ಸರ್ ಸಿ ವಿ ರಾಮನ್ ಮತ್ತು ಬೆಂಗಳೂರು ನಗರದ ನಡುವಿನ ಅವಿನಾಭಾವ ಸಂಬಂಧವನ್ನು ಈ ಲೇಖನ ವಿವರಿಸುತ್ತದೆ. ರಾಮನ್ ಅವರ ಸಂಶೋಧನೆಗಳು, ಬೆಂಗಳೂರಿನಲ್ಲಿ ಅವರು ಸ್ಥಾಪಿಸಿದ ಸಂಸ್ಥೆಗಳು, ಮತ್ತು ನಗರದ ವೈಜ್ಞಾನಿಕ ಪ್ರಗತಿಗೆ ಅವರ ಕೊಡುಗೆಗಳನ್ನು ಇದು ಒಳಗೊಂಡಿದೆ.


ಗಿರೀಶ್ ಲಿಂಗಣ್ಣ, ಲೇಖಕರು ವಿಜ್ಞಾನ ಬರಹಗಾರ

ರಾಮನ್ ಪರಿಣಾಮ ಎಂಬ ಮಹತ್ವದ ಸಂಶೋಧನೆಯ ಹಿಂದಿನ ಅದ್ಭುತ ಆಲೋಚನೆಯನ್ನು ಹೊಂದಿದ ವ್ಯಕ್ತಿಯಾದ ಸರ್ ಚಂದ್ರಶೇಖರ ವೆಂಕಟ ರಾಮನ್ ಬೆಂಗಳೂರು ನಗರದೊಡನೆ ಒಂದು ವಿಶಿಷ್ಟ ಸಂಬಂಧವನ್ನು ಹೊಂದಿದ್ದರು. ತನ್ನ ಪ್ರಸಿದ್ಧ ವೈಜ್ಞಾನಿಕ ಸಮುದಾಯದಿಂದ ಹೆಸರಾಗಿದ್ದ ಬೆಂಗಳೂರು ನಗರ ಸಿ ವಿ ರಾಮನ್ ಅವರ ಜೀವನ ಮತ್ತು ವೃತ್ತಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಬೆಂಗಳೂರು ನಗರ ಮತ್ತು ಸರ್ ಸಿ ವಿ ರಾಮನ್ ನಡುವಿನ ಬಾಂಧವ್ಯ ಹೇಗಿತ್ತು, ಅದು ಇಂದಿಗೂ ಯುವ ಸಮುದಾಯಕ್ಕೆ ಹೇಗೆ ಸ್ಫೂರ್ತಿ ತುಂಬಬಲ್ಲದು ಎನ್ನುವುದನ್ನು ಗಮನಿಸೋಣ.

ಬೆಂಗಳೂರಿಗೆ ಸರ್ ಸಿ ವಿ ರಾಮನ್ ಆಗಮನ: 1933ರಲ್ಲಿ, ಸರ್ ಸಿ ವಿ ರಾಮನ್ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ - ಐಐಎಸ್‌ಸಿ) ನಿರ್ದೇಶಕರಾಗಿ ನೇಮಕಗೊಂಡರು. ಇದು ಅವರ ಜೀವನದಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ನಾಂದಿಯಾಯಿತು. ರಾಮನ್ ಅವರು ವೈಜ್ಞಾನಿಕ ಅನ್ವೇಷಣೆ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ರೂಪಿಸಿ, ದೇಶ ವಿದೇಶಗಳಿಂದ ಪ್ರತಿಭಾವಂತ ಸಂಶೋಧಕರನ್ನು ಐಐಎಸ್‌ಸಿಯತ್ತ ಆಕರ್ಷಿಸುವ ದೂರದೃಷ್ಟಿ ಹೊಂದಿದ್ದರು.

ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್: ಐಐಎಸ್‌ಸಿಯಲ್ಲಿ ತನ್ನ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ, ರಾಮನ್ ಬೆಂಗಳೂರಿನಲ್ಲೇ ತನ್ನ ಸ್ವಂತ ಸಂಶೋಧನಾ ಸಂಸ್ಥೆಯನ್ನು ಆರಂಭಿಸಿದರು. ಇದಕ್ಕೆ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ (ಆರ್‌ಆರ್‌ಐ) ಎಂಬ ಸೂಕ್ತವಾದ ಹೆಸರನ್ನೇ ಇಟ್ಟರು. ರಾಮನ್ ಅವರ ಸಂಸ್ಥೆ ಭೌತಶಾಸ್ತ್ರ, ಖಗೋಳಶಾಸ್ತ್ರ, ಮತ್ತು ದೃಗ್ವಿಜ್ಞಾನ ಸೇರಿದಂತೆ, ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆಯ ಕೇಂದ್ರವಾಗಿ ರೂಪುಗೊಂಡಿತು. ವಿಜ್ಞಾನದ ಕುರಿತು ರಾಮನ್ ಅವರ ಪ್ರೀತಿ ಮತ್ತು ಯುವ ವಿಜ್ಞಾನಿಗಳನ್ನು ಬೆಳೆಸುವತ್ತ ಅವರ ಶ್ರದ್ಧೆ ಆರ್‌ಆರ್‌ಐ ನಲ್ಲಿ ಅತ್ಯುತ್ತಮ ವೈಜ್ಞಾನಿಕ ವಾತಾವರಣವನ್ನು ಸೃಷ್ಟಿಸಿತ್ತು.

ಪಂಚವಟಿ: ರಾಮನ್ ನಿವಾಸ: ಬೆಂಗಳೂರಿನ 'ಪಂಚವಟಿ' ಎಂಬ ಸರ್ ಸಿ ವಿ ರಾಮನ್ ಅವರ ನಿವಾಸ ಕೇವಲ ಮನೆ ಮಾತ್ರವೇ ಆಗಿರಲಿಲ್ಲ. ಅಲ್ಲಿ ಸುತ್ತಲಿನ ರಾಮನ್ ಅವರ ಪ್ರೀತಿಯ ಹೂತೋಟ ಮತ್ತು ಹರಳುಗಳು ಮತ್ತು ಖನಿಜಗಳ ಸಂಗ್ರಹದ ನಡುವೆ ರಾಮನ್ ತನ್ನ ವೈಜ್ಞಾನಿಕ ಅನ್ವೇಷಣೆಗಳನ್ನೂ ನಡೆಸುತ್ತಿದ್ದರು. ಪಂಚವಟಿ ವಿಜ್ಞಾನಿಗಳು, ಕಲಾವಿದರು, ಮತ್ತು ಬುದ್ಧಿಜೀವಿಗಳ ಸಂವಾದದ ತಾಣವಾಗಿ, ಆಲೋಚನೆಗಳು, ಹೊಸ ಯೋಜನೆಗಳ ಕೊಡುಕೊಳ್ಳುವಿಕೆಯ ಸ್ಥಳವಾಗಿತ್ತು.

ಸಿ ವಿ ರಾಮನ್ ನಗರ: ಇಂದು ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶವೊಂದು ರಾಮನ್ ಅವರ ಹೆಸರನ್ನು ಹೊಂದಿದೆ. ಅದುವೇ ಸಿ ವಿ ರಾಮನ್ ನಗರ. ಬೆಂಗಳೂರಿನ ಪ್ರದೇಶವೊಂದಕ್ಕೆ ರಾಮನ್ ಹೆಸರನ್ನು ಇಟ್ಟಿರುವುದು ಬೆಂಗಳೂರು ನಗರಕ್ಕೆ ಮತ್ತು ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗಳಿಗೆ ಸೂಕ್ತ ಗೌರವವಾಗಿದೆ. ಈ ಪ್ರದೇಶ ಹಲವಾರು ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಮತ್ತು ತಂತ್ರಜ್ಞಾನ ಸಂಸ್ಥೆಗಳಿಗೆ ನೆಲೆಯಾಗಿದ್ದು, ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ರಾಮನ್ ಕನಸನ್ನು ಪ್ರತಿನಿಧಿಸುತ್ತದೆ.

ಬೆಂಗಳೂರಿನ ಮೇಲೆ 'ರಾಮನ್ ಪರಿಣಾಮ': ಸರ್ ಸಿ ವಿ ರಾಮನ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು ಬೆಂಗಳೂರಿನ ವೈಜ್ಞಾನಿಕ ಚಿತ್ರಣದ ಮೇಲೆ ಅಸಾಧಾರಣ ಪ್ರಭಾವ ಬೀರಿತ್ತು. ರಾಮನ್ ಹಲವು ತಲೆಮಾರಿನ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಸ್ಫೂರ್ತಿ ತುಂಬಿದ್ದು, ಅವರಿಗೆ ತಮ್ಮ ಜ್ಞಾನದ ಗಡಿಯನ್ನು ವಿಸ್ತರಿಸಿ, ದೇಶದ ಪ್ರಗತಿಗೆ ಕೊಡುಗೆ ನೀಡುವಂತೆ ಪ್ರೇರೇಪಿಸಿದ್ದರು. ವೈಜ್ಞಾನಿಕ ಪ್ರಗತಿಗೆ ಅವರು ನೀಡುತ್ತಿದ್ದ ಆದ್ಯತೆ ಮತ್ತು ವಿಜ್ಞಾನದ ಸಾಮರ್ಥ್ಯದ ಕುರಿತು ಅವರು ಹೊಂದಿದ್ದ ಭರವಸೆ ಬೆಂಗಳೂರನ್ನು ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಯ ಕೇಂದ್ರವಾಗಿ ರೂಪುಗೊಳ್ಳಲು ನೆರವಾದವು.

