“ಕೆಲಸ ಮಾಡಿಲ್ಲ ಎಂದರೆ ನನಗೆ ಕಪಾಳಕ್ಕೆ ಹೊಡೆಯಿರಿ, ಒಂದು ಟಾಯ್ಲೆಟ್ ಸೌಲಭ್ಯ ಕೊಡಲು ಸಾಧ್ಯವಿಲ್ಲ ಎಂದರೆ ಅಧಿಕಾರಿಗಳು ಯಾಕಿದ್ದಾರೆ ಎಂದು ಕೇಳುವವರಿದ್ದೇನೆ” ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಸವಾಲು ಹಾಕಿದ ಘಟನೆ ಶಿವಮೊಗ್ಗದಲ್ಲಿ ನಡೆಯಿತು.
ಶಿವಮೊಗ್ಗ: ಕೆಲಸ ಮಾಡಿಲ್ಲ ಎಂದರೆ ನನಗೆ ಕಪಾಳಕ್ಕೆ ಹೊಡೆಯಿರಿ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎನ್ ಚನ್ನಬಸಪ್ಪ ಬಹಿರಂಗ ಸವಾಲು ಹಾಕಿದ್ದಾರೆ. ಅಧಿಕಾರಿಗಳು ಮತ್ತು ಶಾಸಕರು ನಮ್ಮ ಬೇಡಿಕೆಗಳಿಗೆ, ಮನವಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂಬ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಪ್ರಮುಖರ ಆರೋಪಕ್ಕೆ ಸಿಡಿಮಿಡಿ ಗೊಂಡಿದ್ದ ಶಾಸಕರು, ಕೆಲಸ ಮಾಡಿಲ್ಲ ಅಂದರೆ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ.
ಅಸಲಿಗೆ ಆಗಿದ್ದೇನು?
ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಒಕ್ಕೂಟ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ಮನವಿಗಳನ್ನು ಸ್ವೀಕಾರ ಮಾಡಿದರು. ಈ ವೇಳೆ ಒಕ್ಕೂಟದಿಂದ ಮಾಡಿರುವ ಮನವಿಗಳಿಗೆ ಉತ್ತರ ಕೊಡುವ ಕೆಲಸ ಮಾಡಿದ್ದೇನೆ ಎಂದು ಶಾಸಕರು ಹೇಳಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್‌ಕುಮಾರ್ ಮಾತನಾಡಿ, ಶಾಸಕರು ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಮೊದಲು ಅವರನ್ನು ಕಿತ್ತೊಗೆಯಿರಿ ಎಂದು ಆಗ್ರಹಿಸಿದರು. ಇದರೊಂದಿಗೆ ಪ್ರತಿಭಟನಾಕಾರರು ಮತ್ತು ಶಾಸಕರ ನಡುವೆ ಏರು ಧ್ವನಿಯಲ್ಲಿ ಆರೋಪ -ಪ್ರತ್ಯಾರೋಪ ನಡೆಯಿತು.
'ಕೆಲಸ ಮಾಡಿಲ್ಲ ಅಂದರೆ ಕಪಾಳಕ್ಕೆ ಹೊಡೆಯಿರಿ'
ಪಾಲಿಕೆಯ ನಿವೃತ್ತ ನೌಕರ ಜನಮೇಜಿ ರಾವ್, ಪಾಲಿಕೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಜೋರಾಗಿ ಕಿರುಚಿದರು. ಇದರಿಂದ ತಾಳ್ಮೆ ಕಳೆದುಕೊಂಡ ಶಾಸಕ ಚನ್ನಬಸಪ್ಪ, ನೀವು ಅಲ್ಲೇ ಕೆಲಸ ಮಾಡಿದವರು ಹೇಗೆ ಬೇಕೋ ಹಾಗೆ ನಡೆದು ಕೊಳ್ಳಲು ಬರಲ್ಲ. ಪಾಲಿಕೆಯಲ್ಲಿ ಕೆಲಸ ಮಾಡಿ ಅದನ್ನು ಹಾಳು ಮಾಡಿರುವವರು ಬಹಳಷ್ಟು ಜನರಿದ್ದಾರೆ. ನಾನು ಆ ರೀತಿ ಇಲ್ಲ. ನಾನು ಕೆಲಸ ಮಾಡಿಲ್ಲ ಅಂದರೆ ಕಪಾಳಕ್ಕೆ ಹೊಡೆಯಿರಿ ನಿಮಗೆ ಯಾವನು ಬೇಡ ಅಂತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಹೋರಾಟಕ್ಕೆ ನಾಗರಿಕರ ಪರವಾಗಿ ನಾನು ಬೆಂಬಲ ಕೊಟ್ಟಿದ್ದೇನೆ, ಕೆಲಸ ಮಾಡಿದ್ದೇನೆ ಎಂದು ಸಮಜಾಯಿಸಿ ನೀಡಿದ ಶಾಸಕರು. ನೀವು ಮನವಿ ಮಾಡಿದ ಕೆಲಸಗಳನ್ನು ಎಲ್ಲಾ ಮಾಡಿದ್ದೇನೆ. ಅಧಿಕಾರಿಗಳು ಮಾಡಿದ ಕೆಲಸದಿಂದ ನಮಗೆಷ್ಟು ಅವಮಾನ ಆಗಿದೆ. ಒಂದು ಟಾಯ್ಲೆಟ್ ಸೌಲಭ್ಯ ಕೊಡಲು ಸಾಧ್ಯವಿಲ್ಲ ಎಂದರೆ ಅಧಿಕಾರಿಗಳು ಯಾಕಿದ್ದಾರೆ ಎಂದು ಕೇಳುವವರಿದ್ದೇನೆ. ಎಸ್ ಐಆರ್ ಪ್ರಕ್ರಿಯೆ ಹಿನ್ನೆಲೆ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೋರಾಟ ಮಾಡಬೇಡಿ ಎಂದು ನಿಮಗೆ ಹೇಳುವುದಿಲ್ಲ. ನಾಗರೀಕರ ಪರವಾದ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಇದೆ ನಿಮ್ಮಂತೆ ನಾಗರಿಕರ ಕೆಲಸ ನಾನು ಮಾಡುತ್ತಿದ್ದೇನೆ ಎಂದ ಶಾಸಕರು ಹೇಳಿದರು. ನಂತರ ಪ್ರತಿಭಟನಾಕಾರರು ಮತ್ತು ಶಾಸಕರು ಪರಸ್ಪರ ಸಮಾಧಾನದಿಂದ ಮಾತನಾಡಿ ಪ್ರತಿಭಟನೆ ಕೈಬಿಟ್ಟರು.


