ಸೂರ್ಯನ ಮೇಲ್ಮೈನಲ್ಲಿ ಸ್ಫೋಟದಿಂದ ಅಕ್ಟೋಬರ್ 11ರಂದು ಭೂಮಿಗೆ ಸೌರ ಚಂಡಮಾರುತ ಅಪ್ಪಳಿಸಲಿದೆ ಎಂದು ಅಮೆರಿಕದ Noaa ಎಚ್ಚರಿಸಿದೆ. ಈ ಸೌರ ಚಂಡಮಾರುತ ಅಪ್ಪಳಿಸುವುದರಿಂದ ಆಗುವ ಪರಿಣಾಮವೇ
ಸೌರ ಮಂಡದಲ್ಲಿ ಆಗುವ ಕೆಲ ನೈಸರ್ಗಿಕ ಸ್ಫೋಟಗಳು, ಚಲನೆಗಳು ಭೂಮಿಯ ಮೇಲೂ ಪರಿಣಾಮ ಬೀರುತ್ತದೆ. ಹಲವು ಭಾರಿ ಕ್ಷುದ್ರಗ್ರಹಗಳ ಆತಂಕವನ್ನು ಭೂಮಿ ಎದುರಿಸಿದೆ. ಇದೀಗ ಸೌರ ಚಂಡಮಾರುತ ಎಚ್ಚರಿಕೆ ಎದುರಾಗಿದೆ. ನಾಳೆ (ಅಕ್ಟೋಬರ್ 11) ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಲಿದೆ ಎಂದು ಅಮೆರಿಕದ NOAA ಸಂಸ್ಥೆ ಎಚ್ಚರಿಕೆ ನೀಡಿದೆ. ಸೂರ್ಯನ ಮೇಲ್ಮೈನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮದಿಂದ ಸೃಷ್ಟಿಯಾದ ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಲಿದೆ ಎಂದು NOAA ಹೇಳಿದೆ.
ಜಿ2 ಲೆವೆಲ್ ಎಚ್ಚರಿಕೆ
ಅಕ್ಟೋಬರ್ 7 ಹಾಗೂ 8 ರಂದು ಸೂರ್ಯನ ಮೇಲ್ಮೈನಲ್ಲಿ ಎರಡು ಸ್ಫೋಟ ಸಂಭವಿಸಿದೆ. ಮೊದಲ ಸ್ಫೋಟ ಸಣ್ಣ ಪ್ರಮಾಣದಲ್ಲಿ ನಡೆದರೆ, ಎರಡನೇ ಸ್ಫೋಟದ ತೀವ್ರತೆ ಹೆಚ್ಚಿತ್ತು. ಹೀಗಾಗಿ ಎರಡನೇ ಸ್ಫೋಟದಿಂದ ಸೃಷ್ಟಿಯಾದ ಚಂಡ ಮಾರುತ ಇದೀಗ ಮೊದಲ ಸ್ಫೋಟದ ಚಂಡಮಾರುತ ಜೊತೆ ಸೇರಿಕೊಳ್ಳಲಿದೆ ಎಂದು NOAA ಹೇಳಿದೆ. ಹೀಗಾಗಿ ಈ ಸೌರ ಚಂಡಮಾರುತ ಜಿ2 ಲೆವೆಲ್ ಮಟ್ಟದ ಎಚ್ಚರಿಕೆ ನೀಡಲಾಗಿದೆ. NOAA ಸೌರ ಚಂಡಮಾರುತಗಳ ತೀವ್ರತೆ ಕುರಿತು ಎಚ್ಚರಿಕೆ ನೀಡುತತ್ದೆ. ಜಿ1ರಿಂದ ಜಿ5ವರೆಗಿನ ಮಟ್ಟದ ಎಚ್ಚರಿಕೆ ನೀಡಲಾಗುತ್ತದೆ. ಜಿ1 ಹೆಚ್ಚಿನ ಸಮಸ್ಯೆಗಳಿಗೆ ಕಾರಣಾಗುವುದಿಲ್ಲ.ಜಿ5 ಅತ್ಯಂತ ತೀವ್ರ ಎಂದು ಪರಿಗಣಿಸಲಾಗುತ್ತದೆ. ಸದ್ಯ ಜಿ2 ಲೆವೆಲ್ ಎಚ್ಚರಿಕೆ ನೀಡಲಾಗಿದೆ.
