Asianet Suvarna News Asianet Suvarna News

ಎಂಟು ಕಣ್ಣಿನ ಹೊಸ ಚೇಳು ಥೈಲ್ಯಾಂಡಲ್ಲಿ ಪತ್ತೆ: ಈ ಜೀವಜಾಲದಲ್ಲಿ ಇನ್ನೂ ಎಂತಹ ಅಚ್ಚರಿಗಳಿವೆಯೋ?!

ಥೈಲ್ಯಾಂಡ್ ನ ರಾಷ್ಟ್ರೀಯ ಪಾರ್ಕ್ ಒಂದರಲ್ಲಿ ಹೊಸ ಪ್ರಭೇದದ ಚೇಳಿನ ತಳಿಯೊಂದನ್ನು ಗುರುತಿಸಲಾಗಿದೆ. ಇದೊಂದು ಅಪರೂಪದ ಚೇಳಾಗಿದ್ದು, ಎಂಟು ಕಣ್ಣುಗಳು ಹಾಗೂ ಕಾಲುಗಳನ್ನು ಹೊಂದಿದೆ. ಸಾಮಾನ್ಯವಾಗಿ, ಚೇಳುಗಳಿಗೆ ತಲೆಯ ಮೇಲೆ ಎರಡು ಕಣ್ಣುಗಳಿರುತ್ತವೆ. 

 

New species of scorpio discovered in Thailand sum
Author
First Published Mar 13, 2024, 5:12 PM IST

ಈ ಭೂಮಿಯಲ್ಲಿ, ನೈಸರ್ಗಿಕವಾದ ಜೀವಜಾಲದಲ್ಲಿ ಮನುಷ್ಯ ಕಂಡರಿಯದ ಅದೆಷ್ಟು ಜೀವಜಂತುಗಳಿವೆಯೋ ಏನೋ. ಆಗಾಗ ಹಲವು ಪ್ರಾಣಿ ಪ್ರಭೇದದ ಹೊಸ ತಳಿಗಳು ಪತ್ತೆಯಾಗುತ್ತಲೇ ಇರುತ್ತವೆ. ಜೀವಜಗತ್ತಿನ ವಿಶೇಷತೆಗಳು, ವಿಭಿನ್ನತೆಗಳನ್ನು ಅರಿಯುವ ಕುತೂಹಲ ಮನುಷ್ಯನದ್ದು. ಹೀಗಾಗಿ, ನಿರಂತರವಾಗಿ ಅವುಗಳ ಬಗ್ಗೆ ಅರಿಯುವ ಉತ್ಸಾಹ ಹೊಂದಿದ್ದಾನೆ. ಉಷ್ಣವಲಯಕ್ಕೆ ಸೇರುವ ಏಷ್ಯಾ ಖಂಡದ ಬಹುಭಾಗ ಇಂತಹ ಅಪರೂಪದ ಜೀವಿಗಳ ತವರು ಎಂದರೆ ತಪ್ಪಿಲ್ಲ. ಭಾರತ ಹಾಗೂ ಸುತ್ತಮುತ್ತಲ ದೇಶಗಳಲ್ಲಿ ಆಗಾಗ ನವೀನ ಪ್ರಭೇದದ ಜೀವಿಗಳು ಅಥವಾ ಅವುಗಳ ಪಳೆಯುಳಿಕೆಗಳು ಕಂಡುಬರುತ್ತಲೇ ಇರುತ್ತವೆ. ಇದೀಗ, ಥೈಲ್ಯಾಂಡ್ ನಲ್ಲಿ ಹೊಸ ಚೇಳು ತಳಿಯೊಂದು ಪತ್ತೆಯಾಗಿದ್ದು, ಜೀವಜಾಲದ ಆಸಕ್ತರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಚೇಳು ಪ್ರಭೇದ ಎಂಟು ಕಣ್ಣುಗಳು ಮತ್ತು ಎಂಟು ಕಾಲುಗಳನ್ನು ಹೊಂದಿದೆ. ಈ ಪ್ರಭೇದ ಯೂಸ್ಕಾಪಿಯೊಪ್ಸ್ ಗುಂಪಿಗೆ ಸೇರಿದ್ದು ಯೂಸ್ಕಾಪಿಯೊಪ್ಸ್ ಕ್ರಚನ್ ಎಂದು ಹೆಸರಿಸಲಾಗಿದೆ. ಸಾಮಾನ್ಯವಾಗಿ ಚೇಳುಗಳಿಗೆ ತಲೆಯ ಮೇಲೆ ಎರಡು ಕಣ್ಣುಗಳು ಇರುತ್ತವೆ. ಐದು ಜೊತೆ ಕಣ್ಣುಗಳನ್ನು ಹೊಂದಿರುವ ವಿಶಿಷ್ಟ ಪ್ರಭೇದಗಳೂ ಇವೆ. ಇಷ್ಟು ಕಣ್ಣುಗಳು ತಲೆಯ ಮುಂಭಾಗದ ಅಂಚಿನಲ್ಲಿ ಕಂಡುಬರುತ್ತವೆ. 

