ಭಾರತದ ಸ್ವತಂತ್ರ ನ್ಯಾವಿಗೇಷನ್ ವ್ಯವಸ್ಥೆ 'ನಾವಿಕ್' ಬಲಪಡಿಸಲು ಇಸ್ರೋ ಎನ್‌ವಿಎಸ್‌-03 ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್18 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಕಕ್ಷೆಯಲ್ಲಿ 4 ಉಪಗ್ರಹಗಳ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಭವಿಷ್ಯದಲ್ಲಿ ಗಗನಯಾನ ಸೇರಿದಂತೆ ಹಲವು ಯೋಜನೆಗಳನ್ನು ಇಸ್ರೋ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀಹರಿಕೋಟ: ಭಾರತದ ಸ್ವತಂತ್ರ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆ ನಾವಿಕ್‌ಗೆ ಮತ್ತಷ್ಟು ಶಕ್ತಿ ತುಂಬುವ ಉದ್ದೇಶದಿಂದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ, ಮುಂದಿನ ತಲೆಮಾರಿನ ನ್ಯಾವಿಗೇಷನ್‌ ಉಪಗ್ರಹ ‘ಎನ್‌ವಿಎಸ್‌-03’ ಅನ್ನು ಹೊತ್ತ ಜಿಎಸ್‌ಎಲ್‌ವಿ-ಎಫ್18 ರಾಕೆಟ್‌ ಅನ್ನು ಶುಕ್ರವಾರ ತಡರಾತ್ರಿ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ 11.51ಕ್ಕೆ 50 ಮೀಟರ್‌ ಉದ್ದದ ರಾಕೆಟ್‌ ನಭಕ್ಕೆ ಚಿಮ್ಮಿತು. ಇದು ಜಿಎಸ್‌ಎಲ್‌ವಿಯ 20ನೇ ಹಾರಾಟ ಎಂಬುದು ವಿಶೇಷ. ಯೋಜನೆಯ ಯಶಸ್ಸಿಗಾಗಿ ಇಸ್ರೋ ಮುಖ್ಯಸ್ಥ ನಾರಾಯಣನ್‌ ಅವರು ತಮ್ಮ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಸುಮಾರು 18 ನಿಮಿಷಗಳ ಪ್ರಯಾಣದ ಬಳಿಕ ರಾಕೆಟ್‌ನ 3 ಹಂತಗಳೂ ಯಶಸ್ವಿಯಾಗಿದ್ದು, 2,232 ಕೆ.ಜಿ. ತೂಕದ ಉಪಗ್ರಹವನ್ನು ನಿಗದಿತ ಭೂಸ್ಥಿರ ವರ್ಗಾವಣೆ ಕಕ್ಷೆಗೆ (ಜಿಯೋಸಿಂಕ್ರನಸ್‌ ಟ್ರಾನ್ಸ್‌ಫರ್‌ ಆರ್ಬಿಟ್‌) ಸೇರಿಸಲಾಯಿತು.

ಎನ್‌ವಿಎಸ್‌-03 ನ್ಯಾವಿಕ್‌ನ ಮುಂದಿನ ತಲೆಮಾರಿನ ಉಪಗ್ರಹ ಸರಣಿಯ ಮೂರನೇ ಉಪಗ್ರಹವಾಗಿದೆ. ಇದು ಭಾರತದ ಭೂಭಾಗ ಹಾಗೂ ಅದರ ಸುತ್ತಲಿನ 1,500 ಕಿ.ಮೀ. ವ್ಯಾಪ್ತಿಯಲ್ಲಿ ನ್ಯಾವಿಗೇಷನ್ ಸೇವೆ ಒದಗಿಸಲಿದ್ದು, ವಾಹನ, ಹಡಗು ಮತ್ತು ವಿಮಾನಗಳ ನಿಖರ ಸ್ಥಳ, ದಿಕ್ಕು ಹಾಗೂ ಸಮಯದ ಮಾಹಿತಿ ಪಡೆಯಲು ನೆರವಾಗಲಿದೆ.

