ಅಂಟಾರ್ಕ್ಟಿಕಾದಿಂದ ಹಿಂದೂ ಮಹಾಸಾಗರಕ್ಕೆ ಹರಿಯುವ ಬೃಹತ್ ಜಲರಾಶಿಯ ಗುಣಲಕ್ಷಣಗಳಲ್ಲಿ 2016ರ ನಂತರ ಭಾರಿ ಬದಲಾವಣೆಯಾಗಿದೆ ಎಂದು ಐಐಎಸ್ಸಿ ಮತ್ತು ಯುಕೆ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ನವದೆಹಲಿ (ಅ.29): ಅಂಟಾರ್ಕ್ಟಿಕಾದಿಂದ ಹಿಂದೂ ಮಹಾಸಾಗರಕ್ಕೆ ಹರಿಯುವ ಬೃಹತ್ ಜಲರಾಶಿಯು ಕಳೆದ ಒಂದು ದಶಕದಲ್ಲಿ ತನ್ನ ಮೂಲ ಗುಣಲಕ್ಷಣಗಳನ್ನೇ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದು, ಇದು ಇಡೀ ಜಾಗತಿಕ ಹವಾಮಾನ ವ್ಯವಸ್ಥೆಯ (Global Climate System) ಮೇಲೆ ಭಾರಿ ಪರಿಣಾಮ ಬೀರುವ ಮುನ್ಸೂಚನೆ ನೀಡಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಹಾಗೂ ಯುಕೆಯ ವಿಜ್ಞಾನಿಗಳು ಬುಧವಾರ ಎಚ್ಚರಿಸಿದ್ದಾರೆ.
ಕಳೆದ 20 ಕ್ಕೂ ಹೆಚ್ಚು ವರ್ಷಗಳ ಸಾಗರ ಮತ್ತು ಉಪಗ್ರಹ ದತ್ತಾಂಶಗಳನ್ನು (Satellite Data) ಆಳವಾಗಿ ವಿಶ್ಲೇಷಿಸಿರುವ ವಿಜ್ಞಾನಿಗಳು, ಅಂಟಾರ್ಕ್ಟಿಕಾ ಹಿಮದ ಭಾರಿ ನಷ್ಟವು ಸಾಗರದ ಆಳದಲ್ಲಿ ಹಿಂದೆಂದೂ ಕಾಣದ ಭಾರಿ ಪಲ್ಲಟವನ್ನು ಉಂಟುಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹಿಮಾವೃತ ದಕ್ಷಿಣ ಖಂಡವನ್ನು ಜಗತ್ತಿನ ಇತರ ಭಾಗಗಳಿಗೆ ಜೋಡಿಸುವ ಬೃಹತ್ ಜಲರಾಶಿಯಲ್ಲಿ ಕಳೆದ ಕೆಲವು ದಶಕಗಳಿಂದ ನಡೆಯುತ್ತಿದ್ದ ಬದಲಾವಣೆಗಳು 2016 ರ ನಂತರ ತದ್ವಿರುದ್ಧವಾಗಿ ತಿರುಗಿವೆ ಎಂದಿದ್ದಾರೆ.
"ಈ ಜಲರಾಶಿಯು ದಶಕಗಳ ಕಾಲ ಅತ್ಯಂತ ಸ್ಥಿರವಾಗಿತ್ತು (Super-stable). ಆದರೆ 2016 ರ ನಂತರ ಈ ಪ್ರವೃತ್ತಿ ಸಂಪೂರ್ಣವಾಗಿ ಉಲ್ಟಾ ಆಗಿದೆ. ಅಂಟಾರ್ಕ್ಟಿಕಾ ಸಮುದ್ರದ ಹಿಮದ ಕ್ಷಿಪ್ರ ಕರಗುವಿಕೆಯಿಂದಾಗಿ ಸಾಗರದ ಆಳದ ನೀರು ಹೆಚ್ಚು ಉಪ್ಪು, ಸಾಂದ್ರ ಹಾಗೂ ಆಳವಾಗಿ ಮಾರ್ಪಟ್ಟಿದೆ" ಎಂದು ಸಂಶೋಧನಾ ತಂಡದ ಪ್ರಮುಖ ಸದಸ್ಯ, ಐಐಎಸ್ಸಿಯ ಬೈಶಾಖ್ದತ್ತ ಗಾಯೇನ್ ತಿಳಿಸಿದ್ದಾರೆ.