ಯುವ ಮನಸ್ಸುಗಳಿಗೆ ಸ್ಫೂರ್ತಿ: ಇಂದಿಗೂ ಸರ್ ಸಿ ವಿ ರಾಮನ್ ಅವರ ಯಶೋಗಾಥೆ ಬೆಂಗಳೂರು ಮತ್ತು ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುತ್ತಿದೆ. ತಮಿಳುನಾಡಿನ ಒಂದು ಸಣ್ಣ ಪಟ್ಟಣದಲ್ಲಿ ಜೀವನ ಆರಂಭಿಸಿ, ನೊಬೆಲ್ ಪ್ರಶಸ್ತಿ ಗೆಲ್ಲುವ ತನಕ ಅವರು ಸಾಗಿದ ಹಾದಿ ಕಠಿಣ ಪರಿಶ್ರಮ, ಬದ್ಧತೆ ಮತ್ತು ಜ್ಞಾನ ಸಂಪಾದನೆಯತ್ತ ಇದ್ದ ತುಡಿತಗಳಿಗೆ ಸಾಕ್ಷಿಯಾಗಿತ್ತು. ಇಂದಿಗೂ ರಾಮನ್ ಅವರ ಹಿರಿಮೆ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಕನಸು ಕಾಣುತ್ತಾ, ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಪ್ರೇರಣೆ ನೀಡುತ್ತಿದೆ.

ರಾಷ್ಟ್ರೀಯ ವಿಜ್ಞಾನ ದಿನ: ರಾಮನ್ ಪರಿಣಾಮದ ಸಂಭ್ರಮಾಚರಣೆ: ಸರ್ ಸಿ ವಿ ರಾಮನ್ ಅವರ ಅಸಾಧಾರಣ ಸಂಶೋಧನೆಯಾದ ರಾಮನ್ ಪರಿಣಾಮವನ್ನು ಸಂಭ್ರಮಿಸುವ ಸಲುವಾಗಿ, ಭಾರತದಲ್ಲಿ ಪ್ರತಿವರ್ಷವೂ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಸರ್ ಸಿ ವಿ ರಾಮನ್ ಅವರು ತನ್ನ ಸಂಶೋಧನೆಯನ್ನು ಜಗತ್ತಿಗೆ ಸಾರಿದ್ದನ್ನು ಸ್ಮರಿಸುವ ದಿನವಾಗಿದೆ. ರಾಷ್ಟ್ರೀಯ ವಿಜ್ಞಾನ ದಿನದಂದು ರಾಮ‌ನ್ ಅವರ ವೈಜ್ಞಾನಿಕ ಕೊಡುಗೆಗಳಿಗೆ ಗೌರವ ಸಲ್ಲಿಸುತ್ತಾ, ಯುವ ಭಾರತೀಯರಲ್ಲಿ ವಿಜ್ಞಾನದ ಕುರಿತು ಪ್ರೀತಿ ಮೂಡಿಸಲಾಗುತ್ತದೆ. ಭಾರತದ ಪ್ರಗತಿಗಾಗಿ ವೈಜ್ಞಾನಿಕ ಚಿಂತನೆ ಮತ್ತು ನಾವೀನ್ಯತೆಯ ಮಹತ್ವವನ್ನೂ ರಾಷ್ಟ್ರೀಯ ವಿಜ್ಞಾನ ದಿನ ಸಾರುತ್ತದೆ.

