3ನೇ ಬಾರಿ ಜಪಾನ್ ಚಂದ್ರಯಾನ ಉಡಾವಣೆ ರದ್ದು, 30 ನಿಮಿಷ ಮೊದಲು ಲಾಂಚ್ ಕೈಬಿಟ್ಟ JAXA!
ಭಾರತ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿ ಅಧ್ಯಯನ ಆರಂಭಿಸಿದೆ. ಇದರ ಬೆನ್ನಲ್ಲೇ ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು ಮುಂದಾಗಿದ್ದ ಜಪಾನ್‌ಗೆ ಮತ್ತೆ ಹಿನ್ನಡೆಯಾಗಿದೆ. ಸತತ 3ನೇ ಬಾರಿ ಜಪಾನ್ ಚಂದ್ರಯಾನ ರಾಕೆಡ್ ಉಡಾವಣೆ ರದ್ದು ಮಾಡಿದೆ.
ಟೋಕಿಯೋ(ಆ.28) ಇಸ್ರೋ ವಿಜ್ಞಾನಿಗಳ ಪರಿಶ್ರಮದಿಂದ ಭಾರತ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿ ಅಧ್ಯಯನ ಶುರು ಮಾಡಿದೆ. ಆಗಸ್ಟ್ 23 ರಂದು ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿತ್ತು. ಈ ಮೂಲಕ ಚಂದ್ರನ ಮೇಲೆ ಕಾಲಿಟ್ಟ 4ನೇ ದೇಶ ಹಾಗೂ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಜಪಾನ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು ಕಳೆದ ಕೆಲ ವರ್ಷಗಳಿಂದ ಪ್ರಯತ್ನ ಮಾಡುತ್ತಿದೆ. ಆದರೆ ಸತತ 3ನೇ ಬಾರಿಯೂ ಜಪಾನ್ ಲ್ಯಾಂಡರ್ ಉಡಾವಣೆ ರದ್ದು ಮಾಡಿದೆ. ಉಡಾವಣೆಗೂ 30 ನಿಮಿಷ ಮೊದಲು ಜಪಾನ್ ತನ್ನ ಉಡಾವಣೆಯನ್ನು ರದ್ದುಗೊಳಿಸಿದೆ.
ಇಂದು(ಆ.28) ಬೆಳಿಗ್ಗೆ 5.25ರ (ಭಾರತೀಯ ಕಾಲಮಾನ)ವೇಳೆ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಚಂದ್ರನ ಮೇಲೆ ಲ್ಯಾಂಡ್ ಇಳಿಸುವ ಈ ಯೋಜನೆಗೆ ಜಪಾನ್ ಮೂನ್ ಸ್ನೈಪರ್ ಎಂದು ಹೆಸರಿಟ್ಟಿತ್ತು. ಈ ಯೋಜನೆ ಎಕ್ಸ್ ರೇ ಮಿಶನ್ ಹಾಗೂ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಪ್ರಕ್ರಿಯೆಗಳನ್ನು ಒಳಗೊಂಡಿತ್ತು.ಆದರೆ ಜಪಾನ್ ಯೋಜನೆ ಎಲ್ಲವೂ ಬುಡಮೇಲಾಗಿದೆ. ಪ್ರತಿಕೂಲ ಹವಾಮಾನ, ತೀವ್ರ ಗಾಳಿ ಹಾಗೂ ಪ್ರಕ್ಷುಬ್ದ ವಾತಾವರಣ ಕಾರಣದಿಂದ ಜಪಾನ್ ಉಡಾವಣೆ ರದ್ದು ಮಾಡಿದೆ.
ಇದೇ ಮೊದಲ ಬಾರಿಗೆ ಚಂದ್ರನ ಮೇಲಿನ ತಾಪಮಾನ ಬಹಿರಂಗ, ಪ್ರಗ್ಯಾನ್ ರೋವರ್ ಮಹತ್ವ ಮಾಹಿತಿ ರವಾನೆ!