ಅಲ್ಲದೆ, "ಈ ಬೃಹತ್ ಜಲರಾಶಿಯಲ್ಲಿ ಇಂತಹ ಪ್ರಮುಖ ಬದಲಾವಣೆಗಳು ಹಿಂದೆ ಸಾವಿರಾರು ವರ್ಷಗಳ ಅವಧಿಯಲ್ಲಿ ನಡೆಯುತ್ತಿದ್ದ ನೀರ್ಗಲ್ಲು-ನೀರ್ಗಲ್ಲಂತರ ಚಕ್ರಗಳಲ್ಲಿ (Glacial-interglacial cycles) ಸಂಭವಿಸುತ್ತಿದ್ದವು. ಆದರೆ, ಪ್ರಸ್ತುತ ನಾವು ಕೇವಲ ಒಂದೇ ದಶಕದ ಅವಧಿಯಲ್ಲಿ ಇಂತಹ ಆಘಾತಕಾರಿ ಪುನರ್ರಚನೆಯನ್ನು ಕಣ್ಣಾರೆ ಕಾಣುತ್ತಿದ್ದೇವೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಏನಿದು 'ಅಂಟಾರ್ಕ್ಟಿಕ್ ಇಂಟರ್ಮೀಡಿಯೇಟ್ ವಾಟರ್'?
ಭೂಮಿಯ ತಾಪಮಾನ ಏರಿಕೆಯಿಂದಾಗಿ (Global Warming) ವಾತಾವರಣದಲ್ಲಿ ಸಂಗ್ರಹವಾಗುವ ಶೇಕಡಾ 90 ರಷ್ಟು ಹೆಚ್ಚುವರಿ ಶಾಖವನ್ನು ಸಾಗರಗಳು ತಮ್ಮೊಳಗೆ ಹೀರಿಕೊಳ್ಳುತ್ತವೆ. ಹೀಗಾಗಿ ಸಾಗರಗಳ ಗುಣಲಕ್ಷಣಗಳಲ್ಲಿ ಉಂಟಾಗುವ ಯಾವುದೇ ಪ್ರಮುಖ ಬದಲಾವಣೆಯು ಇಡೀ ಜಗತ್ತಿನ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತದೆ.
ಭೂಮಿಯ ಹವಾಮಾನ ವ್ಯವಸ್ಥೆಯ 'ಎಂಜಿನಿಯರಿಂಗ್ ಕೊಠಡಿ' ಎಂದೇ ಕರೆಯಲ್ಪಡುವ ದಕ್ಷಿಣ ಮಹಾಸಾಗರವು (Southern Ocean) ಅಂಟಾರ್ಕ್ಟಿಕ್ ಹಿಮದ ಹೊದಿಕೆಯನ್ನು ಹೊಂದಿದ್ದು, ಜಾಗತಿಕ ಸಾಗರಗಳ ಆಳ ಹಾಗೂ ರಚನೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಜಗತ್ತಿನಾದ್ಯಂತ ಭಾರಿ ಪ್ರಮಾಣದ ಶಾಖ ಮತ್ತು ಇಂಗಾಲವನ್ನು ರವಾನಿಸುವ ಪ್ರಮುಖ ಜಲರಾಶಿಗಳನ್ನು ಹೊಂದಿದೆ.