ಪಂಚವಟಿ: ಒಂದು ಕುತೂಹಲದ ಪರಂಪರೆ: ರಾಮನ್ ಅವರ ಸಂಶೋಧನಾ ಸಂಸ್ಥೆಗಳು ಮತ್ತು ಅವರ ಹೆಸರನ್ನು ಹೊಂದಿರುವ ಪ್ರದೇಶದ ಹೊರತಾಗಿ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅವರ ನಿವಾಸವಾದ ಪಂಚವಟಿಯಲ್ಲೂ ರಾಮನ್ ನೆನಪುಗಳು, ಪರಂಪರೆಯನ್ನು ಕಾಪಿಡಲಾಗಿದೆ. ಸಾರ್ವಜನಿಕರಿಗೆ ಪಂಚವಟಿಗೆ ಪ್ರವೇಶ ಇಲ್ಲವಾದರೂ, ವೈಜ್ಞಾನಿಕ ಅನ್ವೇಷಣೆಗೆ ಜೀವನ ಪರ್ಯಂತ ಅವರು ಹೊಂದಿದ್ದ ಬದ್ಧತೆಗೆ ಈ ಮನೆ ಸಾಕ್ಷಿಯಾಗಿದೆ. ಈ ಮ‌ನೆಯ ಗೋಡೆಗಳ ಒಳಗೇ ರಾಮನ್ ತನ್ನ ವೈಜ್ಞಾನಿಕ ಕುತೂಹಲಗಳಿಗೆ ಉತ್ತರ ಕಂಡುಕೊಳ್ಳುತ್ತಾ, ವೈಜ್ಞಾನಿಕ ಆಲೋಚನೆಗಳು ಬೆಳೆಯುವಂತಹ ವಾತಾವರಣವನ್ನು ಸೃಷ್ಟಿಸಿದ್ದರು.

ಬೆಂಗಳೂರಿನಲ್ಲಿ ರಾಮನ್ ಸ್ಮರಣೆಯ ತಾಣಗಳು

ನೀವು ಬೆಂಗಳೂರಿನಲ್ಲಿದ್ದರೆ, ಸರ್ ಸಿ ವಿ ರಾಮನ್ ಅವರ ಜೀವನಕ್ಕೆ, ಅವರ ವೃತ್ತಿಗೆ ಸಂಬಂಧಿಸಿದ ಹಲವು ತಾಣಗಳಿಗೆ ಭೇಟಿ ನೀಡಬಹುದು. ಅವೆಂದರೆ:

ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್: ಇಲ್ಲಿಗೆ ಭೇಟಿ ನೀಡಿ, ಸಂಸ್ಥೆ ಹೊಂದಿರುವ ವೈಜ್ಞಾನಿಕ ಸಂಶೋಧನಾ ವ್ಯವಸ್ಥೆಗಳನ್ನು ವೀಕ್ಷಿಸಿ, ವಿಜ್ಞಾನದ ವಿವಿಧ ಕ್ಷೇತ್ರಗಳಿಗೆ ಸಂಸ್ಥೆ ನೀಡಿರುವ ಕೊಡುಗೆಗಳನ್ನು ತಿಳಿಯಬಹುದು.

ಭಾರತೀಯ ವಿಜ್ಞಾನ ಸಂಸ್ಥೆ: ಐಐಎಸ್‌ಸಿ ಆವರಣಕ್ಕೆ ಭೇಟಿ ನೀಡಿ, ಸರ್ ಸಿ ವಿ ರಾಮನ್ ಕಾರ್ಯಾಚರಿಸಿ, ವಿವಿಧ ಸಂಶೋಧನೆಗಳನ್ನು ಕೈಗೊಂಡ ಕಟ್ಟಡಗಳನ್ನು ವೀಕ್ಷಿಸಬಹುದು.

ಪಂಚವಟಿ: ಸಾರ್ವಜನಿಕರ ಭೇಟಿಗೆ ಪಂಚವಟಿ ಮುಕ್ತವಾಗಿಲ್ಲವಾದರೂ, ಹೊರಗಿನಿಂದಲೇ ಸರ್ ಸಿ ವಿ ರಾಮನ್ ಅವರ ನಿವಾಸವನ್ನು ವೀಕ್ಷಿಸಿ, ಅದರ ಐತಿಹಾಸಿಕ ಮಹತ್ವವನ್ನು ಮನಗಾಣಬಹುದು.

ಸಿ ವಿ ರಾಮನ್ ನಗರ: ಬೆಂಗಳೂರಿನ ವೈಜ್ಞಾನಿಕ ಸಮುದಾಯಕ್ಕೆ ಸದಾ ಸ್ಫೂರ್ತಿಯ ಚಿಲುಮೆಯಾಗಿರುವ ಸರ್ ಸಿ ವಿ ರಾಮನ್ ಅವರ ಹೆಸರು ಹೊಂದಿರುವ ಪ್ರದೇಶಕ್ಕೆ ಭೇಟಿ ನೀಡಬಹುದು.

