ಮಾನವನನ್ನು ಮತ್ತೆ ಚಂದ್ರನತ್ತ ಕೊಂಡೊಯ್ಯುವ ನಾಸಾದ 'ಆರ್ಟೆಮಿಸ್' ಯೋಜನೆ ಚುರುಕುಗೊಂಡಿದೆ. 2028ರ ಚಂದ್ರಯಾನಕ್ಕೂ ಮುನ್ನ 2027ರಲ್ಲಿ ಸ್ಪೇಸ್ಎಕ್ಸ್ ಮತ್ತು ಬ್ಲೂ ಒರಿಜಿನ್ ಲ್ಯಾಂಡರ್ಗಳನ್ನು ಕಕ್ಷೆಯಲ್ಲಿ ಕಠಿಣ ಪರೀಕ್ಷೆಗೆ ಒಳಪಡಿಸಲಾಗುವುದು. ಚೀನಾದ ಪೈಪೋಟಿಯ ನಡುವೆ ನಾಸಾ ಈ ಐತಿಹಾಸಿಕ ಕಾರ್ಯಾಚರಣೆಗೆ ಸಜ್ಜಾಗುತ್ತಿದೆ.
ಮಾನವ ಕುಲವನ್ನು ಮತ್ತೆ ಚಂದ್ರನ ಅಂಗಳಕ್ಕೆ ತಲುಪಿಸುವ ನಾಸಾದ ಮಹತ್ವಾಕಾಂಕ್ಷೆಯ 'ಆರ್ಟೆಮಿಸ್' ಯೋಜನೆಯು ಹೊಸ ವೇಗ ಪಡೆದುಕೊಂಡಿದೆ. 2028 ರಲ್ಲಿ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸುವ ಬೃಹತ್ ಸಾಹಸಕ್ಕೆ ಮುನ್ನ, 2027 ರಲ್ಲಿ ಅತ್ಯಂತ ಸಂಕೀರ್ಣವಾದ 'ಆರ್ಟೆಮಿಸ್ III' ಬಾಹ್ಯಾಕಾಶ ಪರೀಕ್ಷಾ ಕಾರ್ಯಾಚರಣೆಯನ್ನು ಕೈಗೊಳ್ಳಲು ನಾಸಾ ಅಂತಿಮ ಹಂತಹ ಸಿದ್ಧತೆಗಳನ್ನು ನಡೆಸುತ್ತಿದೆ.
ಈ ನಿರ್ಣಾಯಕ ಕಾರ್ಯಾಚರಣೆಗಾಗಿ ವಿಶ್ವದ ಇಬ್ಬರು ದೈತ್ಯ ಉದ್ಯಮಿಗಳಾದ ಎಲಾನ್ ಮಸ್ಕ್ ನೇತೃತ್ವದ 'ಸ್ಪೇಸ್ಎಕ್ಸ್' ಮತ್ತು ಜೆಫ್ ಬೆಜೋಸ್ ಅವರ 'ಬ್ಲೂ ಒರಿಜಿನ್' ಕಂಪನಿಗಳು ತಯಾರಿಸುತ್ತಿರುವ ಚಂದ್ರನ ಲ್ಯಾಂಡರ್ಗಳನ್ನು ಭೂಮಿಯ ಕಕ್ಷೆಯಲ್ಲಿ ಕಠಿಣ ಪರೀಕ್ಷೆಗೆ ಒಳಪಡಿಸಲಾಗುವುದು.
2027 ರ ಕಕ್ಷೀಯ ಪರೀಕ್ಷೆ ಮತ್ತು ಗಗನಯಾತ್ರಿಗಳ ತಂಡ
ನಾಸಾದ ಅಧಿಕೃತ ಪ್ರಕಟಣೆಯ ಪ್ರಕಾರ, ಆರ್ಟೆಮಿಸ್ III ಕಾರ್ಯಾಚರಣೆಯು 14 ದಿನಗಳ ಕಾಲ ತಳಮಟ್ಟದ ಭೂಮಿಯ ಕಕ್ಷೆಯಲ್ಲಿ ನಡೆಯಲಿದೆ. ನಾಸಾದ ಪ್ರಸಿದ್ಧ 'ಓರಿಯನ್' ಬಾಹ್ಯಾಕಾಶ ನೌಕೆಯಲ್ಲಿ ನಾಸಾ ಗಗನಯಾತ್ರಿಗಳಾದ ರಾಂಡಿ ಬ್ರೆಸ್ನಿಕ್, ಫ್ರಾಂಕ್ ರುಬಿಯೊ ಮತ್ತು ಆಂಡ್ರೆ ಡೌಗ್ಲಾಸ್ ಅವರೊಂದಿಗೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಲುಕಾ ಪರ್ಮಿಟಾನೊ ಪ್ರಯಾಣಿಸಲಿದ್ದಾರೆ.