ಐಐಎಸ್ಸಿಯ ವಾತಾವರಣ ಮತ್ತು ಸಾಗರ ವಿಜ್ಞಾನ ಕೇಂದ್ರದ (CAOS) ವಿಜ್ಞಾನಿಗಳಾದ ಬೈಶಾಖ್ದತ್ತ ಗಾಯೇನ್, ಕೌಶಿಕ್ ಮಿಶ್ರಾ ಹಾಗೂ ಸೌತಾಂಪ್ಟನ್ ವಿಶ್ವವಿದ್ಯಾಲಯದ ಆಲ್ಬರ್ಟೊ ನವೇರಾ ಗ್ಯಾರಬಾಟೊ ಅವರು ಅಂಟಾರ್ಕ್ಟಿಕಾ ಬಳಿಯ ಸಾಗರ ಪರಿಚಲನೆಯ ಮಾದರಿಗಳನ್ನು ಅಧ್ಯಯನ ಮಾಡುತ್ತಿದ್ದಾಗ ಈ ಭಾರಿ ವ್ಯತ್ಯಾಸ ಬೆಳಕಿಗೆ ಬಂದಿದೆ.
ಅವರು ಅಧ್ಯಯನ ಮಾಡಿದ ಜಲರಾಶಿಯನ್ನು 'ಅಂಟಾರ್ಕ್ಟಿಕ್ ಇಂಟರ್ಮೀಡಿಯೇಟ್ ವಾಟರ್' (Antarctic Intermediate Water) ಎಂದು ಕರೆಯಲಾಗುತ್ತದೆ. ಇದು ಸಾಗರ ಮೇಲ್ಮೈಯಿಂದ 700 ರಿಂದ 1200 ಮೀಟರ್ ಆಳದಲ್ಲಿದ್ದು, ಶಾಖವನ್ನು ಹೀರಿಕೊಳ್ಳುವ ಮೇಲ್ಭಾಗದ ಸಾಗರವನ್ನು ಆಳದ ಕೆಳಭಾಗದ ಸಾಗರದಿಂದ ಪ್ರತ್ಯೇಕಿಸುತ್ತದೆ. ಈ ನೀರು ದಕ್ಷಿಣ ಮಹಾಸಾಗರದಿಂದ ಉತ್ತರಕ್ಕೆ ಅಟ್ಲಾಂಟಿಕ್, ಹಿಂದೂ ಮತ್ತು ಪೆಸಿಫಿಕ್ ಮಹಾಸಾಗರಗಳಿಗೆ ಹರಿಯುತ್ತದೆ ಮತ್ತು ಅಂಟಾರ್ಕ್ಟಿಕಾ ಬಳಿ ತಾನು ಪಡೆದ ಗುಣಲಕ್ಷಣಗಳನ್ನು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಉಷ್ಣವಲಯದ ಮಹಾಸಾಗರಗಳಿಗೆ ಕೊಂಡೊಯ್ಯುತ್ತದೆ.
2016 ರಲ್ಲಿ ಬದಲಾದ ಸಮುದ್ರದ ಸಮತೋಲನ
ಪ್ರತಿ ವರ್ಷ ವಸಂತ ಮತ್ತು ಬೇಸಿಗೆಯಲ್ಲಿ ಹಿಮ ಕರಗಿದಾಗ, ಅದು ಸಾಗರ ಮೇಲ್ಮೈಗೆ ಸಿಹಿ ನೀರನ್ನು (Fresh Water) ಸೇರಿಸುತ್ತದೆ. 1970 ರ ದಶಕದಿಂದ 2015 ರವರೆಗೆ ಈ ಜಲರಾಶಿಯು ನಿರಂತರವಾಗಿ ಸಿಹಿಯಾಗಿ ಮತ್ತು ಹಗುರವಾಗಿ ಮಾರ್ಪಟ್ಟಿತ್ತು. ಆದರೆ, 2016 ರಿಂದೀಚೆಗೆ ಸಮುದ್ರದಲ್ಲಿ ಹಿಮದ ಪ್ರಮಾಣ ಭಾರಿ ಕುಸಿತ ಕಂಡಿದ್ದರಿಂದ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.
