ಜಿರಳೆಗಳು ಮನುಷ್ಯರನ್ನು ಮುಟ್ಟಿದ ತಕ್ಷಣ ತಮ್ಮನ್ನು ತಾವು ಸ್ವಚ್ಛಗೊಳಿಸಿಕೊಳ್ಳುತ್ತವೆ ಎಂದು ವೈಜ್ಞಾನಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಮಾನವನ ಚರ್ಮದ ಎಣ್ಣೆ ಮತ್ತು ಬೆವರು ಅವುಗಳ ಸಂವೇದನಾಶೀಲ ಆಂಟೆನಾಗಳಿಗೆ ಅಂಟಿಕೊಳ್ಳುವುದರಿಂದ, ತಮ್ಮ ಉಳಿವಿಗಾಗಿ ಅವು ಈ ರೀತಿ ಶುಚಿಗೊಳಿಸಿಕೊಳ್ಳುತ್ತವೆ.

ಜಿರಳೆ ಎಂದರೆ ಮೂಗು ಮುರಿಯುವವರೇ ಎಲ್ಲರೂ. ಅದರಲ್ಲಿಯೂ ಕೆಲವರಿಗೆ ಇದರ ಹೆಸರು ಕೇಳಿದರೇನೇ ಅಲರ್ಜಿ ಆಗುವುದು ಇದೆ. ಇನ್ನು ಕೆಲವು ಹೆಣ್ಣುಮಕ್ಕಳು ಜಿರಳೆ ಕಂಡರೆ ಮಾರುದೂರ ಓಡಿ ಹೋಗ್ತಾರೆ. ಅಷ್ಟಕ್ಕೂ ಮನೆಯಲ್ಲಿ ಜಿರಲೆಗಳು ಇದ್ದರೂ ಅದು ಒಳ್ಳೆಯದಲ್ಲ. ಕಾಯಿಲೆ ಕೂಡ ಹೆಚ್ಚಾದಂತೆ ಎಂದು ಹೇಳುತ್ತಾರೆ. ಸುಮಾರು 70 ದಶಲಕ್ಷ ವರ್ಷಗಳ ಹಿಂದೆ ಜಿರಳೆಗಳು ಪರಮಾಣು ಸ್ಫೋಟದಿಂದ ಬದುಕುಳಿದ ಏಕೈಕ ಜೀವಿಗಳು ಎಂದು ನಂಬಲಾಗಿದೆ. ಅದು ಪವರ್​ಫುಲ್​ ಈ ಕೀಟ. ಜಿರಳೆಯನ್ನು ಓಡಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಗಳು ಸಿಗುತ್ತವೆ. ಚಾಕ್​ಪೀಸ್​ಗಳೂ ಲಭ್ಯ. ಆದರೆ ಇವೆಲ್ಲವೂ ಜಿರಳೆಗಿಂತಲೂ ಹೆಚ್ಚು ಮನುಷ್ಯರಿಗೆ ಹಾನಿಕಾರಕ ಎನ್ನುವುದೂ ಅಷ್ಟೇ ಸತ್ಯ. ಇವುಗಳಲ್ಲಿ ಬಳಸುವ ರಾಸಾಯನಿಕದಿಂದಾಗಿಯೇ ಇಂದು ಇನ್ನಿಲ್ಲದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ.

ಕೀಟ ಲೋಕದ ವಿಸ್ಮಯ

ಇವೆಲ್ಲಾ ಜಿರಳೆ ಸ್ಟೋರಿ ಆದರೆ, ಈ ಕೀಟ ಲೋಕದ ವಿಸ್ಮಯವೇ ಮತ್ತೊಂದಿದೆ. ಜಿರಳೆ ಅಕಸ್ಮಾತ್​ ತಾಗಿಬಿಟ್ಟರೆ ಸ್ನಾನ ಮಾಡುವವರೂ ಹಲವರಿದ್ದಾರೆ. ಆದರೆ ನಿಮಗೆ ಗೊತ್ತಾ? ಜಿರಳೆ ಏನಾದ್ರೂ ಮನುಷ್ಯರ ಮೈಮೇಲೆ ಹರಿದಾಡಿದ್ರೆ ಅಥವಾ ಮನುಷ್ಯರು ಜಿರಳೆಯನ್ನು ಮುಟ್ಟಿದ್ರೆ ಅವು ಸ್ನಾನ ಮಾಡ್ತವಂತೆ! ವಿಚಿತ್ರ ಎನ್ನಿಸುತ್ತದೆ ಅಲ್ವಾ? ಆದರೆ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಇದರ ಅಧ್ಯಯನ ವರದಿ ಪ್ರಕರಣವಾಗಿದೆ. ಕೀಟ, ಪಕ್ಷಿ, ಪ್ರಾಣಿ ಪ್ರಪಂಚವೇ ವಿಸ್ಮಯವಾದದ್ದು, ಅದನ್ನು ಅಗೆದಷ್ಟೂ, ಬಗೆದಷ್ಟೂ ಇನ್ನೂ ಮನುಷ್ಯ ಏನೂ ತಿಳಿದಿರುವುದೇ ಇಲ್ಲ. ಇದೀಗ ಜಿರಳೆ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಈ ವಿಷಯ ತಿಳಿದು ಬಂದಿವೆ.

