ಗಣೇಶ ಚೌತಿ ಮತ್ತು ನವರಾತ್ರಿಯಲ್ಲಿ ಪಿಒಪಿ ಮೂರ್ತಿಗಳ ಬಳಕೆ ಪರಿಸರಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ, ಈಗ ಮಣ್ಣೆತ್ತಿನ ಅಮವಾಸ್ಯೆಯಲ್ಲೂ ಪಿಒಪಿ ಎತ್ತುಗಳನ್ನು ಬಳಸಲಾಗುತ್ತಿದೆ. ಇದು ಪರಿಸರಕ್ಕೆ ಮತ್ತಷ್ಟು ಹಾನಿ ಉಂಟುಮಾಡುತ್ತಿದೆ. ಮಣ್ಣಿನೊಂದಿಗಿನ ಸಂಬಂಧ ಕಡಿಮೆಯಾಗುತ್ತಿದೆ.

ರಾಹುಲ್ ಜೀ ದೊಡ್ಮನಿ ಚವಡಾಪುರ

ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುವ ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ (ಪಿಒಪಿ) ಮೂರ್ತಿಗಳ ತಯಾರಿ ಮತ್ತು ಮಾರಾಟ ಕಾನೂನುಬಾಹಿರವಾಗಿದ್ದರೂ ಕೂಡ ಎಲ್ಲೆಡೆ ರಾಜಾರೋಷವಾಗಿ ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಜೋರಾಗಿ ನಡೆಯುತ್ತಲಿದೆ. ಈ ಪಿಒಪಿ ಭೂತ ಇಷ್ಟು ದಿನಗಳ ವರೆಗೆ ಗಣೇಶ ಚೌತಿಯ ಗಣೇಶ ಮೂರ್ತಿ ಹಾಗೂ ದೇವಿ ಮೂರ್ತಿಗಳ ತಯಾರಿಕೆಗೆ ಸೀಮಿತವಾಗಿತ್ತು. ಈಗ ಅದು ಮಣ್ಣೆತ್ತಿನ ಅಮವಾಸ್ಯೆಗೂ ವಿಸ್ತರಿಸಿಕೊಂಡಿದೆ.

ಗಣೇಶ ಮೂರ್ತಿ, ದೇವಿ ಮೂರ್ತಿಗಳಿಗೆ ಸೀಮಿತವಾಗಿದ್ದ ಪಿಒಪಿ:

ಪ್ರತಿವರ್ಷ ಗಣೇಶ ಚೌತಿ ಸಂದರ್ಭದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಹಾವಳಿ ಮಾರುಕಟ್ಟೆಯಲ್ಲಿ ಕಾಣುತ್ತೇವೆ, ಅದೇ ರೀತಿ ನವರಾತ್ರಿ ಸಂದರ್ಭದಲ್ಲಿ ದೇವಿ ಮೂರ್ತಿಗಳನ್ನು ಕೂಡ ಪಿಒಪಿ ಮಾದರಿಯಲ್ಲಿ ತಯಾರಿಸಲಾಗುತ್ತದೆ. ಪಿಒಪಿ ಮೂರ್ತಿಗಳನ್ನು ನದಿ, ಹಳ್ಳ, ಕೊಳ್ಳ, ಬಾವಿ, ಕೆರೆಗಳಲ್ಲಿ ವಿಸರ್ಜನೆ ಮಾಡುವುದರಿಂದ ನೀರು ವಿಷಮಯವಾಗುತ್ತಿದೆ, ಜಲಚರಗಳು ಸಾಯುತ್ತಿವೆ, ಅದೇ ನೀರು ಬಳಸಿ ಬೆಳೆಯುವ ತರಕಾರಿ, ಆಹಾರಧಾನ್ಯಗಳ ಸೇವನೆಯಿಂದ ಮನುಷ್ಯರ ಆರೋಗ್ಯಕ್ಕೂ ಹಾನಿ ಇದೆ ಎಂದು ಪರಿಸರ ಇಲಾಖೆ, ಸರ್ಕಾರ ಸುತ್ತೋಲೆ ಹೊರಡಿಸುತ್ತದೆ. ಆದರೆ ಸುತ್ತೋಲೆಗಳು ಸರ್ಕಾರಿ ಕಚೇರಿಗಳ ಟೇಬಲ್‌ಗಳಿಗೆ ಸೀಮಿತವಾಗುವುದರಿಂದ ಪಿಒಪಿ ಮೂರ್ತಿಗಳ ತಯಾರಿಕೆಗೆ ಯಾವುದೇ ಅಡಚಣೆ ಆಗುತ್ತಿಲ್ಲ.