ಥೈಲ್ಯಾಂಡ್ ನ ಕಾಯೆಂಗ್ ಕ್ರಚನ್ ನ್ಯಾಷನಲ್ ಪಾರ್ಕ್ (Kaeng Krachan National Park) ನಲ್ಲಿ ಈ ಹೊಸ ಚೇಳು ತಳಿ (Scorpio Species) ಕಂಡುಬಂದಿದೆ. ಸಂಶೋಧಕರ (Scientists) ತಂಡ ಮಹತ್ವವಾದ ಅನ್ವೇಷಣೆ (Innovation) ನಡೆಸಿದ್ದು, ಇದು ಹಿಂದೆ ಕಂಡುಬಂದಿರುವ ಎಲ್ಲ ಚೇಳಿಗಿಂತ ವಿಭಿನ್ನವಾಗಿದೆ.

ಭೂಮಿಯ ಮೊದಲ ಚಿತ್ರ ಸೆರೆಹಿಡಿದ ಇಸ್ರೋದ ಇನ್ಸಾಟ್‌-3ಡಿಎಸ್‌: ಅದ್ಭುತವಾಗಿ ಕಂಡ ಭಾರತ!

ಇದರ ವಿಸ್ತೃತ ವರದಿ ಝೂಕೀಸ್ ಎನ್ನುವ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಕಾಯೆಂಗ್ ಪಾರ್ಕಿನ ತೆನಸ್ಸೇರಿಯಂ ಪರ್ವತ ಶ್ರೇಣಿಯಲ್ಲಿ ಸಂಶೋಧಕರು ಕ್ಯಾಂಪ್ ಹಾಕಿಕೊಂಡು ಹಗಲಿರುಳು ಶ್ರಮಿಸಿ ಇದನ್ನು ಪತ್ತೆ (Discover) ಮಾಡಿದ್ದಾರೆ. ಕಲ್ಲುಗಳ (Rock) ಅಡಿಯಲ್ಲಿ ಇದು ಜೀವಿಸುವುದು ಕಂಡುಬಂದಿದೆ. 

ವಿಶಿಷ್ಟ ಚೇಳು
ಸಂಶೋಧಕರು 3 ವಯಸ್ಕ ಗಂಡು ಹಾಗೂ ಒಂದು ವಯಸ್ಕ ಹೆಣ್ಣು ಚೇಳನ್ನು ಸಮಗ್ರವಾಗಿ ಅಧ್ಯಯನ (Study) ಮಾಡಿದ್ದಾರೆ. ಯುಸ್ಕೊರ್ಪಿಯೊಪ್ಸ್ ಉಪಪ್ರಭೇದದ ಎಲ್ಲ ಚೇಳುಗಳು ಹೊಂದಿರುವ ಲಕ್ಷಣಗಳು ಇವುಗಳಲ್ಲೂ ಇವೆ. ಇತರ ಪ್ರಭೇದದ ಚೇಳಿಗಿಂತ ಇವು ಚಿಕ್ಕ ದೇಹ ಹೊಂದಿವೆ. ಹೆಚ್ಚು ಕಂದು (Brown) ಬಣ್ಣದಲ್ಲಿವೆ. ಹೆಣ್ಣು ಚೇಳುಗಳು ಗಂಡಿಗಿಂತ ಹೆಚ್ಚು ದಟ್ಟವಾಗಿರುತ್ತವೆ. ಇವು ಎಂಟು ಕಣ್ಣುಗಳು (8 Eyes), ಎಂಟು ಕಾಲುಗಳನ್ನು (Legs) ಹೊಂದಿವೆ. ಈ ಉಪಪ್ರಭೇದದ ಚೇಳುಗಳು ಕಾದು ಕುಳಿತಿದ್ದು ತಮ್ಮ ಬೇಟೆಯನ್ನಾಡುತ್ತವೆ. ಇದೇ ಕಾರ್ಯತಂತ್ರವನ್ನು ಈ ಚೇಳೂ ಸಹ ಅನುಸರಿಸುತ್ತದೆ. ಇವು ಹೆಚ್ಚು ಸ್ಥಳೀಯವಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ. 
ಥೈಲ್ಯಾಂಡ್ ನಲ್ಲಿ ಕಂಡುಬಂದಿರುವ ಎಲ್ಲ ಚೇಳುಗಳೂ ಸ್ಥಳೀಯ (Endemic) ಪ್ರಭೇದವಾಗಿವೆ. ಅವು ಮುಖ್ಯವಾಗಿ ಪರ್ವತ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಕಲ್ಲುಗಳ ಹಿಂದೆ, ಅಡಿಯಲ್ಲಿ ಜೀವಿಸುತ್ತವೆ. ಇನ್ನೂ ಹಲವು ಪ್ರದೇಶಗಳಲ್ಲಿ ಅನ್ವೇಷಣೆ ಮಾಡಬೇಕಾಗಿದೆ ಎಂದು ಅಧ್ಯಯನ ತಿಳಿಸಿದೆ. 