ಈ ಬಾರಿ ಭೂಮಿ ಮೇಲಾಗುವ ಪರಿಣಾಮವೇನು
ಅಕ್ಟೋಬರ್ 11ರಂದು ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಲಿದೆ. ಜಿ2 ಲೆವೆಲ್ ತೀವ್ರತೆ ಇರುವ ಕಾರಣ ಉಪಗ್ರಹಗಳು, ರೇಡಿಯೋ ಸಂವಹನ, ನ್ಯಾವಿಗೇಶನ್ ಸೇರಿ ಕೆಲ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಲಿದೆ. ವಿದ್ಯುತ್ ಗ್ರಿಡ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು NOAA ಎಚ್ಚರಿಸಿದೆ. ಪ್ರಮುಖವಾಗಿ ಭೂಮಿಯ ಉತ್ತರ ಅಕ್ಷಾಂಶ ಪ್ರದೇಶಗಳಲ್ಲಿ ಹೆಚ್ಚಿನ ಪರಿಣಾಮ ಬೀರಲಿದೆ. ಈ ಪ್ರದೇಶಗಳಲ್ಲಿ ವಿದ್ಯುತ್ ಗ್ರಿಡ್ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಉಪಗ್ರಹಗಳಲ್ಲಿ ಕೆಲ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ. ಇನ್ನು ನ್ಯಾವಿಗೇಶನ್ ನಿಖರತೆಯಲ್ಲಿ ಬದಲಾವಣೆ, ರೇಡಿಯೋ ಸಿಗ್ನಲ್ ಸಮಸ್ಯೆಗಳು ಎದುರಾಗಲಿದೆ ಎಂದು NOAA ಎಚ್ಚರಿಸಿದೆ.
ಭಾರತದಲ್ಲಿ ಪರಿಣಾಮ ಬೀರುತ್ತಾ?
ಸೌರ ಚಂಡಮಾರುತ ಅಪ್ಪಳಿಸುವುದರಿಂದ ಭಾರತದಲ್ಲಿ ಪರಿಣಾಮ ಬೀರುತ್ತಾ ಅನ್ನೋ ಪ್ರಶ್ನೆಗಳಿಗೂ ವಿಜ್ಞಾನಿಗಳು ಉತ್ತರಿಸಿದ್ದಾರೆ. ಸದ್ಯ ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಜಿ2 ಮಟ್ಟದ ತೀವ್ರತೆ ಪರಿಣಾಮ ಕೆಲ ಭಾಗದಲ್ಲಿ ವಿದ್ಯುತ್ ಗ್ರಿಡ್ ಮೇಲೆ ಪರಿಣಾಮ ಬೀರಬಹುದು. ಆದರೆ ಭಾರತದ ಮೇಲೆ ಪರಿಣಾಮ ಸಾಧ್ಯತೆ ಇಲ್ಲ ಎಂದಿದ್ದಾರೆ. ಸೌರ್ಯನಿಂದ ಭೂಮಿಯತ್ತ ಧಾವಿಸುತ್ತಿರುವ ಸೌರ ಚಂಡಮಾರುತದ ಸದ್ಯದ ಪರಿಸ್ಥಿತಿ ಜಿ2. ಆದರೆ ಭೂಮಿಯ ಸಮೀಪ ತಲುಪುತ್ತಿದ್ದಂತೆ ಪರಿಸ್ಥಿತಿ ಬದಲಾಗಹುದು. ತೀವ್ರತೆ ಕ್ಷೀಣಿಸುವ ಸಾಧ್ಯತೆ ಇದೆ ಎಂದಿದ್ದಾರೆ.


