ಭೂಮಿಯ ಮೊದಲ ಚಿತ್ರ ಸೆರೆಹಿಡಿದ ಇಸ್ರೋದ ಇನ್ಸಾಟ್-3ಡಿಎಸ್: ಅದ್ಭುತವಾಗಿ ಕಂಡ ಭಾರತ!
ಫೆಬ್ರವರಿ 17 ರಂದು ನಭಕ್ಕೆ ಹಾರಿ ಬಿಡಲಾಗಿದ್ದ ದೇಶದ ಹೊಸ ಹವಾಮಾನ ಉಪಗ್ರಹ ಇನ್ಸಾಟ್ 3ಡಿಎಸ್ ಭೂಮಿಯ ಮೊದಲ ಚಿತ್ರಗಳನ್ನು ತೆಗೆದಿದೆ. ಬಾಹ್ಯಾಕಾಶದಿಂದ ಭಾರತ ಎಷ್ಟು ಸುಂದರವಾಗಿ ಕಾಣುತ್ತದೆ ಎನ್ನುವುದನ್ನು ನೋಡಬಹುದಾಗಿದೆ.
ಬೆಂಗಳೂರು (ಮಾ.12): ಭಾರತದ ಇತ್ತೀಚಿನ ಭೂಸ್ಥಿರ ಉಪಗ್ರಹ ಇನ್ಸಾಟ್-3ಡಿಎಸ್ (INSAT-3DS) ತನ್ನ ಮೊದಲ ಡೇಟಾವನ್ನು ಭೂಮಿಗೆ ಕಳುಹಿಸಲು ಆರಂಭಿಸಿದೆ. ಫೆಬ್ರವರಿ 17 ರಂದು ಶ್ರೀಹರಿಕೋಟಾದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಉಡಾವಣೆ ಮಾಡಿದ್ದ ಈ ಅತ್ಯಾಧುನಿಕ ಉಪಗ್ರಹವು ಸುಧಾರಿತ ಇಮೇಜರ್ ಮತ್ತು ಸೌಂಡರ್ ಪೇಲೋಡ್‌ಗಳನ್ನು ಹೊಂದಿದೆ. ಭೂಮಿಯ ವಾತಾವರಣದ ಡೈನಾಮಿಕ್ಸ್‌ಗೆ ಅಭೂತಪೂರ್ವವಾದ ಚಿತ್ರಗಳನ್ನು ಇದು ನೀಡುತ್ತದೆ. ಬಾಹ್ಯಾಕಾಶ ನೌಕೆಯಿಂದ ಸೆರೆಹಿಡಿಯಲಾದ ಚಿತ್ರಗಳ ಸೆಟ್ ಅನ್ನು ಇಸ್ರೋ ಬಿಡುಗಡೆ ಮಾಡಿದ್ದು, ಇದು ಭೂಮಿ ಮಾತ್ರವಲ್ಲ ಭಾರತವನ್ನು ಕೂಡ ಬಹಳ ಅದ್ಭುತವಾಗಿ ತೋರಿಸಿದೆ. 6-ಚಾನೆಲ್ ಇಮೇಜರ್ ಉಪಕರಣವು ಭೂಮಿಯ ಮೇಲ್ಮೈ ಮತ್ತು ವಾತಾವರಣದ ಚಿತ್ರಗಳನ್ನು ಬಹುರೂಪದ ಚಾನಲ್‌ಗಳು ಅಥವಾ ತರಂಗಾಂತರಗಳಲ್ಲಿ ಸೆರೆಹಿಡಿಯುತ್ತದೆ ಎಂದು ಇಸ್ರೋ ಹೇಳಿದೆ. ಬಹು ಚಾನೆಲ್‌ಗಳ ಬಳಕೆಯು ಮೋಡಗಳು, ಏರೋಸಾಲ್‌ಗಳು, ಭೂಮಿಯ ಮೇಲ್ಮೈ ತಾಪಮಾನ, ಸಸ್ಯವರ್ಗದ ಆರೋಗ್ಯ ಮತ್ತು ನೀರಿನ ಆವಿಯಂತಹ ವಿವಿಧ ವಾತಾವರಣದ ಮತ್ತು ಮೇಲ್ಮೈ ವಿದ್ಯಮಾನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನೆರವಾಗಲಿದೆ.
2003 ಹಾಗೂ 2016ರಲ್ಲಿ ಉಡಾವಣೆಗೊಂಡಿದ್ದ ಇನ್ಸಾಟ್-3ಡಿ ಹಾಗೂ ಇನ್ಸಾಟ್ 3ಡಿಆರ್‌ಗಳಂತೆ ಕಾರ್ಯನಿರ್ವಹಿಸಲು ಇನ್ಸಾಟ್ 3ಡಿಎಸ್‌ಅನ್ನು ವಿನ್ಯಾಸಗೊಳಿಸಲಾಗಿದ್ದು, ಹಿಂದಿನ ಉಪಗ್ರಹಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಇದು ಹೊಂದಿದೆ. ದೇಶದ ಹವಾಮಾನ ಕಾರ್ಯಾಚರಣೆಯಲ್ಲಿ ಪ್ರಮುಖವಾಗಿರುವ ಈ ಉಪಗ್ರಹ 2274 ಕೆಜಿ ಭಾರವಿದ್ದು, ಭೂ ವಿಜ್ಞಾನ ಸಚಿವಾಲಯ ಈ ಉಪಗ್ರಹಕ್ಕೆ ಹಣ ಹೂಡಿದೆ. INSAT-3DS ಭೂಮಿಯ ಮೇಲ್ಮೈ, ಸಾಗರಗಳು ಮತ್ತು ವಾತಾವರಣವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ.
ಉಪಗ್ರಹದ ಇಮೇಜರ್ ಪೇಲೋಡ್ ಆರು ತರಂಗಾಂತರದ ಬ್ಯಾಂಡ್‌ಗಳಲ್ಲಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯುತ್ತದೆ, ನೀರಿನ ಆವಿ ವಿಷಯದಂತಹ ನಿರ್ಣಾಯಕ ವಾತಾವರಣದ ನಿಯತಾಂಕಗಳ ವಿವರವಾದ ದೃಶ್ಯಗಳನ್ನು ಇದು ತೆಗೆಯುತ್ತದೆ. ಈ ಸಾಮರ್ಥ್ಯವು ಚಂಡಮಾರುತಗಳು, ಮಾನ್ಸೂನ್ ವ್ಯವಸ್ಥೆಗಳು, ಗುಡುಗುಗಳು ಮತ್ತು ಇತರ ನೈಸರ್ಗಿಕ ವಿಕೋಪಗಳನ್ನು ಪತ್ತೆಹಚ್ಚಲು ಸಾಧನವಾಗಿದೆ, ಇದರಿಂದಾಗಿ ವಿಪತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ.
ಇನ್ಸಾಟ್-3ಡಿಎಸ್ ತೆಗೆದ ಚಿತ್ರಗಳು
Breaking: ಹೊಸ ಹವಾಮಾನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ!
ಇದಲ್ಲದೆ, ಇಸ್ರೋದಲ್ಲಿ ಅಭಿವೃದ್ಧಿಪಡಿಸಲಾದ ಭೂಸ್ಥಿರ ಇನ್ಸಾಟ್ ಸರಣಿಯಲ್ಲಿ ಮೊದಲ ಬಾರಿಗೆ ಸೌಂಡರ್ ಪೇಲೋಡ್ಅನ್ನು ಅಳವಡಿಸಲಾಗಿದೆ., ವಾತಾವರಣದ ಮೂಲಕ ತಾಪಮಾನ ಮತ್ತು ತೇವಾಂಶದ ಪ್ರೊಫೈಲ್‌ಗಳನ್ನು ಇದು ಅಳೆಯುತ್ತದೆ. ಇದು ವಾತಾವರಣದ ಮೂರು ಆಯಾಮದ ಪ್ರಾತಿನಿಧ್ಯವನ್ನು ನೀಡುತ್ತದೆ. ನಿಖರವಾದ ಹವಾಮಾನ ಮುನ್ಸೂಚನೆ ಮತ್ತು ವಾತಾವರಣದ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಲು ನೆರವಾಗಲಿದೆ. ಈ ವೈಶಿಷ್ಟ್ಯಗಳು ಹವಾಮಾನ ವೀಕ್ಷಣೆಗೆ ಸಹಾಯ ಮಾಡುವುದಲ್ಲದೆ ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. INSAT-3DS ನ ಯಶಸ್ವಿ ಉಡಾವಣೆ ಭಾರತದ ಬಾಹ್ಯಾಕಾಶ ಪ್ರಯತ್ನಗಳಲ್ಲಿ, ವಿಶೇಷವಾಗಿ ಹವಾಮಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎನಿಸಿದೆ.
ಉಡಾವಣೆಗೆ ಸಜ್ಜಾದ ದೇಶದ ಹೊಸ ಹವಾಮಾನ ಉಪಗ್ರಹ, ಶಾರ್ ತಲುಪಿದ INSAT-3DS