ಮಾನವ ದೇಹವು ಅದ್ಭುತಗಳ ಆಗರ. ರಕ್ತನಾಳಗಳ ಉದ್ದ, ನಿರಂತರವಾಗಿ ಬೆಳೆಯುವ ಕಿವಿಗಳು, ಮತ್ತು ಇನ್ನೂ ಅನೇಕ ವಿಸ್ಮಯಕಾರಿ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಮಾನವ ದೇಹವು ಹಲವು ಆಕರ್ಷಕ ಮತ್ತು ವಿಶಿಷ್ಟ ಹಾಗೂ ಕೇಳುವುದಕ್ಕೆ ವಿಚಿತ್ರ ಎನಿಸುವ ಗುಣಲಕ್ಷಣಗಳಿಂದ ಹೊಂದಿದೆ. ಉದಾಹರಣೆಗೆ ಮಗುವೊಂದು ಜನಿಸುತ್ತಲೇ ಸುಮಾರು 300 ಮೂಳೆಗಳೊಂದಿಗೆ ಜನಿಸುತ್ತದೆ. ಆದರೆ ಅವುಗಳಲ್ಲಿ ಕೆಲವು ಬೆಳೆದಂತೆ ಒಟ್ಟಿಗೆ ಬೆಸೆದು ವಯಸ್ಕರಾಗುತ್ತಿದ್ದಂತೆ 206 ಮೂಳೆಗಳು ಉಳಿಯುತ್ತವೆ ಹೀಗೆ ನಮ್ಮ ದೇಹವು ಹಲವು ಅಚ್ಚರಿ ಎನಿಸುವ ವಿಚಾರಗಳನ್ನು ಹೊಂದಿದೆ. ಕೆಲವನ್ನು ನಿಮಗೆ ಕೇಳುವುದಕ್ಕೆ ಅಸಹ್ಯ ಎನಿಸಲೂಬಹುದು. ಹಾಗಿದ್ರೆ ನಮ್ಮ ದೇಹದ ಬಗ್ಗೆ ಕೆಲವು ವಿಶೇಷ ಎನಿಸುವ ಗುಣಲಕ್ಷಣಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

ಮಾನವ ರಕ್ತನಾಳದ ಉದ್ದ:

ಮಾನವ ದೇಹವು 60,000 ರಿಂದ 100,000 ಮೈಲುಗಳಷ್ಟು ಉದ್ದವಿರುವ ರಕ್ತನಾಳಗಳ ವಿಶಾಲ ಜಾಲವನ್ನು ಹೊಂದಿದೆ. ದೇಹದಲ್ಲಿ ಹಬ್ಬಿರುವ ವಿಶಾಲ ರಕ್ತನಾಳಗಳನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಯ ಜೊತೆ ಸೇರಿಸಿದರೆ ಭೂಮಿಗೆ ಎರಡು ಸುತ್ತು ತರುವಷ್ಟು ಉದ್ದವಿದೆಯಂತೆ.

ಮಾನವ ಚರ್ಮ:

ಹಾಗೆಯೇ ನಮ್ಮ ದೇಹದ ಚರ್ಮವೂ ದೇಹದ ಅತಿದೊಡ್ಡ ಅಂಗ ಎನಿಸಿದೆ. ಇದು ದೇಹದಲ್ಲಿನಿರಂತರವಾಗಿ ಪುನರುತ್ಪಾದನೆಯಾಗುತ್ತಲೇ ಇರುತ್ತದೆ ಹಾಗೂ ಪ್ರತಿ ನಿಮಿಷಕ್ಕೆ ನಮ್ಮ ದೇಹದ ಸುಮಾರು 1 ಮಿಲಿಯನ್ ಚರ್ಮ ಕೋಶಗಳು ಉದುರಿ ಹೋಗುತ್ತಿರುತ್ತದೆ.

ಕಣ್ಣುಗಳು:

ನಿಮ್ಮ ಕಣ್ಣುಗಳು ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತವೆ(ಕಣ್ಣು ಮಿಟುಕಿಸುವುದು) ಎಂಬ ಬಗ್ಗೆ ನಿಮಗೇನಾದರೂ ಐಡಿಯಾ ಇದ್ಯಾ? ನಮ್ಮ ಕಣ್ಣುಗಳು ಒಂದು ನಿಮಿಷಕ್ಕೆ 20 ಬಾರಿ ಮಿಟುಕುತ್ತವೆ ಎಂದರೆ ಬಹುತೇಕರಿಗೆ ಅಚ್ಚರಿಯಾಗುತ್ತದೆ ಆದರೆ ಇದು ಸತ್ಯ. ಹೀಗಾಗಿ ಒಂದು ವರ್ಷದಲ್ಲಿ ನಮ್ಮ ಕಣ್ಣು 10 ಮಿಲಿಯನ್‌ಗೂ ಹೆಚ್ಚು ಬಾರಿ ಬಡಿಯುತ್ತವೆ.

