IMD Cyclone Alert: ಭಾರತೀಯ ಹವಾಮಾನ ಇಲಾಖೆ ಎರಡು ಚಂಡಮಾರುತಗಳ ಬಗ್ಗೆ ಎಚ್ಚರಿಕೆ ನೀಡಿದೆ, ಇದು ಮುಂದಿನ 15 ದಿನಗಳಲ್ಲಿ 18 ರಾಜ್ಯಗಳಲ್ಲಿ ಭಾರೀ ಮಳೆಯನ್ನು ಉಂಟುಮಾಡುವ ಸಾಧ್ಯತೆಯಿದೆ. 

ನವದೆಹಲಿ: ಭಾರತೀಯ ಹವಾಮಾನ ಇಲಾಖೆ ಎರಡು ಚಂಡಮಾರುತ ಅಪ್ಪಳಿಸುವ ಎಚ್ಚರಿಕೆಯನ್ನು ನೀಡಿದೆ. ಮುಂದಿನ 24 ಗಂಟೆಯಲ್ಲಿ ಸೈಕ್ಲೋನ್ ಭಾರತದ ಭೂಭಾಗವನ್ನು ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ಅಂದಾಜಿಸಿದೆ. ಇಂದಿನಿಂದ ಮುಂದಿನ ಮಾರ್ಚ್ 15ರವರೆಗೆ ಜಮ್ಮು ಕಾಶ್ಮೀರದಿಂದ ಬಿಹಾರ, ಈಶಾನ್ಯ ಪಶ್ಚಿಮ ಬಂಗಾಳದವರೆಗೆ ಮತ್ತು ಕೇರಳದಿಂದ ತಮಿಳುನಾಡಿನವರೆಗೆ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ. ಸೈಕ್ಲೋನ್ ಸರ್ಕ್ಯೂಲೇಷನ್ ಅಲರ್ಟ್ ನೀಡಿರುವ ಭಾರತೀಯ ಹವಾಮಾನ ಇಲಾಖೆ, ನಿಧಾನವಾಗಿ ಉತ್ತರ ಭಾರತದ ಪರ್ವತ ಪ್ರದೇಶಗಳ ರಾಜ್ಯದತ್ತ ಸೈಕ್ಲೋನ್ ಪರಿಣಾಮ ಬೀರಲಿದೆ. ಸೈಕ್ಲೋನ್‌ನಿಂದಾಗಿ ಮಳೆಯಾಗಲಿದೆ. ಪಕ್ಕದ ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆಗಳಿವೆ. 

ಇತ್ತ ಗುಜರಾತಿಗೆ ಬಿಸಿಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗುಜರಾತಿನ ಬಹುತೇಕ ಪ್ರದೇಶಗಳಲ್ಲಿ ತಾಪಮಾನ ಏರಿಕೆಯಾಗಲಿದ್ದು, ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಅನಗತ್ಯವಾಗಿ ಮನೆಯಿಂದ ಹೊರಗೆ ಬರದಂತೆ ಸಲಹೆ ನೀಡಲಾಗಿದೆ. ಈ ಭಾಗದಲ್ಲಿ 37 ರಿಂದ 41 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ ಮೂರು ದಿನ ಮಾರ್ಚ್ 11, 12 ಮತ್ತು 13ರಂದು ಗುಜರಾತ್‌ ರಾಜ್ಯದ ಹಲವೆಡೆ ಬಿಸಿಗಾಳಿ ಬೀಸುವ ಸಾಧ್ಯತೆಗಳಿವೆ. 

ಮಾರ್ಚ್ 15ರವರೆಗೆ ಮಳೆ ಸಾಧ್ಯತೆ
ಎರಡು ಸೈಕ್ಲೋನ್‌ಗಳ ಪರಿಚಲನೆಯಿಂದಾಗಿ ಮಾರ್ಚ್ 15ರವರೆಗೆ ಮಳೆ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, , ಮಾರ್ಚ್ 10 ರಿಂದ 15 ರವರೆಗೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ತಾಪಮಾನ ಕುಸಿಯಲಿದ್ದು, ಗುಡುಗು ಸಹಿತ ಮಳೆಯಾಗಲಿದೆ. ಉತ್ತರದ ಪರ್ವತ ಪ್ರದೇಶದಲ್ಲಿ ಭಾರೀ ಹಿಮಪಾತ ಉಂಟಾಗುವ ಸಾಧ್ಯತೆಗಳಿವೆ. ಪಂಜಾಬ್ ಮತ್ತು ಹರಿಯಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗಲಿದೆ. ಮಾರ್ಚ್ 12 ಮತ್ತು 13 ರಂದು ಪಂಜಾಬ್ ಮತ್ತು ಹರಿಯಾಣದಲ್ಲಿ ಮತ್ತು ಮಾರ್ಚ್ 13 ರಿಂದ 15 ರವರೆಗೆ ರಾಜಸ್ಥಾನದಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂದು ಅಂದಾಜಿಸಲಾಗಿದೆ. ಮಾರ್ಚ್ 11 ರಿಂದ 15 ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಮೇಘಾಲಯ ಮತ್ತು ತ್ರಿಪುರಾದಲ್ಲಿ ಮಳೆಯಾಗಲಿದೆ. ಅರುಣಾಚಲ ಪ್ರದೇಶದಲ್ಲಿ ಮಾರ್ಚ್ 11ರಿಂದ 13ರವರೆಗೆ ಭಾರೀ ಹಿಮಪಾತವಾಗುವ ಸಾಧ್ಯತೆ ಇದೆ.

ತಮಿಳುನಾಡಿನಲ್ಲಿ ಆರೆಂಜ್ ಅಲರ್ಟ್
ಇಂದಿನಿಂದ ತಮಿಳುನಾಡಿನ ದಕ್ಷಿಣ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಮಳೆಯಿಂದಾಗಿ ಪರಿಸ್ಥಿತಿ ಹದಗೆಟ್ಟರೆ, ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ನೀಡಲು ಜಿಲ್ಲಾಧಿಕಾರಿಗಳಿಗೆ ತಮಿಳುನಾಡು ಸರ್ಕಾರ ಸೂಚನೆ ನೀಡಿದೆ. ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಾಗಿ 2 ಎಕರೆ ಜಮೀನು ದಾನ: ಸ್ವಾಮೀಜಿ ಕೆಲಸಕ್ಕೆ ಭಾರೀ ಶ್ಲಾಘನೆ!

ಮಾರ್ಚ್ 11 ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಹಲವೆಡೆ ಗುಡುಗು ಮತ್ತು ಮಿಂಚು ಸಹಿತ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೆ, ಕನ್ಯಾಕುಮಾರಿ, ತಿರುನಲ್ವೇಲಿ, ತೆಂಕಸಿ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ, ವಿರುಧುನಗರ, ಶಿವಗಂಗಾ, ಮೈಲಾಡುತುರೈ, ತಂಜಾವೂರು, ತಿರುವರೂರು, ನಾಗಪಟ್ಟಣಂ, ಪುದುಕ್ಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳು ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳ ಮತ್ತು ಮಾಹೆಯಲ್ಲಿ ಮಾರ್ಚ್ 11 ರಿಂದ 13 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. 

ಇದನ್ನೂ ಓದಿ: ಬಿಸಿಲಿಗೆ ಬಳಲಿದ್ದ ಜನತೆಗೆ ಗುಡ್‌ನ್ಯೂಸ್; ಮಾರ್ಚ್ 11ರಿಂದ ರಾಜ್ಯದ ಈ ಭಾಗದಲ್ಲಿ ಮಳೆ ಶುರು!