ಇಸ್ರೋ ಮುಖ್ಯಸ್ಥ ಹೇಳೋದೇನು?

ಎನ್‌ವಿಎಸ್‌-03 ಉಪಗ್ರಹದ ಯಶಸ್ವಿ ನಿಯೋಜನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ವಿ. ನಾರಾಯಣನ್, ನಿಖರವಾದ ನ್ಯಾವಿಗೇಷನ್ ಸೇವೆಗಳನ್ನು ಒದಗಿಸಲು ಕನಿಷ್ಠ 4 ಉಪಗ್ರಹಗಳ ಅಗತ್ಯವಿತ್ತು. ಇಂದಿನ ಯಶಸ್ವಿ ಉಡಾವಣೆಯೊಂದಿಗೆ ನಾವು ಕಕ್ಷೆಯಲ್ಲಿ 4 ಉಪಗ್ರಹಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದೇವೆ. ಸತತ ಹಾಗೂ ಅಡೆತಡೆಯಿಲ್ಲದ ಸೇವೆಗೆ 7 ಉಪಗ್ರಹಗಳ ಸಮೂಹ ಕಾರ್ಯಾಚರಣೆಯಲ್ಲರುವುದು ಕಡ್ಡಾಯ. ಪ್ರಸ್ತುತ ಇನ್ನೂ 2 ಉಪಗ್ರಹಗಳು ಅಂತಿಮ ಹಂತದ ಸಿದ್ಧತೆಯಲ್ಲಿವೆ ಮತ್ತು ಮತ್ತೊಂದು ಉಪಗ್ರಹಕ್ಕೆ ಸರ್ಕಾರದಿಂದ ಅಧಿಕೃತ ಅನುಮೋದನೆ ದೊರೆಯುವ ಪ್ರಕ್ರಿಯೆಯಲ್ಲಿದೆ ಎಂದರು.

ಈ ಯೋಜನೆ ಪೂರ್ಣಗೊಂಡರೆ, ಜಾಗತಿಕ ಮಟ್ಟದಲ್ಲಿ ಸ್ವಂತ ನ್ಯಾವಿಗೇಷನ್ ಉಪಗ್ರಹ ನೆಟ್‌ವರ್ಕ್ ಹೊಂದಿರುವ ಕೆಲವೇ ಆಯ್ದ ಪ್ರಮುಖ ದೇಶಗಳ ಸಾಲಿಗೆ ಭಾರತವು ಅಧಿಕೃತವಾಗಿ ಸೇರ್ಪಡೆಯಾಗಲಿದೆ.

ಹಾಲಿ ಹಣಕಾಸು ವರ್ಷದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಬೃಹತ್ ಮೈಲಿಗಲ್ಲುಗಳನ್ನು ಸ್ಥಾಪಿಸಲು ಕಾರ್ಯಸೂಚಿ ರೂಪಿಸಿದೆ. ಈ ಅವಧಿಯಲ್ಲಿ ಒಟ್ಟು 5 ರಿಂದ 6 ಉಡಾವಣೆಗಳನ್ನು ಪೂರ್ಣಗೊಳಿಸುವ ಸ್ಪಷ್ಟ ಗುರಿಯನ್ನು ಇಸ್ರೋ ಹೊಂದಿದೆ. ಮಾನವಸಹಿತ ಯೋಜನೆಗೆ ಮುಂಚಿತವಾಗಿ ಗಗನಯಾನ-ಜಿ ಮಿಷನ್ ಸಿಬ್ಬಂದಿರಹಿತ ಪರೀಕ್ಷಾರ್ಥ ಪ್ರಯೋಗ, ಪಿಎಸ್‌ಎಲ್‌ವಿ ಮಿಷನ್‌ ಮೂಲಕ 2 ಪ್ರಮುಖ ಉಡಾವಣೆಗಳು, ಸಣ್ಣ ಉಪಗ್ರಹ ಉಡಾವಣಾ ವಾಹಕಗಳ ಮೂಲಕ 2 ವಾಣಿಜ್ಯ ಎಸ್‌ಎಸ್‌ಎಲ್‌ವಿ ಕಾರ್ಯಾಚರಣೆ, ಖಾಸಗಿ ಬಾಹ್ಯಾಕಾಶ ಸಂಸ್ಥೆಯ ಒಂದು ಪ್ರಮುಖ ಉಡಾವಣೆಗೆ ಅಗತ್ಯ ಬೆಂಬಲ ನೀಡುವುದು.