ಈ 14 ದಿನಗಳ ಕಕ್ಷೀಯ ಪಯಣದಲ್ಲಿ ಗಗನಯಾತ್ರಿಗಳು ಹಾಗೂ ಫ್ಲೈಟ್ ಕಂಟ್ರೋಲರ್ಗಳು, ಸ್ಪೇಸ್ಎಕ್ಸ್ ಮತ್ತು ಬ್ಲೂ ಒರಿಜಿನ್ ಕಂಪನಿಗಳು ಅಭಿವೃದ್ಧಿಪಡಿಸುತ್ತಿರುವ ಲ್ಯಾಂಡರ್ಗಳ ಮಾದರಿಗಳೊಂದಿಗೆ ಬಾಹ್ಯಾಕಾಶ ನೌಕೆಯ ಜೋಡಣೆ, ವಾಸಸ್ಥಳ ನಿರ್ವಹಣೆ ಹಾಗೂ ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಿದ್ದಾರೆ. 2028 ರ 'ಆರ್ಟೆಮಿಸ್ IV' ಮಾನವಸಹಿತ ಚಂದ್ರಯಾನಕ್ಕೆ ಯಾವ ಕಂಪನಿಯ ಲ್ಯಾಂಡರ್ ಅತ್ಯಂತ ಸುರಕ್ಷಿತ ಮತ್ತು ಸಿದ್ಧವಾಗಿದೆ ಎಂಬುದನ್ನು ನಿರ್ಧರಿಸಲು ಈ ಪರೀಕ್ಷೆ ಅತ್ಯಂತ ಪ್ರಮುಖವಾಗಿದೆ.
ತಾಂತ್ರಿಕ ಸವಾಲುಗಳ ನಡುವೆಯೂ ನಾಸಾ ಕಟ್ಟುನಿಟ್ಟಿನ ಹೆಜ್ಜೆ
ಎರಡೂ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳು ಕೆಲವು ತಾಂತ್ರಿಕ ತೊಡಕುಗಳನ್ನು ಎದುರಿಸುತ್ತಿದ್ದರೂ, ನಿಗದಿಪಡಿಸಿದ ಸಮಯಕ್ಕೇ ಪರೀಕ್ಷಾ ಕಾರ್ಯಾಚರಣೆ ನಡೆಸಲಾಗುವುದು ಎಂದು ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್ಮನ್ ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಸಮಯ ಅಥವಾ ಹೆಚ್ಚಿನ ಹಣ ವ್ಯಯಿಸುವುದರಿಂದ ಮಾತ್ರವೇ ಸುರಕ್ಷತೆ ಸಿಗುತ್ತದೆ ಎಂಬ ಭ್ರಮೆಯಲ್ಲಿ ನಾವಿಲ್ಲ. ಕಟ್ಟುನಿಟ್ಟಾದ ಪರೀಕ್ಷೆಗಳೇ ನಮಗೆ ನೈಜ ಯಶಸ್ಸು ನೀಡಲಿವೆ ಎಂದು ಅವರು ತಿಳಿಸಿದ್ದಾರೆ. 1972 ರ ಅಪೋಲೋ ಕಾರ್ಯಕ್ರಮದ ನಂತರ ಮಾನವ ಮತ್ತೆ ಚಂದ್ರನ ಮೇಲೆ ಹೆಜ್ಜೆಯಿಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಸ್ಪೇಸ್ಎಕ್ಸ್ vs ಬ್ಲೂ ಒರಿಜಿನ್: ಯಾರ ತಂತ್ರಜ್ಞಾನ ಹೇಗಿದೆ?
ಚೀನಾ ಸವಾಲು ಮತ್ತು ನಾಸಾದ ಭವಿಷ್ಯದ ಯೋಜನೆ
2030 ರ ವೇಳೆಗೆ ತನ್ನ ದೇಶದ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲು ಚೀನಾ ಕೂಡ ಶರವೇಗದಲ್ಲಿ ಯೋಜನೆ ರೂಪಿಸುತ್ತಿದೆ. ಅಮೆರಿಕ ಮತ್ತು ಚೀನಾ ನಡುವಿನ ಈ ಬಾಹ್ಯಾಕಾಶ ಸ್ಪರ್ಧೆಯ ಹಿನ್ನೆಲೆಯಲ್ಲಿ, ನಾಸಾ ತನ್ನ ಬಾಹ್ಯಾಕಾಶ ಸೂಟ್ಗಳು, ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಹಾಗೂ ಓರಿಯನ್ ನೌಕೆಯ ವಿನ್ಯಾಸಗಳನ್ನು ಮತ್ತಷ್ಟು ಸರಳೀಕರಿಸಿ ವೇಗವಾಗಿ ಕೆಲಸ ನಿರ್ವಹಿಸುತ್ತಿದೆ. 2028 ರ ಕೊನೆಯಲ್ಲಿ ಅಥವಾ 2029 ರ ಆರಂಭದಲ್ಲಿ ನಡೆಯಲಿರುವ ಆರ್ಟೆಮಿಸ್ IV ಚಂದ್ರಯಾನಕ್ಕಾಗಿ ಸ್ಪೇಸ್ಎಕ್ಸ್ ಅಥವಾ ಬ್ಲೂ ಒರಿಜಿನ್ ಈ ಎರಡರಲ್ಲಿ ಯಾವ ಕಂಪನಿಯ ಲ್ಯಾಂಡರ್ ಮೊದಲು ಸಂಪೂರ್ಣ ಸುರಕ್ಷತೆಯೊಂದಿಗೆ ಸಿದ್ಧವಾಗಲಿದೆಯೋ, ಅದನ್ನೇ ಬಳಸಿಕೊಳ್ಳಲು ನಾಸಾ ತೀರ್ಮಾನಿಸಿದೆ.







