ತಾಂತ್ರಿಕ ದೋಷದಿಂದಾಗಿ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಅವರ ಭೂಮಿಗೆ ಮರಳುವಿಕೆ ಫೆಬ್ರವರಿ 2025 ರವರೆಗೆ ಮುಂದೂಡಲ್ಪಟ್ಟಿದೆ. ಬೋಯಿಂಗ್‌ನ ಸ್ಟಾರ್‌ಲೈನರ್‌ ನೌಕೆಯಲ್ಲಿನ ಸಮಸ್ಯೆಯಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ.

ವಾಷಿಂಗ್ಟನ್‌ (ಆ.25): ಒಂದು ವಾರದ ಅವಧಿಗೆಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬಚ್‌ ವಿಲ್ಮೋರ್‌, 2025ರ ಫೆಬ್ರುವರಿ ತಿಂಗಳಲ್ಲಷ್ಟೇ ಭೂಮಿಗೆ ಮರಳಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಶನಿವಾರ ಅಧಿಕೃತವಾಗಿ ಪ್ರಕಟಿಸಿದೆ. ಇದು ಸುನಿತಾ ವಿಲಿಯಮ್ಸ್‌ ಮತ್ತು ಬಚ್‌ ವಿಲ್ಮೋರ್‌ ಆರೋಗ್ಯದ ಕುರಿತು ಭಾರೀ ಕಳವಳಕ್ಕೆ ಕಾರಣವಾಗಿದೆ. ನಾಸಾ ತನ್ನೆಲ್ಲಾ ಉಡ್ಡಯನ ನೌಕೆಗಳನ್ನು ಸೇವೆಯಿಂದ ಹಿಂದಕ್ಕೆ ಪಡೆದಿರುವ ಕಾರಣ, ಈ ಬಾರಿ ಬೋಯಿಂಗ್‌ ಕಂಪನಿಯ ಸ್ಟಾರ್‌ಲೈನರ್‌ ನೌಕೆಯ ಮೂಲಕ ಸುನಿತಾ ಮತ್ತು ವಿಲ್ಮೋರ್‌ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಆದರೆ ಉಡ್ಡಯನದ ವೇಳೆ ತೊಂದರೆಗೆ ಸಿಕ್ಕಿದ್ದ ಸ್ಟಾರ್‌ಲೈನರ್‌ ನೌಕೆ ಮತ್ತಷ್ಟು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದೆ. ಹೀಗಾಗಿ ಅದರಲ್ಲಿ ಭೂಮಿಗೆ ಮರಳುವ ಯತ್ನ ನಡೆಸಿದರೆ ಜೀವಕ್ಕೆ ಅಪಾಯದ ಸಾಧ್ಯತೆ ದಟ್ಟವಾಗಿತ್ತು. ಹೀಗಾಗಿ ಇಬ್ಬರೂ ಗಗನಯಾತ್ರಿಗಳು ಭೂಮಿಗೆ ಮರಳುವ ಸಮಯ ಮುಂದೂಡಲಾಗಿತ್ತು.

ಈ ಕುರಿತು ಸಾಕಷ್ಟು ವಿಶ್ಲೇಷಣೆ, ಅಧ್ಯಯನ ನಡೆಸಿದ ನಾಸಾ ವಿಜ್ಞಾನಿಗಳು, ಮುಂದಿನ ಫೆಬ್ರುವರಿ ವೇಳೆಗೆ ಸ್ಪೇಸ್‌ಎಕ್ಸ್‌ ನೌಕೆ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿದ್ದು, ಅದರಲ್ಲೇ ಇಬ್ಬರನ್ನೂ ಮರಳಿ ಭೂಮಿಗೆ ಕರೆ ತರುವುದಾಗಿ ಹೇಳಿದೆ.