ಭಾರತೀಯ ನೌಕಾ ದಿನ 2024: ಅಸಾಧಾರಣ ಪ್ರಗತಿ, ಕಾರ್ಯತಂತ್ರದ ಶಕ್ತಿಯತ್ತ ಭಾರತೀಯ ನೌಕಾಪಡೆಯ ಹಾದಿ

ಬೆ‌ಂಗಳೂರು ನಗರದೊಡನೆ ಸರ್ ಸಿ ವಿ ರಾಮನ್ ಅವರ ಸಂಪರ್ಕ ವೈಜ್ಞಾನಿಕ ಸಾಧನೆ, ಸ್ಫೂರ್ತಿ, ಮತ್ತು ಒಂದು ವಿಶಿಷ್ಟ ಪರಂಪರೆಗೆ ಸಾಕ್ಷಿಯಾಗಿದೆ. ವಿಜ್ಞಾನ ಕ್ಷೇತ್ರಕ್ಕೆ ರಾಮನ್ ಕೊಡುಗೆಗಳು ಮತ್ತು ವೈಜ್ಞಾನಿಕವಾಗಿ ಮುಂದುವರಿದ ಭಾರತದ ನಿರ್ಮಾಣದ ಕುರಿತ ಅವರ ಕನಸುಗಳು ಇಂದಿಗೂ ಬೆಂಗಳೂರಿನಲ್ಲಿ ಸ್ಮರಿಸಲ್ಪಡುತ್ತಿವೆ. ಬೆಂಗಳೂರಿನಲ್ಲಿ ರಾಮನ್ ಅವರ ಹಿರಿಮೆಯನ್ನು ಅರಿಯುವುದರಿಂದ, ವಿದ್ಯಾರ್ಥಿಗಳು ವಿಜ್ಞಾನದ ಶಕ್ತಿಯ ಕುರಿತು ಆಳವಾದ ಪ್ರಭಾವ ಹೊಂದಿ, ವೈಜ್ಞಾನಿಕ ಕನಸುಗಳನ್ನು ನನಸಾಗಿಸುವತ್ತ ಪ್ರಯತ್ನ ನಡೆಸಲು ಸಾಧ್ಯ.

100 ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಾಹಸ, ನಾಳೆ ಇಸ್ರೋದಿಂದ ಉಡಾವಣೆ: ಗಿರೀಶ್‌ ಲಿಂಗಣ್ಣ

ರಾಮನ್ ಅವರ ಅಂತಿಮ ದಿನಗಳು ಮತ್ತು ಸ್ಮರಣೆ

ಸರ್ ಸಿ ವಿ ರಾಮನ್ ಅವರು ನವೆಂಬರ್ 21, 1970ರಂದು ಅವರ ಮನೆಯಾಗಿದ್ದ, ಅವರ ವೈಜ್ಞಾನಿಕ ಅನ್ವೇಷಣೆಗಳ ನೆಲೆಯಾಗಿದ್ದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ತನ್ನ ಅಂತಿಮ ದಿನಗಳಲ್ಲೂ ರಾಮನ್ ವಿಜ್ಞಾನಕ್ಕೆ ‌ಬದ್ಧರಾಗಿದ್ದು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಸ್ಫೂರ್ತಿ ತುಂಬುತ್ತಿದ್ದರು. ಭೌತಶಾಸ್ತ್ರಕ್ಕೆ ರಾಮನ್ ಕೊಡುಗೆಗಳು, ಅದರಲ್ಲೂ ರಾಮನ್ ಪರಿಣಾಮದ ಅನ್ವೇಷಣೆ ಅವರಿಗೆ ಜಾಗತಿಕ ಹೆಗ್ಗುರುತು ಸಂಪಾದಿಸಿದವು. ಇಂದಿಗೂ ಬೆಂಗಳೂರಿನ ಪ್ರಸಿದ್ಧ ವೈಜ್ಞಾನಿಕ ಸಂಸ್ಥೆಗಳಲ್ಲಿ ಅವರು ನಿತ್ಯವೂ ಸ್ಮರಿಸಲ್ಪಡುತ್ತಾರೆ. ಅವರ ನಿಧನದೊಡನೆ, ಒಂದು ವೈಜ್ಞಾನಿಕ ಯುಗದ ಅಂತ್ಯವಾಗಿತ್ತು. ಆದರೆ, ಇಂದಿಗೂ ಅವರ ಸಾಧನೆಗಳು ಯುವ ತಲೆಮಾರುಗಳನ್ನು ವೈಜ್ಞಾನಿಕ ಅನ್ವೇಷಣೆಯಲ್ಲಿ ಸಾಧನೆಗೈಯುವಂತೆ ಪ್ರೇರೇಪಿಸುತ್ತಲೇ ಇವೆ.

(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)