ನಿಮ್ಮ ಕಿವಿಗಳ ಬೆಳವಣಿಗೆ ನಿಲ್ಲುವುದೇ ಇಲ್ಲ:

ಸಾಮಾನ್ಯವಾಗಿ ಮಕ್ಕಳ ಬೆಳವಣಿಗೆಯ ಬಗ್ಗೆ ಪೋಷಕರು ಚಿಂತೆ ಮಾಡುತ್ತಾರೆ. ಹೆಣ್ಣು ಮಕ್ಕಳು ಋತುಮತಿಯಾಗುವವರೆಗೆ ಅಂದರೆ 14ರಿಂದ 16ರ ವಯಸ್ಸಿನವರೆಗೆ ಬೆಳೆಯುತ್ತಾರೆ. ಕೆಲವರು 18ರ ಹರೆಯದವರೆಗೂ ಬೆಳೆಯುತ್ತಾರೆ. ಹಾಗೆಯೇ ಹುಡುಗರು 18ರಿಂದ 20ರ ವಯಸ್ಸಿನವರೆಗೆ ಬೆಳೆಯುತ್ತಾರೆ ಆದರೆ ನಮ್ಮ ಕಿವಿ ಬೆಳೆಯುತ್ತಲೇ ಇರುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ ಅಚ್ಚರಿ ಆದರೂ ಇದು ಸತ್ಯ. ಕಿವಿಗಳು ತಮ್ಮ ಬೆಳವಣಿಗೆಯನ್ನು ನಿಲ್ಲಿಸುವುದೇ ಇಲ್ಲವಂತೆ

ಕಿವಿಯೊಳಗಿರುವ ಗುಗ್ಗೆ:

ಕಿವಿಯೊಳಗಿರುವ ಗುಗ್ಗೆ ಅಥವಾ ಮೇಣದಂತಹ ವಸ್ತು ವಾಸ್ತವವಾಗಿ ಬೆವರು ಎಂದರೆ ನೀವು ನಂಬುತ್ತಿರಾ? ಆದರೆ ಅಧ್ಯಯನದ ಪ್ರಕಾರ, ಕಿವಿಯೊಳಗೆ ಉತ್ಪಾದನೆಯಾಗುವ ಗುಗ್ಗೆ ಅಥವಾ ಇಯರ್ ವ್ಯಾಕ್ಸ್ ಮೂಲತಃ ಬೆವರು ಎಂಬುದು ಸಾಬೀತಾಗಿದೆ.

ನಾಲಗೆ:

ಸಿಹಿ, ಹುಳಿ, ಉಪ್ಪು, ಖಾರ, ಕಹಿ ಇವು ನಮಗೆ ತಿಳಿದಂತೆ ನಾಲಗೆ ಪತ್ತೆ ಮಾಡುವ ರುಚಿಯಾಗಿದೆ. ಆದರೆ ನಮ್ಮ ನಾಲಿಗೆಯು ಇದರ ಹೊರತಾಗಿ ಸುಮಾರು 8,000 ಬಗೆಯ ರುಚಿಗಳನ್ನು ಗೊತ್ತು ಮಾಡುತ್ತದೆಯಂತೆ ಹಾಗೆಯೇ ನಾಲಗೆಯ ಪ್ರತಿಯೊಂದು ಆಹಾರವನ್ನು ಸವಿಯಲು ಸಹಾಯ ಮಾಡುವ 100 ಕೋಶಗಳನ್ನು ಹೊಂದಿದೆಯಂತೆ.

ಎಂಜಲು:

ಒಬ್ಬ ಮಾನವ ತನ್ನ ಜೀವಿತಾವಧಿಯಲ್ಲಿ ಸರಿಸುಮಾರು 40,000 ಲೀಟರ್ ಎಂಜಲು(ಜೊಲ್ಲು) ಉತ್ಪಾದನೆ ಮಾಡುತ್ತಾನೆ. ಇದರ ಪ್ರಮಾಣ ಎಷ್ಟು ಎಂದು ಸಾಮಾನ್ಯ ಭಾಷೆಯಲ್ಲಿ ಅರ್ಥ ಮಾಡಿಸುವಂತೆ ಹೇಳುವುದಾದರೆ ಸುಮಾರು 500 ಸ್ನಾನದ ಹಂಡೆಗಳಷ್ಟು ಎಂಜಲು ಒಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಉತ್ಪಾದನೆಯಾಗುತ್ತದೆ.

ಮೂಗಿನ ಸಿಂಬಳ:

ಮಾನವನ ಮೂಗು ಪ್ರತಿ ದಿನ ಸರಾಸರಿ ಸುಮಾರು ಒಂದು ಕಪ್‌ನಷ್ಟು ಮೂಗಿನ ಲೋಳೆಯನ್ನು(ಸಿಂಬಳ)ವನ್ನು ಉತ್ಪಾದಿಸುತ್ತದೆ ಎಂದು ತಿಳಿದರೆ ನಿಮಗೆ ಅಚ್ಚರಿ ಆಗಬಹುದು.