ಕಳೆದ ಜೂನ್‌ 5 ರಂದು 58 ವರ್ಷದ ಸುನೀತಾ ವಿಲಿಯಮ್ಸ್‌ ಹಾಗೂ 61 ವರ್ಷದ ಬಚ್‌ ವಿಲ್ಮೋರ್‌ ಒಂದು ವಾರದ ಅವಧಿಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಮಾಡಿದ್ದರು. ಆದರೆ, ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಅವರು 2025ರ ಫೆಬ್ರವರಿಯಲ್ಲಿ ಮಾತ್ರವೇ ಭೂಮಿಗೆ ಬರಲು ಸಾಧ್ಯವಾಗಲಿದೆ ಎಂದು ನಾಸಾ ತಿಳಿಸಿದೆ. 2025ರ ಫೆಬ್ರವರಿಗೆ ಎಲಾನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ ನೌಕೆ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿದೆ. ಅದರಲ್ಲಿಯೇ ಇಬ್ಬರನ್ನೂ ಮರಳಿ ಭೂಮಿಗೆ ತರೆತರುವುದಾಗಿ ನಾಸಾ ಹೇಳಿದೆ.
ಬೋಯಿಂಗ್‌ ಸ್ಟಾರ್‌ಲೈನರ್‌ನ ಉಡ್ಡಯನದ ವೇಳೆಯಲ್ಲಿಯೇ ಹೀಲಿಯಂ ಸೋರಿಕೆ ಕಾಣಿಸಿಕೊಂಡಿತ್ತು. ಬಳಿಕ ಅದನ್ನು ದುರಸ್ತಿ ಮಾಡಿ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿತ್ತು. ಆದರೆ, ನೌಕೆ ಬಾಹ್ಯಾಕಾಶ ಕೇಂದ್ರ ತಲುಪಿ ಅಲ್ಲಿ ಡಾಕಿಂಗ್‌ ಆದ ಮೇಲೆ ಸಮಸ್ಯೆ ಇನ್ನಷ್ಟು ತೀವ್ರಗೊಂಡಿದೆ. ಸ್ಟಾರ್‌ಲೈನರ್‌ ಬಗ್ಗೆ ಸಾಕಷ್ಟು ವಿಶ್ಲೇಷಣೆ ನಡೆಸಿದ ಬಳಿಕ ಸುನೀತಾ ವಿಲಿಯಮ್ಸ್‌ ಮುಂದಿನ ಫೆಬ್ರವರಿವರೆಗೂ ಐಎಸ್‌ಎಸ್‌ನಲ್ಲಿರುವುದು ಸೂಕ್ತ ಎಂದು ನಾಸಾ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಖಾಲಿ ನೌಕೆ ವಾಪಸ್‌: ಹಾಲಿ ದೋಷ ಕಾಣಿಸಿಕೊಂಡಿರುವ ಬೋಯಿಂಗ್‌ ಸ್ಟಾರ್‌ಲೈನರ್‌ ನೌಕೆ, ಸೆಪ್ಟೆಂಬರ್‌ನಲ್ಲಿ ಖಾಲಿಯಲ್ಲಿ ಭೂಮಿಗೆ ವಾಪಾಸ್‌ ತರಲು ನಾಸಾ ನಿರ್ಧರಿಸಿದೆ. ಸ್ಟಾರ್‌ಲೈನರ್‌ ವಾಪಾಸ್‌ ಬಂದಲ್ಲಿ ಮಾತ್ರವೇ ಸ್ಪೇಸ್‌ ಎಕ್ಸ್‌ನ ಡ್ರ್ಯಾಗನ್‌ ಕ್ರ್ಯೂ ನೌಕೆ ಐಎಸ್‌ಎಸ್‌ನಲ್ಲಿ ಡಾಕಿಂಗ್‌ ಮಾಡಲು ಸಾಧ್ಯವಾಗಲಿದೆ.

ಆಹಾರ ವ್ಯವಸ್ಥೆ ಹೇಗೆ: ಮಾನವ ಸಹಿತ ನೌಕೆಯ ಉಡ್ಡಯನ ಸಾಧ್ಯವಾಗದೇ ಇದ್ದರೂ, ಸರಕು ಸಾಗಣೆಗೆ ಇರುವ ನೌಕೆಗಳು ಬಾಹ್ಯಾಕಾಶ ಕೇಂದ್ರಕ್ಕೆ ಆಗಾಗ್ಗೆ ಹೋಗಿ ಬರುತ್ತಲೇ ಇರುತ್ತವೆ. ಅದರ ಮೂಲಕವೇ ಸುನೀತಾ ವಿಲಿಯಮ್ಸ್‌ ಹಾಗೂ ಬಚ್‌ ವಿಲ್ಮೋರ್‌ಗೆ ಅಗತ್ಯವಾದ ಸಾಮಗ್ರಿಗಳನ್ನು ಕಳುಹಿಸಿಕೊಡಲು ನಾಸಾ ನಿರ್ಧರಿಸಿದೆ.

ಬಾಹ್ಯಾಕಾಶದಲ್ಲಿ ಸಿಲುಕಿದ ಸುನಿತಾ ವಿಲಿಯಮ್ಸ್ ಕರೆತರುವ ಪ್ರಯತ್ನ: ಜೀವಕ್ಕೆ ಅಪಾಯ ಸೇರಿ 3 ಎಚ್ಚರಿಕೆ!

ಕಲ್ಪನಾ ಚಾವ್ಲಾ ಕಹಿನೆನಪು: 2003ರಲ್ಲಿ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಅವರನ್ನೊಳಗೊಂಡ ನಾಸಾದ ಕೊಲಂಬಿಯಾ ಗಗನನೌಕೆ ಭೂಮಿಯ ಮರುಪ್ರವೇಶ ಹಂತದಲ್ಲಿ ಸ್ಫೋಟಗೊಂಡಿತ್ತು. ಈ ವೇಳೆ ಕಲ್ಪನಾ ಚಾವ್ಲಾ ಸೇರಿ 6 ಗಗನಯಾತ್ರಿಗಳು ಸುಟ್ಟು ಬೂದಿಯಾಗಿದ್ದರು.

ಸ್ಪೇಸ್‌ಸೂಟ್‌ ಇಲ್ಲದೆ ಭೂಮಿಗೆ ವಾಪಾಗ್ತಾರಾ ಸುನೀತಾ ವಿಲಿಯಮ್ಸ್‌?