ಕೋಪನ್'ಹೆಗನ್(ಮಾ.29): ಮಾನವನಿಗೆ ಮುಗಿಲೆತ್ತರಕ್ಕೆ ಕಣ್ಣು ಹಾಯಿಸುತ್ತಾ ಬ್ರಹ್ಮಾಂಡದ ರಹಸ್ಯಗಳನ್ನೆಲ್ಲಾ ತಿಳಿಯುವ ಕುತೂಹಲ ಎಷ್ಟಿದೆಯೋ, ಅಷ್ಟೇ ಕುತೂಹಲ ಭೂಮಿಯ ಆಳದಲ್ಲಿರುವ ಜ್ಞಾನವನ್ನೂ ಹೆಕ್ಕಿ ತೆಗೆಯುವಲ್ಲಿಯೂ ಇದೆ.

ಭೂಮಿಯ ಕೇಂದ್ರದ ಕುರಿತು ಶತಶತಮಾನಗಳಿಂದ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದು, ಗರಿಷ್ಠ ಉಷ್ಣತೆಯ ಭೂಗರ್ಭದ ಕುರಿತು ಹಲವಾರು ಸಂಶೋಧನೆಗಳು ನಡೆದಿವೆ.

ಆದರೆ ಭೂಗರ್ಭದ ಕುರಿತು ಕರಾರುವಕ್ಕಾದ ಮಾಹಿತಿ ನೀಡಿದವರಲ್ಲಿ ಡೆನ್ಮಾರ್ಕ್ ಭೂಕಂಪನಶಾಸ್ತ್ರಜ್ಞೆ ಇಂಗೆ ಲೆಹಮನ್ ಮೊದಲಿಗರು. ಭುಕಂಪನಶಾಸ್ತ್ರ ಮತ್ತು ಗಣಿತದ ಕರಾರುವಕ್ಕಾದ ಲೆಕ್ಕಾಚಾರದ ಸಹಾಯದಿಂದ ಇಂಗೆ ಲೆಹಮನ್ ಭೂಗರ್ಭದ ರಚನೆಯ ಕುರಿತಾದ ನಂಬಿಕೆಯನ್ನು ಬದಲಾಯಿಸಿದರು.

ಭೂಕಂಪದ ಅಧಿಕೇಂದ್ರ ನಿಯತಾಂಕಗಳ ನಿರ್ಣಯವು ವಿಶ್ವಾಸಾರ್ಹವಲ್ಲ ಎಂದು ಅರಿತಿದ್ದ ಇಂಗೆ ಲೆಹಮನ್, 1920 ಮತ್ತು 1930 ರ ದಶಕಗಳ ಹೊಸ ಮತ್ತು ಸುಧಾರಿತ ಸಿಸ್ಮೋಗ್ರಾಫ್ ಗಳನ್ನು ಬಳಸಿಕೊಂಡು ಹೆಚ್ಚುವರಿ ಭೂಕಂಪನಗಳ ಕೇಂದ್ರಗಳನ್ನು ಗುರುತಿಸಿದರು.

ವಿವಿಧ ಸಿಸ್ಮೋಗ್ರಾಫ್ ಗಳ ನಡುವಿನ ತರಂಗ ರೂಪಗಳನ್ನು ಅಧ್ಯಯನ ನಡೆಸುವ ಮೂಲಕ ಭೂಗರ್ಭದಲ್ಲಿ ಕರಗಿದ ಬಾಹ್ಯ ಕೇಂದ್ರದಿಂದ ಭೂಮಿಗೆ ಒಂದು ಘನ ಆಂತರಿಕ ಕೋನ ಇದೆ ಎಂಬುದನ್ನು ಇಂಗೆ ಲೆಹಮನ್ ಕಂಡುಹಿಡಿಯುವಲ್ಲಿ ಯಶಸ್ವಿಯಾದರು.

ಬೇರೆ ಘನರೂಪಿ ಗ್ರಹಗಳಂತೆ ಭೂಮಿಯ ಒಳಭಾಗವನ್ನು ರಸಾಯನಿಕ ದೃಷ್ಟಿಯಿಂದ ವಿವಿಧ ಪದರಗಳಲ್ಲಿ ವಿಂಗಡಿಸಬಹುದು. ಭೂಮಿಯು ಸಿಲಿಕೇಟ್ನ ಒಂದು ಘನರೂಪಿ ಹೊರ ಪದರನ್ನು ಮತ್ತು ಹಳ ಸ್ನಿಗ್ಧವಾದ ಒಂದು ಕವಚವನ್ನು ಹೊಂದಿದೆ. ಅದರಂತೆ ದ್ರವರೂಪಿ ಹೊರ ಭೂಗರ್ಭ ಮತ್ತು ಘನರೂಪಿ ಒಳ ಭೂಗರ್ಭವನ್ನು ಹೊಂದಿದೆ ಎಂಬುದನ್ನು ನಿರೂಪಿಸುವಲ್ಲಿ ಇಂಗೆ ಲೆಹಮನ್ ಮಹತ್ವದ ಪಾತ್ರ ನಿರ್ವಹಿಸಿದರು.

1888ರಲ್ಲಿ ಡೆನ್ಮಾರ್ಕ್‌ನ ಕೋಪನ್'ಹೆಗನ್'ನಲ್ಲಿ ಜನಿಸಿದ ಇಂಗೆ ಲೆಹಮನ್, ಕೋಪನ್;ಹೆಗನ್ ವಿವಿಯಿಂದ ಗಣಿತಶಾಸ್ತ್ರದಲ್ಲಿ ಪದವಿ ಪಡೆದರು. ಮುಂದೆ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿವಿಯಲ್ಲಿ ಅಧ್ಯಯನ ನಡೆಸಿದ ಲೆಹಮನ್, ೧೯೨೫ರಲ್ಲಿ ಭೂಕಂಪನಶಾಸ್ತ್ರಜ್ಞೆಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.

ಭೂಕಂಪನಶಾಸ್ತ್ರದಲ್ಲಿ ನಡೆಸಿದ ಅನೇಕ ಸಂಶೋಧನೆಗಳ ಫಲವಾಗಿ ಇಂಗೆ ಲೆಹಮನ್ ಅವರಿಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.