ಬೆಳಗಿನ ಎತ್ತರಕ್ಕೂ ರಾತ್ರಿಯ ಎತ್ತರಕ್ಕೂ ಇದೆ ವ್ಯತ್ಯಾಸ:

ವ್ಯಕ್ತಿಯೊಬ್ಬ ಬೆಳಗ್ಗೆ ಎದ್ದಾಗ ಇರುವ ಎತ್ತರಕ್ಕೂ ಹಾಗೂ ಸಂಜೆ ಅಥವಾ ರಾತ್ರಿಯ ಎತ್ತರದ ಮಧ್ಯೆ 1 ಸೆ.ಮೀಟರ್‌ನಷ್ಟು ವ್ಯತ್ಯಾಸವಿರುತ್ತದೆ. ಏಕೆಂದರೆ ಬೆಳಗ್ಗಿನಿಂದ ಸಂಜೆಯಾಗುತ್ತಿದ್ದಂತೆ ನಿಮ್ಮ ಮೂಳೆಗಳ ನಡುವಿನ ಮೃದುವಾದ ಕಾರ್ಟಿಲೆಜ್ ಸಂಕುಚಿತಗೊಳ್ಳುತ್ತದೆ.

690 ದಿನದಲ್ಲಿ ನೀವು ಭೂಮಿಗೆ ಒಂದು ಸುತ್ತು ಬರಬಹುದು:

ಮಾನವನೋರ್ವ ದಿನಕ್ಕೆ 12 ಗಂಟೆಗಳ ಕಾಲ ನಡೆದರೆ, ಒಬ್ಬ ವ್ಯಕ್ತಿ ಪ್ರಪಂಚವನ್ನು ಒಂದು ಸುತ್ತು ಸುತ್ತಲು ಸರಾಸರಿ 690 ದಿನಗಳು ಬೇಕು.

ಹೃದಯಕ್ಕಿಲ್ಲ ವಿರಾಮ

ನಿಮ್ಮ ದೇಹದಲ್ಲಿ ವಿರಾಮ ಪಡೆಯದ ಒಂದೇ ಒಂದು ಅಂಗ ಎಂದರೆ ಅದು ಹೃದಯ. ಹೃದಯ ವಿಶ್ರಾಂತಿ ಪಡೆಯಲು ಯತ್ನಿಸಿದರೆ ಏನಾಗುತ್ತದೆ ಅಂತ ಹೇಳಬೇಕಾಗಿಲ್ಲ ತಾನೇ! ನೀವು 70 ವರ್ಷಗಳ ಕಾಲ ಬದುಕಿದರೆ, ನಿಮ್ಮ ಹೃದಯವೂ ಸುಮಾರು 2.5 ಶತಕೋಟಿ ಬಾರಿ ಹೊಡೆದುಕೊಳ್ಳುವುದು.

ಹಾವಲ್ಲ, ಮಾನವನ ಚರ್ಮವೂ ಬದಲಾಗುತ್ತದೆ!

ಮಾನವನ ಚರ್ಮದ ಸಂಪೂರ್ಣ ಮೇಲ್ಮೈ ಪ್ರತಿ ತಿಂಗಳು ಬದಲಾಗುತ್ತದೆ. ಅಂದರೆ ನಿಮ್ಮ ಜೀವಿತಾವಧಿಯಲ್ಲಿ ಸರಾಸರಿ ಸುಮಾರು 1,000 ವಿಭಿನ್ನ ಚರ್ಮಗಳನ್ನು ನೀವು ಹೊಂದುವಿರಿ. ಹಾಗೆಯೇ ಪ್ರತಿ ಮಾನವನ ದೇಹವು 2.5 ಮಿಲಿಯನ್ ಬೆವರು ರಂಧ್ರಗಳನ್ನು ಹೊಂದಿದೆ ಎಂದು ನಿಮಗೆ ಗೊತ್ತಾ?

ಒಂದು ವರ್ಷ ಟಾಯ್ಲೆಟ್ ವಾಸ

ನೀವು ನಿಮ್ಮ ಇಡೀ ಜೀವಿತಾವಧಿಯಲ್ಲಿ ಟಾಯ್ಲೆಟ್‌ನಲ್ಲಿ ಕಳೆಯುವ ಒಟ್ಟು ಸಮಯವನ್ನು ಒಟ್ಟುಗೂಡಿಸಿದರೆ ನೀವು ಜೀವನದ ಒಂದು ವರ್ಷವನ್ನು ಪೂರ್ತಿ ಶೌಚಾಲಯದಲ್ಲೇ ಕಳೆಯುವಿರಿ.

ಹಾಗೇಯೇ ತಮಾಷೆಯಾಗಿ ಕಂಡರೂ ಸರಾಸರಿಯಾಗಿ ಮಾನವರು ಒಂದು ದಿನದಲ್ಲಿ ಒಂದು ಪಾರ್ಟಿ ಬಲೂನ್ ತುಂಬುವಷ್ಟು ಹೂಸು ಬಿಡುತ್ತಾರಂತೆ.