ಸಾಗರದ ತಾಪಮಾನ ಮತ್ತು ಲವಣಾಂಶವನ್ನು ದಾಖಲಿಸುವ ಅಂತರರಾಷ್ಟ್ರೀಯ ರೋಬೋಟಿಕ್ ನೆಟ್ವರ್ಕ್ ಆದ 'ಆರ್ಗೋ' (Argo) ದ 20 ವರ್ಷಗಳ ಮಾಪನಗಳನ್ನು, ಉಪಗ್ರಹ ವೀಕ್ಷಣೆಗಳು ಹಾಗೂ 2004 ರಿಂದ 2024 ರವರೆಗಿನ ಸಾಗರ ವಿಶ್ಲೇಷಣೆಗಳೊಂದಿಗೆ ವಿಜ್ಞಾನಿಗಳು ಪರಿಶೀಲಿಸಿದ್ದಾರೆ. ಈ ಎಲ್ಲಾ ಮೂರು ದತ್ತಾಂಶಗಳು 2015 ರವರೆಗೆ ನೀರು ಸಿಹಿಯಾಗುತ್ತಿದ್ದುದನ್ನು ತೋರಿಸಿದ್ದರೆ, 2016 ರಿಂದೀಚೆಗೆ ಅಂಟಾರ್ಕ್ಟಿಕ್ ಇಂಟರ್ಮೀಡಿಯೇಟ್ ನೀರು ಹೆಚ್ಚು ಉಪ್ಪು, ಸಾಂದ್ರ ಹಾಗೂ ಆಳವಾಗುತ್ತಿರುವುದನ್ನು ಖಚಿತಪಡಿಸಿವೆ. ಈ ಪೈಕಿ ಅತ್ಯಂತ ಪ್ರಬಲವಾದ ಬದಲಾವಣೆಗಳು ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿ ಕಂಡುಬಂದಿವೆ.
ಭಾರತೀಯ ಮುಂಗಾರಿನ ಮೇಲೆ ಪ್ರಭಾವದ ಭೀತಿ!
ಈ ಸಾಗರ ಬದಲಾವಣೆಯ ಅಂತಿಮ ಪರಿಣಾಮಗಳು ಇನ್ನು ಸಂಪೂರ್ಣವಾಗಿ ತಿಳಿದುಬಂದಿಲ್ಲವಾದರೂ, ಇದು ಭಾರತ ಹಾಗೂ ದಕ್ಷಿಣ ಏಷ್ಯಾದ ಮುಂಗಾರಿನ (South Asian Monsoon) ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. "ದಕ್ಷಿಣ ಮಹಾಸಾಗರವು ಹೀರಿಕೊಳ್ಳುವ ಶಾಖಕ್ಕೂ ದಕ್ಷಿಣ ಏಷ್ಯಾದ ಮುಂಗಾರು ಮಾರುತಗಳ ಚಲನೆಗೂ ನಿಕಟ ಸಂಬಂಧವಿದೆ ಎಂದು ಹಿಂದಿನ ಸಂಶೋಧನೆಗಳು ಸಾಬೀತುಪಡಿಸಿವೆ. ಹೀಗಾಗಿ ಮುಂಬರುವ ಕನಿಷ್ಠ 10 ವರ್ಷಗಳ ಕಾಲ ನಾವು ಈ ಬದಲಾವಣೆಯ ಪ್ರವೃತ್ತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ" ಎಂದು ಗಾಯೇನ್ ಹೇಳಿದ್ದಾರೆ. ವಿಜ್ಞಾನಿಗಳ ಈ ಮಹತ್ವದ ಹಾಗೂ ಆತಂಕಕಾರಿ ಸಂಶೋಧನಾ ಪ್ರಬಂಧವು ಜಗತ್ಪ್ರಸಿದ್ಧ 'ನೆಚರ್ ಕ್ಲೈಮೇಟ್ ಚೇಂಜ್' (Nature Climate Change) ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.






