ಆಸ್ಟ್ರೇಲಿಯಾದ ಮೊದಲ ದೇಶೀಯ ನಿರ್ಮಿತ ರಾಕೆಟ್, ಎರಿಸ್, ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಕೊಂಡೊಯ್ಯುವ ಉದ್ದೇಶದಿಂದ ಈ ರಾಕೆಟ್ ಅನ್ನು ಅಭಿವೃದ್ಧಿಪಡಿಸಲಾಗಿತ್ತು. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಡ್ನಿ: ಆಸ್ಟ್ರೇಲಿಯಾದ ಮೊದಲ ದೇಶೀಯ ನಿರ್ಮಿತ ರಾಕೆಟ್ ಉಡಾವಣೆಯಾದ ಕೇವಲ 14 ಸೆಕೆಂಡುಗಳಲ್ಲಿ ಪತನಗೊಂಡಿದೆ. ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ ಎರಿಸ್ ರಾಕೆಟ್ ಅನ್ನು ನಿನ್ನೆ ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್‌ಲ್ಯಾಂಡ್‌ನ ಬೋವೆನ್ ಬಳಿಯ ಬಾಹ್ಯಾಕಾಶ ನಿಲ್ದಾಣದಿಂದ ಪರೀಕ್ಷಾರ್ಥ ಉಡಾವಣೆ ಮಾಡಲಾಯ್ತು. ಆದರೆ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ರಾಕೆಟ್ ಪತನಗೊಂಡಿದೆ. ಇರಿಸ್ ರಾಕೆಟ್ ಲಾಂಚರ್ ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಕೊಂಡೊಯ್ಯುವ ಉದ್ದೇಶದಿಂದ ಆಸ್ಟ್ರೇಲಿಯವೂ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಉಡಾವಣಾ ವಾಹನವಾಗಿತ್ತು.
ಇದು ಯಶಸ್ವಿಯಾಗಿದ್ದಲ್ಲಿ ಆಸ್ಟ್ರೇಲಿಯಾದ ಪಾಲಿಗೆ ಐತಿಹಾಸಿಕ ಕ್ಷಣವಾಗಿರುತ್ತಿದ್ದ ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ 23 ಮೀಟರ್ ಎತ್ತರದ ರಾಕೆಟ್ ಲಾಂಚರ್ ಉಡಾವಣಾ ಕೇಂದ್ರದಿಂದ ಮೇಲೆ ಹಾರಿ ಕೆಲ ಕ್ಷಣಗಳಲ್ಲಿ ತೂಗಾಡುತ್ತಾ ಕೆಳಗೆ ಬಿದ್ದಿದೆ. ಮೇಲೆ ಹಾರಬೇಕಾದ ರಾಕೆಟ್ ಕೆಳಗೆ ಅಪ್ಪಳಿಸುತ್ತಿದ್ದಂತೆ ದಟ್ಟವಾದ ಹೊಗೆ ಮತ್ತು ಜ್ವಾಲೆಗಳು ಹೊರಹೊಮ್ಮಿವೆ.
ಸೋಲಿನಲ್ಲೂ ಸಂತೃಪ್ತಿ ವ್ಯಕ್ತಪಡಿಸಿದ ಸಿಇಒ:
ಆದರೆ ಈ ರಾಕೆಟ್ ಕನಿಷ್ಠ ಯಶಸ್ವಿಯಾಗಿ ಉಡಾವಣಾ ಪ್ಯಾಡ್‌ನಿಂದ ಮೇಲಕ್ಕೆ ಹಾರಿದ್ದಕ್ಕೆ ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ಸಿಇಒ ಆಡಮ್ ಗಿಲ್ಮೋರ್ ತೃಪ್ತಿ ವ್ಯಕ್ತಪಡಿಸಿದ್ದು, ಬಾಹ್ಯಾಕಾಶ ಕಷ್ಟ ಎಂದಿದ್ದಾರೆ. ಸ್ಪೇಸ್‌ಎಕ್ಸ್, ರಾಕೆಟ್ ಲ್ಯಾಬ್ ಮತ್ತು ಇತರ ಸಂಸ್ಥೆಗಳ ಉಪಗ್ರಹಗಳು ಕಕ್ಷೆಯನ್ನು ತಲುಪಲು ಬಹು ಪರೀಕ್ಷಾ ಹಾರಾಟಗಳ ಅಗತ್ಯವಿತ್ತು. ಈ ಘಟನೆಯಿಂದ ಈಗಾಗಲೇ ಇದರ ಅಭಿವೃದ್ಧಿಯಲ್ಲಿರುವ ನಮ್ಮ ಮುಂದಿನ ರಾಕೆಟ್ ಉಡಾವಣಾ ವಾಹನವನ್ನು ಸುಧಾರಿಸಲು ನೇರವಾಗಿ ಬಳಸಬಹುದಾದ ಅಪಾರ ಪ್ರಮಾಣದ ಮಾಹಿತಿಯನ್ನು ನಾವು ಕಲಿತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ ಕಂಪನಿಯು ಈ ಉಡಾವಣೆಯನ್ನು ಯಶಸ್ಸು ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಣ್ಣಿಸಿದೆ. ಮೊದಲ ಉಡಾವಣೆಯಲ್ಲಿ ನಾಲ್ಕು ಹೈಬ್ರಿಡ್ ಎಂಜಿನ್‌ಗಳು ಉರಿಯಿತು, 23 ಸೆಕೆಂಡುಗಳಲ್ಲಿ ಎಂಜಿನ್ ಸುಟ್ಟುಹೋಯಿತು ಮತ್ತು 14 ಸೆಕೆಂಡುಗಳ ಹಾರಾಟವನ್ನು ಸಾಧಿಸಿತು ಎಂದು ಅವರು ಹೇಳಿಕೊಂಡಿದ್ದಾರೆ. ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ಈ ಹಿಂದೆ ಮೇ ತಿಂಗಳಲ್ಲಿ ಮತ್ತು ಈ ತಿಂಗಳ ಆರಂಭದಲ್ಲಿ ರಾಕೆಟ್ ಉಡಾವಣೆಗಳನ್ನು ನಿಗದಿಪಡಿಸಿತ್ತು, ಆದರೆ ತಾಂತ್ರಿಕ ಸಮಸ್ಯೆಗಳು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಈ ಎರಡು ಕಾರ್ಯಗಳನ್ನು ಮುಂದೂಡಿತ್ತು.
