೆ. ಕಚ್ಚಿದ ಜಾಗಕ್ಕೆ ತಣ್ಣನೆಯ ಐಸ್ ಪ್ಯಾಕ್ ಅಥವಾ ಅಲೋವೆರಾ ಜೆಲ್ ಹಚ್ಚುವುದರಿಂದ ಉರಿ ಮತ್ತು ಊತ ಕಡಿಮೆ ಆಗುತ್ತದೆ. ಗೂಡುಗಳು ಮನೆಯ ಹತ್ತಿರವಿದ್ದರೆ ಅಥವಾ ಹೆಚ್ಚು ಸಂಖ್ಯೆಯಲ್ಲಿದ್ದರೆ ತೊಂದರೆ ನೀಡದೆ ವೃತ್ತಿಪರರ ಸಹಾಯದಿಂದ ಸುರಕ್ಷಿತವಾಗಿ ತೆರವುಗೊಳಿಸಬೇಕು.