ಸ್ನಾನ ಮಾಡೋ ಜಿರಳೆ

ಜಿರಳೆಗಳು ಮನುಷ್ಯರನ್ನು ಮುಟ್ಟಿದ ತಕ್ಷಣ ಸ್ನಾನ ಮಾಡುತ್ತವೆ. ಹಾಗೆಂದು ಇವೇನು ನೀರಿನಿಂದ ಸ್ನಾನ ಮಾಡುವುದಿಲ್ಲ. ಬದಲಿಗೆ, ತಮ್ಮನ್ನು ತಾವು ಸ್ವಚ್ಛಗೊಳಿಸಿಕೊಳ್ಳುತ್ತವೆ. ಮೀಸೆಯಿಂದ ಇಡೀ ಶರೀರವನ್ನು ಶುದ್ಧಿ ಮಾಡಿಕೊಳ್ಳುತ್ತವೆ. ಮಾನವ ಚರ್ಮದ ಎಣ್ಣೆಗಳು, ಬೆವರು ಮತ್ತು ಲೋಷನ್‌ಗಳು ಜಿರಳೆಗಳ ಆಂಟೆನಾಗಳಿಗೆ ಅಂಟಿಕೊಳ್ಳುತ್ತವೆ. ಈ ಆಂಟೆನಾಗಳು ಜಿರಳೆಗಳ ಜೀವವಾಹಕ. ತಮ್ಮ ಆಹಾರವನ್ನು ಹುಡುಕುವುದು ಮತ್ತು ಅಪಾಯವನ್ನು ಪತ್ತೆಹಚ್ಚಲು ಇವುಗಳು ಸಹಾಯ ಮಾಡುತ್ತವೆ. ಒಂದು ವೇಳೆ ಮನುಷ್ಯನ ದೇಹದ ಬೆವರು, ಲೋಷನ್​ ಇತ್ಯಾದಿ ಅದಕ್ಕೆ ಅಂಟಿದರೆ, ಈ ಸಂವೇದನೆಯನ್ನು ಜಿರಳೆಗಳು ಕಳೆದುಕೊಳ್ಳುತ್ತವೆ. ಅವು ದಿಕ್ಕು ತಪ್ಪುತ್ತವೆ. ಆದ್ದರಿಂದ ಮನುಷ್ಯರ ದೇಹ ಟಚ್​ ಆದರೆ ಸಾಕು, ಅವು ಮೈ ಶುಚಿಗೊಳಿಸಿಕೊಳ್ಳುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.

ಅಧ್ಯಯನ ವರದಿ

ಅವು ಮನುಷ್ಯನನ್ನು ಮುಟ್ಟಿದರೆ, ತಮ್ಮ ಕಾಲುಗಳು ಮತ್ತು ಬಾಯಿಯ ಭಾಗಗಳನ್ನು ಬಳಸಿಕೊಂಡು ತ್ವರಿತವಾಗಿ ತಮ್ಮನ್ನು ತಾವು ಶುದ್ಧಿ ಮಾಡಿಕೊಳ್ಳುತ್ತವೆ. ಅವುಗಳ ಆಂಟೆನಾಗಳು ಮತ್ತು ದೇಹದ ಮೇಲ್ಮೈಗಳನ್ನು ತೆರವುಗೊಳಿಸುತ್ತವೆ ಎಂದು ಇದರಲ್ಲಿ ತಿಳಿಸಲಾಗಿದೆ.