ನಮ್ಮ ದೇಶದಲ್ಲೂ ಹೊಸ ಮೃದ್ವಂಗಿ ಪತ್ತೆ
ಇದಕ್ಕೂ ಮುನ್ನ ನಮ್ಮ ದೇಶದ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಝೂವಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆಯು ಸಮುದ್ರ ಮೃದ್ವಂಗಿಗಳನ್ನು (Marine Slug Molluscs) ಪತ್ತೆ ಮಾಡಿತ್ತು. ಈ ಮೃದ್ವಂಗಿಗಳು ಇಲ್ಲಿನ ಮರಳುಮಿಶ್ರಿತ ಜೌಗು ಕರಾವಳಿ ತೀರದಲ್ಲಿ ಕಂಡುಬಂದಿದ್ದವು. ಇವುಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗೌರವಾರ್ಥ ಅವರ ಹೆಸರನ್ನೇ ನೀಡಲಾಗಿದೆ. ಮೆಲನೊಕ್ಲಮಿಸ್ ದ್ರೌಪದಿ ಎಂದು ಹೆಸರಿಸಲಾಗಿದೆ. 

ಈ ಪ್ರಾಣಿಗಳು ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಸಿಗೋಲ್ಲ, ಯಾವವು ಅವು?

ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾದ (Zoological Survey Of India) ಪ್ರಸಾದ್ ಚಂದ್ರ ತುಡು ನೇತೃತ್ವದ ವಿಜ್ಞಾನಿಗಳ ತಂಡ ಪಶ್ಚಿಮ ಬಂಗಾಳದ ದಿಘು ವಲಯದ 3 ಕಿಲೋಮೀಟರ್ ಉದ್ದದ ಕರಾವಳಿಯಲ್ಲಿ ಅನ್ವೇಷಣೆ ನಡೆಸಿತ್ತು. ಒಡಿಶಾದ ಉದಯ್ ಪುರದ ಕರಾವಳಿಯಲ್ಲೂ ಸಂಶೋಧನಾ ಕಾರ್ಯ ಕೈಗೊಂಡಿತ್ತು. ನಿಮಗೆ ಗೊತ್ತೇ? ಪ್ರಭೇದಗಳ ಗುರುತಿಸುವಿಕೆ ಕ್ಲಿಷ್ಟಕರ ಪ್ರಕ್ರಿಯೆಯಾಗಿದ್ದು, ರೂಪವಿಜ್ಞಾನ, ಅಂಗರಚನಾ ಶಾಸ್ತ್ರ ಮತ್ತು ಆಣ್ವಿಕ ಗುಣಲಕ್ಷಣಗಳನ್ನು ಆಧರಿಸಿ ನಿರ್ಣಯಿಸಲಾಗುತ್ತದೆ. ಹೊಸ ಪ್ರಭೇದಗಳನ್ನು ಗುರುತಿಸುವುದು ಮಹತ್ವದ ಕಾರ್ಯವಾಗಿದ್ದು, ಸ್ಥಳೀಯವಾಗಿ ಅರಿವು ಮೂಡಿಸಿ ಅವುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ. 

Follow Us:
Download App:
  • android
  • ios