ಅತಿ ಚಿಕ್ಕ ಲ್ಯಾಂಡರನ್ನು ಚಂದ್ರನ ಮೇಲೆ ಇಳಿಸುವ ಮೂಲಕ ದಾಖಲೆ ನಿರ್ಮಿಸಿಲು ಜಪಾನ್ ಮುಂದಾಗಿತ್ತು. ಈ ಮೂಲಕ ಚಂದ್ರನ ಮೇಲೆ ಇಳಿದ 5ನೇ ದೇಶ ಅನ್ನೋ ಕೀರ್ತಿಗೆ ಪಾತ್ರರಾಗಲು ಸತತ ಪ್ರಯತ್ನ ಮಾಡಲಾಗಿತ್ತು. ಆದರೆ ಯಾವುದೂ ಕೈಗೂಡಿಲ್ಲ. ಇದೀಗ 3ನೇ ಬಾರಿ ವಿವಿಧ ಕಾರಣಗಳಿಂದ ಜಪಾನ್ ಚಂದ್ರಯಾನ ರದ್ದಾಗಿದೆ.
ಜಪಾನ್ ಬಾಹ್ಯಕಾಶ ಸಂಸ್ಥೆ ಅಭಿವೃದ್ಧಿಪಡಿಸಿದ ಈ ಮೂನ್ ಸ್ನೈಪರ್ ಚಂದ್ರನ ಮೇಲೆ ತಲುಪಲುಬರೋಬ್ಬರಿ 4 ರಿಂದ 6 ತಿಂಗಳು ಬೇಕಿತ್ತು. ಈ ಯೋಜನೆ ಅಂಗೈ ಅಗಲದ ರೋವರ್ ಮಾತ್ರ ಹೊಂದಿದ್ದು, ಇದು ಚಂದ್ರನ ಮೇಲಿರುವ ವಸ್ತುಗಳನ್ನು ಅಧ್ಯಯನ ಮಾಡುವ ಚಂದ್ರನ ಉಗಮವನ್ನು ಪತ್ತೆ ಮಾಡಲಿದೆ ಎಂದು ಸಂಸ್ಥೆ ಹೇಳಿದೆ. ಈ ಮೊದಲು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಈ ಯೋಜನೆಯನ್ನು ಜಪಾನ್ ಮುಂದೂಡಿತ್ತು. ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು 2022ರಲ್ಲೂ ಜಪಾನ್ ಪ್ರಯತ್ನ ಮಾಡಿ ವಿಫಲವಾಗಿತ್ತು.
ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಪ್ರಯತ್ನದಿಂದ ನಾವು ಹಿಂದೆ ಸರಿಯಲ್ಲ. ಪ್ರತಿಕೂಲ ಹವಾಮಾನ ಕಾರಣದಿಂದ ಉಡಾವಣೆಗೆ 30 ನಿಮಿಷ ಮೊದಲು ರದ್ದು ಮಾಡಲಾಗಿದೆ. ಮುಂದಿನ ಉಡಾವಣೆ ದಿನಾಂಕ ಶೀಘ್ರದಲ್ಲೇ ಘೋಷಿಸಲಾಗುತ್ತದೆ. ಇಂಧನ ತುಂಬಿಸುವುದು, ಸೇರಿದಂತೆ ಇತರ ಕೆಲಸಗಳು ನಡೆಯುತ್ತಿದೆ. ಸೆಪ್ಟೆಂಬರ್ 15ರ ವೇಳೆಗೆ ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಜಪಾನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ಚಂದ್ರಯಾನ ಯಶಸ್ಸಿಗೆ ಭಾರತ ಹೊಗಳಿ, ತಮ್ಮ ದೇಶವನ್ನೇ ಟೀಕಿಸಿದ ಪಾಕ್ ಮಾಧ್ಯಮ!
2001ರಿಂದ ಜಪಾನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಸತತ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಸಣ್ಣ ಸಣ್ಣ ಲ್ಯಾಂಡರ್‌ಗಳನ್ನು ಮಂಗಳ ಸೇರಿದಂತೆ ಇತರ ಗ್ರಹಗಳು ಮೇಲೆ ಜಪಾನ್ ಉಡಾವಣೆ ಮಾಡಿದೆ. 46 ಪ್ರಯತ್ನದಲ್ಲಿ 45 ಪ್ರಯತ್ನಗಳು ಯಶಸ್ವಿಯಾಗಿದೆ. ಆದರೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಪ್ರಯತ್ನಕ್ಕೆ ಭಾರಿ ಹಿನ್ನಡೆಯಾಗುತ್ತಿದೆ.