ಇನ್ನು ಮಾನವಸಹಿತ ಬಾಹ್ಯಾಕಾಶ ಪಯಣದ ಮಹತ್ವದ ಕುರಿತು ಮಾತನಾಡಿದ ವಿ. ನಾರಾಯಣನ್,ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಕಳುಹಿಸಿ ವಾಪಸ್ ಕರೆತರುವುದು ಇಸ್ರೋದ ಮೂಲ ಉದ್ದೇಶವಾಗಿದೆ. ಮಾನವಸಹಿತ ಕಾರ್ಯಾಚರಣೆಗೆ ಚಾಲನೆ ನೀಡುವ ಮುನ್ನ ಸಂಪೂರ್ಣ ಸಿಬ್ಬಂದಿರಹಿತವಾದ 3 ಯಶಸ್ವಿ ಪರೀಕ್ಷಾರ್ಥ ಮಿಷನ್‌ಗಳನ್ನು ನಿರ್ವಹಿಸಬೇಕಾಗಿದೆ.ಈ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಇಸ್ರೋ ವಿಜ್ಞಾನಿಗಳ ತಂಡವು ಈಗಾಗಲೇ 8,000ಕ್ಕೂ ಅಧಿಕ ಕಠಿಣ ತಾಂತ್ರಿಕ ಮತ್ತು ಸಿಮ್ಯುಲೇಶನ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ ಎಂದು ಮಾಹಿತಿ ಹಂಚಿಕೊಂಡರು.

ಗಗನಯಾನ ಯೋಜನೆಯ ಯಶಸ್ಸಿಗಾಗಿ ಇಸ್ರೋದ ವಿವಿಧ ಪ್ರಮುಖ ಸಂಶೋಧನಾ ವಿಭಾಗಗಳು ಒಟ್ಟಾಗಿ ಶ್ರಮಿಸುತ್ತಿವೆ. ಎಲ್‌ಪಿಎಸ್‌ಸಿ, ಯುಆರ್‌ಎಸ್‌ಸಿ, ಐಪಿಆರ್‌ಸಿ ಮತ್ತು ಬಿಎಸ್‌ಎಸ್‌ಇ, ಪ್ರಧಾನಿಗಳ ಮಾರ್ಗದರ್ಶನ ಹಾಗೂ ದೇಶದ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ಭಾರತವು ಶೀಘ್ರದಲ್ಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸುವರ್ಣ ಯುಗವನ್ನು ಸ್ಥಾಪಿಸಲಿದೆ ಎಂಬ ವಿಶ್ವಾಸವನ್ನು ಇಸ್ರೋ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ.

ಮೋದಿ ಅಭಿನಂದನೆ

ಇಸ್ರೋ ಯಶಸ್ವಿ ಉಡಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಅಭಿನಂದಿಸಿದ್ದಾರೆ, ಈ ಮಿಷನ್ ಭಾರತದ ಸ್ಥಳೀಯ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾದ NavIC ಅನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೋದಿ "NVS-03 ಅನ್ನು ಹೊತ್ತ GSLV-F18 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಇಸ್ರೋದಲ್ಲಿನ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು.ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಸಮರ್ಪಣೆ ಮತ್ತು ಜಾಣ್ಮೆ ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಲೇ ಇದೆ ಎಂದಿದ್ದಾರೆ.