ಪರಿಸರ ಸ್ನೇಹಿಯಾಗಿದ್ದ ಮಣ್ಣೆತ್ತಿನ ಅಮವಾಸ್ಯೆಯೂ ಪಿಒಪಿ ಕಡೆ?:

ಸಾಮಾನ್ಯವಾಗಿ ರೈತರ ಹಬ್ಬವಾಗಿರುವ ಮಣ್ಣೆತ್ತಿನ ಅಮವಾಸ್ಯೆಯನ್ನು ಬಹಳ ಶೃದ್ಧೆಯಿಂದ, ಭೂಮಿ ಮೇಲೆ ನಂಬಿಕೆ ಇಟ್ಟು, ನಮಿಸಿ ಪೂಜ್ಯಭಾವನೆಯಿಂದ ಆಚರಿಸಲಾಗುತ್ತದೆ. ರೈತರು ಮೊದಲ ಮಳೆಗಾಲದಲ್ಲಿ ಬರುವ ಈ ವಿಶೇಷ ಹಬ್ಬದಂದು ಹೊಲಕ್ಕೆ ಹೋಗಿ ಜಿಗುಟಾದ ಮಣ್ಣು ತಂದು, ಕಲಸಿ ಮಣ್ಣೆತ್ತುಗಳನ್ನು ತಯಾರು ಮಾಡಿ ಜೋಳ, ಜವೆ, ಕಾಳುಗಳಿಂದ ಸಿಂಗರಿಸಿ ಪೂಜಿಸಿ ಬಳಿಕ ಕೆರೆ, ಬಾವಿಗಳಲ್ಲಿ ವಿಸರ್ಜನೆ ಮಾಡುತ್ತಾರೆ. ಆದರೆ ಇತ್ತಿಚಿನ ದಿನಗಳಲ್ಲಿ ಯುವ ಪೀಳಿಗೆ ಹಬ್ಬ ಹರಿದಿನಗಳನ್ನೇ ಮರೆತಂತೆ ಬದುಕುತ್ತಿದ್ದಾರೆ. ನೆಲಮೂಲದ ಹಬ್ಬ, ಆಚರಣೆಗಳ ಮಹತ್ವ ಅರಿಯದಂತಾಗಿದ್ದಾರೆ. ಯಾರು ಮಣ್ಣಿನ ಎತ್ತುಗಳನ್ನು ತಯಾರಿಸಿ ಮೈಗೆ ಮಣ್ಣಂಟಿಸಿಕೊಳ್ಳಲು ಹೇಸುತ್ತಿದ್ದಾರೆ. ಮಣ್ಣಿನೊಂದಿಗಿನ ಸಂಬಂಧ ದೂರವಾಗಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಈಗ ಮಣ್ಣೆತ್ತಿನ ಅಮವಾಸ್ಯೆ ಸಂದರ್ಭದಲ್ಲಿ ಪಿಒಪಿ ಮಾದರಿಯಲ್ಲಿ ಎತ್ತುಗಳನ್ನು ತಯಾರಿಸಿ ತರಹೇವಾರಿ ಕೆಮಿಕಲ್ ಮಿಶ್ರಿತ ಬಣ್ಣಗಳಿಂದ ಅಲಂಕಾರಗೊಳಿಸಿ ಪುನಃ ಅದೇ ಜನರ ಮೆಚ್ಚುಗಾರಿಕೆಗೆ ಆಕರ್ಷಣೆಗೊಳ್ಳುವಂತೆ ವ್ಯಾಪಾರಿಗಳು ಮಾಡುತ್ತಿದ್ದಾರೆ. ಮಣ್ಣಿನಿಂದ ಎತ್ತುಗಳನ್ನು ಮಾಡಲಾಗದವಂತಾದ ಜನ ಮೆಚ್ಚುಗಾರಿಕೆಯ ಪಿಒಪಿ ಮೂರ್ತಿಗಳನ್ನು ಮುಗಿಬಿದ್ದು ಖರೀದಿಸುವ ಮೂಲಕ ಮಣ್ಣೆತ್ತಿನ ಅಮವಾಸ್ಯೆ ಕೂಡ ಪಿಒಪಿ ಮಾದರಿಯಲ್ಲಿ ಆಚರಿಸಿ ಪ್ರಕೃತಿಗೆ ಮತ್ತಷ್ಟು ಹಾನಿಗೊಳಿಸುತ್ತಿದ್ದಾರೆ.

ಮಣ್ಣೆತ್ತಿನ ಅಮವಾಸ್ಯೆ ರೈತರು ಮತ್ತು ಮಣ್ಣಿಗೆ ಸಂಬಂಧಿಸಿದ್ದು, ನಮ್ಮ ಹಿರಿಯರು ಎಲ್ಲವನ್ನು ಪ್ರಕೃತಿಗೆ ಪ್ರೀಯವಾಗುವಂತ ಆಚರಣೆಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಈಗಿನವರು ಪಿಒಪಿ ಮೂರ್ತಿಗಳನ್ನು ಬಳಕೆ ಮಾಡಿಕೊಂಡು ಪ್ರಕೃತಿಗೆ ಹಾನಿಗೊಳಿಸುತ್ತಿರುವುದು ಸರಿಯಲ್ಲ. ಸಂಬಂಧ ಪಟ್ಟವರು ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಪಿಒಪಿ ಮೂರ್ತಿಗಳಿಂದ ಪ್ರಕೃತಿಯ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರಲಿದೆ.

ಡಾ. ಚನ್ನಮಲ್ಲ ಶಿವಯೋಗಿ, ತೇರಿನ ಮಠ, ಬಡದಾಳ